ಅಥವಾ

ಒಟ್ಟು 46 ಕಡೆಗಳಲ್ಲಿ , 17 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಮ್ಮ ನಲ್ಲ ಮನೆಯೊಳಗೆ ಏಕಾಂತಂಬೊಕ್ಕಹನು, ಬೇಗ ಬೇಗ ಹೊರವಂಡಿರಣ್ಣಗಳಿರಾ. ನೀವಿದ್ದಡೆ ಮೃತ್ಯು ಬಪ್ಪುದು; ಆತ ಮನೆಯೊಳಗೊಬ್ಬರಿದ್ದಡೂ ಸೈರಿಸ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಲ್ಲನು.
--------------
ಸಿದ್ಧರಾಮೇಶ್ವರ
ದೇಹವೆಂಬುದೊಂದು ನಡುಮನೆಗೆ, ಕಾಲುಗಳೆರಡು ಕಂಭ ಕಂಡಯ್ಯ. ಬೆನ್ನೆಲು ಬೆಮ್ಮರ ಎಲುಗಳು. ನರದ ಕಟ್ಟು ಚರ್ಮದ ಹೊದಕೆ. ಒಂದು ಮಠಕ್ಕೆ ಒಂಬತ್ತು ಬಾಗಿಲು. ಆದಾರಿಯಾಗೆ ಹೋಹ ಬಾಹರಿಗೆ ಲೆಕ್ಕವಿಲ್ಲ. ಒಡೆಯರಿಲ್ಲದ ಮನೆಯಂತೆ ಆವಾಗ ಕೆಡುವದೆಂದರಿಯಬಾರದು. ಬಿಡು ಮನೆಯಾಸೆಯ. ಬೇಗ ವಿರಕ್ತನಾಗು ಮರುಳೆ. ಪಡೆವೆ ಮುಂದೆ ಮುಕ್ತಿಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾಹ ಸೌಖ್ಯವನು.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರ ತೆಪ್ಪದೊಳಗೆ ಆನೀಗ ಅದ್ದಿ ಅಳಲುತ್ತ ಬಳಲುತಿಪ್ಪೆನಯ್ಯಾ, ಬೇಗ ಬಾರಾ ಬಾರಾ ಅಯ್ಯಾ, ವಜ್ರಲೇಪದಲಿ ಬಿದ್ದಿದ್ದೇನೆ ಬೇಗ ಬಂದೆತ್ತಯ್ಯಾ, ಹೆತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜು£
--------------
ಸಿದ್ಧರಾಮೇಶ್ವರ
ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ, ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ ? ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ ? ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ, ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
--------------
ಅಲ್ಲಮಪ್ರಭುದೇವರು
ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು ನೀಗಿರೊ ನಿಮ್ಮ ಭವಬಂಧನದ ಸಾಗರವನು. ಪ್ರಾಣತ್ಯಾಗವು ಈಗಲೋ ಆಗಲೋ ಯಾವಾಗಲೋ ಎಂದರಿಯಬಾರದು. ರೋಗ ರುಜೆಗಳಿಗೆ ಅಗರವು ನಿಮ್ಮ ಒಡಲು. ತನು-ಮನ-ಪ್ರಾಣವ ನೆಚ್ಚದಿರು, ನಾಗಭೂಷಣನ ಪಾದಪೂಜೆಯ ಮಾಡಿ, ಶಿವಯೋಗದಲಿ ಲಿಂಗವನೊಡಗೂಡಿ ಸಾಗಿ ಹೋಗುವವರನು ಭವಗೇಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭಾವಭ್ರಮೆವಂತರು ಬಾರದಿರಿ, ಜ್ಞಾನಹೀನರು ಬೇಗ ಹೋಗಿ, ತ್ರಿವಿಧ ಮಲಕ್ಕೆ ಕಚ್ಚಿಮುಟ್ಟಿ ಹೊಡೆದಾಡುವರತ್ತಲಿ. ನಿರುತ ಸ್ವಯಾನುಭಾವರು ಬನ್ನಿ, ಪರಬ್ರಹ್ಮಸ್ವರೂಪರು ಬನ್ನಿ, ಏಕಲಿಂಗನಿಷ್ಠಾಪರರು ದೃಢವಂತರು ಬನ್ನಿ, ಸನ್ಮಾರ್ಗ ಸತ್ಕ್ರಿಯಾವಂತರು ಬನ್ನಿ, ಎಂದು ಎನಗೆ ಕೊಟ್ಟ ಕಾಯಕ ಕೂಡಲಸಂಗಮದೇವರಲ್ಲಿ ಬಸವಣ್ಣ.
--------------
ಉಗ್ಘಡಿಸುವ ಗಬ್ಬಿದೇವಯ್ಯ
ಗಾಳಿ ಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗ ಬೇಗ ! ಗಾಳಿ ನಿಮ್ಮಿಚ್ಛೆಯಲ್ಲ ಕೇಳಿರೋ ಜಾಳಮನುಜರಿರಾ. ಅಂಗಕ್ಕೆ ಅಳಿವು ಬರುವುದು ದೂರವಿಲ್ಲ ನೋಡಿರೋ. ``ತ್ವರಿತಂ ಜೀವಿತಂ ಯಾತಿ ತ್ವರಿತಂ ಯಾತಿ ಯೌವನಮ್ | ತ್ವರಿತಂ ಯಾತಿ ಪ್ರಖ್ಯಾತಿಃ ತಸ್ಮಾತ್ಪೂಜಯ ಶಂಕರಮ್ ||'' ಇದನರಿದು ಬೇಗ ಬೇಗ ಲಿಂಗವ ಪೂಜಿಸಿರೊ ! ಬೇಗ ಬೇಗ ಜಂಗಮವನೊಲಿಸಿರೋ ! ಅರುವುಳ್ಳ ಕಾಲಕ್ಕೆ ಬೇಗ ಬೇಗ ನಮ್ಮ ಅಖಂಡೇಶ್ವರಲಿಂಗವ ಕೂಡಿರೋ.
--------------
ಷಣ್ಮುಖಸ್ವಾಮಿ
ಓಂ ಜಯ ಪರಮೇಶ್ವರಂ ಪರಮಾತ್ಮಂ ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು. ಒಬ್ರ್ಬಣಿಗೆಯಾಗಿ ಯೋಗಿಗಳ ಮನದ ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಪ್ಪೆನಯ್ಯಾ, ಬೇಗ ಬಾರ ಬಾರಯ್ಯಾ ಬಾರಾ. ವಜ್ರಲೇಪದ ಬಿದ್ದಿದ್ದೇನೆ, ಬೇಗ ಬಂದೆತ್ತಯ್ಯಾ ಎತ್ತಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಹಾವನೂ ಹದ್ದನೂ ಕೂಡೆ ಮೆದ್ದು, ಬೇವನೂ ಬೆಲ್ಲವನೂ ಕೂಡೆ ಕಲಸಿ, ಸಾಗರದಲ್ಲಿ ಸಾಧನೆಯ ಮಾಡುವರ ಬೇಗ ನೋಡಿ, ಅರ್ಕೇಶ್ವರಲಿಂಗನರಿವುದಕ್ಕೆ.
--------------
ಮಧುವಯ್ಯ
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ? ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ? ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ. ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ. ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ. ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ನಿಮಿಷದ ನಿಮಿಷಂ ಭೋ, ಕ್ಷಣದೊಳಗರ್ಧಂ ಭೋ, ಕಣ್ಣುಮುಚ್ಚಿ ಬಿಚ್ಚುವಿನಿಸು ಬೇಗಂ ಭೋ, ಸಂಸಾರದಾಗುಂ ಭೋ, ಸಂಸಾರದ ಹೋಗುಂ ಭೋ, ಸಂಸಾರಂ ಭೋ : ಕೂಡಲಸಂಗಮದೇವ ಮಾಡಿದ ಮಾಯಂ ಭೋ, ಅಭ್ರಚ್ಛಾಯಂ ಭೋ. 168
--------------
ಬಸವಣ್ಣ
ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ, ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ, ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಮಾರಯ್ಯಾ.
--------------
ಆಯ್ದಕ್ಕಿ ಲಕ್ಕಮ್ಮ
ಜ್ಞಾನಾಮೃತಜಲನಿಧಿಯ ಮೇಲೆ, ಸಂಸಾರವೆಂಬ ಹಾವಸೆ ಮುಸುಕಿಹುದು. ನೀರ ಮೊಗೆವರು ಬಂದು ನೂಕಿದಲ್ಲದೆ ತೆರಳದು. ಮರಳಿ ಮುಸುಕುವುದ ಮಾಣಿಸಯ್ಯಾ. ಆಗಳೂ ಎನ್ನುವ ನೆನೆವುತ್ತಿರಬೇಕೆಂದು ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು, ದಿವಾರಾತ್ರಿ ತನ್ನನರಿಯಬೇಕೆಂದು. ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳರ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ. ಇದರಲ್ಲೇನು ಲೇಸಕಂಡು, ನಿತ್ಯಾನಂದ ಚಿದಾತ್ಮಸುಖವ ಬಿಡುವೆ? ಈ ಸಂಸಾರ ಸ್ಥಿರವಲ್ಲ. ಬೇಗ ಗುರು ಚರಣವ ದೃಢವಿಡಿ. ಕಾಬೆ, ಮುಂದೆ ನೀನು ಕೈವಲ್ಯವ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಹ ಸೌಖ್ಯವನು.
--------------
ಸ್ವತಂತ್ರ ಸಿದ್ಧಲಿಂಗ
ಈ ಆಸೆಯೆಂಬವಳು ನೋಡಾ ಜಲ ಸಮುದ್ರಂಗಳಂ ಕಟ್ಟಿಸುವಳು, ಕ್ಷಣ ಬೇಗ ಮೂಷೆಗಳಂ ಮಾಡಿ ರಸಂಗಳಂ ಪಡೆವಳು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿನೊ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->