ಅಥವಾ

ಒಟ್ಟು 45 ಕಡೆಗಳಲ್ಲಿ , 22 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಾಯ ನರಿಯ ಮಧ್ಯದಲ್ಲಿ ನಾರಿವಾಳದ ಸಸಿ ಹುಟ್ಟಿತ್ತು. ಐದು ಗೇಣು ಉದ್ದ ಎಂಟು ಗೇಣು ವಿಸ್ತೀರ್ಣ. ಅದರ ಬೇರು ಪಾತಾಳಕ್ಕೆ ಇಳಿಯಿತ್ತು; ಬೇರಿನ ಮೊನೆ ನೀರ ತಿಂದಿತ್ತು; ನೀರ ಸಾರ ತಾಗಿ ಮರನೊಡೆಯಿತ್ತು, ಮಟ್ಟೆ ಇಪ್ಪತ್ತೈದಾಗಿ ಹೊಂಬಾಳೆ ಬಿಟ್ಟಿತ್ತು; ಹದಿನಾರು ವಳಯದಲ್ಲಿ ಕಾಯಿ ಬಲಿದವು. ಮೂರು ದಿಸೆಯಲ್ಲಿ ಆ ಮರವ ಹತ್ತಿ ಕಾಯ ಕೆಡಹುವರಿಲ್ಲ. ವಾಯವಾಯಿತ್ತು ಮರಹುಟ್ಟಿ ಮರದ ಕೆಳಗಿದ್ದು ಹಣ್ಣಿನ ಹಂಬಲು ಹರಿವುದ ನೋಡುತ್ತಿದ್ದೇನೆ. ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಹೊಲದೊಳಗೊಂದು ಹುಲ್ಲೆ ಮರಿಯನೀದು, ಲಲ್ಲೆಯಿಂದ ನೆಕ್ಕುತ್ತಿರಲಾಗಿ, ಅದು ಹುಲಿಯ ಮರಿಯಂತಾಯಿತ್ತೆಂದು ತನ್ನ ಹೊಲಬಿಗೆ ತೋರಿ ಲಲ್ಲೆಯ ಬಿಟ್ಟಿತ್ತು. ಬಿಟ್ಟುದನರಿದು, ಆ ಮರಿ ಹುಲಿಯಾಗಿ ಹುಲ್ಲೆಯ ತಿಂದಿತ್ತು. ಬಂಕೇಶ್ವರಲಿಂಗ, ಎನ್ನಯ ಶಂಕೆಯ ಹೇಳಯ್ಯಾ.
--------------
ಸುಂಕದ ಬಂಕಣ್ಣ
ಆಗರದಲ್ಲಿ ಅಡಕೆ ಸಣ್ಣಾದಾಗ ತೋಟದ ಎಲೆ ಉದುರಿತ್ತು. ಉದುರುವುದಕ್ಕೆ ಮೊದಲೆ ಸುಣ್ಣವ ಸುಡುವವ ಸತ್ತ. ಇವರ ಮೂವರ ಹಂಗಿಗತನ ಬಿಟ್ಟಿತ್ತು, ಬಾಯ ಹಂಬಲಿಲ್ಲದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಮೂರರ ಹಂಗ ಬಿಟ್ಟ ಕಾರಣ.
--------------
ಸಗರದ ಬೊಮ್ಮಣ್ಣ
ಸಕಲ ಬಹುಕೃತವೆಂಬ ಗಹನದಲ್ಲಿ, ಜೀವವೆಂಬ ದಂತಿ ತಿರುಗಾಡುತ್ತಿರಲಾಗಿ, ಅರಿವೆಂಬ ಕೇಸರಿ ಅದ ಕಂಡು ಒದಗಿಯೈದಿ, ಮಸ್ತಕದ ಕುಂಭಸ್ಥಲವನೊಡೆದು ಸೇವಿಸುತ್ತಿರಲಾಗಿ, ಶಾರ್ದೂಲ ಹೋಯಿತ್ತು, ಕೇಸರಿ ಬಿಟ್ಟಿತ್ತು , ಗಜ ಬದುಕಿತ್ತು, ಶಾರ್ದೂಲ ಶಂಕೆಯ ಹರಿಯಿತ್ತು . ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಲೀಲೆಗೆ ಹೊರಗಾಗಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಕೋಣನ ಕಿವಿಯಲ್ಲಿ ಮೂರು ಹಸು ತೆನೆ ತುಂಬಿ ಕರವೊಂದನೆ ಈಯಿತ್ತು. ಕರು ತಾಯಿ ನೆರೆ ನೋಡಿ ಹಾಲಿಗೆ ಒಡೆಯರಿಲ್ಲಾ ಎಂದು ಪ್ರಾಣವ ಬಿಟ್ಟಿತ್ತು. ಕರುವಿನ ಹರಣವರಿ; ಅರಿತಡೆ ನಿನ್ನ ನೀನೆ ಬ್ಥಿನ್ನಭಾವವಿಲ್ಲ. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು ಹುಲ್ಲು ತಿನ್ನದು, ನೀರ ಕುಡಿಯದು, ಇರ್ದಲ್ಲಿ ಇರದು, ಹೋದತ್ತ ಹೋಗದು. ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ, ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು ಮುತ್ತನುಗುಳಿ ಹೋಯಿತ್ತು. ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ, ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ. ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ, ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ.
--------------
ಆದಯ್ಯ
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು. ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು. ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
--------------
ಅಲ್ಲಮಪ್ರಭುದೇವರು
ಆರೂ ಇಲ್ಲದ ಅಡವಿಯಲ್ಲಿ, ಬೇರೊಂದು ಮನೆಯ ಮಾಡಿ ಐವರು ಹಾರುವರು ಕೂಡಿ, ಮೂವರು ಗೆಯ್ವರು ಕೂಡಿ ಆರಂಬಗೆಯ್ಯುತ್ತಿರಲಾಗಿ ಬೆಳೆ ಬೆಳೆಯಿತ್ತು. ಮೃಗ ಫಲವಾಗಲೀಸವು. ಬೇಡರ [ಅ]ಗಡ ಘನವೆಂದು ಬೀಡ ಬಿಟ್ಟಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಹೇಳಿಹೆನೆಂದು.
--------------
ಬಿಬ್ಬಿ ಬಾಚಯ್ಯ
ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ ಬೇರಿಲ್ಲದ ವೃಕ್ಷಪುಟ್ಟಿ, ಶಾಖೆಯಿಲ್ಲದೆ ಪಲ್ಲವಿಸಿ, ತಳಿರಿಲ್ಲದೆ ಕೊನರಾಗಿ, ಮೊಗ್ಗೆಯಿಲ್ಲದೆ ಹೂವಾಗಿ, ಹೂವಿಲ್ಲದೆ ಕಾಯಾಗಿ, ಕಾಯಿಲ್ಲದೆ ಹಣ್ಣಾಗಿ, ಹಣ್ಣಿಲ್ಲದೆ ರಸತುಂಬಿ ತೊಟ್ಟು ಬಿಟ್ಟಿತ್ತು. ಆ ಹಣ್ಣಿಗೆ ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ತೃಪ್ತಿಯಿಲ್ಲದೆ ಪರಿಣಾಮಿಸಿ, ಸಂತೋಷವಿಲ್ಲದೆ ನಿಶ್ಚಿಂತನಾದ ಈ ಭೇದವ ಬಲ್ಲರೆ ಘನಲಿಂಗಿಯಾಗಿ ನಿಜಲಿಂಗೈಕ್ಯ ಅನಾದಿ ಶರಣನೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾಲ್ಕು ಜಾವಕ್ಕೆ ಒಂದು ಜಾವ ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು. ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. ಮತ್ತೊಂದು ಜಾವ ಅಂಗನೆಯರ ಕುಚ, ಅಧರಚುಂಬನ ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು. ಇನ್ನೊಂದು ಜಾವವಿದೆ: ನೀವು ನೀವು ಬಂದ ಬಟ್ಟೆಯ ತಿಳಿದು ಮುಂದಳ ಆಗುಚೇಗೆಯನರಿದು, ನಿತ್ಯನೇಮವ ವಿಸ್ತರಿಸಿಕೊಂಡು ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ, ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ, ಇಂತೀ ಕೃತ್ಯದ ಕಟ್ಟ ತಪ್ಪದಿರಿ. ಅರುಣೋದಯಕ್ಕೆ ಒಡಲಾಗದ ಮುನ್ನವೆ ಖಗವಿಹಂಗಾದಿಗಳ ಪಶುಮೃಗನರಕುಲದುಲುಹಿಂಗೆ ಮುನ್ನವೆ ಧ್ಯಾನಾರೂಢರಾಗಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೊಡಬಲ್ಲಡೆ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಮರೆಯಲ್ಲಿದ್ದ ಸಂಚ ತೆರ ದರುಶನವಾಗಲಾಗಿ ಆಶ್ಚರಿಯೆಂಬುದು ಬಿಟ್ಟಿತ್ತು. ಅಂಗದ ಮೇಲಣ ಲಿಂಗ ನೆನಹಿಂಗೆ ನಿಲಲಾಗಿ ಕುರುಹೆಂಬಭಾವವಡಗಿತ್ತು. ಸರ್ವೇಂದ್ರಿಯಂಗಳು ಹಿಂಗಿ ಏಕಭಾವ ಸಲೆಸಂದು ಉಭಯದಂಗ ಲೇಪವಾದುದು ಕಾಲಾಂತಕ ಭೀಮೇಶ್ವರಲಿಂಗ ದ್ವಂದ್ವವಳಿದು ನಿಂದಸ್ಥಲ.
--------------
ಡಕ್ಕೆಯ ಬೊಮ್ಮಣ್ಣ
ಮಹಾಮಲೆಯಲ್ಲಿ ಮಕ್ಷಿಕವಿರ್ಪುದು. ಆ ಮಕ್ಷಿಕನ ಬಾಯೊಳಗೆ ಉಡುವಿರ್ಪುದು. ಆ ಉಡುವಿನ ಬಾಯೊಳಗೆ ವ್ಯಾಘ್ರವಿರ್ಪುದು. ಆ ವ್ಯಾಘ್ರನ ಬಾಯೊಳಗೆ ಅರಸಿನ ಶಿಶುವಿರ್ಪುದು. ಆ ಶಿಶು ಒದರಲು ಮಕ್ಷಿಕ ಬಿಟ್ಟಿತ್ತು, ಉಡವು ಸತ್ತಿತ್ತು, ವ್ಯಾಘ್ರ ಬಿಟ್ಟಿತ್ತು. ಆ ಶಿಶು ಮೂರು ಲೋಕವ ನುಂಗಿ ತಾಯಿತಂದೆಯ ಕೊಂದು ಬಟ್ಟಬಯಲಲ್ಲಿ ನಿರ್ವಯಲಾಯಿತ್ತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತೋರುವ ತೋರಿಕೆ ಸಬರೆ ಮುಟ್ಟಾಗಿ, ಭಾವಭ್ರಮೆ ಸರ್ವತ್ರವ್ಯಾಪಾರ ವಿದಳ ಧಾನ್ಯವಾಗಿ, ಚಿತ್ತವನರಿಯದ ಭಾವ ಎತ್ತಾಗಿ, ಜಗವ ಸಿಕ್ಕಿಸುವ ವೇಷ ಲಾಂಛನಧಾರಿ ಸೆಟ್ಟಿಯಾಗಿ, ಸರ್ವಪ್ರಕೃತಿ ದೇಶದಲ್ಲಿ ಬೆವಹಾರವ ಮಾಡುತ್ತಿರಲು, ನಿರಾಸಕ ಕೋಲುಕಾರ ತನುವಿನ ಸೆಟ್ಟಿಯ ತಡೆ ಬಿಟ್ಟಿತ್ತು. ಗತವಾಗಿ, ಕಾಲದ ಮಂದಿರಕ್ಕೆ ಒಪ್ಪದ ಚೀಟಲ್ಲದೆ, ಬಂಕೇಶ್ವರಲಿಂಗಕ್ಕೆ ಸುಂಕಲಾಭವಾಯಿತ್ತು.
--------------
ಸುಂಕದ ಬಂಕಣ್ಣ
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು ತನುವಿನಾಸೆ ಬಿಟ್ಟಿತ್ತು ಮನದ ಸಂಚಲ ನಿಂದಿತ್ತು. ನುಡಿಗಡಣ ಹಿಂಗಿತ್ತು ಘನವಬೆರೆಯಿತ್ತು, ಬೆಳಗಕೂಡಿತ್ತು. ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->