ಅಥವಾ

ಒಟ್ಟು 159 ಕಡೆಗಳಲ್ಲಿ , 49 ವಚನಕಾರರು , 143 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರದ್ಥೀರಸುಭಟರುಗಳೆಲ್ಲಾ ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?
--------------
ಭೋಗಣ್ಣ
ಎನಗೆ ನೀನಿಂಬುಕೊಡುವಲ್ಲಿ, ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನಿಶ್ಶಕ್ತಿನಿರ್ಲೇಪವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡಿಹೆನೆಂದು ತೊಟ್ಟ ಠಕ್ಕು ಠವಳವ ಬಿಡು. ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧುಸಂಪೂರ್ಣನಾಗಿ ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ದೇವರದೇವ ನೀನೆಂದೆನಿಸಿಕೊಂಡೆ; ಬಾಣನ ಬಾಗಿಲ ಕಾಯ್ವರೇನಯ್ಯಾ ? ನಿತ್ಯತೃಪ್ತ ನೀನೆನಿಸಿಕೊಂಡೆ; ಚೆನ್ನನ ಮನೆಯಲುಂಬರೇನಯ್ಯಾ ? ಕರುಣಾಕರ ನೀನೆಂದೆನಿಸಿಕೊಂಡೆ; ಸಿರಿಯಾಳನ ಮಗನ ಬೇಡುವರೇನಯ್ಯಾ ? ನಿಮ್ಮ ಮಹಿಮೆಯ ನೀವೆ ಬಲ್ಲಿರಿ, ಎನ್ನನುದ್ಭರಿಸಯ್ಯಾ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ ಸಾರುತ್ತೈದಾವೆ, ನೋಡಾ, ಶ್ರುತಿಗಳೂ ನಾಲ್ಕು ವೇದವೂ ಹುಸಿಯಿದೆ `ಭರ್ಗೋ ದೇವಸ್ಯ ದ್ಥೀಮಹಿ' ಎಂದುದಾಗಿ, ಕೂಡಲಸಂಗನಲ್ಲದಿಲ್ಲೆಂದುದು ವೇದ.
--------------
ಬಸವಣ್ಣ
ಮಾಯಾಗುಣ ರೂಪಾದಲ್ಲಿ ಮಲಕ್ಕೊಡಲಾಯಿತ್ತು ಮಲಸ್ಥರೂಪವಾಗಿ ನಿಂದಲ್ಲಿ ಬಲವಂತರೆಲ್ಲರು ಮಲದ ಬೆಂಬಳಿಯಲ್ಲಿ ಮರುಳಾದರು. ಮರುಳಾಟದಲ್ಲಿ ಮಾರಿ ಒಲವರವಾಗಿ ಮನ ಶುದ್ಧವಿಲ್ಲದವರ ಮನೆ ಮನೆಯಲ್ಲಿ ತನುವಿಕಾರವನಾಡಿಸುತ್ತೈದಾಳೆ. ಮಾರಿಯ ಮುರಿದು ದಾರಾವತಿಯ ಕೆಡಿಸಿ ಕೈಯ ಡಕ್ಕೆಯ ಗತಿಯ ಹಿಂಗಿ ಮಾಯೆಯ ಬಾಗಿಲ ಭ್ರಾಂತಿಯ ಬಿಟ್ಟಲ್ಲಿ ಕಾಲಾಂತಕ ಬ್ಥೀಮೇಶ್ವರಲಿಂಗವನರಿದುದು.
--------------
ಡಕ್ಕೆಯ ಬೊಮ್ಮಣ್ಣ
ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ. ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ ನಾದಮೂರುತಿಲಿಂಗವ ಕಂಡೆ. ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ, ತಾ ಬಟ್ಟಬಯಲಾಯಿತ್ತು ನೋಡಾ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು. ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು, ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು, ನಿಜದಂಗದ ಓಗರದ ಕುಂಭವ ಕಂಡು, ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಬೋಧೆನೆಯ ಬೋದ್ಥಿಸಿ ಉಂಬವರೆಲ್ಲರೂ ಸಾಧಾರಣಕ್ಕೆ ಈಡಾದರು. ನಿರ್ಬೋಧೆಯ ಹೇಳುವ ಹಿರಿಯಲ್ಲರೂ ಬಾಗಿಲ ಕಾಯ್ವುದಕ್ಕೊಳಗಾದರು. ಈಜಲರಿಯದವನೊಂದಾಗಿ ಹೊಳೆಯ ಹಾಯ್ದು, ಪ್ರಾಣಕ್ಕೆ ಆಸೆ ಮಾಡುವನಂತೆ, ಇಷ್ಟವನರಿಯದವರ ಮಾತ ಕೇಳಿ, ತಾ ಮುಕ್ತನಾದೆಹೆನೆಂಬ ಧೂರ್ತರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ. || 549 ||
--------------
ಮೋಳಿಗೆ ಮಾರಯ್ಯ
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕತ್ತಲೆಮನೆಯೊಳಗೆ ಒಬ್ಬ ಸೂಳೆ ನಾಲ್ವರ ಕೂಡಿಕೊಂಡು ಹತ್ತೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ. ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಸೂಳೆಯ ಕೈವಿಡಿಯಲು, ಹತ್ತೆಂಟು ಕೇರಿಗಳು ಅಳಿದುಹೋದವು ನೋಡಾ. ನಾಲ್ವರು ಬಿಟ್ಟು ಹೋದರು ನೋಡಾ. ಆ ಸೂಳೆಯ ಕೂಡಿಕೊಂಡು ಒಂಬತ್ತು ಬಾಗಿಲ ಮುಂದೆ ನಿಂದು ಪರಕೆ ಪರವಾದ ಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->