ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ ! ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ ! ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ, ಅವನ ಆದಿ-ಅಂತ್ಯವ ತಿಳಿಯದೆ, ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ ಹುಟ್ಟಂಧಕನೆಂಬೆನಯ್ಯ ! ತನ್ನ ಗುರುತ್ವವನರಿಯದ ಗುರುವಿಂದ ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ ! ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ ! ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ ತ್ರಿವಿಧದೀಕ್ಷೆ ತ್ರಿವಿಧಾಚಾರ ತ್ರಿವಿಧಲಿಂಗಾರ್ಚನೆ ತ್ರಿವಿಧಲಿಂಗಾರ್ಪಣ ತ್ರಿವಿಧಲಿಂಗಾನುಭಾವ, ತ್ರಿವಿಧಭಕ್ತಿ ಜ್ಞಾನವೈರಾಗ್ಯ ಸತ್ಯಸನ್ಮಾರ್ಗಾಚಾರಾನ್ವಿತ ಸದ್ಭಕ್ತ_ಮಾಹೇಶ್ವರ_ಶರಣಗಣಂಗಳು, ಮೊಟ್ಟಮೊದಲಲ್ಲಿ, ಮಡು ಹೊಂಡ ನದಿ ಹಳ್ಳ ಕೆರೆ ಬಾವಿ ಕೊಳ ಗುಂಡ ಚಿಲುಮೆ ಮೊದಲಾದ ಸ್ಥಾನಂಗಳಲ್ಲಿ ಸ್ವಚ್ಛನಿರ್ಮಲತರವಾದ ಪರಿಣಾಮೋದಕವನ್ನು ಭಾಜನಮುಖಂಗಳಿಗೆ ಕ್ರಿಯಾ_ಜ್ಞಾನಯುಕ್ತವಾದ ಉಭಯಮಡಿಕೆಯ ಪಾವಡವ ಹಾಕಿ ಶೋಧಿಸಿ ಮೇಲುಪಾವಡವ ಬಾಸಣಿಸಿ, ಭವಿಜನಾತ್ಮರ ಸೋಂಕದೆ ತೆಗೆದುಕೊಂಡು ಬಂದು ಶ್ರೀಗುರುಲಿಂಗಜಂಗಮದ ಪಾದ ಪ್ರಕ್ಷಾಲನವಂ ಮಾಡಿ ಆ ಮೇಲೆ ಉಭಯ ಪಾದದ ಅಡಿಯಲ್ಲಿ ಮೂರುವೇಳೆ, ದಶಾಂಗುಲಿ ಒಂದು ವೇಳೆ, ಸ್ಪರ್ಶನವಾದಂಥ ಗುರುಪಾದೋದಕವ ಸಮಸ್ತ ಭಾಂಡ ಭಾಜನಂಗಳಲ್ಲಿ ತುಂಬಿ ಕ್ರಿಯಾಶಕ್ತಿಯರು ಕ್ರಿಯಾಭೃತ್ಯರಾದರು ಸರಿಯೆ ಲಿಂಗಾಭಿಷೇಕ ಲಿಂಗಾರ್ಚನಕ್ರಿಯಗಳ ತೀರ್ಚಿಸಿಕೊಂಡು ಮಂತ್ರಧ್ಯಾನಾರೂಢರಾಗಿ ಲಿಂಗಬಾಹ್ಯರ ಸ್ಪರ್ಶನಸಂಭಾಷಣೆಗಳನುಳಿದು ಸಕಲಪದಾರ್ಥಂಗಳ ಕ್ರಿಮಿಕೀಡೆಕೀಟಕಂಗಳ ಕಾಷ*ಮೃಣ್ ಪಾಷಾಣಂಗಳ ಶೋಧಿಸಿ, ಅತಿ ಸುಯಿದಾನದಿಂದ ಪಾದೋದಕದಲ್ಲಿ ಪಾಕವ ಮಾಡಿ, ಆ ಪಾಕದ ಭಾಜನಂಗಳಿಗೆ, ಹಸ್ತಸ್ಪರ್ಶನ ಮಂತ್ರನ್ಯಾಸ ಲಿಂಗದೃಷ್ಟಿ ವಾಕ್ಶೀಲ ಮಂತ್ರಸ್ಮರಣೆ ಚಿದ್ಭಸ್ಮದಿಂದ, ಆ ಪದಾರ್ಥದ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗಜಂಗಮದ ಶುದ್ಧಪ್ರಸಾದವೆಂದು ಭಾವಿಸಿ ಸಾವಧಾನಭಕ್ತಿಯಿಂದ ಮಹಾನೈಷೆ* ಕರಿಗೊಂಡು ಮಂತ್ರಸ್ಮರಣೆಯಿಂದ ಸತ್ಯಸದಾಚಾರ ಸತ್ಕ್ರಿಯಾಸಮ್ಯಜ್ಞಾನವುಳ್ಳ ಗುರುಲಿಂಗಜಂಗಮಕ್ಕೆ ಸಮರ್ಪಣೆಯಂ ಮಾಡಿ ಅವರ ಕರುಣಪ್ರಸಾದವ ಸಮಸ್ತಶಕ್ತಿ ಭಕ್ತಶರಣಂಗಳೆಲ್ಲ ಪರಿಣಾಮಿಸಿ, ಭಾಂಡಭಾಜನಂಗಳಲ್ಲಿ ಉಳಿದ ಶೇಷಪಾದೋದಕವ ಇಷ್ಟಲಿಂಗಬಾಹ್ಯವಾದ ಭವಿಜನಾತ್ಮರುಗಳಿಗೆ ಹಾಕಲಾಗದು. ಅದಕ್ಕೆ ಹರವಾಕ್ಯವುಂಟು. ಹರಗುರುವಾಕ್ಯವ ಮೀರಿ ವೇದಶ್ರುತಿವಾಕ್ಯವ ಹಿಡಿದು ಗುರುಮಾರ್ಗಾಚಾರಬಾಹ್ಯರಿಗೆ ಲಿಂಗಪದಾರ್ಥವ ಕೊಟ್ಟಾತಂಗೆ ಯಮದಂಡಣೆ ಉಂಟು. ಅಂತ್ಯದಲ್ಲಿ ಕಾಲಕಾಮರಿಗೊಳಗು ನೋಡ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
-->