ಅಥವಾ

ಒಟ್ಟು 28 ಕಡೆಗಳಲ್ಲಿ , 6 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಕೇಳಾ, ಎಲೆ ಅಯ್ಯಾ, ಬಸವಣ್ಣನು ಅನಿಮಿಷಂಗೆ ಲಿಂಗವ ಕೊಟ್ಟ ಕಾರಣ ಮತ್ರ್ಯಕ್ಕೆ ಬಂದೆನೆಂಬರು. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ ಜೈನ ಚಾರ್ವಾಕ ಕಾಳಾಮುಖ ಎನಿಸುವ ಷಡ್ದರ್ಶನಾಗಳು ಹೆಚ್ಚಿ, ವಿಭೂತಿ ರುದ್ರಾಕ್ಷಿ ಪಂಚಾಕ್ಷರವನರಿಯದೆ ನರಕಕ್ಕೆ ಭಾಜನವಾಗಿ ಪೋಪರೆಂದು, ದೇವರು ನಂದಿಕೇಶ್ವರನ ಮುಖವ ನೋಡಲು, ಆ ಪ್ರಶ್ನೆಯಿಂದ ಬಂದನಯ್ಯಾ ಬಸವಣ್ಣ ಪರಹಿತಾರ್ಥನಾಗಿ. ದೇವರು ದೇವಿಯರಿಗೆ ಪ್ರಣವಾರ್ಥವ ಬೋಧಿಸುವಾಗ ದೇವಿಯರ ಮುಡಿಯಲ್ಲಿ ಹೊನ್ನ ತುಂಬಿಯಾಗಿ ಷಣ್ಮುಖ ಕೇಳಿದ ಪ್ರಶ್ನೆಯಿಂದ ಬಂದನೆಂಬರಯ್ಯಾ, ಚೆನ್ನಬಸವಣ್ಣನು. ಸಟೆ ಸಟೆ! ಆ ನುಡಿಯ ಕೇಳಲಾಗದು. ಅದೇನು ಕಾರಣವೆಂದಡೆ: ಷಡ್ವಿಧಸ್ಥಲಕ್ಕೆ ಸ್ಥಾಪನಾಚಾರ್ಯನಾಗಿ ಸಕಲ ಪ್ರಮರ್ಥರ್ಗೆ ವೀರಶೈವವ ಪ್ರತಿಷೆ*ಯ ಮಾಡಲೋಸ್ಕರ ಬಂದನಯ್ಯಾ ಚೆನ್ನಬಸವಣ್ಣನು. ದೇವರ ಸಭೆಯಲ್ಲಿ ನಿರಂಜನನೆಂಬ ಗಣೇಶ್ವರನು ಮಾಯಾಕೋಳಾಹಳನೆಂದು ಹೊಗಳಿಸಿಕೊಂಡು ಬರಲಾಗಿ ಆ ಸಮಯದಲ್ಲಿ ದೇವಿಯರು ದೇವರ ಮಾಯಾಕೋಳಾಹಳನಾದ ಪರಿಯಾವುದೆಂದು ಬೆಸಗೊಳಲು, ಆ ಪ್ರಶ್ನೆಯಿಂದ ಪ್ರಭುದೇವರು ಮತ್ರ್ಯಕ್ಕೆ ಬಂದರೆಂಬರಯ್ಯಾ. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಸುಜ್ಞಾನಿ ನಿರಹಂಕಾರರ ಭಕ್ತಿಗೋಸ್ಕರ ಪ್ರತ್ಯಕ್ಷವಾಗಿ ಬಸವಾದಿ ಪ್ರಮಥರ್ಗೆ ಬೋಧಿಸಿ, ತನ್ನ ನಿಜಪದವ ತೋರಬಂದರಯ್ಯಾ ಪ್ರಭುದೇವರು. ದಕ್ಷಸಂಹಾರದಿಂದ ಬರುವಾಗ ಗುಪ್ತಗಣೇಶ್ವರನ ನಿರಿ ಸೋಂಕಲು, ಆ ಪ್ರಶ್ನೆಯಿಂದ ಬಂದನೆಂಬರಯ್ಯಾ ಮಡಿವಾಳನು. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಬಿಜ್ಜಳ ಪರವಾದಿಗಳ ಸಂಹರಿಸಲೋಸ್ಕರ ಬಸವಣ್ಣನ ನಿಮಿತ್ತವಾಗಿ ಬಂದನಯ್ಯಾ ಮಡಿವಾಳ ಮಾಚಯ್ಯಗಳು. ಇಂತಿವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳಿಗೆ ವಾಸನಾಧರ್ಮವೆಂದಡೆ ಅಘೋರ ನರಕ ತಪ್ಪದಯ್ಯಾ. ಇವರು ಮುಖ್ಯವಾದ ಪ್ರಮಥ ಗಣಂಗಳಿಗೆ ಶಾಪವೆಂದು ಕಲ್ಪಸಿದಡೆ, ನಾಯಕ ನರಕ ತಪ್ಪದು, ಎಲೆ ಶಿವನೆ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮಾಣೆ
--------------
ಸಿದ್ಧರಾಮೇಶ್ವರ
ಬಸವಣ್ಣ ಎನ್ನ ತಂದೆಯಾಗಿ ಬಂದನಯ್ಯಾ, ಚನ್ನಬಸವಣ್ಣ ಎನ್ನಜ್ಜನಾಗಿ ಬಂದನಯ್ಯಾ, ಪ್ರಭುದೇವರು ಎನ್ನ ಮುತ್ತಯ್ಯನಾಗಿ ಬಂದನಯ್ಯಾ, ಈ ಮೂವರ ಮುಂದಣಾಭರಣ ಹೊದಿದುಕೊಂಡು ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವನು ನರಕಾಯವ ತೊಟ್ಟು ಗುರುರೂಪಾಗಿ ಮತ್ರ್ಯಕ್ಕೆ ಬಂದು ಅಷ್ಟಾದಶಜಾತಿಯೊಳಗಿದ್ದಡೇನು ಮತ್ರ್ಯನೇ ? ಅಲ್ಲ. ಅದೆಂತೆಂದಡೆ:ಶಿವರಹಸ್ಯೇ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಮಹಾದೇವನು ತಾನೇ_ ಲಲಾಟಲೋಚನಂ ಚಾಂದ್ರೀಕಲಾಮಪಿ ಚ ದೋದ್ರ್ವಯು ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ, ಶಿವನು ಗುರುರೂಪಾಗಿ ವರ್ತಿಸುತ್ತಿಹನು. ಪರಶಿವೋ ಗುರುಮೂರ್ತಿಶ್ಶಿಷ್ಯದೀಕ್ಷಾದಿಕಾರಣಾತ್ ಶಿಷ್ಯಾತೀತಂ ಮಹಾಚೋದ್ಯಂ ಚೋದ್ಯರೂಪಾಯ ವೈ ನಮಃ ಎಂದುದಾಗಿ, ಶಿಷ್ಯಂಗೆ ಕರುಣಿಸಿ ದೀಕ್ಷೆಯಂ ಮಾಡಬೇಕೆಂದು ಬಂದನಯ್ಯಾ, ಮಹಾಕಾರುಣ್ಯಮೂರ್ತಿ ಪರಮಶಿವನು ತಾನೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಚಿದಾತ್ಮನೇ ಅಂಗವಾದ ಶರಣ ಚಿತ್ಪೃಥ್ವಿಯೇ ತನ್ನಂಗವಾಗಿ ಆಚಾರಲಿಂಗೈಕ್ಯವನರಿದು ಬಂದನಯ್ಯಾ. ಚಿದಪ್ಪುವೇ ತನ್ನಂಗವಾಗಿ ಚಿದ್ಗುರುಲಿಂಗೈಕ್ಯವನರಿದು ಬಂದನಯ್ಯಾ. ಚಿದಗ್ನಿಯೇ ತನ್ನಂಗವಾಗಿ ಚಿಚ್ಫಿವಲಿಂಗೈಕ್ಯವನರಿದು ಬಂದನಯ್ಯಾ. ಚಿದ್ವಾಯುವೇ ತನ್ನಂಗವಾಗಿ ಚಿಜ್ಜಂಗಮಲಿಂಗೈಕ್ಯವನರಿದು ಬಂದನಯ್ಯಾ. ಚಿದಾಕಾಶವೇ ತನ್ನಂಗವಾಗಿ ಚಿತ್ಪ್ರಸಾದಲಿಂಗೈಕ್ಯವನರಿದು ಬಂದನಯ್ಯಾ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಚಿನ್ಮಹಾಲಿಂಗೈಕ್ಯವನರಿದು ಚಿದ್ರೂಪವಾಗಿರ್ದ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮದವಳಿದು ಗುರುಭಕ್ತಿಗೂಡಿ ಬಂದನಯ್ಯಾ ನಿಮ್ಮ ಶ್ರದ್ಧಾಭಕ್ತ. ಕಾಮವಳಿದು ಲಿಂಗಭಕ್ತಿಗೂಡಿ ಬಂದನಯ್ಯಾ ನಿಮ್ಮ ನಿಷಾ*ಭಕ್ತ. ಮತ್ಸರವಳಿದು ಜಂಗಮಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಾವಧಾನಭಕ್ತ. ಮೋಹವನಳಿದು ಪಾದೋದಕಪ್ರಸಾದ ಭಕ್ತಿಯಗೂಡಿ ಬಂದನಯ್ಯಾ ನಿಮ್ಮ ಅನುಭಾವಭಕ್ತ. ಕ್ರೋಧವನಳಿದು ವಿಭೂತಿ ರುದ್ರಾಕ್ಷಿಭಕ್ತಿಗೂಡಿ ಬಂದನಯ್ಯಾ ನಿಮ್ಮ ಆನಂದಭಕ್ತ. ಲೋಭವನಳಿದು ಪಂಚಾಕ್ಷರಿಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಮರಸಭಕ್ತ. ಇಂತು ಅಷ್ಟಾವರಣದ ಭಕ್ತಿಸಂಯುಕ್ತವಾಗಿ ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾಗಿ ಬಂದನಯ್ಯಾ ನಿಮ್ಮ ನಿಜಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ. ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು, ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ. ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ, ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ, ವೀರಬಂಕೇಶ್ವರಾ.
--------------
ಸುಂಕದ ಬಂಕಣ್ಣ
ಒಂದು ಕೈಯಾದುದು ಗಂಡು. ಅಂದು ಲಗ್ನವಾಗಬೇಕೆಂದು ಬಂದನಯ್ಯಾ ಲಿಂಗವು. ಆ ಲಿಂಗ ರಮಣನಾಗಬೇಕೆಂದು ಹೋದಡೆ ನೆರೆದು ಸುಮ್ಮನಾದ ನೋಡಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೊನ್ನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ, ಅಶನಕ್ಕೆ ಬಂದಾತನಲ್ಲ, ವಸನಕ್ಕೆ ಬಂದಾತನಲ್ಲ, ಕೂಡಲಚೆನ್ನಸಂಗಯ್ಯಾ, ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು.
--------------
ಚನ್ನಬಸವಣ್ಣ
ಜಿತಪ್ರಸಾದ ಸಮಾಕ್ಷವಾದುದ ಅಶುದ್ಧಿತರೆತ್ತ ಬಲ್ಲರು ? ಮಹಾಮುನಿಗಳೆತ್ತ ಬಲ್ಲರು ? ಅನೇಕ ಕಾಲ ಮಹಾಕ್ಷೇತ್ರದಲ್ಲಿ ನಿಜನಿವಾಸಿಯಾಗಿರ್ದನು, ನಮ್ಮ ಮಡಿವಳನು. ಆ ಮಡಿವಳನ ಧ್ಯಾನದಲ್ಲಿ ಆರೂಢನಾಗಿರ್ದನು ನಮ್ಮ ಬಸವಣ್ಣನು. ಆ ಬಸವಣ್ಣನು ಬಪ್ಪಲ್ಲಿ ಮೈಯೆಲ್ಲ ಕಣ್ಣಾಗಿ, ಉತ್ತಮಾಂಗವೆಲ್ಲ ಕಣ್ಣಾಗಿ, ರೋಮ ರೋಮಾದಿಗಳೆಲ್ಲ ಕಣ್ಣಾಗಿ ಬಂದನಯ್ಯಾ, ಆ ಬಸವಣ್ಣನ ಭಕ್ತಿಯ ಜಡವ ಹರಿಯ ಬಂದನಯ್ಯಾ ನಮ್ಮ ಮಡಿವಾಳಯ್ಯನು. ಇವರಿಬ್ಬರ ನಿತ್ಯಪ್ರಸಾದಿ ನಾನಾದೆನು, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು. ಎನಗೆ ಲಿಂಗವಾಗಿ ಬಂದು, ಎನ್ನಂಗದಲ್ಲಿ ನಿಂದನಯ್ಯಾ ಬಸವಣ್ಣನು. ಎನಗೆ ಜಂಗಮವಾಗಿ ಬಂದು, ಎನ್ನ ಸಂಸಾರ ಪ್ರಕೃತಿಯ ಹರಿದ. ಭಕ್ತಿ ಜ್ಞಾನ ವೈರಾಗ್ಯವ ತುಂಬಿ, ಪಾದೋದಕ ಪ್ರಸಾದವನಿತ್ತು ಸಲಹಿದನಯ್ಯಾ ಬಸವಣ್ಣನು. ಆ ಬಸವಣ್ಣನ ಶ್ರೀಪಾದವನರ್ಚಿಸಿ, ಪೂಜಿಸಿ, ನಮೋ ನಮೋ ಎಂದು ಸುಖಿಯಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹರ[ನಿತ್ತಾ]ಗ್ರಹ ನಿಗ್ರಹದ ಬೆಸನ, ಗುರುನಿರೂಪವೆಂದು ಕೈಕೊಂಡು, ಕರುಣಿ ಬಸವಣ್ಣ ಕೈಲಾಸದಿಂದ ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮತ್ರ್ಯಲೋಕಕ್ಕೆ ಬಂದನಯ್ಯಾ. ಶಿವಸಮಯಕ್ಕಾಧಾರವಾದನಯ್ಯಾ, ಬಸವಣ್ಣನು. ಜಡರುಗಳ ಮನದ ಕತ್ತಲೆಯ ಕಳೆಯಲೆಂದು ಕಟ್ಟಿತ್ತು ಕಲ್ಯಾಣದಲ್ಲಿ ಮಹಾಮಠವು. ಪರಮನಟ್ಟಿದ ಓಲೆ ಬಂದಿಳಿಯಿತ್ತು, ಬಿಜ್ಜಳನ ಸಿಂಹಾಸನದ ಮುಂದೆ. ಅದತಂದು ಓದಿದಡೆ ಸೃಷ್ಟಿಯ ಸೇನಬೋವರಿಗೆ ತಿಳಿಯದು ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ. ಇದನೋದಿದವರಿಗೆ ಆನೆ ಸೇನೆ ಕುದುರೆ ಭಂಡಾರ ಅರವತ್ತಾರು ಕರಣಿಕರಿಗೆ ಮುಖ್ಯನ ಮಾಡುವೆನೆಂದು ಬಿಜ್ಜಳ ಭಾಷೆಯ ಕೊಡುತ್ತಿರಲು, ಹರನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯಾ ಅರವತ್ತಾರು ಕೋಟಿ ವಸ್ತುವ ಅರಮನೆಗೆ. ರಾಜ್ಯಕ್ಕೆ ಅರಮನೆಗೆ [ಶಿರಃ ಪ್ರಧಾನ]ನಾಗಿ ಹರಗಣಂಗಳಿಗೆ ಗತಿಮತಿ ಚೈತನ್ಯನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ ಎನ್ನ ತಂದೆ ಪೂರ್ವಾಚಾರಿ ಸಂಗನಬಸವಣ್ಣನು.
--------------
ಚನ್ನಬಸವಣ್ಣ
-->