ಅಥವಾ

ಒಟ್ಟು 53 ಕಡೆಗಳಲ್ಲಿ , 19 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ! ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು, ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ? ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ? ಛೀ ಅದೇತರ ನಡೆನುಡಿ ಅತ್ತ ಹೋಗಿ, ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು. ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು. ಕೂಡಲಸಂಗಮದೇವನ ಶರಣರ ನಚ್ಚದ ಮಚ್ಚದ ಬೆಂದ ಮನವನು. 38
--------------
ಬಸವಣ್ಣ
ಬೇರೂರಲಿದ್ದು ಬಂದ ಜಂಗಮವೆ ಲಿಂಗವೆಂದು, ಮನೆಯಲಿದ್ದ ಜಂಗಮವನುದಾಸೀನವ ಮಾಡಿದಡೆ ನಾನು ಬೆಂದೆನಯ್ಯಾ. ಆನು ಬೆಂದ ಬೇಗೆಯನರಿಯೆ, ಕಾಣಾ ಕೂಡಲಸಂಗಮದೇವಾ. 411
--------------
ಬಸವಣ್ಣ
ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ ಬೆಂದ ಅಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡಬಲ ಅಡಿ ಆಕಾಶ ನಡುಮಧ್ಯವಾವುದೆಂದರಿಯದೆ ಇರುವುದಕ್ಕೆಯಿಂಬುಗಾಣದವಂಗೆ ಶಿವತತ್ವವೇ ಆಶ್ರಯವೆಂದು ತೋರಿಸಿದ ಶ್ರೀಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮರನನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯುತ್ತಲಿದ್ದೇನೆ, ಬೆಂದ ಮನವ ನಾನೆಂತು ನಂಬುವೆನಯ್ಯಾ ಎಂತು ನಚ್ಚುವೆನಯ್ಯಾ ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ. 33
--------------
ಬಸವಣ್ಣ
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ : ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ ನೋಡಾ. ಬೆಂದ ಕರಣಾದಿಗಳು ಒಂದೆ ಪಥವನರಿಯವು, ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ ಎನ್ನ ತಂದೆ ಕೂಡಲಸಂಗಮದೇವಾ, ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು. 37
--------------
ಬಸವಣ್ಣ
ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇುತ್ತು. ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆವುತ್ತಲದೆ. ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು. ಕೊಂದವರುಳಿವರೆ ಕೂಡಲಸಂಗಮದೇವಾ. 129
--------------
ಬಸವಣ್ಣ
ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಕುವರೆ ಕೋಳದ ಮೇಲೆ ಸಂಕೋಲೆಯನಿಕ್ಕುವರೆ ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ ಕೂಡಲಸಂಗಯ್ಯ ಕಾಡುವ ಕಾಟ ಸಿರಿಯಾಳಂಗಲ್ಲದೆ ಸೈರಿಸಬಹುದೆ
--------------
ಬಸವಣ್ಣ
ಹೂವು ಕಂದಿದಲ್ಲಿ ಪರಿಮಳವನರಸುವರೆ ? ಕಂದನಲ್ಲಿ ಕುಂದನರಸುವರೆ ? ಎಲೆ ದೇವ, ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೆ ? ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ? ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು?
--------------
ಅಕ್ಕಮಹಾದೇವಿ
ಅಟ್ಟುದನು ಅಡಲುಂಟೆ? ಸುಟ್ಟುದ ಸುಡಲುಂಟೇ ಅಯ್ಯ? ಬೆಂದ ಮಡಕೆ ಮರಳಿ ಧರೆಯ ಕೂಡಬಲ್ಲುದೇ ಅಯ್ಯ? ಕರ್ಪೂರವ ಅಗ್ನಿ ನುಂಗಿದ ಬಳಿಕ ಕರಿಯುಂಟೇ ಅಯ್ಯ? ಶರಣನ ಲಿಂಗ ನುಂಗಿ, ಲಿಂಗವ ಶರಣ ನುಂಗಿ, ನದಿಯೊಳಗೆ ನದಿ ಬೆರೆಸಿದಂತೆ ಬೆರೆದು, ಶುದ್ಧ ನಿರ್ಮಲನಾದ ಲಿಂಗೈಕ್ಯಂಗೆ, ಭಿನ್ನಾಭಿನ್ನವ ಕಲ್ಪಿಸುವ ಅಜ್ಞಾನಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಂದ ಯೋನಿಯನರಿದು ಸಲಹೆನ್ನ ತಂದೆ. ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು, ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು, ಎನ್ನ ತಂದೆ ಕೂಡಲಸಂಗಮದೇವಾ, ಮಾಣಿಸು ನಿಮ್ಮ ಧರ್ಮ. 49
--------------
ಬಸವಣ್ಣ
ಆನು ನೊಂದೆನಯ್ಯಾ, ಆನು ಬೆಂದೆನಯ್ಯಾ, ಆನು ಬೆಂದ ಬೇಗೆಯನರಿಯದೆ ಕೆಟ್ಟೆನಯ್ಯಾ, ಆನು ಕೆಟ್ಟ ಕೇಡನೇನೆಂದು ಹವಣಿಸುವೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನೋವ ಕಂಡು ಆನು ಬೆಂದೆನಯ್ಯಾ.
--------------
ಅಕ್ಕಮಹಾದೇವಿ
ಎಮ್ಮಯ್ಯನ ಬಲ್ಲವರು ಒಮ್ಮೆಯೂ ಅರ್ಪಿಸರು, ಅವರರ್ಪಿಸುವನ್ನಬರ ಎಮ್ಮಯ್ಯ ಸುಮ್ಮನಿರನು. ಬೆಂದ ಬಿಸಿಯಾರಿದಡೆ ಪ್ರಾಣೇಶನೊಲ್ಲ, ಕೂಡಲಸಂಗಮದೇವನುಪಚಾರದರ್ಪಿತವನೋಗಡಿಸುವ.
--------------
ಬಸವಣ್ಣ
ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ ಹುಸಿಯೆಂಬ ಮಸಿಯ ಪೂಸದ, ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ, ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ, ಸಂದುಸಂಶಯ ಮಂದಮರುಳನಾಗದೆ, ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ ಉಪಾಧಿ ಉಲುಹಿನ ಭ್ರಾಂತನಾಗದೆ, ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ ಡಂಭಕ ಜಡಕರ್ಮವ ಸೋಂಕದೆ ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುರಿದ ಬೀಜದಂತೆ, ಬೆಂದ ನುಲಿಯಂತೆ, ಹಿಂದಣಂಗ ಉಂಟೆ ಹೇಳಾ? ಸಮ್ಯಗ್ ಜ್ಞಾನಾಗ್ನಿಯಲ್ಲಿ ದಗ್ಧವಾದ ಜನ್ಮ ಬೀಜವನುಳ್ಳ ಶರಣನು, ಶಿವಕಾಯವನಾಶ್ರಯಿಸಿ ಶಿವ ತಾನಾಗಿಹನಲ್ಲದೆ, ತನಗೆ ಬೇರೆ ಕಾಯವಿಲ್ಲ. ತಾನೆಂಬುದು ಮುನ್ನವೇ ಇಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೇ ಅಂಗವಾದಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->