ಅಥವಾ

ಒಟ್ಟು 16 ಕಡೆಗಳಲ್ಲಿ , 10 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ, ಎನ್ನ ಕರಣಾದಿ ಗುಣಂಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ, ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ವೇದವನೋದಿ ಕೇಳಿದಡೇನು? ವೇದಜ್ಞನಪ್ಪನಲ್ಲದೆ ಭಕ್ತನಲ್ಲ. ಶಾಸ್ತ್ರಗಳನೋದಿ ಕೇಳಿದಡೇನು? ಮಹಾಶಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ. ಪುರಾಣವನೋದಿ ಕೇಳಿದಡೇನು? ಪುರಾಣಿಕನಪ್ಪನಲ್ಲದೆ ಭಕ್ತನಲ್ಲ. ಆಗಮಂಗಳನೋದಿ ಕೇಳಿದಡೇನು? ಆಗಮಿಕನಪ್ಪನಲ್ಲದೆ ಭಕ್ತನಲ್ಲ. ಇಂತೀ ಸರ್ವವಿದ್ಯೆಂಗಳನೋದಿ ಕೇಳಿದಡೇನು? ಇದಿರ ಬೋದ್ಥಿಸಿ ಉದರವ ಹೊರೆವ ಉದರಪೋಷಕನಪ್ಪನಲ್ಲದೆ ಭಕ್ತನಲ್ಲ. ಯಮಬಾಧೆಗಂಜಿ ಧರ್ಮವ ಮಾಡಿದಡೆ ಧರ್ಮಿಯಪ್ಪನಲ್ಲದೆ ಭಕ್ತನಲ್ಲ. ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ. ಇದು ಕಾರಣ, ಶ್ರೀಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ ಭಕ್ತದೇಹಿಕ ದೇವ ಪರಶಿವನು, `ಭಕ್ತಕಾಯ ಮಮಕಾಯ' ಎಂದುದಾಗಿ. `ಲಿಂಗಾಲಿಂಗೀ ಮಹಾಜೀವೀ' ಎಂದುದಾಗಿ ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ ಸತ್ಯನೆಂಬೆ, ಮುಕ್ತನೆಂಬೆ, ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇಪ್ಪತ್ತೈದು ತಲೆಯೊಳಗೆ, ಏಳು ಮೊಲೆ ಮುಖವೆಂಟು, ºದಿನಾಲ್ಕು ಬಾಯಿ ನೂರಿಪ್ಪತ್ತು ಕೋರೆದಾಡೆ. ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ (ಸೆ ?) ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ ಹೆತ್ತ ತಾಯಿ ಮಗನ ನುಂಗಿ, ಶಿಶು ತಾಯ ಬೆಸಲಾಗಿ ಗುಹೇಶ್ವರನೆಂಬ ನಿಲವ ಅಂಗಯ್ಯ ಮೊಲೆ ನುಂಗಿತ್ತು.
--------------
ಅಲ್ಲಮಪ್ರಭುದೇವರು
ದಂಡಕ್ಕಂಜಿ, ಜಂಗಮಕ್ಕೆ ಇಕ್ಕುವ ದೋಷಕ್ಕಂಜಿ ಧರ್ಮವ ಮಾಡುವ, [ಬೇಡುವ] ಕಾಟಕ್ಕಂಜಿ, ತ್ರಿವಿಧವ ಕೊಡುವ ನಾಟರಿಗೇಕೊ ಸದ್ಭಕ್ತಿ ? ಜಗದ ಘಾತಕರ ಘಾತಿಸದೆ, ವಿಷಯವನರಿಯದೆ, ಆಶೆಯಲ್ಲಿ ಸುಳಿವ ಭ್ರಾಂತು ಮಾರಿಗಳನೇನೆಂದರಿಯದೆ, ವಸ್ತುವಿನಲ್ಲಿ ಓತಿರ್ಪ ಸಾತ್ವಿಕರನರಿದು ಸದ್ಭಕ್ತಿಯ ಮಾಡುವುದು. ಅರಿದುದಕ್ಕೆ ಇದೇ ಕುರುಹೆಂದು, ಮರೆಯೊಳಡಗಿ ಮೊರೆಯಿಡುತ್ತಿದ್ದೇನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ಯಾಸತ್ಯವೆಂದು ವಿವರಿಸಿ ತಿಳಿದು ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ ಘನಲಿಂಗದೇವರೆಂಬೆನು. ನಿತ್ಯಾನಿತ್ಯವೆಂದು ವಿವರಿಸಿ ತಿಳಿದು ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ ಘನಲಿಂಗದೇವರೆಂಬೆನು. ಪುಣ್ಯಪಾಪವೆಂದು ವಿವರಿಸಿ ತಿಳಿದು ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ ಘನಲಿಂಗದೇವರೆಂಬೆನು. ಧರ್ಮಕರ್ಮವೆಂದು ವಿವರಿಸಿ ತಿಳಿದು ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ ಘನಲಿಂಗದೇವರೆಂಬೆನು. ಆಚಾರ ಅನಾಚಾರವೆಂದು ವಿವರಿಸಿ ತಿಳಿದು ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ ಘನಲಿಂಗದೇವರೆಂಬೆನು. ಇಂತೀ ಉಭಯದ ನ್ಯಾಯವನರಿಯದೆ ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ ಘಟವ ಹೊರೆವ ಕುಟಿಲ ಕುಹಕರ ತುಟಿಯತನಕ ಮೂಗಕೊಯ್ದು ಕಟವಾಯ ಸೀಳಿ ಕನ್ನಡಿಯ ತೋರಿ ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ಏಕಾದಶ ರುದ್ರರು ಹೊರಗಾದ, ಈರೇಳು ಲೋಕ ಹದಿನಾಲ್ಕು ಭುವನ ಯುಗಜುಗಂಗಳಲ್ಲಿ ಒಳಗಾಗಿ ತಿರುಗುವುದೊಂದು ಶಕ್ತಿಯ ಭೇದ. ದಶಾವತಾರವಾಗಿ ಕಾಲಕರ್ಮಂಗಳಲ್ಲಿ ಓಲಾಡುತ್ತಿಪ್ಪುದು ಒಂದು ಶಕ್ತಿಯ ಭೇದ. ಉಂಟು ಇಲ್ಲಾ ಎಂದು ನಿಶ್ಚಿಂತಕ್ಕೆ ಹೋರುವುದೊಂದು ಶಕ್ತಿಯ ಭೇದ. ಇಂತೀ ತ್ರಿವಿಧಶಕ್ತಿಯ ಆದಿ ಆಧಾರವನರಿದು ಕರ್ಮವ ಕರ್ಮದಿಂದ ಕಂಡು, ಧರ್ಮವ ಧರ್ಮದಿಂದ ಅರಿದು, ಜ್ಞಾನವ ಜ್ಞಾನದಿಂದ ವಿಚಾರಿಸಿ, ಇಂತೀ ತ್ರಿಗುಣದಲ್ಲಿ ತ್ರಿಗುಣಾತ್ಮಕನಾಗಿ, ದರ್ಪಣದಿಂದ ಒಪ್ಪಂಗಳನರಿವಂತೆ ಅರಿವು ಕುರುಹಿನಲ್ಲಿ ನಿಂದು, ಕುರುಹು ಅರಿವನವಗವಿಸಿದಲ್ಲಿ ತ್ತøಮೂರ್ತಿ ನಷ್ಟವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆಗಮ ನಿಗಮ ಶಾಸ್ತ್ರ ಪುರಾಣವೆಂಬ ಅಂಧಕನ ಕೈಗೆ ಕೋಲಕೊಟ್ಟು ನಡೆಸಿಕೊಂಡು ಹೋಗುವಾಗ, ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ, ಎರಡಕ್ಕೆ ಕೆಟ್ಟ ಜಂಬುಕನಂತೆ ಆಯಿತ್ತು ನೋಡಾ. ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದರಲ್ಲಾ. ಸಂತೆಯಲ್ಲಿ ಗುಡಿಸಲನಿಕ್ಕಿ ಹಡೆದುಂಬ ಸೂಳೆಯಂತೆ, ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು, ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ ಶರಣರಪ್ಪರೆ ? ಅಲ್ಲಲ್ಲ. ಅದೆಂತೆಂದಡೆ: ತನು ಕರಗಿ, ಮನ ಪುಳಕವಾದ ಮಹಾಮಹಿಮರಿಗಲ್ಲದೆ ಉಚ್ಚಿಯ ಬಚ್ಚಲಲ್ಲಿ ಓಲಾಡುವ ತೂತಜ್ಞಾನಿಗಳಿಗೆಂತಪ್ಪದು ಹೇಳಾ ? ಕಾಲಾಳು ಆಕಾಶವನಡರಿಹೆನೆಂಬ ಪರಿಯೆಂತೊ ? ಬ್ರಹ್ಮಪುರ ವೈಕುಂಠ ರುದ್ರಪುರ ಅಷ್ಟಾದಿ ಕೈಲಾಸವೆಂಬ ಈ ಪಂಚಗ್ರಾಮಂಗಳ ವರ್ಮ ಕರ್ಮವಳಿದ ಮಹಾದೇವಂಗಲ್ಲದೆ ಮುಂದಕ್ಕೆ ಅಡಿಯಿಡಬಾರದು. ಪಿಪೀಲಿಕ ಕಪಿಯ ಮತವೆಂಬ ಪಥ ಮೀರಿ, ವಿಹಂಗವೆಂಬ ವಾಹನಮಂ ಏರಿ, ಬ್ರಹ್ಮಾಂಡಕ್ಕೆ ದಾಳಿ ಮಾಡಿ, ಸುವರ್ಣಪುರಮಂ ಸುಟ್ಟು ಸೂರೆಗೊಂಡ ಮಹಾನುಭಾವಿಗಳ ತೋರಿ ಬದುಕಿಸಾ. ನಿಜಗುರು ಭೋಗೇಶ್ವರಾ, ನಾ ನಿಮ್ಮ ಧರ್ಮವ ಬೇಡಿಕೊಂಬೆ.
--------------
ಭೋಗಣ್ಣ
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ? ಹೊಲೆಯ ಹೊರಕೇರಿಯಲ್ಲಿರುವನು, ಊರೊಳಗಿಲ್ಲವೆ ಅಯ್ಯಾ, ಹೊಲೆಯರು? ತಾಯಿಗೆ ಬೈದವನೇ ಹೊಲೆಯ, ತಂದೆಗೆ ಉತ್ತರ ಕೊಟ್ಟವನೆ ಹೊಲೆಯ, ತಂದೆಗೆ ಬೈದವನೇ ಹೊಲೆಯ, ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ, ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ, ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ, ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ, ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ, ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ, ಲಿಂಗವ ಬಿಟ್ಟು ತಿರುಗುವವನೇ ಹೊಲೆಯ, ಧರ್ಮವ ಮಾಡದವನೇ ಹೊಲೆಯ, ಬಸವನ ಕೊಂದವನೇ ಹೊಲೆಯ, ಬಸವನ ಇರಿದವನೇ ಹೊಲೆಯ, ಲಿಂಗಪೂಜೆಯ ಮಾಡದವನೇ ಹೊಲೆಯ. ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ ಹೊರಕೇರಿಯವರಿಗೆ ಹೊಲೆಯರೆನಬಹುದೆರಿ ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು, ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು. ಗುರುಗಳಿಗೆ ಚಮ್ಮಾವುಗೆಯಾಯಿತ್ತು ಹೂಡಲಿಕ್ಕೆ ಮಿಣಿಯಾಯಿತ್ತು. ಹೊಡೆಯಲಿಕ್ಕೆ ಬಾರುಕೋಲವಾಯಿತ್ತು. ಬಂಡಿಗೆ ಮಿಣಿಯಾಯಿತ್ತು. ಅರಸರಿಗೆ ಮೃದಂಗವಾಯಿತ್ತು. ತೋಲು ನಗಾರಿಯಾಯಿತ್ತು. ತುಪ್ಪ ತುಂಬಲಿಕ್ಕೆ ಸಿದ್ದಲಿಕೆ, ಎಣ್ಣೆ ತುಂಬಲಿಕೆ ಬುದ್ದಲಿಕೆನಯಾಯಿತ್ತುಫ. ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ ನಾ ಶೀಲವಂತ ತಾ ಶೀಲವಂತ ಎಂದು ಶುದ್ದೈಸಿಕೊಂಡು ತಿಂದು ಬಂದು, ಜಗಳ ಬಂದಾಗ ನನ್ನ ಕುಲ ಹೆಚ್ಚು, ನಿನ್ನ ಕುಲ ಹೆಚ್ಚು ಕಡಿಮೆ ಎಂದು ಬಡಿದಾಡುವ ಕುನ್ನಿ ನಾಯಿಗಳ ಮೋರೆ ಮೋರೆಯ ಮೇಲೆ ನಮ್ಮ ಪಡಿಹಾರಿ ಉತ್ತಣ್ಣಗಳ ವಾಮಪಾದುಕೆಯ ಕೊಂಡು ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ ನಮ್ಮ ದಿಟ್ಟ ಅಂಬಿಗರ Zõ್ಞಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಶ್ರೀಗುರು ಲಿಂಗ ಜಂಗಮಕ್ಕೆ ಅರ್ಚನೆ ಪೂಜನೆ ದಾಸೋಹವನು ಧರ್ಮವ ಕಾಮಿಸಿ ಮಾಡಿದರೆ ಧರ್ಮವಪ್ಪುದು, ಅರ್ಥವ ಕಾಮಿಸಿ ಮಾಡಿದರೆ ಅರ್ಥವಪ್ಪುದು, ಕಾಮವ ಕಾಮಿಸಿ ಮಾಡಿದರೆ ಕಾಮವಪ್ಪುದು, ಮೋಕ್ಷವ ಕಾಮಿಸಿ ಮಾಡಿದರೆ ಮೋಕ್ಷವಪ್ಪುದು, ಸಾಲೋಕ್ಯವ ಕಾಮಿಸಿ ಮಾಡಿದರೆ ಸಾಲೋಕ್ಯವಪ್ಪುದು, ಸಾಮೀಪ್ಯವ ಕಾಮಿಸಿ ಮಾಡಿದರೆ ಸಾಮೀಪ್ಯವಪ್ಪುದು ಸಾರೂಪ್ಯವ ಕಾಮಿಸಿ ಮಾಡಿದರೆ ಸಾರೂಪ್ಯವಪ್ಪುದು, ಸಾಯುಜ್ಯವ ಕಾಮಿಸಿ ಮಾಡಿದರೆ ಸಾಯುಜ್ಯವಪ್ಪುದು, ಕಾಮಧೇನುವ ಕಾಮಿಸಿ ಮಾಡಿದರೆ ಕಾಮಧೇನುವಪ್ಪುದು, ಕಲ್ಪತರುವ ಕಾಮಿಸಿ ಮಾಡಿದರೆ ಕಲ್ಪತರುವಪ್ಪುದು, ಪರುಷವ ಕಾಮಿಸಿ ಮಾಡಿದರೆ ಪರುಷವಪ್ಪುದು, ಆವುದನಾವುದ ಕಾಮಿಸಿದರೆ ಕಾಮಿಸಿದ ಫಲ ತಪ್ಪದು. ಕಾಮಿಸದ ನಿಷ್ಕಾಮದಾಸೋಹ ಕೂಡಲಚನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಭಕ್ತಿಯಿಂದ ಮಾಡುವುದೆಲ್ಲವು ಬ್ರಹ್ಮನ ಒಡಲು. ಜ್ಞಾನದಿಂದರಿದು ಮಾಡುವುದೆಲ್ಲವು ವಿಷ್ಣುವಿನ ಒಡಲು. ವೈರಾಗ್ಯ ತೋರಿ ಮಾಡುವುದೆಲ್ಲವು ರುದ್ರನ ಒಡಲು. ಶ್ರದ್ಭೆಯಿಂದ ಮಾಡುವ ಭಕ್ತಿ ಬ್ರಹ್ಮನ ಉತ್ಪತ್ಯಕ್ಕೆ ಈಡಾಯಿತ್ತು. ಧರ್ಮವ ಕುರಿತು ಮಾಡುವ ಭಕ್ತಿ ವಿಷ್ಣುವಿನ ಅವತಾರಕ್ಕೆ ಸಲೆ ಸಂದಿತ್ತು. ಬಯಕೆ ಹಿಂಗಿ ಮಾಡುವ ಭಕ್ತಿ ರುದ್ರನ ಆವೇಶಕ್ಕೊಳಗಾಗಿತ್ತು. ಇಂತೀ ಭಕ್ತಿ ಜ್ಞಾನ ವೈರಾಗ್ಯವೆಂಬವು, ಸಂದಿಲ್ಲದ ಸಂದೇಹದಲ್ಲಿ ಬರ್ಪುದು ತಪ್ಪದೆಂದು ಶರ್ವನ ಮುಂಡಿಗೆ ಹಾಕಿದೆ. ಎತ್ತಬಲ್ಲ ದೃಷ್ಟವಂತರು ಸರ್ಪನೇಳುವುದಕ್ಕೆ ಮೊದಲೆ ಎತ್ತಿರಣ್ಣಾ. ಎತ್ತಿ ಹೇಳಿಗೆಯ ಕೂಡಿ ಮುಚ್ಚಳವನಿಕ್ಕಿದ ಮತ್ತೆ, ಮುತ್ತೆರದ ಮುಕ್ತಿಯಿಲ್ಲಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಣವಕೊಟ್ಟು ಹಾದರವನಾಡುವದರಿಂದ ತಾರವ ಕೊಟ್ಟು ಸೂಳೆಗೆಯ್ಯಬಾರದೆ? ಧರ್ಮವ ಮಾಡುವಲ್ಲಿ ಕರ್ಮವುಂಟೆ? ಧರ್ಮ ಕರ್ಮದ ಭೇದವನರಿದು ಮಾಡಲರಿಯರು. ಅಡಗುಗಡಿವಂಗೆ, ಸುರೆಯ ಕುಡಿವಂಗೆ ಕೊಟ್ಟರೆ ಆ ಫಲ ತಪ್ಪದು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಧರ್ಮವ ನುಡಿವಲ್ಲಿ ಕ್ರಿಯಾಧರ್ಮ, ನಿರ್ಮವ ನುಡಿವಲ್ಲಿ ಮಾಯಿಕಮಲಂ ನಾಸ್ತಿ. ಕಾಯ ಉಳ್ಳನ್ನಕ್ಕ ಪೂಜೆ, ಜೀವವುಳ್ಳನ್ನಕ್ಕ ನೆನಹು. ಎರಡಿಟ್ಟು ನೋಡುವಲ್ಲಿ ಕೂಟ, ಆತುರ ಹಿಂಗಿದ ಮತ್ತೆ ಬಂಕೇಶ್ವರಲಿಂಗನ ಎಡೆಯಾಟ ಹಿಂಗಿತ್ತು.
--------------
ಸುಂಕದ ಬಂಕಣ್ಣ
ದಿಟದಿಟ ಈ ಬಂದುತ್ತೆ, ಈ ಬಂದುತ್ತೆ ಸಾವು, ಎನಗಿನ್ನೆಂತಯ್ಯಾ? ಸ್ಥಿರಾಯುಗಳೆನಿಪ ದೇವಜಾತಿಗಳೆಲ್ಲ ಸತ್ತುದ ಕೇಳುತ್ತಿದ್ದೇನೆ. ಮತ್ತೆಯೂ ಅರಿದು ಅಧರ್ಮವನೆ ಮಾಡುವೆನು. ಧರ್ಮವ ಮಾಡೆನು, ದುಷ್ಕರ್ಮಿ ನಾನು, ಎನಗೆಂತಯ್ಯಾ? ಸುಧರ್ಮಿ ನೀನು, ಭಕ್ತಿಜ್ಞಾನವೈರಾಗ್ಯವ ಬೇಗ ಬೇಗ ಇತ್ತು ಸಲಹಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಧರ್ಮದಿಂದ ಮೋಕ್ಷ, ಮೋಕ್ಷದಿಂದ ಚತುರ್ವಿಧಫಲಪದಂಗಳೊಳಗೊಂದು. ಅದು ಜನ್ಮ ಬಹ ಸಂದು. ಈ ಉಭಯದ ಸಂದನರಿದು ಕ್ಷುತ್ತಿಂಗೆ ಭಿಕ್ಷ, ಅಂಗಕ್ಕೆ ವಸ್ತ್ರ, ಕನಕ ಕನ್ನೆ ಭೂದಾನ ಮುಂತಾದ ಧರ್ಮವ ಕರ್ಮಿಗಳಿಗೆ ಕೊಟ್ಟು, ಧರ್ಮಂಗೆ ತನ್ನ ವರ್ಮವನಿತ್ತು, ಸುಖಸುಮ್ಮಾನಿಯಂತೆ ಮಾಡಿದಡಂತೆ ಪರಮಸುಖಿ, ಗಾರುಡೇಶ್ವರಲಿಂಗನರಿದ ಪರಮಪ್ರಕಾಶ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಧರ್ಮವ ಧರಿಸಿದ ಬಳಿಕ ಲಿಂಗಾರ್ಚನೆಯ ಮಾಡಿ ಸಾಯಬಹುದಯ್ಯಾ. ಸತ್ತಡೆ ಸಾಯಬಹುದು, ಹೊತ್ತಿಗೊಮ್ಮೆ ಸೂರ್ಯನಂತೆ ಬರಬಾರದಯ್ಯಾ. ಬಂದಡೆ ಬರಬಹುದು, ತನ್ನಾಯತವ ಮರೆದಿಬಾರದಯ್ಯಾ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->