ಅಥವಾ

ಒಟ್ಟು 27 ಕಡೆಗಳಲ್ಲಿ , 14 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಪದ ತಡಿಯ ಹುಲ್ಲ ಮೇವ ಎರಳೆಯನೆಚ್ಚಲು ಬಂದ ವ್ಯಾಧನ ಬಾಣದಲೊಂದು ಅಚ್ಚ ಆಶ್ಚರ್ಯವ ಕಂಡೆನು. ಕರಿಯ ಮುಖವೈದು, ಬಿಳಿಯ ಮುಖವೈದು, ಮುಂದೈದು ಮುಖದ ಸಂಭ್ರಮವ ಕಂಡು ಎರಳೆ ಬೆದರಿ ಬಾವಿಯ ಬೀಳುತಿರ್ದಡಿದೇನು ಚೋದ್ಯವೋ ! ಚೋದ್ಯದ ಹಗರಣವ ಕಂಡು ಅಡವಿಯ ರಕ್ಷಿ ನಗುತಿದೆ ಇದೇನೋ ನಿನ್ನ ಮಾಯದ ವಿಗಡ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಗಿಯ ಹುಲ್ಲಿನ ಸೋಂಕಿನಂತೆ ತನು ಪುಳಕಿತಳಾದಳವ್ವೆ. ನುಡಿ ತೊದಳು ಆತನ ಒಲವೆ ಆಧಾರವಾಗಿದ್ದಳವ್ವೆ. ಬಿಳಿಯ ತುಂಬಿ ಕುಂಕುಮ ರಸದಲ್ಲಿ ಬಂಡುಂಡಂತೆ. ಮಹಾಲಿಂಗ ಗಜೇಶ್ವರನಲ್ಲಿ ತನ್ನಲ್ಲಿ ತಾನೆ ರತಿಯಾಗಿರ್ದಳವ್ವೆ
--------------
ಗಜೇಶ ಮಸಣಯ್ಯ
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿರ್ವಿಕಾರಿಯ ಭಾವದಲ್ಲಿ ತೋರಿದ ಗರ್ವ ಬಿಳಿಯ ಮದಗಜವ ಕಳೆವರೆ ಅರಳವಲ್ಲ ನೋಡಾ. ಬಿಳಿಯ ಮದಗಜದ ಶಿರವ ಉರಿಯ ಚರಣದಲ್ಲಿ ಮೆಟ್ಟಿ, ನಿರವನಯನನೆರೆದು ನಿಜಲಿಂಗೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಿಳಿಯ ತತ್ತಿಯೊಳಗೆ ಹಲವು ಬ್ರಹ್ಮಾಂಡವೈ, ಒಲವಿಂದಪ್ಪವವು ಸಮತೆ. ತಾಯ ಹಲವು ತತ್ತಿಯನಿಟ್ಟು ಮರಳಿ ಆಡುತ್ತಿಪ್ಪುದದು ಕರುಣ ಸಮತೆಯ ಸಾಕ್ಷಿಯೆನಿಪ ಭಕ್ತಿ. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು ಇಂಥ ಸಕಲವನು ಧರಿಸಿ ಶರಣರ ಕರದಲಿ.
--------------
ಸಿದ್ಧರಾಮೇಶ್ವರ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಿಳಿಯ ಕರಿಕೆ, ಕಣಿಗಿಲೆಲೆಯ, ತೊರೆಯ ತಡಿಯ ಮಳಲ ತಂದು, ಗೌರಿಯ ನೋನುವ ಬನ್ನಿರೆ. ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು ಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು.
--------------
ಬಸವಣ್ಣ
ನಾ ಬಂದೆ ಹರಿಭಕ್ತನಾಗಿ, ಬಾಹಾಗ ನಾ ದಾಸನಾಗಿ. ಒಂಬತ್ತು ಜೂಳಿಯ ತಣ್ಣೀರ ಕಣಿತೆಯ ಹೊತ್ತು ತಿತ್ತಿಗ ನೀರ ಕಾಣೆ. ಲೆಕ್ಕವಿಲ್ಲದ ನಾಮವನಿಕ್ಕಿದೆ, ಸುತ್ತಿ ಸುತ್ತಿ ಬಳಸಿದೆ. ಹೀಲಿಯ ಗರಿಯ ಹೇಕಣ್ಣ, ಪಜ್ಞೆಯ ನಾಮವ ದೃಷ್ಟಿಯ ಮಧ್ಯದಲ್ಲಿ ಇಕ್ಕಿ ಮತ್ತೆ ಅದರ ನಡುವೆ ನಿಶ್ಚಯ ಬಿಳಿಯ ನಾಮವನಿಕ್ಕಿ ಹೊತ್ತ ದಾಸಿಕೆ ಹುಸಿಯಾಯಿತ್ತು. ದಾಸೋಹವೆಂಬುದನರಿಯದೆ ಎನ್ನ ವೇಷ ಹುಸಿಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಯ್ಯಾ, ಗುರುಲಿಂಗವೆನ್ನ ಕುರಿತು ಕರಸ್ಥಲಕ್ಕೆ ಬಂದ ಬಳಿಕ ನೆರೆಹೊರೆಯವರತ್ತ ಸಾರಿ, ಕೆಂಚಕೆಡಿಗರತ್ತ ಸಾರಿ, ಬಿಳಿಯ ಬೆಂಗಡಿಗರತ್ತ ಸಾರಿ, ಕರಿಯಗೊಂದಣಿಗರತ್ತ ಸಾರಿ, ಮುಂದೆ ಹುಣ್ಣಿವೆಗಮ್ಮಯ್ಯನ ಯಾತ್ರೆ ಬೇಕಾದರೆ ಅಮಾವಾಸ್ಯೆಯ ಕಳೆದು ಅಂಗ ಮಡಿಯಾಗಿ ಕಂಗಳ ಮುಂದೆ ಬಂದರೆ ಸಂಗಯ್ಯನ ತೇರು ಸುಖದಿಂದೆ ರಂಗಮಂಟಪಕ್ಕೆ ಸಾಗಿ, ಧರೆಯಾಕಾಶ ತುಂಬಿದ ಪರಿಸೆ ಹರಹರ ಶಿವಶಿವ ಜಯಜಯ ಚಾಂಗು ಭಲೆಯೆಂದು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಓಲ್ಯಾಡುವ ಬನ್ನಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲವಣನಿರಶನದ ಆಯತದ ಭೇದವೆಂತೆಂದಡೆ ; ಕಾರಲವಣ ನಿಷೇಧವೆಂದು ಬಿಟ್ಟು, ಮತ್ತೆ ಬಿಳಿಯ ಲವಣಬಳಸುವುದು. ಬಿಳಿಯಲವಣ ನಿಷೇಧವೆಂದು ಬಿಟ್ಟು ಮತ್ತೆ ಸೈಂಧಲವಣ ಬಳಸುವುದು. ಸೈಂಧಲವಣ ನಿಷೇಧವೆಂದು ಬಿಟ್ಟು, ಮತ್ತೆ ಮೃತ್ತಿಕೆಲವಣ ಬಳಸುವುದು. ಮೃತ್ತಿಕೆಲವಣದಲ್ಲಿ ತಟ್ಟುಮುಟ್ಟು ಕಂಡ ಮತ್ತೆ ಉಪ್ಪೆಂಬ ನಾಮವ ಬಿಟ್ಟಿಹುದೇ ಲೇಸು. ಈ ಅನುವ ನಾನೆಂದುದಿಲ್ಲ, ನಿಮ್ಮ ಅನುವ ನೀವೇ ಬಲ್ಲಿರಿ. ಅನುವಿಗೆ ತಕ್ಕ ವ್ರತ, ವ್ರತಕ್ಕೆ ತಕ್ಕ ಆಚಾರ, ಆಚಾರಕ್ಕೆ ತಕ್ಕ ಖಂಡಿತ. ಆವಾವ ನೇಮದಲ್ಲಿಯೂ ಭಾವ ಶುದ್ಧವಾದವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಮತ್ತಮಾ ಸಿಂಹಾಸನಾಗ್ರದಲ್ಲಿ ಶಿವಲಿಂಗ ವಾಹನ ಸ್ಥಾಪನ ಸನ್ನಿಧಾನ ಸಂರೋಧನ ಸಮ್ಮುಖೀಕರಣಮೆಂಬ ಕ್ರಿಯೆಗಳಂ ಮಾಡಿ, ಬಳಿಕ ಪೂಜಾ ಪ್ರಾರಂಭದಿಂ ತೊಡಗಿ, ಪೂಜಾ ಸಮಾಪ್ತಿ ಪರಿಯಂತರಂ ಕ್ಷಾಲನಪಾತ್ರ ಜಲಮಂ ಮರಳಿ ಮರಳಿ ಮುಷ್ಟಿ ಮುಷ್ಟಿ ಸಕಲ ಕ್ರಿಯೆಗಳನೀಶ್ವರಾರ್ಪಣಂ ಗೆಯ್ಯ ಬೇಕೆಂದರಿದು, ಬಳಿಕ ನದಿ ತ[ಟಾ]ಕ ಕೂಪಂಗಳಲ್ಲಿ ಸ್ವಾದುಮಿಶ್ರ ಲವಣಂಗಳಾದ ಕ್ರಮದಿಂದುತ್ತಮ ಮಧ್ಯಮ ಕನಿಷ್ಟಮಾದ ಪೂಜಾಯೋಗ್ಯ ಮಾದುದಕ ಭೇದಂಗಳಂ ಬಿಳಿಯ ಸಾಸಿವೆ ಕುಸುಮ ದೂರ್ವೆ ಕೋಷ್ಟ ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ ಸಾಸಿವೆ ಜವೆ ನೆಲ್ಲು ಕ್ಷೀರಮೆಂಬಾರು ಅಘ್ರ್ಯ ದ್ರವ್ಯಂಗಳಂ, ಮುಖಾಂಬುಜಕ್ಕೀ ಘೃತದಧಿ ಮಧು ಮಿಶ್ರಮಾದ ಮಧುಪರ್ಕ ದ್ರವ್ಯಂಗಳಂ, ಫಲ ಕಚೋರ ಕರ್ಪೂರ ಕೋಷ್ಟ ಕುಂಕುಮ ಯಾಲಕ್ಕಿಯೆಂಬಾರು ಆಚಮನ ದ್ರವ್ಯಂಗಳಂ, ಪಂಚಗವ್ಯಂ ಪಂಚಾಮೃತಂಗಳಂ, ಗೋಧೂಮ ಚೂರ್ಣ ಗಂಧಾದ್ಯುದ್ವರ್ತನ ದ್ರವ್ಯಂಗಳಂ, ಮಂದೋಷ್ಣಾದಿ ಸ್ನಾನವಾರಿಗಳಂ, ಗಂಧೋದಕ ಪುಷ್ಪೋದಕ ರತ್ನೋದಕ ಮಂತ್ರೋದತಂಗಳಂ, ಮಹಾಸ್ನಾನೋದಕಂಗಳು, ವಿಧಿ ನಯ ಶುಭ್ರಾದಿ ಗುಣಯುಕ್ತ ಭಸಿತಂಗಳು, ಪ[ಟ್ಟೆ] ದೇವಾಂಗ ಶುಭ್ರ ಚಿತ್ರಾದಿ ವಸ್ತ್ರಂಗಳಂ, ಸುವರ್ಣ ರಜತ ಪ[ಟ್ಟೆ] ಸೂತ್ರಾದಿ ಯಜ್ಞೋಪವೀತಂಗಳಂ, ಕಿರೀWಟಾಘೆದ್ಯಾಭರಣಂಗಳಂ, ಚಂದನ ಅಗರು ಕಸ್ತೂರಿ ಕರ್ಪೂರ ತಮಾಲ ದಳ ಕುಂಕುಮ ಲಾಮಂಚ ಕೋಷ್ಟಂಗಳೆಂಬ ಅಷ್ಟಗಂಧಂಗಳಂ, ಜವೆ ಬಿಳಿಯ, ಸಾಸಿವೆ ತಿಲ ತಂಡುಲ ಮುಕ್ತಾಫಲಾಧ್ಯಕ್ಷತೆಗಳಂ, ಶುಭ್ರರಕ್ತ ಕೃಷ್ಣವರ್ಣ ಕ್ರಮದಿಂ ನಂದ್ಯಾದಿ ವತ್ರ್ತಾದಿ ಕಮಲಾದಿ ನೀಲೋತ್ಪಲಾದಿ ಸಾತ್ವಿಕ ರಾಜಸ ತಾಮಸ ಪುಷ್ಪಂಗಳಂ, ದೂರ್ವೆ ತುಲಸಿ ಬಿಲ್ವಾದಿ ಪತ್ರಜಾಲಂಗಳಂ, ಕರಿಯ[ಗ]ರು ಬಿಳಿಯಗರು ಗುಗ್ಗುಲ ಶ್ರೀಗಂಧ ಆಗರು ಬಿಲ್ವಫಲ ತುಪ್ಪ ಜೇನುತುಪ್ಪ ಸಜ್ಜರಸ ಕರ್ಪೂರವೆಂಬ ದಶಾಂಗ ಧೂಪಂಗಳಂ, ತೈಲವರ್ತಿ ಘೃತಕರ್ಪೂರವೆಂಬ ದೀಪ ಸಾಧನಂಗಳಂ, ಹರಿದ್ರಾನ್ನ ಪರಮಾನ್ನ ಮುದ್ಗಾನ್ನ ಕೃಸರಾನ್ನ ದಧ್ಯಾನ್ನ ಗುಡಾನ್ನಮೆಂಬ ಷಡ್ವಿಧಾನ್ನಾದಿ ನೈವೇದ್ಯಂಗಳಂ, ಪೂಗ ಪರ್ಣ ಚೂರ್ಣ ಕರ್ಪೂರಾದಿ ತಾಂಬೂಲ ದ್ರವ್ಯಂಗಳಂ, ಬೇರೆ ಬೇರೆ ಸಂಪಾದಿಸುವುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಎವೆ ಎವೆ ಹಳಚದೆ ಮೊಲೆಯ ಮೇಲಣ ಗಾಯ ಬಿಳಿಯ ರಕ್ತದ ಧಾರೆ ಸುರಿದಲ್ಲಿ ಸಸಿವಸರೆ ಬಸವಂತವೆಸೆದನವ್ವಾ. ಅಪ್ಪಿನ ಸೋಂಕಿನ ಸುಖ ಅಚ್ಚುಗವಳಿದುಳಿದಡೆ ಮಹಾಲಿಂಗ ಗಜೇಶ್ವರದೇವ ನಿರಾಸನಾಗಿರ್ದನವ್ವಾ.
--------------
ಗಜೇಶ ಮಸಣಯ್ಯ
ಎಲಾ, ಓದಿದವರಿಗೆ ಮೋಕ್ಷವಿಲ್ಲಾ! ಅದು ಎಂತೆಂದಡೆ, ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ ಮತ್ತೊಂದು ನೋಡುವೆ. ಮತ್ತೊಂದು ಮತ್ತೊಂದು [ಎಂದು] ನೋಡುವರೆ ದಿವಸ ಸಮೀಪಿಸಿತ್ತು. ಸಮೀಪಿಸಿದ ಬಳಿಕ ಯಮದೂತರು ಬಂದು ವಿಪ್ಲವ[ವ] ಮಾಡುವರು. ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ ! ಅದು ಎಂತೆಂದಡೆ, ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ ಎಲ್ಲರ ಮನ್ನಣೆಯುಂಟು. ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ. ಇದರಂತೆ, ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಬಿಳಿಯ ವಸ್ತ್ರವು ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ, ಅದಕ್ಕೆ ಅಧಿಕವುಂಟೇ ? ಇದರಂತೆ ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ. ಅದೇನು ಕಾರಣವೆಂದಡೆ, ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ ! ಕಂಬಳಿಗೆ ಮನ್ನಣೆಯುಂಟೆ ? ಹಾಸಿದರೆ ಮಾಸುವುದೆ ? ಹೊದ್ದರೆ ಚಳಿಯ ತೋರುವುದೆ ? ರಜಕನ ಮನೆಯ ಕಂಡುಬಲ್ಲುದೆ ? ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ (?) ದೇವರಿಗೆ ಜೇಷ್ಮು(?) ಎಲ್ಲಾ ಬರವಾಗಿ ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ ? ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ. ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ, ಬರಿದೆ ಶಾಸ್ತ್ರವನೋದಿ, ಕಂಡಕಂಡವರಲ್ಲಿ ಬಗುಳಿ, ಕಾಲಕ್ಷೇಪವ ಕಳೆವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಮೂರುಗಂಟಿನ ದಂಡಿಗಿ, ಆರು ಕಾಯಿ, ಒಂಬತ್ತು ಮೆಟ್ಟು, ಬಿಳಿಯ ಕುದುರೆ, ಒಂದೆ ತಂತಿ, ನಾಲ್ಕು ಬಿರಡಿ, ಮೂರುಬೆರಳಿನಲ್ಲಿ ಡೋಹಾರನ ಕಿನ್ನರಿಯ ಹೊಡೆಯಲು, ಬ್ರಹ್ಮ ಮತ್ರ್ಯದಲ್ಲಿ ಸತ್ತು, ವಿಷ್ಣು ಸ್ವರ್ಗದಲ್ಲಿ ಸತ್ತು, ರುದ್ರ ಪಾತಾಳದಲ್ಲಿ ಸತ್ತು, ಸಕಲ ಪ್ರಾಣಿಗಳು ಬ್ರಹ್ಮಾಂಡದಲ್ಲಿ ಅಳಿದರು. ಇಂತೀ ವಿಚಿತ್ರವ ನೋಡಿ ಕಿನ್ನರಿಸಹಿತ ಡೋಹಾರ ಅಂಗೈಯಲ್ಲಿ ಬಯಲಾದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->