ಅಥವಾ

ಒಟ್ಟು 15 ಕಡೆಗಳಲ್ಲಿ , 6 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣರ ಮನ ನೋಯ ನುಡಿದೆನಾಗಿ, ಹರಜನ್ಮವಳಿದು ನರಜನ್ಮಕ್ಕೆ ಬಂದೆನು. ಹರನಟ್ಟಿದ ಬೆಸನ ಶಿರದೊಳಗಾಂತೊಡೆ, ಗಿರಿಗಳ ಭಾರವೆನಗಾದುದಯ್ಯ. ಚೆನ್ನಮಲ್ಲಿಕಾರ್ಜುನನ ಧರ್ಮದಿಂದ ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು.
--------------
ಅಕ್ಕಮಹಾದೇವಿ
ಎನ್ನ ಘ್ರಾಣ ಶುದ್ಧವಾಯಿತ್ತಯ್ಯಾ, ಏಕೋರಾಮಿತಂದೆಗಳ ಧರ್ಮದಿಂದ. ಎನ್ನ ಜಿಹ್ವೆ ಶುದ್ಧವಾಯಿತ್ತಯ್ಯಾ, ಪಂಡಿತಾರಾಧ್ಯರ ಧರ್ಮದಿಂದ. ಎನ್ನ ನೇತ್ರ ಶುದ್ಧವಾಯಿತ್ತಯ್ಯಾ. ರೇವಣಸಿದ್ಧೇಶ್ವರದೇವರ ಧರ್ಮದಿಂದ. ಎನ್ನ ತ್ವಕ್ಕು ಶುದ್ಧವಾಯಿತ್ತಯ್ಯಾ, ಸಿದ್ಧರಾಮೇಶ್ವರದೇವರ ಧರ್ಮದಿಂದ. ಎನ್ನ ಹೃದಯ ಶುದ್ಧವಾಯಿತ್ತಯ್ಯಾ. ಮರುಳಸಿದ್ಧೇಶ್ವರದೇವರ ಧರ್ಮದಿಂದ ಸಕಳೇಶ ಮಾದಿರಾಜಯ್ಯಗಳ ಧರ್ಮದಿಂದ. ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ, ತೆಲುಗುಜೊಮ್ಮಯ್ಯಗಳ ಧರ್ಮದಿಂದ. ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ, ಕೇಶಿರಾಜಯ್ಯಗಳ ಧರ್ಮದಿಂದ. ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ, ಬಸವಣ್ಣ, ಚನ್ನಬಸವಣ್ಣ, ಪ್ರಭು, ವೀರಮಡಿವಾಳಯ್ಯಗಳ ಧರ್ಮದಿಂದ. ಐಘಟದೂರ ರಾಮೇಶ್ವರಾ, ನಿಮ್ಮ ಶರಣರ ಧರ್ಮದಿಂದ ನಾನು ಶುದ್ಧನಾದೆನಯ್ಯಾ.
--------------
ಮೆರೆಮಿಂಡಯ್ಯ
ಏಕಾದಶ ರುದ್ರರು ಹೊರಗಾದ, ಈರೇಳು ಲೋಕ ಹದಿನಾಲ್ಕು ಭುವನ ಯುಗಜುಗಂಗಳಲ್ಲಿ ಒಳಗಾಗಿ ತಿರುಗುವುದೊಂದು ಶಕ್ತಿಯ ಭೇದ. ದಶಾವತಾರವಾಗಿ ಕಾಲಕರ್ಮಂಗಳಲ್ಲಿ ಓಲಾಡುತ್ತಿಪ್ಪುದು ಒಂದು ಶಕ್ತಿಯ ಭೇದ. ಉಂಟು ಇಲ್ಲಾ ಎಂದು ನಿಶ್ಚಿಂತಕ್ಕೆ ಹೋರುವುದೊಂದು ಶಕ್ತಿಯ ಭೇದ. ಇಂತೀ ತ್ರಿವಿಧಶಕ್ತಿಯ ಆದಿ ಆಧಾರವನರಿದು ಕರ್ಮವ ಕರ್ಮದಿಂದ ಕಂಡು, ಧರ್ಮವ ಧರ್ಮದಿಂದ ಅರಿದು, ಜ್ಞಾನವ ಜ್ಞಾನದಿಂದ ವಿಚಾರಿಸಿ, ಇಂತೀ ತ್ರಿಗುಣದಲ್ಲಿ ತ್ರಿಗುಣಾತ್ಮಕನಾಗಿ, ದರ್ಪಣದಿಂದ ಒಪ್ಪಂಗಳನರಿವಂತೆ ಅರಿವು ಕುರುಹಿನಲ್ಲಿ ನಿಂದು, ಕುರುಹು ಅರಿವನವಗವಿಸಿದಲ್ಲಿ ತ್ತøಮೂರ್ತಿ ನಷ್ಟವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಿಷಯಂಗಳು ನಿರ್ವಿಷಯವಾದವಿಂದು, ಕರ್ಣಂಗಳು ತರಹರಿಸಿದವಿಂದು, ಎನ್ನ ಆಳುಪೆಂಬ ಅರೆವಾವು ಮಡಿಯಿತ್ತಿಂದು ಎನ್ನ ಹೃದಯದ ಕಲ್ಮಶ ತೊಡೆಯಿತ್ತಿಂದು ಮಹಾಲಿಂಗ ತ್ರಿಪುರಾಂತಕ, ಮಹಾದೇವಿಯಕ್ಕಗಳ ಧರ್ಮದಿಂದ ಹಿಂದಣ ಹುಟ್ಟು ಮುರಿಯಿತ್ತಿಂದು.
--------------
ಕಿನ್ನರಿ ಬ್ರಹ್ಮಯ್ಯ
ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ ಅರುಹಿಲ್ಲ ಮರಹಿಲ್ಲ ಆಚಾರವಿಲ್ಲ ವಿಚಾರವಿಲ್ಲ ಸಂಗ ನಿಸ್ಸಂಗವಿಲ್ಲವಯ್ಯ, ಸಂಗಯ್ಯ ನಿಮ್ಮ ಧರ್ಮದಿಂದ.
--------------
ನೀಲಮ್ಮ
ಧರ್ಮದಿಂದ ಮೋಕ್ಷ, ಮೋಕ್ಷದಿಂದ ಚತುರ್ವಿಧಫಲಪದಂಗಳೊಳಗೊಂದು. ಅದು ಜನ್ಮ ಬಹ ಸಂದು. ಈ ಉಭಯದ ಸಂದನರಿದು ಕ್ಷುತ್ತಿಂಗೆ ಭಿಕ್ಷ, ಅಂಗಕ್ಕೆ ವಸ್ತ್ರ, ಕನಕ ಕನ್ನೆ ಭೂದಾನ ಮುಂತಾದ ಧರ್ಮವ ಕರ್ಮಿಗಳಿಗೆ ಕೊಟ್ಟು, ಧರ್ಮಂಗೆ ತನ್ನ ವರ್ಮವನಿತ್ತು, ಸುಖಸುಮ್ಮಾನಿಯಂತೆ ಮಾಡಿದಡಂತೆ ಪರಮಸುಖಿ, ಗಾರುಡೇಶ್ವರಲಿಂಗನರಿದ ಪರಮಪ್ರಕಾಶ.
--------------
ಉಪ್ಪರಗುಡಿಯ ಸೋಮಿದೇವಯ್ಯ
-->