ಅಥವಾ

ಒಟ್ಟು 34 ಕಡೆಗಳಲ್ಲಿ , 19 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರದ್ಥೀರಸುಭಟರುಗಳೆಲ್ಲಾ ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?
--------------
ಭೋಗಣ್ಣ
ಶಿಶುವಿನ ಬಸುರಿನಲ್ಲಿ ತಾಯಿ ಹುಟ್ಟಿ, ತಾಯಿ ಅಳಿದು, ಶಿಶು ಉಳಿಯಿತ್ತು. ಉಳಿದುಳುಮೆಯ ತಿಳಿಯಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಡಗೂಡ ಬಲ್ಲವ.
--------------
ಮೋಳಿಗೆ ಮಾರಯ್ಯ
ಭಟಂಗೆ ಬ್ಥೀತಿ ಉಳ್ಳನ್ನಕ್ಕ ರಣವ ಹೊಗಬಲ್ಲನೆ? ಬಲ್ಲವ ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ಹೋರುವನ್ನಬರ ಬಲ್ಲವನಹನೆ? ಅರಿದು ನುಡಿಯಲಿಲ್ಲ, ಮರೆದು ಸುಮ್ಮನಿರಲಿಲ್ಲ. ಆರು ಎಂದಂತೆ ಎನಲಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಡುನೀರ ಮಧ್ಯದಲ್ಲಿ ಅಗಮ್ಯದ ಜ್ಯೋತಿ ಉರಿವುತ್ತಿದೆ. ಅಗಲದೆ ನೋಡಲಿಕೆ ನೀರಿನ ಮೇಲೆ ಉರಿವುತ್ತಿಪ್ಪುದು. ಹೊದ್ದಿ ನೋಡಲಿಕ್ಕೆ ನೀರಿನೊಳಗೆ ಮುಳುಗಿ ಉರಿವುತ್ತಿಪ್ಪುದು. ಅದು ಜ್ಯೋತಿಯ ಗುಣವೋ, ತನ್ನ ಭ್ರಾಂತಿನ ಗುಣವೋ ? ಎಂಬುದ ತಿಳಿದಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ತಲೆಗೆ ಮೂರು ಚಿಪ್ಪು, ಅಂಗಕ್ಕೆ ಆರು ಚಿಪ್ಪು, ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ ಒಂದೆ ಚಿಪ್ಪಿನ ಕುಪ್ಪಸ. ಇದರಂಗದ ಆಚರಣೆಯ ಬಲ್ಲವ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.
--------------
ಸೂಜಿಕಾಯಕದ ಕಾಮಿತಂದೆ
ಹದಿನಾಲ್ಕು ರತ್ನವೆಂಬುದ ಸುರಾಸುರರೆಲ್ಲರು ಬಲ್ಲರು ಮೂರಾರು ರತ್ನವನಾರು ಅರಿಯರಯ್ಯಾ; ಮೂರಾರು ರತ್ನವೆಂಬುದ ಬಲ್ಲರು ದಿವ್ಯಮುನಿಗಳು. ಮೂರೆರಡು ರತ್ನವನರಿಯರು ತ್ರಿಲೋಕದವರು; ಮೂರೆರಡು ರತ್ನವ ಬಲ್ಲರು ಮಹಾಪ್ರಮಥರು. ಒಂದು ರತ್ನವನಾರು ಅರಿಯರು; ಒಂದು ರತ್ನವ ಬಲ್ಲವ ನಿಮ್ಮ ಶರಣ ಮಹಾಂಗಮೂರ್ತಿ ಚೆನ್ನಬಸವಣ್ಣ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆಡಿನ ಕಾಲ ಮುರಿದು, ಕೋಡಗದ ಹಲ್ಲ ಕಿತ್ತು, ಉಡುವಿನ ಕುಡಿನಾಲಗೆಯ ಕೊಯಿದು, ಬಳ್ಳುವಿನ ಸೊಲ್ಲನರಿದು ಇವೆಲ್ಲವ ನಿನ್ನಲ್ಲಿಗೆ ತಂದೆ; ಇವ ಬಲ್ಲವ ನೀನಲ್ಲದಿಲ್ಲ. ಎನಗೆ ಅಲ್ಲಿಯೊ ಇಲ್ಲಿಯೊ ಮತ್ತೆ ಅಂದು ನೀ ಹೇಳಿದಲ್ಲಿಯೊ ಎಂಬುದ ನಾನರಿಯೆ, ನೀ ಹೇಳು, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ ಮೂವರು ಪುರೋಹಿತರು ಬಂದರು. ಒಬ್ಬ ಇಹದಲ್ಲಿ ಗುಣವ ಬಲ್ಲವ; ಒಬ್ಬ ಪರದಲ್ಲಿ ಗುಣವ ಬಲ್ಲವ; ಮತ್ತೊಬ್ಬ ಇಹಪರ ಉಭಯ ತಾ ಸಹಿತಾಗಿ ಮೂರ ನೆನೆದು ಅರಿಯ. ಅರಿಯದವನ ತೋಳಿನ ಕೊಡಗೂಸು, ಕಾಳವ್ವೆಯ ಕತ್ತಲೆಯಲ್ಲಿ ತಳ್ಳಿ, ಮಲೆಗೆ ಕಿಚ್ಚ ಹಚ್ಚಿ, ಮಂದಿರವ ಹಿರಿದುಹಾಕಿ, ಪುರೋಹಿತರ ಕಣ್ಣ ಕಳೆದು ಕೊಡಗೂಸು ಕೊಡನೊಳಗಾದಳು. ಇಂತಿವರಡಿಯ ಭೇದವನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇಂತಪ್ಪ ಘನವನಗಲಿಸಿದ ಮಹಾಪ್ರಸಾದಿಯ ನಿಲವೆಂತಿಪ್ಪುದೆಂದರೆ, ಉರಿಯುಂಡ ಕರ್ಪುರದಂತೆ, ಶರಧಿಯ ಬೆರೆದ ಸಾರದಂತೆ, ನೀರೊಳಗೆ ಬಿದ್ದ ಆಲಿಯಂತೆ, ಉರಿಯ ಗಿರಿಯನೆಚ್ಚ ಅರಗಿನ ಬಾಣದಂತೆ, ಪರಿಮಳವನುಂಡ ಹರಿಯಂತೆ. ಇದರ ವಿವರವನರಿದರೆ, ಪರವ ಬಲ್ಲವ, ತನ್ನ ಬಲ್ಲವ, ಎಲ್ಲವು ತನ್ಮಯನಾಗಿರುವ. ಇಂತಪ್ಪ ಅಣುವಿಂಗಣುವಾಗಿ ನಿಂದ ಮಹಾಪ್ರಸಾದವ ನಾನೆತ್ತ ಬಲ್ಲೆನಯ್ಯಾ ? ಇದ ಬಲ್ಲ ಪ್ರಸಾದಿಗಳ ಸೊಲ್ಲಿನೊಳಗೆ ನಾನಡಗಿದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬಲ್ಲವ ಮಾತ ಕಲಿತರೇನಯ್ಯ ಬಯಲ ಬೊಮ್ಮದ ಮೇಳದೆ ಮಾತಿನ ಮಾಲೆಯೊಳು ಘಾತಕವಿಪ್ಪುದು. ಹಲ್ಲ ಕಿರಿವರು ಕನ್ನಡಿಗಿದಿರು ಕನ್ನಡಿ ಕೊಡುವುದೆ ಕಳೆಯುವ ? ಅಲ್ಲದ ಮಾತು ಅಲಗಿನ ಘಾಯ, ಬೆಲ್ಲದ ಮಾತು ಭಲ್ಲೆಯದ ಘಾಯ. ಎಲ್ಲರು ಮಾತಿನಿಂದ ಮರಣವಾದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ, ಹೊಸಮಾಣಿಕ್ಯವ ನುಂಗಿತ್ತ ಕಂಡೆ. ನುಂಗುವಾಗ ಒಂದು, ಗುಟುಕಿಸುವಾಗ ಎರಡು, ಸ್ವಸ್ಥಾನದಲ್ಲಿ ನಿಂದಾಗ ಮೂರು, ಅದರಂಗವ ತಿಳಿದು ಕಳೆಯಬಲ್ಲಡೆ ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ಏತ್ವದಲ್ಲಿ ಚುಚ್ಚಿ, ಓತ್ವದಲ್ಲಿ ತೆಗೆದು, ಔತ್ವದಲ್ಲಿ ಒಡಗೂಡಿ, ಕುರುಕಿನಲ್ಲಿ ಸುಳಿದು, ಸೊನ್ನೆಯಲ್ಲಿ ಸಂಜ್ಞೆಗೆಟ್ಟು, ಸೂಜಿಯ ಮೊನೆಯೊಡಗೂಡುವದಕ್ಕೆ ಎರಡಿಲ್ಲ. ದಾರಕ್ಕೆ ಹುರಿಯಿಲ್ಲ, ಇದನಾರ ಬಲ್ಲರು. ಇಂತಿವನಾರಯ್ಯಬಲ್ಲಡೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜನಲಿಂಗವ ಬಲ್ಲವ.
--------------
ಸೂಜಿಕಾಯಕದ ಕಾಮಿತಂದೆ
ಬಿತ್ತು ರಸವ ಮೆದ್ದಾಗ ಹಣ್ಣಿನ ಹಂಗು ಹರಿಯಿತ್ತು. ಬಲ್ಲವ ಗೆಲ್ಲ ಸೋಲವ ನುಡಿಯಲಾಗಿ ಬಲ್ಲತನ ಅಲ್ಲಿಯೇ ಅಡಗಿತ್ತು. ಬೆಲ್ಲದ ಸಿಹಿಯಂತೆ ಬಲ್ಲವನ ಇರವು, ಎಲ್ಲಕ್ಕೂ ಸರಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಮೊನೆ ಮೂರು, ಹಿನ್ನೆ ಒಂದು. ಆ ಸೂಜಿಯಲ್ಲಿ ಹೊಲಿದಹೆನೆಂದಡೆ ಕುಪ್ಪಸಕ್ಕೆ ಚಿಪ್ಪು ಒಡಗೂಡವು ನೋಡಾ. ಮೊನೆಯೊಂದು, ಹಿನ್ನೆ ಮೂರಾಗಿ ಹೊಲಿದಡೆ, ಹಿನ್ನೆಯ ಮೂರುದಾರ ಮೊನೆಯ ನಾಳದಲ್ಲಿ ಅಡಗಿದವು ನೋಡಾ. ಆ ಮೂರ ಹಿಂಚಿ ಹಾಕಿ, ಮೊನೆಯೊಂದರಲ್ಲಿ ಬೇರೆ ಬೇರೆ ಹೊಲಿಯಬಲ್ಲಡೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.
--------------
ಸೂಜಿಕಾಯಕದ ಕಾಮಿತಂದೆ
ಇನ್ನಷ್ಟು ... -->