ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಂದೆ ತಾಯಿ ಯಾರು ? ದ್ವಾಪರದೊಳು ತಾಮ್ರದ ಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಲಿ ಕಿಲುಬುಹೊಯಿತ್ತು. ಕಲಿಯುಗದೊಳು ಕಲ್ಲ ಲಿಂಗವಾದಡೆ ಇಕ್ಕಿದ ಓಗರವನುಣ್ಣದೇಕೋ ? ಹಿಂದೊಮ್ಮೆ ನಾಲ್ಕು ಯುಗದೊಳು ಅಳಿದುಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರೆವುತ್ತಿಹೆ ? ಸಾಕ್ಷಿ : ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಇದು ಕಾರಣ ಕೂಡಲಚೆನ್ನಸಂಗಯ್ಯ ತಪ್ಪದೆ ಸ್ಥಾವರ ದೇವರೆ ಜಂಗಮ ದೇವರ ಪ್ರಸಾದಕ್ಕೆ ಯೋಗ್ಯವಾಯಿತ್ತು. ಅನಂತ ಯುಗಂಗಳೊಳಗೆ ಜಂಗಮ ದೇವರೆ ಪ್ರಾಣವಾದರಾಗಿ
--------------
ಚನ್ನಬಸವಣ್ಣ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
`ವೀ ಶಬೇ ನೋಚ್ಯತೇ ವಿದ್ಯಾ ಶಿವ ಜೀವೈಕ್ಯ ಬೋಧಿಕಾ ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಸ್ತುತೇ ಮತಾಃ ಇಂತೆಂದುದಾಗಿ ವಿಶಬ್ದದಿಂದೆ [ಜೀವ] ಶಿವರೈಕ್ಯವನು ಪೇಳುತ್ತಿರ್ದಂಥ ಜ್ಞಾನವು, ಆ ಜ್ಞಾನದಲ್ಲಿ ಯಾರು ಕೆಲಂಬರು ವಿನೋದಿಸುತ್ತಿರ್ದಪರು ಅವರಾಯಿತ್ತಾದೊಡೆ ವೀರಶೈವಮತ ಉಳ್ಳವರಯ್ಯಾ ಶಾಂತವೀರಪ್ರಭುವೆ.
--------------
ಶಾಂತವೀರೇಶ್ವರ
ಶಿವಶಿವಾ, ಈ ಮರುಳಮಾನವರಿಗೆ ನಾನೇನೆಂಬೆನಯ್ಯಾ! ಎನ್ನ ಮನೆ, ಎನ್ನ ಬದುಕು, ಎನ್ನ ತಾಯಿತಂದೆ, ಎನ್ನಸತಿಸುತರು ಬಾಂಧವರು ಎಂದು ಮೆಚ್ಚಿ ನಚ್ಚಿ ಮರುಳಾಗಿರ್ದರಯ್ಯಾ. ಹಿಂದೆ ನಾನಾಯೋನಿಯಲ್ಲಿ ಆನೆ ಮೊದಲು ಇರುವೆ ಕಡೆಯಾಗಿ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಹುಟ್ಟಿ, ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ ಬಪ್ಪಲ್ಲಿ ಆವಾಗ ನಿನಗೆ ತಾಯಿ ಯಾರು, ನಿನಗೆ ತಂದೆ ಯಾರು, ನಿನಗೆ ಸತಿಸುತರು ಬಾಂಧವರು ಯಾರು? ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ನಿನಗೆ ಶ್ರೀಗುರುವೇ ತಾಯಿ, ನಿನಗೆ ಶ್ರೀಗುರುವೇ ತಂದೆ, ನಿನಗೆ ಶ್ರೀಗುರುವೆ ಸತಿಸುತರು, ಬಂಧುಗಳೆಂಬ ನಿರ್ಣಯವನು ಸಮ್ಯಜ್ಞಾನಗುರುಮುಖದಿಂದ ತಿಳಿದು ವಿಚಾರಿಸಿಕೊಳ್ಳಬಲ್ಲರೆ ಬಲ್ಲರೆಂಬೆ. ಗುರು-ಲಿಂಗ-ಜಂಗಮ ಒಂದೆಯೆಂದು ತಿಳಿಯಬಲ್ಲರೆ ಬಲ್ಲರೆಂಬೆ. ಈ ಭೇದವನರಿಯದೆ ಮಿಥ್ಯಸಂಸಾರದ ಮಾತಾಪಿತರು, ಸತಿಸುತರು ಬಾಂಧವರ ತನು-ಮನ-ಧನದ ಅಭಿಮಾನದಲ್ಲಿ ಸಟೆಯ ಸಂಸಾರದಲ್ಲಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಮಂಗಮನುಜರಿಗೆ ಇನ್ನೆಂದು ಮೋಕ್ಷವಹುದೊ ? ಶಿವಶಿವಾ, ಈ ಲೋಕದ ಅಭಿಮಾನವ ಬಿಟ್ಟು, ಪರಲೋಕದಭಿಮಾನವ ಹಿಡಿದು ಆಚರಿಸಿ ಇರಬಲ್ಲರೆ ಗುರು-ಲಿಂಗ-ಜಂಗಮದ ಪುತ್ರರೆಂಬೆ, ಪುರಾತರ ಮಗನೆಂಬೆ, ಇಲ್ಲದಿರೆ ಕಿರಾತರ ಮಗನೆಂಬೆ, ನರಗುರಿಗಳ ಪುತ್ರರೆಂಬೆನೆಂದಾತ ವೀರಾಧಿವೀರ ನಮ್ಮ ಶರಣ ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->