ಅಥವಾ

ಒಟ್ಟು 8 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ ಮಹೇಶ್ವರರು ಆರಾದರೂ ಆಗಲಿ ಶಿವಗಣಂಗಳಲ್ಲಿ ಕುಲವನರಸಿದರೆ ಅವರು ಕುಲಸೂತಕರೆಂದು ಶಿವನು ಯಮನ ಕೈಯಲ್ಲಿ ಕೊಟ್ಟು ಅಘೋರ ನರಕದೊಳು ಹಾಕೆಂದನು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವ ಅಂದ ಮಾಡಿಕೊಂಡು ತಿರುಗುವ ಭಂಗಗೇಡಿಗಳು ನೀವು ಕೇಳಿರೋ. ಅಂಗಕ್ಕೆ ಅಂದವಾವುದೆಂದರೆ: ಗುರುವಿಗೆ ತನುವ ಕೊಟ್ಟಿರುವುದೆ ಚೆಂದ, ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ, ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ. ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ. ಶಿವನ ಪಾದವ ಹೊಂದುವುದೆ ಚೆಂದ. ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು, ಒಂದು ಕಾಸನಾದರೂ ಪರರಿಗೆ ಕೊಡದೆ, ತಾನೇ ತಿಂದು, ನೆಲದಲ್ಲಿ ಮಡಗಿ, ಕಡೆಗೆ ಯಮನ ಕೈಯಲಿ ಸಿಲ್ಕಿ ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ. ಇಂತಹ ಅಂದಗೇಡಿಗಳ ಮುಖವ ನೋಡಲಾಗದೆಂದಾತ, ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಾಡಿ ಬೇಡಿ ಉಂಬವರೆಲ್ಲರು ಬ್ರಹ್ಮನ ಸಂಪ್ರದಾಯ. ಕುಟ್ಟಿ ಕುಟ್ಟಿ ಉಂಬವರೆಲ್ಲರು ವಿಷ್ಣುವಿನ ಸಂಪ್ರದಾಯ. ದಳಾದಳಿಯಲುಂಬವರೆಲ್ಲರು ಯಮನ ಸಂಪ್ರದಾಯ. ಇವಾವವನೂ ಹೊದ್ದದೆ ಭಕ್ತಿಭಿಕ್ಷವನುಂಬವರೆಲ್ಲ ನಿಮ್ಮ ಸಂಪ್ರದಾಯ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಯವೆಂಬ ಪುರನಾಳುವ ಜೀವನೆಂಬರಸು ನಿಜಬಲದಿಂ ಕರ್ಮವೆಂಬ ರಾಜ್ಯದಲ್ಲಿ ಸಂಪಾದಿಸಿದ ಸುಕೃತ ದುಷ್ಕøತಗಳೆಂಬ ದ್ರವ್ಯವನ್ನು ಮನವೆಂಬ ಬೊಕ್ಕಸದೊಳಗಿಟ್ಟು, ಅಲ್ಲಿಂದ ಶಬ್ದಾಚಾರಮುಖದಿಂದ ನರಕಾದಿ ಯಾತನೆಗಳನ್ನೂ ಸ್ವರ್ಗಾದಿ ಭೋಗಂಗಳನ್ನೂ ಅನುಭವಿಸುತ್ತಿರ್ಪ ಕೋಟಲೆಗಲಸಿ, ವೇದಾಂತಸಮುದ್ರದಲ್ಲಿ ಮುಳುಗಿ, ಅಲ್ಲಿರ್ಪ ಜ್ಞಾನವೆಂಬ ಮಕ್ತಾರತ್ನಮಂ ಕೊಂಡು, ಪರತತ್ವದೇಶದಲ್ಲಿ ಪರಿಣಾಮಿಸುತ್ತಿರ್ಪ ಗುರುವೆಂಬ ಮಹಾರಾಜಂಗೆ ಕಾಣಿಕೆಯಂ ಕೊಟ್ಟು, ಅನಂತಬ್ರಹ್ಮಾಂಡಗಳಂ ತುಂಬಿ, ತಾನನುಭವಿಸಿ, ಲಿಂಗವೆಂಬಕ್ಷಯನಿಧಾನಮಂ ಪಡೆದು, ಅದನ್ನು ಮನೋಭಂಡಾರದೊಳಿಟ್ಟು, ಅತಿಜಾಗರೂಕತೆಯಿಂ ತಾನೇ ಕಾಪಾಡುತ್ತಿರಲು, ಕತಪಯಕಾಲಕ್ಕೆ ಕಾಲದೂತರು ಬಂದು, ಅಂಗಪುರಭಂಗವಂ ಮಾಡಲು, ತತ್ಪುರವಾಸಿಗಳಾದ ರುದ್ರರು ಕಾಲದೂತರಂ ತರಿದು, ಯಮನಂ ಪರಿದು, ಲಿಂಗವಿಧಾನಬಲದಿಂ ಮೋಕ್ಷಸಾಮ್ರಾಜ್ಯಮಂ ಸಂಪಾದಿಸುತ್ತಾ ಬಾಳುವ ನಿತ್ಯಸುಖವನ್ನು ನನಗೆ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು, ಸೋಮ ಸೂರ್ಯರ ಹುರಿದು ಹುಡಿಮಾಡಿ ತಿಂಬವಳಿಂಗೆ ನಾಮವನಿಡಬಲ್ಲವರಾರು ಹೇಳಿರೆ! ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ ಯಮನ ಕೂಡುವ ಮರುತನಂತೆ ನೋಡಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ತಂದೆ ತಾಯಿಗಳ ವಿಕಾರದ ಶುಕ್ಲಶೋಣಿತದ ಸಂಬಂಧವಪ್ಪ ಸರ್ವಸೂತಕತನುವಿಡಿದ ಪ್ರಾಣಿಗಳಿಗೆ ಯಮನ ಸಂಹಾರವ ಕಲ್ಪಿಸಿಕೊಂಡಿಪ್ಪ ಶಿವನ ಪರಿಯಾನಾರೂ ಅರಿಯರಲ್ಲ. ಈ ಮಾಯಿಕ ಸಂಬಂಧವಾದ ದೇಹ ತಾನೆಂದೆಂಬ ಮೂಢಾತ್ಮರ ನಾನೇನೆಂಬೆನಯ್ಯ?. ಆತ್ಮ ಅನಾತ್ಮನ ವಿಚಾರಿಸಿ ತಿಳಿಯಲು ಅಚೇತನವಾದ ಅನಾತ್ಮಸ್ವರೂಪೇ ದೇಹ; ಆ ದೇಹಕ್ಕೆ ಆಶ್ರಯವಾಗಿಪ್ಪ ಚೈತನ್ಯನೇ ಆತ್ಮನು. ಇದು ಕಾರಣ, ದೇಹವೇ ಜಡ; ಆತ್ಮನೇ ಅಜಡನು. ಅದೇನುಕಾರಣ ದೇಹ ಜಡ, ಆತ್ಮನು ಅಜಡನುಯೆಂದಡೆ; ದೇಹವೇ ಮಾಯಾಕಾರ್ಯವಾದ ಕಾರಣ ಜಡ; ಇದು ಕಾರಣ, ಇಂದ್ರಿಯಂಗಳು ಜಡ; ವಿಷಯಂಗಳು ಜಡ; ಕರಣಂಗಳು ಜಡ; ವಾಯುಗಳು ಜಡ; ಆತ್ಮನೇ ಅಜಡನು. ಆತ್ಮನದೇನುಕಾರಣ ಅಜಡನೆಂದರೆ ಶಿವಾಂಶಿಕನಾದಕಾರಣ ಅಜಡನು. ಆ ಶುದ್ಧ ಚಿದ್ರೂಪನಾದ ಆತ್ಮನು ಅವಿದ್ಯಾಸಂಬಂಧವಾದ ದೇಹೇಂದ್ರಿಯದ ಸಂಗದಿಂದ ಸಂಸಾರಿಯಾಗಿಪ್ಪನು ನೋಡಾ. ಈ ಸಂಸಾರವ್ಯಾಪ್ತಿಯಹಂಥ ಜೀವನದ ಗುಣವ ಕಳೆದುಳಿದಿಹನೆಂದಡೆ ದೇವ ದಾನರ ಮಾನವರಿಗೆ ದುರ್ಲಭ ನೋಡಾ. ಈ ಮಾಯಾಪ್ರಪಂಚ ನಿವೃತ್ತಿಯಮಾಡುವ ಮಹದರುಹು ತಾನೆಂತಾದೋ ಅಂತಪ್ಪ ಅರುಹುಳ್ಳ ಶರಣರಿಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಾಕ್ಷಿ ತಾನೆಂದಡೆ ಶಮನ ಕಾರ್ಯಕ್ಕೆ ಶುಭದವಾಯಿತ್ತಯ್ಯಾ. ಸಾಕ್ಷಿ ತಾನಲ್ಲೆಂದಡೆ ಯಮನ ಕಾರ್ಯ ಬೀಳಾಯಿತ್ತಯ್ಯಾ. ಸಾಕ್ಷಿಯೆಂಬುದು ವೃತ್ತಿಯಲ್ಲಿ ಒಲ್ಲರೀ ಮಹಿಮರು! ನಿವೃತ್ತಿಯಲ್ಲದೆಂತಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಮುನ್ನ ವಿಟ ಶ್ವೇತನು ಶಿವ ಎಂಬ ಶಬ್ದದಿಂದೆ ಕಾಲನ ಕಂಟಕವ ಗೆಲಿದು ನೀಲಲೋಹಿತನ ಓಲಗದಲ್ಲಿರಲಿಲ್ಲವೆ ? ಮುನ್ನ ಸುಕುಮಾರನು ಪರಶಿವಲಿಂಗದರ್ಶನದಿಂದೆ ಯಮನಪುರಿಯ ಬಾಧೆಯ ನೀಗಿ ಹರನ ರಜತಾದ್ರಿಯಲ್ಲಿರಲಿಲ್ಲವೆ ? ಮುನ್ನ ಮಾರ್ಕಂಡೇಯನು ಪರಬ್ರಹ್ಮಲಿಂಗವ ಪೂಜಿಸಿ, ಯಮನ ಉರಹರಿದು ಹರನ ಕೈವಲ್ಯವ ಪಡೆಯಲಿಲ್ಲವೆ ? ಇದನರಿತು ಸ್ಥಿರವಾಗಿ ಪೂಜಿಸಿ ವರನ ಬೇಡಿರೋ ನಮ್ಮ ಅಖಂಡೇಶ್ವರ ಲಿಂಗದೇವನ.
--------------
ಷಣ್ಮುಖಸ್ವಾಮಿ
-->