ಅಥವಾ

ಒಟ್ಟು 85 ಕಡೆಗಳಲ್ಲಿ , 28 ವಚನಕಾರರು , 75 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ, ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ. ಪೂಜೆಯ ಫಲವು ಕೊಡವಾಲ ಕರೆವ ಸುರಬ್ಥಿಯಂತೆ ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ, ತನ್ನ ಉದರನಿಮಿತ್ತ್ಯವಿಡಿದು, ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.
--------------
ಸಕಳೇಶ ಮಾದರಸ
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಜಂಗಮವೆಂದು ಮಾಡಿ ಪಙÂ್ತಯಲ್ಲಿ ವಿಂಗಡಿಸಿ, ಲೆಕ್ಕವ ಮಾಡುವ ದಂಡದ ಮನೆಯಲ್ಲಿ ಕೂಳನುಂಬ ಜಂಗಮಕ್ಕೆ ಭಂಡುಗೆಲಿದು ಬೇಡಿ ತಂದ ಭಂಡನ ಎಂಜಲ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಗಳು ರುದ್ರಾಕ್ಷಿಯ ಕೊಟ್ಟ್ಲಲ್ಲಿ ಫಲವಲ್ಲದೆ, ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ, ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ, ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ. ನಿನ್ನರಿವ ನಾನರಿತಲ್ಲಿ ಫಲವಲ್ಲದೆ, ಅರುಹಿಸಿದಲ್ಲಿ ಫಲವಿಲ್ಲ. ಅಹುದೆಂಬುದು ನ್ಕೀ, ಬಲ್ಲೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬೇಡಿ ತಂದು ದಾಸೋಹವ ಮಾಡುವನ್ನಬರ, ಪಂಗುಳನ ಪಯಣದಂತೆ. ಯಾಚಕತ್ವ ಭಕ್ತಂಗುಂಟೆ ? ಭಕ್ತನಾಗಿ ಹುಟ್ಟಿ ಭಕ್ತರ ಬೇಡಿತಂದು ಮಾಡಿ ಮುಕ್ತಿಯನರಸಲುಂಟೆ ? ಅದು ಅಮರೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಆಯ್ದಕ್ಕಿ ಮಾರಯ್ಯ
ಬೇಡಿ ಮಾಡುವ ಭಕ್ತನ ಇರವೆಂತೆಂದಡೆ: ಆ ಗಳಿಗೆಯಲ್ಲಿ ಆ ದ್ರವ್ಯ ಸಂದು ಈಗ-ಆಗವೆಂಬ ಬೈಕೆಯ ಮರೆದು, ಸತಿಸುತರಿಗೆಂದೆನ್ನದೆ, ಇಂತೀ ಭಕ್ತಿಯೆ ಗತಿಯಾಗಿ, ಸತ್ಯವೆ ಒಡಲಾಗಿ, ಇಂತೀ ಗುಣದಲ್ಲಿ ನಿತ್ಯ-ಅನಿತ್ಯವ ಅಳಿದು ಮಾಡುವ ಸದ್ಭಕ್ತ ಬೇಡಿ[ದ]ನೆಂಬ ಭಾವವಿಲ್ಲ. ಆ ದ್ರವ್ಯ ಏಲೇಶ್ವರಲಿಂಗದ ಬೈಚಿಟ್ಟ ಬಯಕೆ.
--------------
ಏಲೇಶ್ವರ ಕೇತಯ್ಯ
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ ಕಾಡಲಾಗದು ಭಕ್ತನ, ಬೇಡಲಾಗದು ಭವಿಯ. ಕಾಡಿ ಬೇಡಿ ನೀವು ಒಲಿಸಿಕೊಂಡಡೆ, ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ತನ್ನ ಪರಿಸ್ಪಂದವ ಸಾಕುವುದಕ್ಕೆ ಗುರು ಲಿಂಗಜಂಗಮಕ್ಕೆಂದು ಬೇಡಿ ಒಡಲ ಹೊರೆವ ಪರಿ. ಇನ್ನೆಂತುಂಟಯ್ಯಾ? ಗುರುವಿಂಗೆಂದಲ್ಲಿ ಅಂಗದಾಸೆಯಿಲ್ಲದೆ, ಲಿಂಗಕ್ಕೆಂದಲ್ಲಿ ಸಂದು ಸಂಶಯವಿಲ್ಲದೆ, ಜಂಗಮಕ್ಕೆಂದಲ್ಲಿ ಇಂದು ನಾಳೆಯೆಂಬ ಸಂದೇಹವ ಹರಿದು ಮಾಡುವನ ಇರವೆ ಷಡುಸ್ಥಲ ಬ್ರಹ್ಮಮೂರ್ತಿ. ಆತ ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ, ಆತ ಕಾಲಾಂತಕಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಒಡಲಾಸೆಗೆ ಅನ್ಯರ ಸೇವೆಯ ಮಾಡುವ ಕಡುಪಾಪಿಮನವೆ ಕೇಳು. ದದ್ಥಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ, ಉದಕವ ಕಡೆಯಲೇನ ಕೊಡದ ತೆರದಲ್ಲಿ ಅನ್ಯರನಾಸೆಗೈದರೆ- ಪರುಷ ಮನೆಯೊಳಿರೆ ಪರರ ಹಣವ ಬೇಡಿ ಚಾಲಿವರಿವ ಮರುಳುಮಾನವನಂತೆ, ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ ಚಾಲಿವರಿವ ಹೆಡ್ಡಮನುಜನಂತೆ, ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ ನಿನಗೆ ಮುಕ್ತಿಯುಂಟು ಕೇಳಲೆ ಮನುಜ.
--------------
ಹೇಮಗಲ್ಲ ಹಂಪ
ಹಾಡಿ ಮಾಡುವರೆಲ್ಲ ಹಾದರಗಿತ್ತಿಯ ಮಕ್ಕಳಯ್ಯಾ, ಕೂಡಿ ಮಾಡುವರೆಲ್ಲ ಕುಂಟಣಿಗಿತ್ತಿಯ ಮಕ್ಕಳಯ್ಯಾ, ಬೇಡಿ ಮಾಡುವರೆಲ್ಲ ಬೇಡಿತಿಯ ಮಕ್ಕಳಯ್ಯಾ, ಡಂಬಕತನದಲ್ಲಿ ಮಾಡುವರೆಲ್ಲ ಡೊಂಬಗಿತ್ತಿಯ ಮಕ್ಕಳಯ್ಯಾ, ಅಚ್ಚ ಪ್ರಸಾದಿಗಳೆಂಬವರೆಲ್ಲ ಮುಚ್ಚಗಿತ್ತಿ[ಮಾದಗಿತ್ತಿ ?]ಯ ಮಕ್ಕಳಯ್ಯಾ, ಸಮಯಾಚಾರದಲ್ಲಿಪ್ಪವರೆಲ್ಲ ಸಮ್ಮಗಾರಿಯ ಮಕ್ಕಳಯ್ಯಾ, ಜಂಗಮ ಬಂದ ಬರವ, ನಿಂದ ನಿಲುಕಡೆಯ ನೋಡಿ, ಮಾಡಿ ನೀಡಿ ಸ್ವಯಾನುಭಾವದ ಸಮ್ಯಗ್‍ಜ್ಞಾನವನರಿವವರು ಕೂಡಲಚೆನ್ನಸಂಗನ ಶರಣರಯ್ಯಾ.
--------------
ಚನ್ನಬಸವಣ್ಣ
ಬೇಡಿ ಉಂಡವ ಬೇಡದುದ ಬೇಡನೆ ಅಯ್ಯಾ? ಬೇಡಲಾರದವ ಬೇಡದುದ ಬೇಡನಯ್ಯಾ. ಕಾಡಿದ ಜಂಗಮ ಈಡಾಡಿದನಯ್ಯಾ ಭಕ್ತನ. ಬೇಡದ ಜಂಗಮ ಭಕ್ತನ ಕೂಡಿಕೊಂಡ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮನದಲ್ಲಿ ಮಹವನರಿದು ಮನ ನಿರ್ದೇಶವಾಗಿ ದೇಶಾಂತರಿಯಾಗದೆ, ಮನ ವಿಕಳವಾಗಿ ಹೊರಹೊಂಟುದು ವೇಷಾಂತರವಯ್ಯಾ. ಕಂಡವರ ಕಾಡಿ, ನಿಂದವರ ಬೇಡಿ, [ಜಾತಿ ಎನ್ನದೆ] ಅಜಾತಿ ಎನ್ನದೆ, ಆಚಾರವೆನ್ನದೆ, ಅನಾಚಾರವೆನ್ನದೆ, ತಿರಿದುಂಡು ವೇಷಡಂಭಕತ್ವದಿಂ ಲಾಂಛನವ ಹೊತ್ತು ಕಂಡಲ್ಲಿ ಲಜ್ಜೆಗೆಡುವುದು ತನ್ನ ಮುನ್ನಿನ ದುಷ್ಕೃತ ಪೂರ್ವಕರ್ಮದ ಫಲವಯ್ಯ. ಮತ್ತೆಂತೆಂದಡೆ : ಮನ ನಿರ್ವಾಣವಾಗಿ ವಿವೇಕಜ್ಞಾನಪರಮಾರ್ಥದಲ್ಲಿ ಪರಿಣಾಮಿಯಾಗಿ ಸುಳಿದು ಸೂತಕಿಯಲ್ಲದೆ, ನಿಂದು ಬದ್ಧನಲ್ಲದೆ, ಸುಜ್ಞಾನದಲ್ಲಿ ಸುಳಿದು, ನಿರ್ಮಲದಲ್ಲಿ ನಿಂದವರು ಅವರು ಪರದೇಶಾಂತರಿಗಳು, ಅವರು ನಿಜನಿವಾಸಿಗಳು, ಅವರುಗಳಿಗೆ ನಮೋ ಎಂಬೆ, ಉರಿಲಿಂಗಿಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಂಗಮ ಘನವೆಂಬೆನೆ ? ಬೇಡಿ ಕಿರಿದಾಯಿತ್ತು. ಲಿಂಗ ಘನವೆಂಬೆನೆ ? ಕಲುಕುಟಿಗರ ಕೈಯೆ ಮಾಡಿಸಿಕೊಂಡು ಕಿರಿದಾಯಿತ್ತು. ಭಕ್ತ ಘನವೆಂಬೆನೆ ? ತನುಮನಧನ ವಂಚನೆಯಿಂದ ಕಿರಿದಾಯಿತ್ತು. ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಮದೇವನೆಂತೊಲಿವನೊ ?
--------------
ಚನ್ನಬಸವಣ್ಣ
ಸಂಸಾರವ ಬಿಟ್ಟೆನೆಂದು, ನಿರಾಶಾಪದವ ಮಾಡಿ, ತಲೆಯ ಬೋಳಿಸಿಕೊಂಡು, ಕುದಿದು ಕೋಟಲೆಗೊಂಡು, ಮನೆ ಮನೆ ತಪ್ಪದೆ ಭಿಕ್ಷವ ಬೇಡಿ, ಉಂಡು, ಎದ್ದು ಹೋಗಿ ತತ್ವವ ಬೋಧಿಸಿ, ಉದರವ ಹೊರೆವಂದು ಮುನ್ನವಿಲ್ಲ ಮರುಳಾ ? ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ, ಮುಕ್ತಿಯುಂಟೆ ಮರುಳಾ ? ಜಂಗಮದಂಗವು ನಿರ್ಗಮನಿ, ಭಕ್ತಪ್ರಿಯ ನಮ್ಮ ಗುಹೇಶ್ವರಲಿಂಗದಲ್ಲಿ ಜಂಗಮದ ನಡೆಯಿಲ್ಲ ಕಾಣಾ, ಎಲೆ ಮರುಳಾ.
--------------
ಅಲ್ಲಮಪ್ರಭುದೇವರು
ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿ ಬೇಡಿ ಮಾಡುವುದು ದಾಸೋಹವೆ ? ಆವ ಕಾಯಕವು ಪ್ರಾಣವೆ ಕಡೆಯಾಗಿ, ದ್ರವ್ಯ ಮೊದಲಾಗಿ, ಚಿತ್ತ ಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು, ಲಿಂಗದೇಹಿಗಳಿಗೆಲ್ಲಾ ಒಂದೇ ಪ್ರಮಾಣದಲ್ಲಿ ಸಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ.
--------------
ಶಿವಲೆಂಕ ಮಂಚಣ್ಣ
ಇನ್ನಷ್ಟು ... -->