ಅಥವಾ

ಒಟ್ಟು 46 ಕಡೆಗಳಲ್ಲಿ , 18 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲ ಕಳವಳಕ್ಕೆ, ಬಾಯ ಸವಿಗೆ, ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ. ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ. ಅವರೊಕ್ಕುದನುಂಬೆನೆಂದಂತೆ ನಡೆವೆ. ಎನ್ನೊಡೆಯ ಕೂಡಲಸಂಗಮದೇವನೊಲ್ಲದವರ ಹಿಡಿದೆನಾದಡೆ ನಿಮ್ಮ ಪಾದದಾಣೆ.
--------------
ಬಸವಣ್ಣ
ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ. ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ ಒಂದಾದೊಂದು ದೆಸೆಗೆ ಹೋಗುತ್ತಿಪ್ಪಾಗ ಅರಣ್ಯಮಧ್ಯದಲ್ಲಿ ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ ತೃಷೆಯೆದ್ದು ಮನವ ಮತಿಗೆಡಿಸಿ ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು ಆ ಸಮಯದಲ್ಲಿ ಖರ್ಜೂರ ಮಾವು ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು ವೃಕ್ಷಂಗಳಡಿಯಲ್ಲಿ ಬಿದ್ದಿರಲು ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ. ಅದೇನು ಕಾರಣವೆಂದೊಡೆ `ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ'ವೆಂದು ಆದ್ಯರ ವಚನ ಸಾರುತೈದಾವೆ ನೋಡಾ. ಇದು ಕಾರಣ- ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ ಮುಂದನರಿಯದೆ ನುಡಿದೆನಯ್ಯ. ಸತಿಯ ಭಾಷೆ ಪತಿಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಜ್ಞಾಸಿದ್ಧನನರ್ಚಿಸುವ ಆನಂದಮಯ ಶರಣರ ಧ್ಯಾನ ಮೌನ ಸಮಾದ್ಥಿಗಳ[ದ್ಹೆಂ]ಗೆಂದೊಡೆ; ಪ್ರಸಾದವ ಬಯಸಿ ಪರವನರಿಯಹುದೆ ಧ್ಯಾನ; ಶಿವನಲ್ಲದೆ ಅತಃಪರವಿಲ್ಲೆಂದು ಅನ್ಯರ ಕೂಡೆ ನುಡಿಯಪ್ಪುದೆ ಮೌನ; ವ್ರತವಾರರಲ್ಲಿ ತದ್ಗತವಾಗಿಪುದೀಗ ಸಮಾದ್ಥಿ, ಇಂತಪುದೀಗ ಶಿವಯೋಗ. ಇಂತಪ್ಪವರ ತೋರು, ನಿನ್ನರ್ಚನೆಯನೊಲ್ಲೆ; ಅವರ ಗಡಣ ಸಂಗಮಾತ್ರದಲ್ಲಿ ನಿನ್ನ ಪದವಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಧನವ ಪಡೆದು ವಿಭೋಗವನರಿಯದ ಲೋಬ್ಥಿಗೆ ಸಿರಿಯೇಕೆ ಬಯಸುವಂತೆ ? ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ, ಕನ್ನೆ ಅಳಿಯಳು, ಕನ್ನೆ ಉಳಿಯಳು. ಜವ್ವನ ತವಕದಿಂದ ಅವಳು ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ, ಅದೆಂತು ಸೈರಿಸುವೆ ? ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ? ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು, ಸಕಳೇಶ್ವರದೇವ ನಗುವ.
--------------
ಸಕಳೇಶ ಮಾದರಸ
ಲೇಸ ಕಂಡು ಮನ ಬಯಸಿ ಬಯಸಿ ಆಸೆ ಮಾಡಿದಡಿಲ್ಲ ಕಂಡಯ್ಯಾ. ತಾಳಮರಕ್ಕೆ ಕೈಯ ನೀಡಿ ಮೇಲೆ ನೋಡಿ ಗೋಣು ನೊಂದುದಯ್ಯಾ. ಕೂಡಲಸಂಗಮದೇವಾ ಕೇಳಯ್ಯಾ, ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ ! 23
--------------
ಬಸವಣ್ಣ
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವನಂತಪ್ಪ ನಿಧಾನ ದೊರಕಿತ್ತೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವನಂತಪ್ಪ ಪರುಷ ದೊರಕಿತ್ತೆನಗೆ. ಚೆನ್ನಸಂಗಾ ನಿಮ್ಮಲ್ಲಿ ಬಯಸಿ ಬೇಡುವಡೆ ಬಸವನಂತಪ್ಪ ಕಾಮಧೇನು ದೊರೆಯಿತ್ತೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವನಂತಪ್ಪ ಸುರತರು ದೊರಕಿತ್ತೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ತ್ರಿವಿಧ ತ್ರಿವಿಧ[ದ] ಮೊದಲನೆ ತೋರಿದ ಬಸವಣ್ಣನೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವಣ್ಣನಿಂದ ನೀವಾದಿರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಿಯ ಪ್ರಸಾದಿಯಾದೆನು.
--------------
ಚನ್ನಬಸವಣ್ಣ
ಗತಿಪದಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ, ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ. ಗತಿಪದ ಮುಕ್ತಿಸೂತಕವಿರಹಿತ ಭಕ್ತ, ಹಮ್ಮು ಬಿಮ್ಮು ಗಮನನಾಸ್ತಿ ಜಂಗಮ. ಮಾಡುವಡೆ ಭಕ್ತ ಮಾಟದೊಳಗಿಲ್ಲದಿರಬೇಕು, ಬೇಡುವಡೆ ಜಂಗಮ ಕೊಂಬುದರೊಳಗಿಲ್ಲದಿರಬೇಕು. ಪ್ರಾಣವಿಲ್ಲದ ಭಕ್ತ ರೂಹಿಲ್ಲದ ಜಂಗಮ, ಉಭಯಕುಳ ಸಂದಳಿದಂದು ಕೂಡಲಚೆನ್ನಸಂಗನಲ್ಲಿ ಭಕ್ತಜಂಗಮವೆಂಬೆ
--------------
ಚನ್ನಬಸವಣ್ಣ
ತಾಯಿಯಲ್ಲಿ ಬಯಸಿ ತಂದ ತಲೆಯ ಕೈಯೊಳಿಟ್ಟು ಕಾಣದಿರ್ದೊಡೆ ಸವಿಸುಖ ತಪ್ಪಿತ್ತು. ಮಣ್ಣೊಳಗೆ ಮುಚ್ಚಿದರೆ ಒಂದನೆಯ ಸುಖ ತಪ್ಪಿತ್ತು. ಜಲದೊಳಗೆ ಮುಚ್ಚಿದರೆ ಎರಡನೆಯ ಸುಖ ತಪ್ಪಿತ್ತು. ಕಿಚ್ಚಿನೊಳಗೆ ಮುಚ್ಚಿದರೆ ಮೂರನೆಯ ಸುಖ ತಪ್ಪಿತ್ತು. ಗಾಳಿಯೊಳಗೆ ಮುಸುಕಲಿಟ್ಟರೆ ನಾಲ್ಕನೆಯ ಸುಖ ತಪ್ಪಿತ್ತು. ಅಂಬರದೊಳಗಡಗಿಸಿದರೆ ಐದನೆಯ ಸುಖ ತಪ್ಪತ್ತು. ಕರ್ತಾರನಲ್ಲಿಟ್ಟು ಕಾಣಿಸದಿರ್ದಡೆ ಆರನೆಯ ಸುಖ ತಪ್ಪಿತ್ತು. ಈ ಸುಖವನರಿಯದೆ ಮತ್ತೆ ಮತ್ತೆ ಮಾಡಿಕೊಂಡರೇನು ಅತ್ತತ್ತಲರಿಯದೆ ವ್ಯರ್ಥವಾಯಿತ್ತು ಗುರುನಿರಂಜನ ಚನ್ನಬಸವಲಿಂಗವು ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನಾಧೀನವಾಗಿ ಭಕ್ತಿಯ ಬೇಡ ಬಂದವನಲ್ಲ. ಮುಕ್ತಿಯಾಧೀನವಾಗಿ ಮುಕ್ತಿಯ ಬೇಡಬಂದವನಲ್ಲ. ಅಶನಾತುರನಾಗಿ ವಿಷಯವ ಬಯಸಿ ಬಂದವನಲ್ಲ. ಗುಹೇಶ್ವರನ ಶರಣ ಸಂಗನಬಸವಣ್ಣ ಮಾಡುವ ಭಕ್ತನಲ್ಲಾಗಿ, ನಾನು ಬೇಡುವ ಜಂಗಮವಲ್ಲ, ಕಾಣಾ, ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಪರರಾಸೆಯೆಂಬ ಜ್ವರ ಹತ್ತಿತ್ತಾಗಿ, ಕಳವಳಿಸಿ, ನುಡಿವೆನಯ್ಯಾ. ಹೊನ್ನು ಹೆಣ್ಣು ಮಣ್ಣು ಬಯಸಿ, ವಿಕಳಗೊಂಡಂತೆ ಪ್ರಳಾಪಿಸಿ, ವಿಕಳಂಗೊಂಡು ನುಡಿಯುತ್ತಿರ್ಪೆನಯ್ಯಾ. ಈ ಕಳವಳವನಳಿದು, ಸಂಭಾಷೆಯನಿತ್ತು , ನಿಮ್ಮ ಕರುಣಾಮೃತವೆಂಬ ಕಷಾಯವನೆರದು, ಪರರಾಸೆಯೆಂಬ ಜ್ವರವ ಮಾಣಿಸು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ, ಆವ ನೇಮ ವ್ರತವ ಪಿಡಿದು ಆಚರಿಸಿದಡೆ ಮುಂದೆ ಭವಬಂಧನವೇ ಪ್ರಾಪ್ತಿಯಾಗುವದು. ಮತ್ತಂ, ವಾರದಫಲ ಬಯಸುವವರಿಗೆ ಗುರುವಿಲ್ಲ. ಮಾಸದ ಫಲ ಬಯಸುವವರಿಗೆ ಲಿಂಗವಿಲ್ಲ. ಚತುರ್ದಶಿ ಫಲ ಬಯಸುವವರಿಗೆ ಜಂಗಮವಿಲ್ಲ. ಆ ಮಾಸದ ಫಲ ಬಯಸುವವರಿಗೆ ಪಾದೋದಕವಿಲ್ಲ. ಗ್ರಹಣ ಫಲ ಬಯಸುವವರಿಗೆ ಪ್ರಸಾದವಿಲ್ಲ. ಇಂತಪ್ಪ ಫಲವ ಬಯಸಿ ಮಾಡಬೇಕೆಂಬವರಿಗೆ ವಿಭೂತಿ, ರುದ್ರಾಕ್ಷಿ, ಮಂತ್ರ ಮೊದಲಾದ ಅಷ್ಟಾವರಣವು ಇಲ್ಲ. ಇತಂಪ್ಪ ವ್ರತಭ್ರಷ್ಟ ಹೊಲೆಯರಿಗೆ ವೀರಮಹೇಶ್ವರರೆಂದಡೆ ನಿರ್ಮಾಯಪ್ರಭುವಿನ ಶರಣರು ನರಕದಲ್ಲಿಕ್ಕದೆ ಬಿಡುವರೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಭಕ್ತಿ ಜ್ಞಾನವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ `ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ. ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ ನಿಜಮುಕ್ತಿಯನರಸುವ ಅಣ್ಣಗಳಿರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪ್ರಸಾದವ ಬಯಸಿ ಪರವನರಿದೆನೆಂಬವಂಗೆ, ಬೇರೆ ಮತ್ತೆ ಸಾಧಿಸಿ ಅರಿದೆನೆಂಬ ಬಳಲಿಕೆಯದೇಕೇ? ಜಂಗಮವೆ ಲಿಂಗವೆಂದು ನಂಬಿ ಪೂಜೆಯ ಮಾಡಲು, ಅದು ತಾನೆ, ಲಿಂಗಪೂಜೆ ನೋಡಾ. ಆ ಜಂಗಮ ಭಕ್ತಿಯಿಂದ ಪ್ರಸಾದ ಸಾಧ್ಯವಹುದು. ಮುಂದೆ ಪರವನರಿವ. ಇದು ಕಾರಣ, ಜಂಗಮಭಕ್ತಿಯೇ ವಿಶೇಷ, ಇದು ತಪ್ಪದು, ನಿಜಗುರು ಸ್ವತಂತ್ರಲಿಂಗೇಶ್ವರನ ನಂಬಿ ನಿಜವನೈದುವಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಫಲಪದವಿಯ ಬಯಸಿ ಮಾಡಲಾಗದು ಗುರುಭಕ್ತಿಯ. ಫಲಪದವಿಯ ಬಯಸಿ ಮಾಡಲಾಗದು ಲಿಂಗಪೂಜೆಯ. ಫಲಪದವಿಯ ಬಯಸಿ ಮಾಡಲಾಗದು ಜಂಗಮಾರ್ಚನೆಯ. ಅದೇನು ಕಾರಣವೆಂದೊಡೆ : ಬಯಕೆಯ ಭಕ್ತಿಯ, ಪೂರ್ವಪುರಾತನರು ಮಚ್ಚರು. ನಮ್ಮ ಅಖಂಡೇಶ್ವರದೇವನು ಹಂಗಿನ ಭಕ್ತರನೊಲ್ಲ ನೋಡಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->