ಅಥವಾ

ಒಟ್ಟು 10 ಕಡೆಗಳಲ್ಲಿ , 8 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ, ಆರವೆಯಿಲ್ಲದ ಮರ ಹುಟ್ಟಿ, ಕಣ್ಣಿಗೆ ತೋರಲಿಲ್ಲದ ಬಿತ್ತಾಯಿತ್ತು, ಅದು ಈ ಧರೆಯಲ್ಲಿ ಬಿತ್ತಿದಡೆ, ಆ ಧರೆಯಲ್ಲಿ ಹುಟ್ಟಿತ್ತು, ಅದರಿಂದಾಚೆ ಫಲವಾಯಿತ್ತು, ಕೊಂಬಿಂದೀಚೆ ಹಣ್ಣಾಯಿತ್ತು. ಹಣ್ಣು ಮೆಲುವ ಬಾಯಿಗೆ ಹಣ್ಣಿತ್ತು, ಈ ಹಣ್ಣಿನ ಸವಿಯ ಹೇಳು, ಚೆನ್ನಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಸತಿ ತಪ್ಪಿ ಪಾರದ್ವಾರವ ಮಾಡಿದಲ್ಲಿ, ಒಳಗಿಟ್ಟುಕೊಂಡು ಸಂದುಸಂಶಯವಿಲ್ಲದಿದ್ದಡೆ, ಗುರುಲಿಂಗಜಂಗಮಕ್ಕೆ ಉದಾಸೀನವ ಮಾಡಿದಡೆ, ತಪ್ಪನೊಪ್ಪಬಹುದು. ಅಲ್ಲಿಗೆ ದ್ವೇಷ, ಇಲ್ಲಿಗೆ ಶಾಂತಿಯೇ? ಇದು ಭಕ್ತಿಯ ಬಲ್ಲವರ ಮತವಲ್ಲ. ಸತಿಸುತ ಬಂಧುಗಳು ತಪ್ಪಿದಲ್ಲಿ, ಭಕ್ತಿಗೆ ಅನುಸರಣೆಯ ಮಾಡಿದಡೆ, ಲಿಂಗಕ್ಕೆ ಮಜ್ಜನಕ್ಕೆರೆದಡೆ, ಜಂಗಮ ಪ್ರಸಾದವ ಕೊಂಡಡೆ, ಆ ಅಂಗ ಧರೆಯಲ್ಲಿ ನಿಂದಿತ್ತಾದಡೆ, ನಾ ನಿಂದ ಕಾಯಕಕ್ಕೆ ಭಂಗ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭೂಮಿಯಿಲ್ಲದ ಧರೆಯಲ್ಲಿ, ಒಂದು ಮಹಾಮೇರುವೆಯ ಬೆಟ್ಟ ಹುಟ್ಟಿತ್ತು. ಅದರ ತಳ ಒಂದಂಡ, ಮೇಲೆ ಮೂರಂಡ ಮೂರರ ಮೇಲೆ ಹಾರಿಬಂದಿತ್ತು ಕಾಗೆ. ಬಂದ ಕಾಗೆ ತುದಿಯಲ್ಲಿ ಅಂತರಿಸಲಾಗಿ, ಮೇರುವೆ ಕುಸಿಯಿತ್ತು. ಕೆಳಗಣ ಅಂಡ ನಿಂದು, ಮೇಲಣ ಮೇರುವೆ ಒಡೆಯಿತ್ತು. ಮೂರಂಡವನೊಡಗೂಡಿದ ಕಾಗೆ ಹಾರಿತ್ತು , ಬೆಟ್ಟ ಬಟ್ಟಬಯಲು ಬೊಮ್ಮನೊಡೆಯ ತನುಮನ ಸಂಗಮೇಶ್ವರಲ್ಲಿ ಒಡಗೂಡಿದವಂಗೆ.
--------------
ಸಗರದ ಬೊಮ್ಮಣ್ಣ
ಮೇಘ ಒಸರಿ ಧರೆಯಲ್ಲಿ ನಿಂದು, ಆ ಧರೆಯ ತೋಡಿ ತೆಗೆಯೆ, [ಆ ಸಲಿಲ] ಮುನ್ನಿನ ಹಾಂಗೆ ಧರೆಗಿಳಿಯೆ. ಹಾಗಿರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ, ಧರೆಯಲ್ಲಿ ಸಂತೋಷವೂ, ಗಗನದಲ್ಲಿ ದುಃಖವೂ, ಇಳೆಯಲ್ಲಿ ಅಹಂಕಾರವೂ, ಬಯಲಲ್ಲಿ ಜ್ಞಾನವೂ, ಬಯಲಲ್ಲಿ ಧರ್ಮವೂ, ಧರಣಿಯಲ್ಲಿ ಕರ್ಮವೂ, ಆಕಾಶದಲ್ಲಿ ಭಕ್ತಿಯೂ, ಧರಣಿಯಲ್ಲಿ ಶಕ್ತಿಯೂ, ಭೂಮಿಯಲ್ಲಿ ಜಾಗ್ರವೂ, ಆಕಾಶದಲ್ಲಿ ಸುಷುಪ್ತಿಯೂ, ಅಲ್ಲಿ ನೀನೂ ಇಲ್ಲಿ ನಾನೂ ಇರಲಾಗಿ, ನೀನೆಂತು ನನಗೊಲಿದೆ ? ನಾನೆಂತು ನಿನ್ನ ಕೂಡುವೆ ? ಬಯಲಲ್ಲಿರ್ಪ ಗುಣಗಳಂ ನಾನು ಕೊಂಡು, ಪೃಥ್ವಿಯಲ್ಲಿರ್ಪ ಗುಣಂಗಳಂ ನಿನಗೆ ಕೊಟ್ಟು, ಅಲ್ಲಿ ಬಂದ ನಿರ್ವಾಣಸುಖಲಾಭವನ್ನು ಪಡೆದರೆ ನೀನು ಮೆಚ್ಚುವೆ ನಾನು ಬದುಕುವೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕಲ್ಲಿನಲ್ಲಿ ಕನಕ ಒಗೆದಡೆ ಕನಕ ಕಲ್ಲಿಂಗೆ ಕಿಂಕರನಪ್ಪುದೆ? ಶುಕ್ತಿಯಲ್ಲಿ ವರಿõ್ಞಕ್ತಿಕ ಒಗೆದಡೆ ವರಿõ್ಞಕ್ತಿಕ ಶುಕ್ತಿಗೆ ಕಿಂಕರನಪ್ಪುದೆ? ಧರೆಯಲ್ಲಿ ಸುರತರು ಒಗೆದಡೆ ಸುರತರು ಧರೆಗೆ ಕಿಂಕರನಪ್ಪುದೆ? ಜನನಿಯುದರದಲ್ಲಿ ಘನಶರಣ ಒಗೆದಡೆ ಜನನಿ ಜನಕಂಗೆ ಕಿಂಕರನಪ್ಪ[ನೆ]? ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು ಸ್ವತಂತ್ರಶೀಲರಗ್ರಗಣ್ಯರು.
--------------
ಆದಯ್ಯ
ಅಂಗಸ್ಥಲ ಮೂವತ್ತಾರು ಕಲ್ಪನಾಡಿಭೇದಮಂ ಭೇದಿಸುತ್ತ ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳ ವರ್ಮದಲ್ಲಿರಿಸಿ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚೇಂದ್ರಿಯ[ವಿಷಯಂ]ಗಳ ಪೂರ್ವನಾಮವಿಮೋಚನೆಯಂ ಮಾಡುವ ಪರಿ : ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳ ಬಾಹ್ಯಾಭ್ಯಂತರವನರಿವ ಪರಿ, ಆದ್ಯಕ್ಷರವೊಂದಾದಡೆ ಅಂತ್ಯಕ್ಷರ ಶೂನ್ಯ, ಅದಕ್ಕೆ ಶಾಸ್ತ್ರಕ್ರಮದೊಳಗಾಡುವ ಭೇದಖಂಡದಿಂದ ಲಿಂಗಪ್ರಸಾದವ ಛೇದಿಸಿ, ಆ ಲಿಂಗವಂ ಭೂಮಿಯ ಬಿಡಿಸುವುದು. ಕಳಾವಿಧಸ್ಥಾನಕ್ಕೆ ತಂದಲ್ಲಿ ಸರ್ಪನು ಹಲವ ರುಚಿಸುವುದು. ಆ ರುಚಿಸುವ ಸರ್ಪನನು ತನ್ನಿಚ್ಛೆಗೆ ಹರಿಯಲೀಯದೆ ಅರಿವೆ ಪ್ರಾಣವಾಗಿ ಆ ಅರಿವಿನಿಂ ದೃಢವಿಡಿದು, ಹರಿವ ಹತ್ತುವ ಪರಿಯನೊಡೆದು ಮೂವತ್ತೆರಡು ಜವೆಯ ತೊರೆದಲ್ಲಿ ತೋರುವ, ನಾಡಿ ಮಧ್ಯಮಸ್ವರ ಮಹಿತಸ್ವರ, ಭೂಸ್ವರವೆಂಬ ಮಧ್ಯನಾಡಿ ಮಥನಂಗಳಂ ಮಥಿಸುವುದು. ಅಂಗಕ್ಕೆ ಲಿಂಗ ಬಂದಡೆ ಅಂಗದಾಪ್ಯಾಯನವನರಿವುದು. ಗುರುವಿನಿಂದ ಕರಣಾದಿಗಳು ಶುದ್ಧವಹವು, ಆದಿಪ್ರಭೆಯ ಕಿರಣಂಗಳು ಶುದ್ಧವಹವು, ಕರಣಂಗಳ ಆರತವಡಗುವುದು, ಕಾದ್ರಮಾ ಕಾದು ಕಾವುದು; ಆ ಲಿಂಗವನು ಉದಯದಲ್ಲಿ ನಾಲ್ಕು ಘಳಿಗೆ ತನಕ ಲಿಂಗಾರ್ಚನೆಯಂ ಮಾಡುವುದು. ಆ ಲಿಂಗವನು ವಾಮಕ್ಕೆ ಆ ಲಿಂಗವನು ದಕ್ಷಿಣಕ್ಕೆ ಆ ಲಿಂಗವನು ಪೂರ್ವಕ್ಕೆ, ಆ ಲಿಂಗವನು ಪಶ್ಚಿಮಕ್ಕೆ ಆ ಲಿಂಗವನು ಅಧಕ್ಕೆ, ಆ ಲಿಂಗವನು ಊಧ್ರ್ವಕ್ಕೆ ಆ ಲಿಂಗವನು ಜಡಿವುದು. ಪ್ರಭಾಲಿಂಗವೆಂಬ ಭಾವವನು ಭಾವಿಸಿ, ವಾತ ಪಿತ್ತ ಶ್ಲೇಷ್ಮವೆಂಬ ತ್ರಿಧಾತುವನರಿವುದು. ವಾತೋದ್ರೇಕವಾದಡೆ ಶೀತೋಷ್ಣಂಗಳ ಲಿಂಗಕ್ಕೆ ಸಮ ಮಾಡುವುದು, ಪಿತ್ತೋದ್ರೇಕವಾದಡೆ ಶೈತ್ಯವಂ ಮಾಡಿ ಕಾವುದು. ಶ್ಲೇಷ್ಮೋದ್ರೇಕವಾದಡೆ ಬಿಗಿದು ಲಿಂಗಾರ್ಚನೆಯಂ ಮಾಡುವುದು. ವಾತಪ್ರಕೃತಿಯಲ್ಲಿ ಲಿಂಗದ ಮೊದಲು ದೊಡ್ಡ ತುದಿ ಸಣ್ಣದಾಗಿಹುದು ಪಿತ್ತಪ್ರಕೃತಿಯಲ್ಲಿ ತುದಿ ಮೊದಲು ಸಣ್ಣದಾಗಿ ನಡು ದೊಡ್ಡದಾಗಿಹುದು. ಶ್ಲೇಷ್ಮಪ್ರಕೃತಿಯಲ್ಲಿ ಲಿಂಗತುದಿ ಮೊದಲೊಂದಾಗಿ ದೊಡ್ಡದಾಗಿಹುದು. ಇಂತು ತ್ರಿಧಾತುವನರಿದು ಲಿಂಗಾರ್ಚನೆಯ ಮಾಡುವುದು- ಇದು ವರ್ತನಾಕ್ರಮ. ಆದಿಕ್ರಮ ಅಂತ್ಯಕ್ರಮ ಅನ್ವಯಕ್ರಮ ನಿನಾದಾದಿಕ್ರಮವೆಂಬ ಭೇದಾದಿ ಭೇದಂಗಳಂ ಭೇದಿಸುವುದು. ಶಾಸ್ತ್ರಸಂಧಿಯಲ್ಲಿ ಬಾಹ್ಯಂಗಳನರಿವುದು, ಕ್ರಮಾದಿಕ್ರಮಂಗ?ಂ ತಿಳಿವುದು. ವಿನಾದದಲ್ಲಿ ಚಿತ್ರಪತ್ರಂಗಳನರಿವುದು, ಕರಣಂಗಳಂ ಶುದ್ಧಮಂ ಮಾಡುವುದು. ಹಿರಿದು ನಡೆಯದೆ, ಹಿರಿದು ನುಡಿಯದೆ ಹಿರಿದುಂ ದಿವಾರಾತ್ರಿಯಲ್ಲಿ ಶೀತೋಷ್ಣಾದಿಗಳಂ ಮುಟ್ಟಿಸಿಕೊ?್ಳದೆ ಮಹಾಮಾರ್ಗವ ತಿಳಿವುದು. ಇದರಿಂಗೆ ತನ್ನ ಮಾರ್ಗಮಂ ತೋರದೆ ಮಹಾಮಾರ್ಗದಲ್ಲಿ ಮಾರ್ಗಿಯಾಗಿ ಇದರ ಭೇದಸಂಬಂಧದಲ್ಲಿ ಉಚ್ಛ್ವಾಸ ನಿಶ್ವಾಸಕ್ರಮವನು ಓದಿ ಭರತಕ್ರಮವನು ಅನುಕ್ರಮಿಸಿ ಮೂಲಕಸ್ಥಾನದಲ್ಲಿ ಹೊರೆಹೊಗದೆ ಇಕ್ಕುವ ಚಿತ್ರಕ್ರಮದಲ್ಲಿ ಹೊರೆಹೊಗದೆ ಇಂತಿವನರಿತು ಲಿಂಗಾರ್ಚನೆಯಂ ಮಾಡುವ ಪ್ರಕರಣ : ಭ್ರಾಹ್ಮೀ ಮಹಾಮುಹೂರ್ತದಲ್ಲಿ ಎದ್ದು, ಅಂಗಪ್ರಕ್ಷಾಲನಮಂ ಮಾಡಿ ಕಂಬುವಂ ವಿಸರ್ಜಿಸಿ, ಶಿಶು ಪ್ರಕಾರವಂ ಮಾಡಿ ಶಮೆಯೆಂಬ ಸಮಾಧಿಯಲ್ಲಿ ಕುಳ್ಳಿರ್ದು, ದಮೆಯೆಂಬ ಪೀಠವನಿಕ್ಕಿ, ಶಾಂತಿಯೆಂಬ ನಿಜವಸ್ತ್ರವ ತಂದು, ಆದಿ ಶಿಶುವಿಂಗೆ ಅನುಬಂಧವಂಮಾಡಿ ತಲೆವಲದಲ್ಲಿ ಶಿಶುವಂ ತೆಗೆದು ಕರವೆಂಬ ತೊಟ್ಟಿಲಲ್ಲಿಕ್ಕಿ ಜೋಗೈಸಿ ಕೈಗೆ ಬಾಯಿಗೆ ಬಂದಿತ್ತು ನೋಡಾ, ಬಾಯಿಗೆ ಬಂದಲ್ಲಿ ಭಾವ ಶುದ್ಧವಾಯಿತ್ತು, ಕೈಗೆ ಬಂದಲ್ಲಿ ಆದಿ ಶುದ್ಧವಾಯಿತ್ತು, ಭಾವಲಿಂಗ ಜೀವಕರವಾಯವೆಂಬ ಪಟ್ಟಣದಲ್ಲಿ ಸೀಮೆ ಸಂಬಂಧವಂ ಮೀರಿ, ಮಂತ್ರಮಯವಾಯಿತ್ತು ನೋಡಾ ! ಮಂತ್ರಲಿಂಗವೊ ! ಅಮಂತ್ರ ಲಿಂಗವೊ ಹೇಳಾ ! ಮತ್ರದಿಂ ವಸ್ತ್ರ, ಅಮಂತ್ರದಿಂ ಹಸ್ತ ಇಂತು ಮಂತ್ರ ಆಮಂತ್ರಗಳೆರಡನು ಕೂಡಿ ರಕ್ಷಿಸುತ್ತಿದ್ದಿತ್ತು ನೋಡಾ ! ಶಿರಸ್ಸೆಂಬ ಧೇನು ಲಿಂಗವೆಂಬ ಮೊಲೆಯ ಕರವೆಂಬ ವತ್ಸ ತೊರೆಯಿತ್ತು ನೋಡಾ! ಮಂತ್ರವೆಂಬ ಅಮೃತವ ಕರೆಯಿತ್ತು ನೋಡಾ ! ಬಸವಯ್ಯ ನೋಡಾ ಊಡದ ಹಸು, ಉಣ್ಣದ ಕರು, ಆರೂಢದ ಭಾಂಡ ! ಅಂಗದಲ್ಲಿ ಹುಟ್ಟಿದ ಅಮೃತಜಲವನು ಲಿಂಗಕ್ಕೆ ಕೊಡದೆ ಧರೆಯಲ್ಲಿ ಬಿಟ್ಟಡೆ ಎಂತೊ ಲಿಂಗೋದಯವಹುದು ? ಎಂತೋ ಪಾದೋದಕ ಪ್ರಸಾದಜೀವಿಯಹನು ? ಜೀವ ಪರಮರ ಐಕ್ಯಬಾವವನರಿದ(ವ?)ಡೆ ಲಿಂಗೋದಯದಲಲ್ಲದೆ ಅರಿಯಬಾರದು ನಿಜಭಾವ ನಿಜಭಕ್ತಿ ನಿಜಸಮರಸವಾದಲ್ಲದೆ ಲಿಂಗೋದಯವಾಗದು. ನಿಜಮತ್ರ್ಯದಲ್ಲಿ ಜನಿಸಿದ ಅಂಗ ಅಂಗಿಗಳೆಲ್ಲರು ಪ್ರಾಣಲಿಂಗ ಸಂಬಂಧವನರಿಯರು. ಅಂತು ಅಂಗಲಿಂಗಿಗಳು ಪ್ರಾಣಲಿಂಗಿಗಳಿಗೆ ಭವಿಗಳು ಅಂತು ಪ್ರಾಣಲಿಂಗಿಗಳು ಅಂಗಲಿಂಗಿಗಳನೊಲ್ಲರು. ಅದು ಹೇಗೆಂದಡೆ: ಅವರಿಗೆ ಪ್ರಸಾದ ಪ್ರಾಣಲಿಂಗವಾಗಿ ನಾಮಗೋಪ್ಯ ಮಂತ್ರಗೋಪ್ಯಂಗಳಲ್ಲಿ ಆ ಮಹಾಮಾರ್ಗವನರಿಯರಾಗಿ, ಅಂಗಲಿಂಗಿಗಳಲ್ಲದೆ ಪ್ರಾಣಲಿಂಗಿಗಳಲ್ಲ ಪ್ರಸಾದಸೇವನಧ್ಯಾನಾದರ್ಚನಾದರ್ಪಣಾತ್ ಶುಚಿಃ ಪ್ರಸಾದಹೀನಸ್ಯಾಂಗೇ ತು ಲಿಂಗಂ ನಾಸ್ತಿ ಪುನಃ ಪುನಃ ಎಂದುದಾಗಿ ಇಂತು ಲಿಂಗಾರ್ಚನೆಯಂ ಮಾಡುವುದು ಲಿಂಗಪಾದೋದಕ ಪ್ರಸಾದವನು ಬಾಹ್ಯಾಂತರಂಗದಲ್ಲಿ ವಿರ?ವಿಲ್ಲದೆ ಅವಿರಳಭಾವಸಂಬಂಧದಲ್ಲಿ ಧರಿಸುವುದು; ಧರಿಸುವಾತ ಲಿಂಗವಂತನು. ಅಂಗಲಿಂಗಿ ಪ್ರಾಣಲಿಂಗಿ ಪ್ರಸಾದಲಿಂಗಿ ನಿಜನಿಂದ ಮಾರ್ಗವಿರಳ ಪಂಚಕನಾಡಿಯಲ್ಲಿ ಹೊರಹೊಗದೆ ನಿರ್ನಾದಮಂ ಆಶ್ರಯಿಸುವುದು. ಇದು ಮಹಾಮಾರ್ಗ ಪುರಾತನರ ಪೂರ್ವ; ಅಪರದಲ್ಲಿ ಅಂಥ ಲಿಂಗವನರಿ, ಆದಿಯಲ್ಲಿ ಅನಾಹತಲಿಂಗವನರಿ. ಲಿಂಗವಾರು ಅಂಗಾಂಗಲಿಂಗ ಸರ್ವಾಂಗಲಿಂಗ, ಲಿಂಗಸನುಮತವಾಯಿತ್ತು, ಮಹಾವೃತ್ತಿಗೆ ಅನುಮತವಾಯಿತು, ನಿರ್ವಿಕಲ್ಪ ಪರಮಪದಕ್ಕೆ ತಾನೆ ಆಯಿತ್ತು. ಇನ್ನು ಮಾನಸ ವಾಚಕ ಕಾಯಕದಲ್ಲಿ ಅವಿತಥವಿಲ್ಲದೆ ಲಿಂಗಾರ್ಚನೆಯಂ ಮಾಡುವರ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಯ್ಯ.
--------------
ಚನ್ನಬಸವಣ್ಣ
ಪೃಥ್ವಿಯೆಂಬ ಅಂಗದ ಧರೆಯಲ್ಲಿ ಅಪ್ಪುವೆಂಬ ಅಸು ಹರಿವುತ್ತಿರಲಾಗಿ ಬಹುಚಿತ್ತವೆಂಬ ಜನರು ನೆರೆದು ಅರುವೆಂಬ ಹರುಗೋಲು ಕೆಟ್ಟಿದೆ. ಕುರುಹಿನ ಜಲ್ಲೆಯ ಹಿಡಿದು ಒತ್ತುವರಿಲ್ಲದೆ ತಡಿಯಲ್ಲಿ ಕೂಗುತ್ತೈದಾರೆ ಏಣಾಂಕಧರ ಸೋಮೇಶ್ವರಲಿಂಗವನರಿಯದೆ.
--------------
ಬಿಬ್ಬಿ ಬಾಚಯ್ಯ
ಮಂಜಿನ ಧರೆಯಲ್ಲಿ ಬಿಸಿಲ ಬೀಜ ಬಿದ್ದು, ಮರೀಚಕದ ಮಳೆ ಹೊಯ್ಯಿತ್ತು. ಬೇರು ಬೀಳದೆ ಮೊಳೆ ಒಡೆಯಿತ್ತು. ಎಲೆದೋರುವುದಕ್ಕೆ ಮೊದಲೆ, ತಲೆಯಿಲ್ಲದ ಎರಳೆ ಬಂದು ಮೇವುತ್ತಿರಲಾಗಿ, ಅಂಜನಸಿದ್ಧ ಬಂದು ನೋಡುತ್ತಿರ್ದ, ಅದು ನಿರಂಗವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->