ಅಥವಾ

ಒಟ್ಟು 86 ಕಡೆಗಳಲ್ಲಿ , 27 ವಚನಕಾರರು , 68 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ವಸ್ತುವ. ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು. ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ ? ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು, ಹೊಡೆವಡೆ ಕೈಯೊಳಗಲ್ಲ. ಇದರ ಕೂಟದ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇದ್ದು ಜೀವನಲ್ಲ, ಸತ್ತು ಹೆಣನಲ್ಲ. ಕತ್ತಲೆ ಮುಟ್ಟಿದ ಬೆಳಗಿನಲ್ಲಿ ಸುಳಿಯದು. ಹಿಂದಾದಡೆ ಏರುವುದು, ಮುಂದಾದಡೆ ತೋರುವುದು. ಹಿಡಿಯಲ್ಲ ಕರಿಯಲ್ಲ. ಇಕ್ಕಿದ ಹೆಜ್ಜೆಯ ತೆಗೆಯದು. ಮೊನೆಗೆ ನಿಲ್ಲದು, ತೆಕ್ಕೆಗೆ ಬಾರದು. ಕಾದಬಂದ ಕಲಿಗಳನೆಲ್ಲರ ಆಗಿದಗಿದು ನುಂಗಿತ್ತು ನೋಡಾ. ಅರಿದೆಹೆನೆಂದಡೆ ಅರಿಯಬಾರದು. ಇದ ಬಲ್ಲವರಾರಯ್ಯಾ ? ಇಹಪರ ನಷ್ಟವಾದ ಮಹಾವೀರದ್ಥೀರರಿಗಲ್ಲದೆ ಮುಕ್ತಿಗೆ ದೂರವಾದ ಲಿಂಗಾಂಗಿಗಳ ನೆನಹೆಂಬ ಜೋಡಂ ತೊಟ್ಟು, ಅವರ ಕರಣಪ್ರಸಾದವೆಂಬ ವಜ್ರ ಘಟಿಕೆಯ ಧರಿಸಿ, ಗುರುಕರುಣವೆಂಬ ಅಲಗಂ ಪಿಡಿದು, ಮುಂಡ ಬಿದ್ದಡೂ ತಲೆಯಲ್ಲಿರಿವೆ. ನಿಜಗುರು ಭೋಗೇಶ್ವರಾ ನಾ ನಿಮ್ಮ ಬೇಡುವನಲ್ಲಾ.
--------------
ಭೋಗಣ್ಣ
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ ; ಸಮುದ್ರ್ ನೀರು ಬಾರವಯ್ಯಾ ನದಿಗೆ. ನಾನು ಹೋದೆನಯ್ಯಾ ಲಿಂಗದ ಕಡೆಗೆ; ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ. ಮಗ ಮುನಿದಡೆ ತಂದೆ ಮುನಿಯನು; ನಾ ಮುನಿದಡೆ ನೀ ಮುನಿಯೆ ನೋಡಯ್ಯಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಸಂಸಾರಸರ್ಪನ ಹೇಳಿಗೆಯ ಬಿಡಿಸಲು ಬಾರದು, ಬಿಟ್ಟಡೆ ಕಟ್ಟಲು ಬಾರದು ನೋಡಾ. ಬಿಡಿಸುವ ಬೆಡಗಿನ್ನೆಂತೊ ! ಕಾಮಕ್ರೋಧಲೋಭಮೋಹಮದಮತ್ಸರವೆಂಬ ವಿಷದ ಹಲ್ಲಿಂಗಾವುದು ಗಾರುಡವಯ್ಯಾ, ಮಹಾದಾನಿ ಕೂಡಲಸಂಗಮದೇವಾ
--------------
ಬಸವಣ್ಣ
ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ, ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ. ಆಡಬಹುದು ಪಾಡಬಹುದಲ್ಲದೆ, ನುಡಿದಂತೆ ನಡೆಯಲು ಬಾರದು ಎಲೆ ತಂದೆ. ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ.
--------------
ಅಕ್ಕಮಹಾದೇವಿ
ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು, ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು, ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು, ಅನುಭಾವವಿಲ್ಲದ ಏನನೂ ಅರಿಯಬಾರದು. ತನ್ನಲ್ಲಿ ತಾ ಸನ್ನಿಹಿತವುಳ್ಳಡೆ ಶಿವಶರಣರ ಸಂಗವೇತಕ್ಕೆನಲುಂಟೆ ಕೂಡಲಸಂಗಮದೇವಯ್ಯಾ, ನಿಮ್ಮ ಅನುಭಾವ ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ
--------------
ಬಸವಣ್ಣ
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಏನೆಂಬೆನೆಂತೆಂಬೆನೆನ್ನ ಮನಕ್ಕೆ ನಾಚಿಕೆ ಬಾರದೇಕೆ ? ಆಗಮನುಡಿಯ ಕೇಳುವುದು, ಇತರ ಸಾಗಿಸಿ ಹೇಳುವುದು, ಶಿವಾನುಭಾವವ ಕೇಳುವುದು, ಅದರಂತೆ ಬೋಧೆಯ ಹೇಳುವುದು. ನಿತ್ಯಾನಿತ್ಯವನಿದಿರಿಟ್ಟು ಸತ್ಯವೇ ಮೋಕ್ಷ, ಅಸತ್ಯವೇ ನರಕವೆಂಬುದು. ಶ್ರುತಿಗುರುಸ್ವಾನುಭಾವವನುಳಿದು, ಗಿಳಿಪಶುಭಾವ ಬರಲುಂಟೆ ? ನಾಚಿಕೆ ತಾನೇಕೆ ಬಾರದು ? ಇಂತಹ ಮನವ ಸಂತೈಸುವರನಾರನು ಕಾಣೆ ಶರಣರಲ್ಲದೆ ನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋ[ಗ]ದು. ಇಂದ್ರಿಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋಗದು. ತನ್ನಿಂದಲೇ (ಅಹುದು), ತನ್ನಿಂದಲೇ ಹೋಹುದು. ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರವುಳ್ಳನ್ನಕ್ಕರ, ಕೂಡಲಚೆನ್ನಸಂಗನಲ್ಲಿ ಶರಣನೆನಿಸಲು ಬಾರದು.
--------------
ಚನ್ನಬಸವಣ್ಣ
ಅಕಾರದ ಮೂರ್ತಿ ವರ್ಣಿಸಿಹೆನೆಂದಡೆ ತೀರದು. ನಿರಾಕಾರದ ಮೂರ್ತಿ ವರ್ಣಿಸಿಹೆನೆಂದಡೆ ಮೊದಲಿಗೆ ತೀರದು. ತೀರದು ಎಂದು ಶಬ್ದಮುಗ್ಧವಾಗಿರಬಾರದು, ಬಾರದು; ಕಪಿಲಸಿದ್ಧಮಲ್ಲಿಕಾರ್ಜುನ ಎನ್ನಬಹುದು ಎನ್ನಬಹುದು ಮನವೆ.
--------------
ಸಿದ್ಧರಾಮೇಶ್ವರ
ಗುರುವ ಕಂಡು ಗುರುವಿನಲ್ಲಿ ಅನುಸರಣೆಯ ಮಾಡಿದರೆ ಗುರುದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಲಿಂಗವ ಕಂಡು ಲಿಂಗದಲ್ಲಿ ಅನುಸರಣೆಯ ಮಾಡಿದರೆ ಲಿಂಗದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಜಂಗಮವ ಕಂಡು ಜಂಗಮದಲ್ಲಿ ಅನುಸರಣೆಯ ಮಾಡಿದರೆ ಜಂಗಮದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಪ್ರಸಾದವ ಕಂಡು ಪ್ರಸಾದದಲ್ಲಿ ಅನುಸರಣೆಯ ಮಾಡಿದರೆ ಪ್ರಸಾದದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಶರಣಭಕ್ತರ ಕಂಡು ಶರಣಭಕ್ತರಲ್ಲಿ ಅನುಸರಣೆಯ ಮಾಡಿದರೆ ಶರಣ ಭಕ್ತದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ ಗುರುನಿರಂಜನ ಚೆನ್ನಬಸವಲಿಂಗ ಸಾಕ್ಷಿಯಾಗಿ ಅರಿಯದೆ ಮಾಡುವಭಕ್ತಿ ಮರುಳನಯುಕ್ತಿ. ಮಸಣದ ಬೂದಿ ಕಾರ್ಯಕಾರಣಕ್ಕೆ ಬಾರದು. ಅರಿದು ಮಾಡಿ ಮರೆದಿರು ಗುರುನಿರಂಜನ ಚನ್ನಬಸವಲಿಂಗವಾಗಬೇಕಾದರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಂದೂ ಬಾರದು ಹೊಂದಿಯೂ ಹೊಂದದು, ನಿಂದೂ ನಿಲ್ಲದ ಪರಿಯ ನೋಡಾ ! ಬಿಂದು ನಾದವ ನುಂಗಿತ್ತು, ಮತ್ತೊಂದಧಿಕವುಂಟೆ? ನವಖಂಡ ಪೃಥ್ವಿಯನೊಳಕೊಂಡ ಅಗಮ್ಯ ಸನ್ಮತ ಸುಖವಿರಲು ಗುಹೇಶ್ವರನ ಬೇರೆ ಅರಿಯ(ಅರಸ?)ಲುಂಟೆ?
--------------
ಅಲ್ಲಮಪ್ರಭುದೇವರು
ಅನುನೇಹದ ಅನುರಚಿಯ ತೋರಲಿಕಾರಿಗೆಯೂ ಬಾರದು. ಅದು ಸಕ್ಕರೆಯಂತುಟಲ್ಲ, ಅದು ತವರಾಜದಂತುಟಲ್ಲ. ಭಾವದ ಸುಖ ಭವಗೆಡಿಸಿತ್ತು. ಮಹಾಲಿಂಗ ಕಲ್ಲೇಶ್ವರದೇವಾ, ನೀನೆ ಬಲ್ಲೆ.
--------------
ಹಾವಿನಹಾಳ ಕಲ್ಲಯ್ಯ
ಹುಟ್ಟಿ ಕೆಟ್ಟಿತ್ತು ಭಾಗ, ಹುಟ್ಟದೆ ಕೆಟ್ಟಿತ್ತು ಭಾಗ, ಮುಟ್ಟಿ ಕೆಟ್ಟಿತ್ತು ಭಾಗ, ಮುಟ್ಟದೆ ಕೆಟ್ಟಿತ್ತು ಭಾಗ. ಇದೇನೊ ? ಇದೆಂತೊ? ಅರಿಯಲೆ ಬಾರದು. ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ, ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಂಸಪತಿ ಗರುಡಪತಿ ವೃಷಭಪತಿ ಮೊದಲಾದ ಸರ್ವಜೀವಾಧಿಪತಿ ದೇವರಾಯ ಮಹಾರಾಯನ ಅರಸುತನ ಹೊಸತು: ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ, ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ. ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ, ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು, ತೆರೆದ ಬಾಗಿಲ ಮುಚ್ಚುವರಿಲ್ಲ, ಮುಚ್ಚಿದ ಬಾಗಿಲ ತೆರೆವವರಿಲ್ಲ. ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು, ಭಕ್ತರೆಂಬವರಿನ್ನು ಬದುಕಲೇ ಬಾರದು.
--------------
ಅಗ್ಘವಣಿ ಹಂಪಯ್ಯ
ಇನ್ನಷ್ಟು ... -->