ಅಥವಾ

ಒಟ್ಟು 41 ಕಡೆಗಳಲ್ಲಿ , 19 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ? ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ? ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ, ಕಂಡು ಬಲ್ಲವರು ನೀವು ಹೇಳಿರೆ. ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ. ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ.
--------------
ಆದಯ್ಯ
ಅಂದಚಂದದ ಬಣ್ಣವ ಹೊದ್ದು, ಹರನ ಶರಣರೆಂಬ ಅಣ್ಣಗಳೆಲ್ಲರು ಕರಣಂಗಳೆಂಬ ಉರವಣೆಯ ಅಂಬಿಗಾರದೆ, ಭಕ್ತಿಯೆಂಬ ಹರಿಗೆಯ ಹಿಡಿದು, ಮುಕ್ತಿಯೆಂಬ ಗ್ರಾಮವ ಮುತ್ತಿ ಕಾದಿ, ಸತ್ತರೆಲ್ಲರು ರುದ್ರನ ಶೂಲದ ಘಾಯದಲ್ಲಿ. ಎನಗೆ ಹೊದ್ದಿಗೆ ಯಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಗಗನಪವನದ ಮೇಲೆ ಉದಯಮುಖದನುಭಾವ, ಸದಮದದ ಗಜವ ನಿಲಿಸುವ ಮಾವತಿಗ ಬಂದ. ಅಷ್ಟದಳಕಮಲದೊಳು ಸೃಷ್ಟಿಯಂಕುರ ಭಜನೆ; ಮೆಟ್ಟಿ ನಿಂದಾತ ಪರಮಯೋಗಿಯಾಗದೆ ಮಾಣ ! ಬಯಲ ಬಣ್ಣವ ತುಂಬಿ, ನೆಳಲ ಶೃಂಗಾರವ ಮಾಡಿದ ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕøಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
--------------
ಜೇಡರ ದಾಸಿಮಯ್ಯ
ಎಲೆ ತಂಗಿ, ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ, ನಿನ್ನ ನಡೆ ನುಡಿಯಲ್ಲಿ, ಹೊಗರುದೋರುತ್ತಿದೆ, ನಿನ್ನ ಪೂರ್ವಾಪರವಾವುದಮ್ಮ?. ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು, ಭಂಡಾರಿ ಬಸವಪ್ಪೊಡೆಯದೇವರು. ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು. ಕೂಗಲೂರು ನಂಜಯ್ಯದೇವರು. ಆ ನಂಜಯ್ಯದೇವರ ಕರಕಮಲದಲ್ಲಿ, ಉದಯವಾದ ಶರಣವೆಣ್ಣಯ್ಯಾ ನಾನು. ಎನ್ನ ಗುರುವಿನ ಗುರು ಪರಮಗುರು, ಪರಮಾರಾಧ್ಯ ತೋಂಟದಾರ್ಯನಿಗೆ ಗುರುಭಕ್ತಿಯಿಂದೆನ್ನ ಶರಣುಮಾಡಿದರು. ಆ ತೋಂಟದಾರ್ಯನು, ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ, ಪ್ರಮಥಗಣಂಗಳ ವಚನಸ್ವರೂಪತತ್ವಾರ್ಥವೆಂಬ, ಹಾಲು ತುಪ್ಪಮಂ ಸದಾ ದಣಿಯಲೆರೆದು, ಅಕ್ಕರಿಂದ ರಕ್ಷಣೆಯಂ ಮಾಡಿ, ``ಘನಲಿಂಗಿ' ಎಂಬ ನಾಮಕರಣಮಂ ಕೊಟ್ಟು, ಪ್ರಾಯಸಮರ್ಥೆಯಂ ಮಾಡಿ, ಸತ್ಯಸದಾಚಾರ, ಜ್ಞಾನಕ್ರಿಯೆಗಳೆಂಬ, ದಿವ್ಯಾಭರಣಂಗಳಂ ತೊಡಿಸಿ, ಅರುಹೆಂಬ ಬಣ್ಣವ ನಿರಿವಿಡಿದುಡಿಸಿ, ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ, ತನಗೆ ನಾನಾಗಬೇಕೆಂದು ಬೇಡಿಕಳುಹಲು, ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ.
--------------
ಘನಲಿಂಗಿದೇವ
ಕಾಯದ ಬಣ್ಣವ ಸುಟ್ಟು ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಮನದ ಬಣ್ಣವ ಕೆಡಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಭಾವದ ಬಣ್ಣವ ಅಳಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಹೊರೆಯಿಲ್ಲದಿರಬಲ್ಲರೆ ಆತನಚ್ಚ ಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿನ್ನದೊಳಗಣ ಬಣ್ಣವ ಆ ಚಿನ್ನ ತನ್ನ ತಾನರಿವುದೆ? ಕಬ್ಬು ರುಚಿಸಬಲ್ಲುದೆ ತನ್ನ ತಾನೆ? ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ?ರಾಮನಾಥ.
--------------
ಜೇಡರ ದಾಸಿಮಯ್ಯ
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ, ಬಣ್ಣವನೊರೆದು ಬಂಗಾರದ ಇರವನರಿಯಬಹುದೆ ? ಜೀವವರಿದು ಜ್ಞಾನವ ಕಾಣಬೇಕಲ್ಲದೆ ಜೀವವಳಿದು ಜ್ಞಾನಕ್ಕೆ ಉಳಿವುಂಟೆ ? ಅದು ಜ್ಯೋತಿಯ ಮೇಲಣ ತಮವದೆ, ಕೆಳಗೆ ಬೆಳಗು, ತುದಿಯಲ್ಲಿ ಸಮವದೆ ತಿಳಿದು ನೋಡಿ. ಆ ಪರಿಯ ಇರವು ಜೀವಪರಮನ ಕಲೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.
--------------
ಸಗರದ ಬೊಮ್ಮಣ್ಣ
ಬಣ್ಣವ ಬಯಲು ನುಂಗಿದಾಗ ಅಣ್ಣಗಳೆಲ್ಲಕ್ಕೂ ಮರಣವಹಾಗ ಮದವಳಿಗೆಯ ಮದವಳಿಗೆ ಹೋದನೆಂದುಕೊಂಡ. ಒಂದು ಕಡೆಯಲ್ಲಿ ತಾ ಒಂದು ಕಡೆಯಾದ ಪರಿಯ ನೋಡಾ! ಗಂಡನೊಂದಾಗಿ ಹೋದವರ ಮಿಂಡ ಉಳುಹಿಸಿಕೊಂಡ ಪರಿಯ ನೋಡಾ! ಮಿಂಡನೊಂದಾಗಿ ಗಂಡನ ಕೂಡಿಕೊಂಬ ಉಂಡ ಮುಂಡೆಯರತನವ ಕಂಡು ನಾನಂಜುವೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಆರು ಬಣ್ಣದ ಆರು ಲಿಂಗದಲ್ಲಿ ಮೂರು ಬಣ್ಣದ ಮೂರು ಲಿಂಗವ ಕೂಡಲು ನವಲಿಂಗದ ಒಂಬತ್ತು ಬಣ್ಣದಲ್ಲಿ ಗುರುಲಿಂಗಜಂಗಮಪ್ರಸಾದವೆಂಬ ನಾಲ್ಕು ಬಣ್ಣವ ಕೂಡಿದ ಹದಿಮೂರು ಬಣ್ಣವ ಕ್ರೀಯೆಂಬ ಕಮ್ಮರನ ಕೈಯಲ್ಲಿ ಕೊಟ್ಟಡೆ, ವಾಸನೆಯೆಂಬ ಸೀಸವ ಬೆರಸಿದ ನೋಡಾ. ಕಮ್ಮಾರನ ಬಾಯಕುಟ್ಟಿ ಸೆಳೆಯಲಾಗಿ ಆ ವಾಸನೆ ಅಲ್ಲಿಯೇ ಅಡಗಿ, ಅಂಗಭವಿ ಲಿಂಗಭವಿಯೆಂಬ ಅಡಗಿದ ಕಾಳಿಕೆಯಳಿದ ಸ್ವಯಬಣ್ಣದ ಮಿಸುನಿಗೆ ತನುವೆಂಬ ಒರೆಗಲ್ಲ ಹಂಗಿಲ್ಲ, ಮನವೆಂಬ ಮಚ್ಚದ ಹಂಗಿಲ್ಲ. ಭಾವವೆಂಬ ಹಸ್ತದ ಹಂಗಿಲ್ಲ, ತಮೋಗುಣವೆಂಬ ಮಯಣದ ಹಂಗಿಲ್ಲ. ಬೋಧವೆಂಬ ನೇತ್ರದ ಹಂಗಿಲ್ಲ. ಇಂತಿವರ ಹಂಗು ಹರಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಪರವಳಿದು ಸಯವಾಯಿತ್ತು
--------------
ಆದಯ್ಯ
ಭಿನ್ನಪ್ರಾಣವಳಿದು ನಿರ್ಮಳಚಿತ್ತವ ಮಾಡಿ ಕಣ್ಣಾಲಿ ಉರೆ ನಟ್ಟು ಹೊರ ಸೂಸದೆ (ಕ)ಣ್ಣ ಬಣ್ಣವ ಕಳೆದು, ಉಣ್ಣನು ಉಣ್ಣದೆ ಇರನು, ತನ್ನ ನಿಲವನರಿತು ತಾನೊಬ್ಬನೆ ಇರನು. ಜನ್ಮ ಮೃತ್ಯುಗಳಲ್ಲಿ ಕಾಳು ಬೆಳುದಿಂಗಳಲ್ಲಿ, ತನ್ನ ಪ್ರಾಣ ತನಗೆ ಪ್ರಕಾಶವು. ತನ್ನೊಳಗೆ ಹೊಣೆ ಹೊಕ್ಕು, ಕುಂಬಳದ ಸೂಚಿಯ ಸುಮ್ಮಾನಿ ಶರಣನ ನಿಲವ ನೋಡಾ ! ಅಳಲಲಿಲ್ಲ ಬಳಲಲಿಲ್ಲ ಅಳಿಯಲಿಲ್ಲ ಉಳಿಯಲಿಲ್ಲ,_ಎರಡಳಿದ ನಿಲವು. ಉಭಯ ಮಧ್ಯದ ಕೊರಡಿಂಗೆ ಕುಂಟಿಯನಿಕ್ಕಿ ಕೆಡಿಸುವನು ತಾನಲ್ಲ. ಹೊರಳಲರಿಯನು ಕೊಳಚಿಯ ಉದಕದೊಳಗೆ. ಕಳಾಕಳಾ ಭೇದದಿಂದ ತೊಳತೊಳಗುವನು. ದಳಭ್ರೂಮಧ್ಯದ ಧ್ರುವಮಂಡಲವ ಮೀರಿ ಕಳೆದು ದಾಂಟಿ ಕೂಡಲಚೆನ್ನಸಂಗಯ್ಯನೊಳಗೆ ಶರಣಕಾಂತಿಯ ನಿಲವಿಂಗೆ ಶರಣು ಶರಣು !
--------------
ಚನ್ನಬಸವಣ್ಣ
ಬೆಟ್ಟದ ಮೇಲಣ ಗುಂಡು, ಬೆಟ್ಟವ ನುಂಗಿತ್ತು. ಸೃಷ್ಟಿಯ ಮೇಲಣ ಜಗ, ಪೃಥ್ವಿಯ ನುಂಗಿತ್ತು. ಹಸುವಿನ ಗರ್ಭದ ವತ್ಸ, ಹಸುವ ನುಂಗಿತ್ತು. ಹೆಸರಿಡುವುದಿನ್ನೇನೊ ? ಕಣ್ಣೊಳಗಣ ಎರಳೆ ಬಣ್ಣವ ನುಂಗಿದ ಮತ್ತೆ ಬಣ್ಣಿಸಿ ಪೂಜಿಸಿಕೊಂಬುದಿನ್ನೇನೊ ? ಕಣ್ಣಾವಗಾಲದ ಹೊಳೆಯಲ್ಲಿ ಮುಳುಗಿ ಚೆನ್ನುಗೆಟ್ಟಿರಲ್ಲಾ. ಅಣ್ಣಗಳೆಲ್ಲರೂ ಮುಕ್ಕಣ್ಣನ ಪೂಜಿಸಿ ಮೂರುಬಟ್ಟೆಯ ಸುತ್ತಿ, ಊರ ಹೊಕ್ಕು ಆರೈದಿರಯ್ಯಾ, ನೀವಾರಾಧಿಸುವ ಲಿಂಗವ. ಆ ಲಿಂಗದಲ್ಲಿ ಲೀಯವಾದರೆ ಸಂಗಕ್ಕೆ ಒಳಗಾದರು. ನಮ್ಮ ನಿಸ್ಸಂಗಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ದಿಕ್ಕುಗೆಟ್ಟೆನಯ್ಯಾ.
--------------
ಮೋಳಿಗೆ ಮಾರಯ್ಯ
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ! ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ? ಗಗನದ ವಾಯುವ ಬೆಂಬಳಿವಿಡಿದು, ಅಗ್ನಿಯಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ! ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ, ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು.
--------------
ಅಲ್ಲಮಪ್ರಭುದೇವರು
ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು, ಬಂಗಾರವ ಕಳೆದು ಬಣ್ಣವ ನೋಡಬಾರದು. ಕುಸುಮವ ಕಳೆದು ಗಂಧವ ಕಾಣಬಾರದು. ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ? ಅಂಗವ ಕಳೆದು ಲಿಂಗವನರಿಯಬಾರದು. ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ? ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ ಅಜಾತರು ಕೇಳಿರೊ. ಅಂಗವ ಕಳೆದು ಲಿಂಗವ ಕಂಡೆನೆಂಬುದು, ಲಿಂಗವಳಿದು ಆತ್ಮನನರಿದೆನೆಂಬುದು, ಆತ್ಮನಳಿದು ಅರಿವನರಿದೆನೆಂಬುದು, ಅದೇತರ ಮರೆ ಹೇಳಾ. ತೃಷೆಯರತು ನೀರ ಕೊಳಬಹುದೆ ? ಆಪ್ಯಾಯನವನರತು ಓಗರವನುಣಬಹುದೆ ? ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ? ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->