ಅಥವಾ

ಒಟ್ಟು 11 ಕಡೆಗಳಲ್ಲಿ , 8 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು, ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು, `ಅತ್ಯ್ಕತಿಷ್ಠದ್ದಶಾಂಗುಲಂ' ಎಂಬ ಲಿಂಗವ ಚಿತ್ತಕ್ಕೆ ತಂದು, ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ; ಚಿತ್ತಶುದ್ಧನ ಮಾಡಿದ ಬಸವಣ್ಣ. ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ, ಮುಕ್ತನ ಮಾಡಿದ ಗುರು ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ.
--------------
ಸಿದ್ಧರಾಮೇಶ್ವರ
ದಧಿಯ ಕಡೆವಾಕೆಯ ತುದಿಗಂಡವ ಕೊಯಿದು, ಮಂತಿನ ಅಂಡಿನಲ್ಲಿ ಒಸರಿ ದಧಿ ಧರೆಗೆ ಇಳಿದು, ಅಂಡಿನವ್ವೆಯ ಹಂಗ ಬಿಟ್ಟು ಮಂತು ಮರಣವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಹುಟ್ಟಿದ ಬಟ್ಟೆಯ ಮೆಟ್ಟದ ಕಾರಣ.
--------------
ಸಗರದ ಬೊಮ್ಮಣ್ಣ
ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ! ಕರದಿ ಕುರುಹಾಗಿ, ಅಡಗಿದೆಯಲ್ಲಾ! ಶೃಂಗಾರದ ನಿಳಯದ ಮುಚ್ಚುಳು ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ! ಕುರುಹು ಬಿನ್ನವಿಲ್ಲದೆ ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು ಸಿಡಿಲು ಮಿಂಚು ಮುಗಿಲುಗಳಿಹವು. ಅದರಿಂದ ಮೇಲೆ ಒಂದುಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು ಶುಕ್ರನಿಹನು. ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು (ಸಾವಿರರಿ) ಯೋಜನದುದ್ದದಲು ಶನಿಯಿಹನು. ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು ಆದಿತ್ಯನಿಹನು. ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ (ಐವತ್ತಾರುರಿ)ಲಕ್ಷ ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು. ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು ನಕ್ಷತ್ರವಿಹವು. ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು (ಲಕ್ಷ) ಯೋಜನದುದ್ದದಲು ಸಕಲ ಮಹಾಋಷಿಗಳಿಹರು. ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ ಯೋಜನದುದ್ದದಲು ತ್ರಿವಿಧ ದೇವತೆಗಳಿಹರು. ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ ಯೋಜನದುದ್ದದಲು ದೇವರ್ಕಳಿಹರು. ಆ ದೇವರ್ಕಳಿಂದಂ ಮೇಲೆ ಎಂಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ ಯೋಜನದುದ್ದದಲು ದ್ವಾದಶಾದಿತ್ಯರಿಹರು. ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ ಎಂಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು. ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು. ಇಂತು_ಧರೆಯಿಂದಂ ಆಕಾಶ ಉಭಯಂ ಕೂಡಲು ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ ಯೋಜನದುದ್ದದಲು ಒಂದು ಮಹಾಲೋಕವಿಹುದು. ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ: ಪಾತಾಳಲೋಕ ದೇವರ ಕಟಿಯಲ್ಲಿಹುದು, ರಸಾತಳಲೋಕ ದೇವರ ಗುಹ್ಯದಲ್ಲಿಹುದು, ತಳಾತಳಲೋಕ ಊರುವಿನಲ್ಲಿಹುದು, ಸುತಳಲೋಕ ಜಾನುವಿನಲ್ಲಿಹುದು, ನಿತಳಲೋಕ ಜಂಘೆಯಲ್ಲಿಹುದು, ವಿತಳಲೋಕ ಪಾದೋಧ್ರ್ವದಲ್ಲಿಹುದು, ಅತಳಲೋಕ ಪಾದತಳದಲ್ಲಿಹುದು. ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ. ಭೂಲೋಕ ನಾಭಿಯಲ್ಲಿಹುದು, ಭುವರ್ಲೋಕ ಹೃದಯದಲ್ಲಿಹುದು, ಸ್ವರ್ಲೋಕ ಉರೋಮಧ್ಯದಲ್ಲಿಹುದು, ಮಹರ್ಲೋಕ ಕಂಠದಲ್ಲಿಹುದು, ಜನರ್ಲೋಕ ತಾಲವ್ಯದಲ್ಲಿಹುದು, ತಪರ್ಲೋಕ ಲಲಾಟದಲ್ಲಿಹುದು, ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು. ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ. ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು ಅಡಗಿಸಿಹೆನೆಂಬ ಅತುಳಬಲ್ಲಿದರು ಕೆಲಬರುಂಟೆ ? ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ ? ಅಡರಿ ಹಿಡಿಯಲು ಬಹುದು ಭಕ್ತಿಯೆಂಬ ಭಾವದಲ್ಲಿ ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ ಮಾಯವನುಣ್ಣದೆ ಮನದಲ್ಲಿ ಅಜ್ಞಾನವ ಬೆರಸದೆ ಅಲ್ಲದುದನೆ ಬಿಟ್ಟು, ಬಲ್ಲುದನೆ ಲಿಂಗಾರ್ಚನೆಯೆಂದು `ಓಂ' ಎಂಬ ಅಕ್ಷರವನೋದಿ ಅರಿತ ಬಳಿಕ ಬಸುರಲ್ಲಿ ಬಂದಿಪ್ಪ, ಶಿರದಲ್ಲಿ ನಿಂದಿಪ್ಪ ಅಂಗೈಯೊಳಗೆ ಅಪ್ರತಿಮನಾಗಿ (ಸಿಲ್ಕಿಪ್ಪ) ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಧರೆಗೆ ಸೂತಕವುಂಟೆ ? ವಾರಿಧಿಗೆ ಹೊಲೆಯುಂಟೆ ? ಉರಿವ ಅನಲಂಗೆ ಜಾತಿಭೇದವುಂಟೆ ? ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ ? ಆಕಾಶಕ್ಕೆ ದಾರಿ ಮೇರೆಯುಂಟೆ ? [ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು ? ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಕಲ್ಲಿನಲ್ಲಿ ಕನಕ ಒಗೆದಡೆ ಕನಕ ಕಲ್ಲಿಂಗೆ ಕಿಂಕರನಪ್ಪುದೆ? ಶುಕ್ತಿಯಲ್ಲಿ ವರಿõ್ಞಕ್ತಿಕ ಒಗೆದಡೆ ವರಿõ್ಞಕ್ತಿಕ ಶುಕ್ತಿಗೆ ಕಿಂಕರನಪ್ಪುದೆ? ಧರೆಯಲ್ಲಿ ಸುರತರು ಒಗೆದಡೆ ಸುರತರು ಧರೆಗೆ ಕಿಂಕರನಪ್ಪುದೆ? ಜನನಿಯುದರದಲ್ಲಿ ಘನಶರಣ ಒಗೆದಡೆ ಜನನಿ ಜನಕಂಗೆ ಕಿಂಕರನಪ್ಪ[ನೆ]? ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು ಸ್ವತಂತ್ರಶೀಲರಗ್ರಗಣ್ಯರು.
--------------
ಆದಯ್ಯ
ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ, ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು. ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು, ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ. ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ. ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ ಅಹಂಕಾರವ ಮುಂದುಗೊಂಡಿದ್ದೆನಯ್ಯಾ. ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ, ನಿಜಗುರು ಶಂಕರದೇವಾ.
--------------
ಅಂಗಸೋಂಕಿನ ಲಿಂಗತಂದೆ
ನಿಮ್ಮಿಂದೆ ನೀವಿಟ್ಟ ಮಾಯೆ ನಿಮ್ಮಿಂದ ಬಂದು ಆವರಿಸಿ ನುಂಗುತಿರಲು ಇನ್ನಾರು ಬಿಡಿಸುವರಯ್ಯಾ ? ಕಡಲುಕ್ಕಿ ಪ್ರಳಯವಾದರೆ, ಅಂಬರ ಕಳಚಿ ಧರೆಗೆ ಬಿದ್ದರೆ, ಭೂಜಲವೈದಿದರೆ ಇನ್ನಾರು ಹೇಳಿಕೇಳುವರಯ್ಯಾ ? ನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೀರು ನೇಣು ಭೂಮಿಯ ತಡಿಯ ಕುಂಭ ಮುಂತಾಗಿ ಬಂದಲ್ಲದೆ, ಪಾತಾಳ ಜಲವೆಯ್ದದು ಧರೆಗೆ. ಭಕ್ತಿ ಜ್ಞಾನ ವೈರಾಗ್ಯಂಗಳೆಂಬವು, ಒತ್ತಿ ಬೆಳೆದ ಶರೀರದ ಪೃಥ್ವಿಯ ಪಙÂ್ತಯಲ್ಲಿ ಹೊಯ್ದ ಉದಕ ಸಾರಾಯವಾಯಿತ್ತು. ಸಸಿಗೆ ಸಸಿ ಬೆಳೆದು, ಕೊಯ್ದು ಒಕ್ಕಿ ಒಯ್ದ ಮತ್ತೆ ಬಾವಿ ಬಿದ್ದಿತ್ತು, ನೇಣು ಹರಿಯಿತ್ತು, ಕುಂಭ ಒಡೆಯಿತ್ತು, ಭೂಮಿ ಹಾಳಾಯಿತ್ತು, ಅಳೆವವ ಸತ್ತ. ಆ ಬತ್ತ ಸಿಕ್ಕಿತ್ತು ಅರಮನೆಯಲ್ಲಿ. ಸಿಕ್ಕಿದ ಬತ್ತವನುಂಡು ಮತ್ತರಾದರು, ಮತ್ರ್ಯದವರೆಲ್ಲರೂ ತುತ್ತ ನುಂಗಿದರು. ಇತ್ತಲಿದ್ದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮದಸೊಕ್ಕಿದ ಗಜ, ಅಜಕ್ಕಂಜಿ, ಅಡಿಯಿಡಲಮ್ಮದುದ ಕಂಡೆ. ಕಡುಗಲಿ ಬಂಟ ಕತ್ತಲೆಗಂಜಿ, ಒಡಗೂಡುವರು ಬೇಕೆಂದು, ಅಡಿಗಡಿಗಂಜುವುದ ಕಂಡೆ. ಇಂತಿವರೆಲ್ಲರೂ ನಳಿಕೆಯ ಕೀರನಂತೆ, ಲಾಗ ಮರೆದು, ಬಳಲಿ ಧರೆಗೆ ಸೇರುವಾಗ ಆಗಲರಿದಂತಾಗದೆ ಬೇಗರಿದುಕೊಳ್ಳಿ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕೂಡಬಲ್ಲಡೆ.
--------------
ಮೋಳಿಗೆ ಮಾರಯ್ಯ
-->