ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಈ ಮರುಳಮಾನವರ ಮರುಳತನವ ನಾನೇನೆಂಬೆನಯ್ಯಾ. ಹೊನ್ನು ತನ್ನದೆಂಬರು, ಹೊನ್ನು ರುದ್ರನದು. ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು. ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು. ಇಂತೀ ತ್ರಿವಿಧವು ನಿಮ್ಮವೆಂಬಿರಿ- ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ. ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು. ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ; ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ. ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ ಹರುಷಾನಂದದಲ್ಲಿ ಆಡುವದು ; ಪ್ರೇಮದಿಂದಲಿ ಕುಣಿಯವದು. ಕುಣಿದರೇನು ? ಚಂಡವಾಯುವಿನಿಂದ ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ ನವಿಲು ಅಡ್ಡಬಂದಿತ್ತೆ ? ಇಲ್ಲ. ಗಿರಿಯೊಳಗಣ ಮಯೂರನನ್ನು ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ ಆ ಮೋಡ ಅಡ್ಡಬಂದಿತ್ತೆ ? ಇಲ್ಲ. ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ. ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ. ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ, ಕುಸಿದು ಕುಗ್ಗಿ ಮುಪ್ಪುವರಿದು, ಮರಣಕಾಲಕ್ಕೆ ಯಮದೂತರು ಬಂದು ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ, ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ. ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ. ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ. ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ. ನಿನಗವರಿಲ್ಲ, ಅವರಿಗೆ ನೀನಿಲ್ಲ. ಇಂತಿದನು ಕಂಡು ಕೇಳಿ ಮತ್ತಂ ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ, ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ, ಹಡಕಿಗೆ ಶ್ವಾನ ಮೆಚ್ಚಿದ ಹಾಗೆ, ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ- ಜೀವನಬುದ್ಭಿಯುಳ್ಳವನೇ ಹಂದಿ. ಕರಣಬುದ್ಧಿಯುಳ್ಳವನೇ ನಾಯಿ. ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ. ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು, ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ, ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ, ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ. ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು. ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು. ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು, ಬಲ್ಲರೇನು ? ಬಿಡಲಾರರು. ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ ಇಂಥ ಹೊಲೆಸೂಳೆಯ ಮಕ್ಕಳ ಶರೀರವ ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು. ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎಲಾ, ಓದಿದವರಿಗೆ ಮೋಕ್ಷವಿಲ್ಲಾ! ಅದು ಎಂತೆಂದಡೆ, ಒಂದು ಶಾಸ್ತ್ರವನೋದಿ ಮನಸು ನಿಲುಕಡೆಯಿಲ್ಲದೆ ಮತ್ತೊಂದು ನೋಡುವೆ. ಮತ್ತೊಂದು ಮತ್ತೊಂದು [ಎಂದು] ನೋಡುವರೆ ದಿವಸ ಸಮೀಪಿಸಿತ್ತು. ಸಮೀಪಿಸಿದ ಬಳಿಕ ಯಮದೂತರು ಬಂದು ವಿಪ್ಲವ[ವ] ಮಾಡುವರು. ಏನು ಕಾರಣವೆಂದಡೆ, ಓದಿದವರಿಗೆ ಮೋಕ್ಷವಿಲ್ಲಾ ! ಅದು ಎಂತೆಂದಡೆ, ಬಿಳಿಯ ವಸ್ತ್ರವ ಹೊದ್ದುಕೊಂಡ ತಿರುಕಗೆ ಎಲ್ಲರ ಮನ್ನಣೆಯುಂಟು. ಮಾಸಿದರೆ ಅದಕೆ ಶುದ್ಧ ಮಾಡುವನು ರಜಕ. ಇದರಂತೆ, ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಬಿಳಿಯ ವಸ್ತ್ರವು ಹೊಡೆಸಿಕೊಂಡು ಹೊಡೆಸಿಕೊಂಡು ಮುಪ್ಪಾದ ಬಳಿಕ ಕೂಸುಗಳ ಗುದಕ್ಕೆ ಒರಸಿ ಬಿಸುಡುವರಲ್ಲದೆ, ಅದಕ್ಕೆ ಅಧಿಕವುಂಟೇ ? ಇದರಂತೆ ಓದಿನ 1[ಮರ್ಮವು]1 ತಿಳಿಯಲಿಲ್ಲ. ಇದಂ ಬಿಟ್ಟು, ಮೂಢಭಾವದಿಂದ ಶಿವಲಿಂಗವ ಪೂಜಿಸಿದವರು ಮೋಕ್ಷಕರಲ್ಲದೆ ಮಿಕ್ಕವರಿಗುಂಟೇನಲ್ಲ. ಅದೇನು ಕಾರಣವೆಂದಡೆ, ಮೂಢ ಭಕ್ತನೇ ಕಂಬಳಿಯೆಂದು ತಿಳಿಯೆಲಾ ! ಕಂಬಳಿಗೆ ಮನ್ನಣೆಯುಂಟೆ ? ಹಾಸಿದರೆ ಮಾಸುವುದೆ ? ಹೊದ್ದರೆ ಚಳಿಯ ತೋರುವುದೆ ? ರಜಕನ ಮನೆಯ ಕಂಡುಬಲ್ಲುದೆ ? ಮುಪ್ಪಾದ ಕಾಲಕ್ಕೆ ಕೃಮಿಶಳೆಗಶ್ವರ (?) ದೇವರಿಗೆ ಜೇಷ್ಮು(?) ಎಲ್ಲಾ ಬರವಾಗಿ ಭಕ್ತ ಪೋಷಿಸುವದಲ್ಲದೆ ಕೊರತೆಯುಂಟೆ ? ಇದರಂತೆ ಮೂಢಭಕ್ತಂಗೆ ಮೋಕ್ಷವೆಂದು ತಿಳಿ. ಇದಂ ಬಿಟ್ಟು, ಮಾತು ಕಲಿತ ಭೂತಗಳಂತೆ, ಬರಿದೆ ಶಾಸ್ತ್ರವನೋದಿ, ಕಂಡಕಂಡವರಲ್ಲಿ ಬಗುಳಿ, ಕಾಲಕ್ಷೇಪವ ಕಳೆವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ ನಾಯಕನರಕ ತಪ್ಪದು. ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು ಪರಮೇಶ್ವರನ ನಿಜಚಿನ್ಮಯಮಪ್ಪ ಊಧ್ರ್ವಮುಖದಲ್ಲಿ ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡ. ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ ಮತ್ರ್ಯದಲ್ಲಿ ಅವತರಿಸಿದಡೆ, ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ? ಇವರಿಂಗೆ ನಾಯಕನರಕ ತಪ್ಪದು ಕಾಣಾ, ಎಲೆ ಶಿವನೆ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->