ಅಥವಾ

ಒಟ್ಟು 41 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು- ತೆರನನರಿಯದೆ ತನಿರಸದ- ಹೊರಗಣ ಎಲೆಯನೆ ಮೆಲಿದುವು ! ನಿಮ್ಮನರಿವ ಮದಕರಿಯಲ್ಲದೆ ಕುರಿ ಬಲ್ಲುದೆ ಕೂಡಲಸಂಗಮದೇವಾ
--------------
ಬಸವಣ್ಣ
ಗಾಜಿನ ಗೋಡೆಯ ಸುಣ್ಣ ವೇದ್ಥಿಸಬಲ್ಲುದೆ ? ನಾಗರಹೆಡೆಯ ಚಿಕ್ಕೆರ ಬಲ್ಲುದೆ ? ಉರಿಯ ಪುತ್ಥಳಿಯ ಅರಗು ಮುಟ್ಟಿ ಅಪ್ಪಬಲ್ಲುದೆ ? ಲಿಂಗಮಯ ಸಿರಿವಂತರ ಅಂಗವ ಸಂಗಿಸಬಲ್ಲವೆ ಇಂದ್ರಿಯಂಗಳು, ಇಂತೀ ಗುಣವ ಹಿಂಗಿ, ಲಿಂಗವೆ ತಾನಾಗಿಪ್ಪ ನಿಃಕಳಂಕ ಮಲ್ಲಿಕಾರ್ಜುನನ ?
--------------
ಮೋಳಿಗೆ ಮಾರಯ್ಯ
ನೀರೊಳು ಬಿದ್ದು ನೀರಪುಳವ ಭಕ್ಷಿಸುವ ಕುಕ್ಕುಟ ಕ್ಷೀರವನೀಂಟಬಲ್ಲುದೆ ಹೇಳಾ? ತಿಪ್ಪೆಯಕೆದರಿ ಮಲಪುಳವ ತಿಂಬ ಕೋಳಿ ಮಧುರಾಮೃತಸುಖವ ಬಲ್ಲುದೆ ಹೇಳಾ? ಮಾಯಾಮೋಹ ವಿಷಯರಸವನೀಂಟುವ ಜೀವ ಜಾತಿಗಳು, ಆದಿಗುರು ಕರುಣಾಮೃತ ಅನಾದಿ ಮಹಾನುಭಾವ ಜಂಗಮಪ್ರಸಾದಸೇವಿಪ ಸುಖವನವರೆತ್ತಬಲ್ಲರು ಹೇಳಾ? ಗುರುನಿರಂಜನ ಚನ್ನ ಬಸವಲಿಂಗ ಚಿದಾಂಶಿಕರಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಬ್ಬನಗಿದ ಗಾಣ ಬಲ್ಲುದೆ ಹಾಲ ಸವಿಯ ? ಗಗನದಲಾಡುವ ಪಕ್ಷಿ ಬಲ್ಲುದೆ ರವಿಯ ನಿಲವ ? ಹಗರಣಕ್ಕೆ ಪೂಜಿಸುವರು ಬಲ್ಲರೆ ನಮ್ಮ ಶರಣರ ಸುಳುಹ ? ನಡುಮುರಿದು ಗುಡುಗೂರಿದಡೇನು ಲಿಂಗದ ನಿಜವನರಿಯದನ್ನಕ್ಕ ? ಸಾವನ್ನಕ್ಕ ಜಪವ ಮಾಡಿದಡೇನು ಲಿಂಗದ ಪ್ರಾಣ ತನ್ನ ಪ್ರಾಣ ಒಡಗೂಡದನ್ನಕ್ಕ ? ಇಂತಿವರೆಲ್ಲರು ಅಭ್ಯಾಸಶಕ್ತಿಗರುಹಿಗರು ! ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಮಾಯಾಕೋಳಾಹಳ ಸಿದ್ಧರಾಮಯ್ಯದೇವರಿಗೆ ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ ಪ್ರಭುವೆ.
--------------
ಚನ್ನಬಸವಣ್ಣ
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ, ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ ? ನದಿಯ ಗುಂಪ ತಾವರೆ ಬಲ್ಲುದಲ್ಲದೆ, ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ ? ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ, ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ, ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ ?
--------------
ಅಕ್ಕಮಹಾದೇವಿ
ನಾಯಿ ಬಲ್ಲುದೆ ದೇವರ ಬೋನವ? ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮದ ನೆಲೆಯ? ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯ? ಕುಕ್ಕುರ ಬಲ್ಲುದೆ ಸುಭಿಕ್ಷದ ಸವಿಯ? ಇಂತಪ್ಪ ಆಚಾರಭ್ರಷ್ಟರ ಕಡೆಗೆ ನೋಡೆ[ನೆಂ]ದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಅಯ್ಯಾ ನಿಮ್ಮ ನಿಜಾಚರಣೆಯ ನಿಲುಕಡೆಯ ಭವಪಾಶಪ್ರಾಣಿಗಳೆತ್ತ ಬಲ್ಲರಯ್ಯಾ ? ಅದೆಂತೆಂದಡೆ, ಲೋಕದಲ್ಲಿ ದೃಷ್ಟವುಂಟು. ಅಯ್ಯಾ ಕುರಿ ಬಲ್ಲುದೆ ರಸದಾಳಿ ಕಬ್ಬಿನ ಸ್ವಾದವ ? ಶುನಿ ಬಲ್ಲುದೆ ಕಲ್ಪವೃಕ್ಷವ ? ದಂಷ್ಟ್ರಿ ಬಲ್ಲುದೆ ಕಾಮಧೇನುವ ? ಗಾರ್ದಭ ಬಲ್ಲುದೆ ಚಿಂತಾಮಣಿಯ ? ನರಿ ಬಲ್ಲುದೆ ಗಜಭದ್ರವ ? ಕಾಗೆ ಬಲ್ಲುದೆ ಪರಮಾಮೃತವ ? ಅಂಧಕ ಬಲ್ಲನೆ ಕನ್ನಡಿ ಬಿಂಬ ಮೊದಲಾಗಿ ಅನಂತ ಚಿತ್ರವಿಚಿತ್ರಂಗಳ ? ಬಧಿರ ಬಲ್ಲನೆ ಪ್ರಣವೋಂ ನಾದ ಮೊದಲಾದ ದಶನಾದಗಳ ? ಷಂಡ ಬಲ್ಲನೆ ರತಿಸಂಯೋಗವ ? ತೊತ್ತು ಬಲ್ಲಳೆ ರಾಜಭೋಗವ ? ಹೇಡಿ ಬಲ್ಲನೆ ರಣಧೀರತ್ವವ ? ದರಿದ್ರ ಬಲ್ಲನೆ ನವರತ್ನಂಗಳ ? ಬೆಸ್ತ ಬಲ್ಲನೆ ಅಂದ? ಮೊದಲಾದ ಅಷ್ಟಭೋಗಂಗಳ ? ಮೂಢ ಬಲ್ಲನೆ ಶಿವಕವಿತ್ವವ ? ಕಾಮಿ ಬಲ್ಲನೆ ಶಿವಯೋಗದ ಸುಖವ ? ರೋಗಿ ಬಲ್ಲನೆ ರಂಭಾರಸವ ? ಗೂಗಿ ಬಲ್ಲುದೆ ಚಿತ್ಸೂರ್ಯನ ಬೆಳಗ ? ಇಂತೆಂದುದಾಗಿ, ಲೋಕದ ದೃಷ್ಟದಂತೆ, ಹೊನ್ನು ಹೆಣ್ಣು ಮಣ್ಣು ಅನ್ನ ನೀರು ವಸ್ತ್ರ ಆಭರಣ ವಾಹನವೆಂಬ ಅಷ್ಟಮಲಂಗಳಲ್ಲಿ, ಅಷ್ಟಕಾಮವಿಕಾರದಿಂದ, ಮಾಯಾಪಾಶಬದ್ಧಮಲದಲ್ಲಿ ಬಿದ್ದು ತೊಳಲುವ ಜಡಜೀವಿಗಳೆತ್ತ ಬಲ್ಲರಯ್ಯ ನಿಮ್ಮ ಸರ್ವಾಚಾರಸಂಪತ್ತಿನಾಚರಣೆಯ ? ನಿಜಸುಖದ ರಾಜಾಧಿರಾಜ ಶಿವಯೋಗದ ನಿಲುಕಡೆಯ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ. ಕಾಂಚನಕ್ಕೆ ವೇಳೆಯಲ್ಲದ ಲಿಂಗಕ್ಕೆ ವೇಳೆ[ಯ]ಲ್ಲ. ಹಡಿಕೆಗೆ ಮಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ 314
--------------
ಬಸವಣ್ಣ
ಅರಿವ ಕತ್ತಿ ಹರಣದ ಇರವ ಬಲ್ಲುದೆ ? ಬಿರುನುಡಿಯ ನುಡಿವವ ಮಾನ್ಯರ [ಮಾ]ನದ ಮನ್ನಣೆಯ ಬಲ್ಲನೆ ? ಹೆತ್ತವರಿಗೆ ಕೂಸು ಹುಚ್ಚಾದರೆ, ಅದರರ್ತಿ ಹೆತ್ತವರಿಗಲ್ಲದೆ ಮಿಕ್ಕಾದವರಿಗುಂಟೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ ಕೋಡುಗ ಬಲ್ಲುದೆ ಸೆಳೆಮಂಚದ ಸುಖವ ಕಾಗೆ ನಂದನವನದೊಳಗಿದ್ದಡೇನು, ಕೋಗಿಲೆಯಾಗಬಲ್ಲುದೆ ಹೇಳಾ ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು, ಕಳಹಂಸಿಯಾಗಬಲ್ಲುದೆ, ಕೂಡಲಸಂಗಮದೇವಾ 98
--------------
ಬಸವಣ್ಣ
ತನಗೆ ತಾನೆ ಹುಟ್ಟಿದನಾಗಿ, ತಾನೆ ಸ್ಥಾವರವಾದ ಆ ಲಿಂಗವು, ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ ಮನವೆ ಬಾಯಾಗಿ ಉಂಬ ಲಿಂಗವು, ಇತರರ ಸುಖವ ಬಲ್ಲುದೆ, ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ? ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ? ಭಕ್ತಿಯನರಿಯದ ವ್ಯರ್ಥಜೀವಿಗಳು ನಿಮ್ಮವರನೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಗುರುಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ; ಲಿಂಗಬಿದ್ದಡೆ ಸಮಾಧಿಯ ಹೊಕ್ಕಹೆವೆಂಬರು. ಗುರುವಿಂದ ಲಿಂಗವಾಯಿತ್ತೆ ? ಲಿಂಗದಿಂದ ಗುರುವಾದನೊ ? ಅದೆಂತೆಂದಡೆ: ಪೃಥ್ವಿಯಲ್ಲಿ ಹುಟ್ಟಿತ್ತು, ಕಲ್ಲುಕುಟಿಗನಿಂದ ರೂಪಾಯಿತ್ತು, ಗುರುವಿನ ಹಸ್ತದಿಂದ ಲಿಂಗವಾಯಿತ್ತು. ಇಂತೀ ಮೂವರಿಗೆ ಹುಟ್ಟಿದ ಲಿಂಗವ ಕಟ್ಟಿ ಜಗವೆಲ್ಲ ಭಂಡಾಯಿತ್ತು ನೋಡಿರೊ ! ಅಣ್ಣಾ, ಲಿಂಗ ಬಿದ್ದಿತ್ತು ಬಿದ್ದಿತ್ತೆಂದು ನೋಯಲೇಕೆ ? ಬಿದ್ದ ಲಿಂಗವನೆತ್ತಿಕೊಂಡು ಷೋಡಶೋಪಚಾರವ ಮಾಡುವುದು. ಹೀಗಲ್ಲದೆ ಶಸ್ತ್ರಸಮಾಧಿ ದುರ್ಮರಣವ ಮಾಡಿಕೊಂಡಿಹೆನೆಂಬ ಪಂಚಮಹಾಪಾತಕಂಗೆ ನಾಯಕನರಕ. ಲಿಂಗವು ಬೀಳಬಹುದೆ ? ಭೂಮಿಯು ಆನ ಬಲ್ಲುದೆ ? ಸದ್ಗುರುನಾಥನಿಲ್ಲವೆ ? ಇಂತೀ ಕಟ್ಟುವ ತೆರನ, ಮುಟ್ಟುವ ಭೇದವ ಆರು ಬಲ್ಲರೆಂದಡೆ: ಈರೇಳು ಭುವನ, ಹದಿನಾಲ್ಕುಲೋಕದೊಡೆಯ ಪೂರ್ವಾಚಾರಿ ಕೂಡಲಚೆನ್ನಸಂಗಯ್ಯನಲ್ಲದೆ ಮಿಕ್ಕಿನ ಮಾತಿನ ಜ್ಞಾನಿಗಳೆತ್ತ ಬಲ್ಲರು ?
--------------
ಚನ್ನಬಸವಣ್ಣ
ಸಟ್ಟುಗ ಸವಿಯ ಬಲ್ಲುದೆ ? ಅಟ್ಟ ಮಡಕೆ ಉಣ್ಣಬಲ್ಲುದೆ ? ಕನಿಷ* ಹೀನ ಲಿಂಗದ ಕಟ್ಟಳೆಗೆ ಬರಬಲ್ಲನೆ ? ಕರಕಷ್ಟ ಹೀನರಿರಾ ಸುಮ್ಮನಿರಿರೊ. ಸೂಳೆಯ ಮಕ್ಕಳಿರ ಕಟ್ಟಳೆಗೆ ಬರದೆ, ಘನದಲ್ಲಿ ಮನಮುಟ್ಟಿ ಹಿಮ್ಮೆಟ್ಟದೆ ಆವನಿದ್ದಾತನೆ ಅಚ್ಚ ಭಕ್ತನೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಇನ್ನಷ್ಟು ... -->