ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಕೋಟಿ ಯಜ್ಞಂಗಳ ಮಾಡಿ ತೊಳಲಿ ಬಳಲಲದೇಕೊ ? ಆ ಯಜ್ಞಂಗಳ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ತಪವಮಾಡಿ ತೊಳಲಿ ಬಳಲಲದೇಕೊ ? ಆ ತಪಸ್ಸಿನ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ದಾನವಮಾಡಿ ತೊಳಲಿ ಬಳಲಲದೇಕೊ ? ಆ ದಾನದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ವೇದಾಭ್ಯಾಸವಮಾಡಿ ತೊಳಲಿ ಬಳಲಲದೇಕೊ ? ಆ ವೇದಾಭ್ಯಾಸದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅದೆಂತೆಂದೊಡೆ :ಪದ್ಮಪುರಾಣದಲ್ಲಿ- ``ಸರ್ವಯಜ್ಞತಪೋದಾನವೇದಾಭ್ಯಾಸೈಶ್ಚ ಯತ್ಫಲಮ್ | ತತ್ಫಲಂ ಲಭತೇ ಸದ್ಯೋ ರುದ್ರಾಕ್ಷಸ್ಯ ತು ಧಾರಣಾತ್ ||'' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯ ಧರಿಸಿದ ಮಹಾತ್ಮನು ವಿಶ್ವಾಧಿಕನು ವಿಶ್ವಾತೀತನು ತಾನೇ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ, ಆ ತಪಸ್ಸಿನ ಸಿದ್ಧಿ ಬಯಲು. ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ, ಆ ದೀಕ್ಷೆಯೆಲ್ಲ ಬಯಲು. ಶ್ರೀವಿಭೂತಿಯ ಬಿಟ್ಟು ಮಂತ್ರಂಗಳ ಸಾಧಿಸಿದೆಡೆ, ಆ ಮಂತ್ರಸಿದ್ಧಿಯು ಬಯಲು. ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ, ಆ ಯಜ್ಞಸಿದ್ಧಿಯು ಬಯಲು. ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ, ಆ ದೇವತಾರ್ಚನಾಸಿದ್ಧಿಯೂ ಬಯಲು. ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ, ಆ ವಿದ್ಯಾಸಿದ್ಧಿಯು ಬಯಲು. ಶ್ರೀವಿಭೂತಿಯ ಬಿಟ್ಟು ವೇದವ ಪಠಿಸಿದಡೆ, ಆ ವೇದಸಿದ್ಧಿಯು ಬಯಲು. ಅದೆಂತೆಂದಡೆ:ಲೈಂಗೇ- ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ | ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮ್ಯವರ್ಜಿತಂ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿಮ್ಮ ದಿವ್ಯಾಲಂಕಾರಮಪ್ಪ ದಿವ್ಯಭಸಿತವ ಬಿಟ್ಟ ಪಂಚಮಹಾಪಾತಕಂಗೆ ಆವ ಕಾರ್ಯವೂ ಸಿದ್ಧಿಯಿಲ್ಲ.
--------------
ಸಂಗಮೇಶ್ವರದ ಅಪ್ಪಣ್ಣ
ಆವ ಕಾರ್ಯಕ್ಕಾದಡೂ ಶ್ರೀ ವಿಭೂತಿಯೇ ಬೇಕು. ಆವ ಕ್ರಿಯೆಗಾದಡೂ ಶ್ರೀ ವಿಭೂತಿಯೇ ಬೇಕು. ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ವೇದವನೋದಿದಡೇನು ? ಆತನೋದಿದ ವೇದಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ಯಜ್ಞಂಗಳ ಮಾಡಿದಡೇನು ? ಆತ ಮಾಡಿದ ಯಜ್ಞಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀವಿಭೂತಿಯ ದಾನಂಗಳ ಮಾಡಿದಡೇನು ? ಆತ ಮಾಡಿದ ದಾನಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ತಪವ ಮಾಡಿದಡೇನು ? ಆತ ಮಾಡಿದ ತಪ ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ನಿತ್ಯ ನೇಮ ವ್ರತ ಉಪವಾಸಂಗಳಂ ಮಾಡಿದಡೇನು ? ಆತ ಮಾಡಿದ ನಿತ್ಯ ನೇಮ ವ್ರತ ಉಪವಾಸಂಗಳು ವ್ಯರ್ಥ ಕಾಣಿರೋ ! ಅದೆಂತೆಂದೊಡೆ :ಬೋಧಾಯನ ಸ್ಮೃತೌ- ``ವೃಥಾ ವೇದಾ ವೃಥಾ ಯಜ್ಞಾ ವೃಥಾ ದಾನಂ ವೃಥಾ ತಪಃ | ವೃಥಾ ವ್ರತೋಪವಾಸೌ ತು ತ್ರಿಪುಂಡ್ರಂ ಯೋ ನ ಧಾರಯೇತ್ ||'' ಎಂದುದಾಗಿ, ಸಕಲಕ್ಕೆ ಶ್ರೀ ವಿಭೂತಿಯೇ ಆಧಾರವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತೆಂಗಿಗೆ ನೀರನೆರೆದರೆ ಅಂಗೈಯಲ್ಲಿ ಫಲವು ಕಾಣುವಂತೆ ಜಂಗಮಕ್ಕೆ ಅನ್ನ ಉದಕಂಗಳ ನೀಡಿದ ಫಲವು ಮೇರುಪರ್ವತಕ್ಕೆ, ಸಪ್ತಸಮುದ್ರಕ್ಕೆ ಸಮಾನವಹುದು. ಅದಲ್ಲದೆ ಒಂದೊಂದು ಅಗುಳಿಗೆ ಕೋಟ್ಯನುಕೋಟಿ ಯಜ್ಞಂಗಳ ಮಾಡಿದ ಫಲವಹುದು. ಅದೆಂತೆಂದೊಡೆ : ``ಕ್ಷಿಪ್ತಂ ಕ್ಷಿಪ್ತಂ ಮಹಾದೇವಿ ಕೋಟಿಯಜ್ಞಫಲಂ ಭವೇತ್ | ಅಲ್ಪಬೀಜಾತ್ ಮಹಾವೃಕ್ಷೋ ಯಥಾ ಭವತಿ ಪಾರ್ವತೀ ||'' ಮತ್ತಂ, ``ಅನ್ನಂ ವಾ ಜಲಮಾತ್ರಂ ವಾ ಯದ್ ದತ್ತಂ ಲಿಂಗಧಾರಿಣೇ | ತದನ್ನಂ ಮೇರುಸದೃಶಂ ತಜ್ಜಲಂ ಸಾಗರೋಪಮಮ್ ||'' ಎಂದುದಾಗಿ, ಜಂಗಮದಲ್ಲಿ ನಮ್ಮ ಅಖಂಡೇಶ್ವರಲಿಂಗದ ತೃಪ್ತಿ ನೋಡಾ.
--------------
ಷಣ್ಮುಖಸ್ವಾಮಿ
ಧರಿಸಿ ಭೋ, ಧರಿಸಿ ಭೋ ಮತ್ರ್ಯರೆಲ್ಲರು, ಮರೆಯದೆ ಶ್ರೀಮಹಾಭಸಿತವ. ಲೆಕ್ಕವಿಲ್ಲದ ತೀರ್ಥಂಗಳ ಮಿಂದ ಫಲಕಿಂದದು ಕೋಟಿಮಡಿ ಮಿಗೆ ವೆಗ್ಗಳ. ಲೆಕ್ಕವಿಲ್ಲದ ಯಜ್ಞಂಗಳ ಮಾಡಿದ ಫಲಕಿಂದದು ಕೋಟಿಮಡಿ ಮಿಗೆ ವೆಗ್ಗಳ. ಅದೆಂತೆಂದಡೆ: ಭೀಮಾಗಮದಲ್ಲಿ- ಸರ್ವತೀರ್ಥೇಷ ಯತ್ಪುಣ್ಯಂ ಸರ್ವಯಜ್ಞೇಷು ಯತ್ಫಲಂ | ತತ್ಫಲಂ ಕೋಟಿಗುಣಿತಂ ಭಸ್ಮಸ್ನಾನಂ ನ ಸಂಶಯಃ || ಇಂತೆಂದುದಾಗಿ, ಧರಿಸಿ ಭೋ, ಧರಿಸಿ ಭೋ ಮತ್ರ್ಯರೆಲ್ಲರು, ಮರೆಯದೆ ಶ್ರೀಮಹಾಭಸಿತವ. ನಮ್ಮ ಕಲಿದೇವರ ನಿಜಚರಣವ ಕಾಣುದಕ್ಕೆ ಶ್ರೀಮಹಾಭಸಿತವೆ ವಶ್ಯ ಕಾಣಿ ಭೋ.
--------------
ಮಡಿವಾಳ ಮಾಚಿದೇವ
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ ಆ ತಪಃಸಿದ್ಧಿ ಬಯಲು, ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ ಆ ದೀಕ್ಷೆ ಬಯಲು, ಶ್ರೀವಿಭೂತಿಯ ಬಿಟ್ಟು ಮಂತ್ರಗಳ ಸಾಧಿಸಿದಡೆ ಆ ಮಂತ್ರಸಿದ್ಧಿ ಬಯಲು, ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ ಆ ಯಜ್ಞಸಿದ್ಧಿ ಬಯಲು, ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ ಆ ದೇವತಾರ್ಚನೆಬಯಲು ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ ಆ ವಿದ್ಯಾಸಿದ್ಧಿ ಬಯಲು. ಹಲವು ಕಾಲ ಕೊಂದ ಸೂನೆಗಾರನ ಕೈಯ್ಯ ಕತ್ತಿಯಾದಡೇನು ಪರುಷ ಮುಟ್ಟಲು ಹೊನ್ನಾಗದೇ ಅಯ್ಯಾ ಲಲಾಟದಲ್ಲಿ ವಿಭೂತಿಯ ಧರಿಸಲ್ಕೆ, ಪಾಪಂಗಳು ಬೆಂದು ಹೋಗದಿಹವೇ ಕೂಡಲಸಂಗಮದೇವಾ
--------------
ಬಸವಣ್ಣ
-->