ಅಥವಾ

ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ ಒಡಲಸೂತಕ ಹರಿಯಬೇಕು. ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಕಾಮಿಗೆ ಯೋನಿಯೆಲ್ಲವೂ ಸರಿ. ಕ್ರೋದ್ಥಿಗೆ ಕೊಲೆ ಸರ್ವಜೀವವೆಲ್ಲವೂ ಸರಿ. ಲೋಬ್ಥಿಗೆ ಜಯ ಅಪಜಯದಿಂದ ಬಂದ ದ್ರವ್ಯವೆಲ್ಲವೂ ಸರಿ. ಪಾತಕಂಗೆ ಪಾಪಪುಣ್ಯವೆಂಬುದಿಲ್ಲ. ಇಂತೀ ಜಗದ ಸೂತಕಕ್ಕೆ ಹೊರಗಾಗಿ, ತ್ರಿಕರಣಸೂತಕಕ್ಕೆ ಒಳಗಲ್ಲದೆ, ಕಾತು ಕರ್ಮವನರಿಯದೆ, ಜೀವ ಭವವ ನುಣ್ಣದೆ, ಆವ ಠಾವಿನಲ್ಲಿಯೂ ಕಲೆ ನಿಷ್ಪತ್ತಿಯಾದ ಮತ್ತೆ ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ, ಅರಿವಿಂಗೆ ಮರವೆಯಿಲ್ಲದೆ ತೋರದ ನಿರಾಳ, ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ, ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು. ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ. ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ? ಕಾಷ*ವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ*ಕ್ಕೆ, ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ. ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ. ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ರೂಪುವಿಡಿದು ಭಾವಿಸುವನ್ನಕ್ಕ ಸಂದೇಹಕ್ಕೊಡಲು. ನಿರವಯದಲ್ಲಿ ಕಂಡೆಹೆನೆಂದಡೆ ಲಕ್ಷವಿಲ್ಲದ ಒಪ್ಪ. ರೂಪು ನಿರೂಪೆಂಬ ಸಂಕಲ್ಪದ ಸೂತಕವ ಹರಿದು, ರೂಪೆಂಬ ಅಂಗವ ತಿಳಿದು, ನಿರೂಪೆಂಬ ಆತ್ಮನನರಿದು, ಜೀವ ಪರಮನೆಂಬ ಶಂಕೆ ಹರಿದಲ್ಲಿ, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಸತ್ಯಶುದ್ಧಕಾಯಕವ ಮಾಡಿ ತಂದು, ವಂಚನೆಯಿಲ್ಲದೆ ಪ್ರಪಂಚಳಿದು, ನಿಚ್ಚಜಂಗಮಕ್ಕೆ ದಾಸೋಹವ ಮಾಡುವ ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ, ಕಾಮಧೂಮ ಧೂಳೇಶ್ವರ.
--------------
ಮಾದಾರ ಧೂಳಯ್ಯ
ಬೇರು ಮೇಲಾದ ವೃಕ್ಷದ ತುದಿಯಲ್ಲಿ, ನಾದ ಬಿಂದು ಕಳೆಯಿಲ್ಲದ ಹಣ್ಣು ತಲೆದೋರಿತ್ತು. ವಿಭೇದವಿಲ್ಲದ ಪಕ್ಷಿ ಸುನಾದವಿಲ್ಲದೆ ಎರಗಿತ್ತು. ಎರಗಿ ಮುಟ್ಟುವುದಕ್ಕೆ ಮುನ್ನವೆ, ಹಣ್ಣು ತೊಟ್ಟಬಿಟ್ಟು ಬಟ್ಟಬಯಲಾಯಿತ್ತು, ಕಾಮಧೂಮ ಧೂಳೇಶ್ವರ ಭಾವವಿಲ್ಲದವನಾಗಿ.
--------------
ಮಾದಾರ ಧೂಳಯ್ಯ
ಬತ್ತೀಸ ಆಯುಧದಲ್ಲಿ ಕಾದಿ ಕೊಂದಡೂ ಪ್ರಾಣಕ್ಕೆ ಕೈದುವಿನ ಹೆಚ್ಚುಗೆ ತಗ್ಗುಂಟೆ ? ನಿಶ್ಚಯಿಸಿ ನಿಜತತ್ವವನರಿದವಂಗೆ ಮತ್ತೆ ಹತ್ತುವ ಹಾವಸೆಯುಂಟೆ ? ಉಂಟೆಂಬ ಭಾವ, ಇಲ್ಲಾ ಎಂಬ ಶಂಕೆ ನಿಶ್ಶಂಕೆಯಾದಲ್ಲಿ, ಅರಿದೆ, ಮರೆದೆನೆಂಬ ಆ ತೆರದ ಸೂತಕವಿಲ್ಲ. ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ನಡೆವಾತನ ಕಾಲ ತರಿದು, ಕೊಡುವಾತನ ಕೈಯ ಮುರಿದು, ನುಡಿವಾತನ ನಾಲಗೆಯ ಕಿತ್ತು, ನೋಡುವಾತನ ಕಣ್ಣ ಕಳೆದು, ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು, ಅರಿದ ಮತ್ತೆ ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ, ತನುವಿನ ಮೇಲಣ ಕುರುಹು, ಮನದ ಮೇಲಣ ಸೂತಕ. ನೆನಹು ನಿಷ್ಪತ್ತಿಯಾದಲ್ಲಿ, ಕಾಮಧೂಮ ಧೂಳೇಶ್ವರ, ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ನೆನೆವುದು ನೆನೆಹಿಸಿಕೊಂಬುದು ಜಡನೆಂದು ಮತ್ತೆ, ನಾ ನೀನೆಂಬುದಿಲ್ಲ. ಬಾಳೆಯ ಫಲದಂತೆ, ಚೇಳಿಗೆ ಗರ್ಭವಾದಂತೆ, ವೇಣುವಿಗೆ ಅಕ್ಕಿ ಹುಟ್ಟಿದ ಮತ್ತೆ ಬಾಳುವೆ ಉಂಟೆ ? ನೀನೆಂಬುದ ತಾನರಿದಲ್ಲಿ, ನಾ ನೀನೆಂಬ ಭಾವವೇನೂ ಇಲ್ಲ. ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ತಾನೆಂಬುದ ಅರಿದೆನೆಂದರಿತಲ್ಲಿ, ಇಷ್ಟಲಿಂಗದ ಪೂಜೆಯ ಗೊತ್ತು. ಆ ಇಷ್ಟವ ನೆನೆವ ಚಿತ್ತ, ಕರ್ಪುರದ ಘಟ್ಟಿಯ ಉರಿ ಕೊಂಡಂತೆ. ತೊಳೆವ, ಹಿಳಿಕ ಸೂತಕ ನಿಂದಲ್ಲಿ, ಪ್ರಾಣಲಿಂಗಸಂಬಂಧವೆಂಬ ಸಮಯಸೂತಕ ನಿಂದಲ್ಲಿ, ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
-->