ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ
ಭಕ್ತಭಕ್ತನೆಂದು ಯುಕ್ತಿಗೆಟ್ಟು ನುಡಿವಿರಿ, ಭಕ್ತಿಸ್ಥಲವೆಲ್ಲರಿಗೆಲ್ಲಿಯದೊ ? ಹಾಗದಾಸೆ, ಹಣವಿನಾಸೆಯುಳ್ಳನ್ನಕ್ಕ ಭಕ್ತನೆ ? ಅಯ್ಯಾ, ಅರ್ಥಪ್ರಾಣಾಭಿಮಾನ ವಂಚನೆಯುಳ್ಳನ್ನಕ್ಕ ಭಕ್ತನೆ ? ಹೊನ್ನು ಹೆಣ್ಣು ಮಣ್ಣು ಹಣಿದವಾಡದದನ್ನಕ್ಕ ಭಕ್ತನೆ ? ಭಕ್ತರಿಗೆ ನಾವು ಹೇಳಿದಡೆ ದುಗುಡ ದುಮ್ಮಾನ, ನೀನೊಮ್ಮೆ ಹೇಳಾ, ಪ್ರಳಯಕಾಲದ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಭಕ್ತರಾದೆವೆಂದು ಯುಕ್ತಿಗೆಟ್ಟು ನುಡಿವರು; ಭಕ್ತಜನ್ಮವೆಲ್ಲರಿಗೆಲ್ಲಿಯದೊ ? ಗುರುವಿನಲ್ಲಿ ತನುವಂಚನೆ, ಲಿಂಗದಲ್ಲಿ ಮನವಂಚನೆ, ಜಂಗಮದಲ್ಲಿ ಧನವಂಚನೆವುಳ್ಳನ್ನಕ್ಕ ಭಕ್ತನೆ ? ಗುರುವಿನಲ್ಲಿ ಚಾರಿತ್ರವ ಲಿಂಗದಲ್ಲಿ ಲಕ್ಷಣವ, ಜಂಗಮದಲ್ಲಿ ಜಾತಿಯನರಸುವನ್ನಕ್ಕ ಭಕ್ತನೆ ? ಅಲ್ಲ, ಅವನು ದೋಷಾರ್ಥಿ. ``ಭಕ್ತಶ್ಚ ಪ್ರತಿಪಕ್ಷಶ್ಚ ಸದಾಚಾರೇಣ ವರ್ಜಿತಃ ಗುರುಲಿಂಗಜಂಗಮದ್ವೇಷೀ ಯೋ ನರಸ್ಸದುರಾತ್ಮಕಃ' ಇದು ಕಾರಣ ಕೂಡಲಚೆನ್ನಸಂಗಮದೇವಾ ಭಕ್ತಜನ್ಮವೆಲ್ಲರಿಗೆಲ್ಲಿಯದು ?
--------------
ಚನ್ನಬಸವಣ್ಣ
ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ, ತತ್ತ್ವಮಸಿ ಎಂಬುದನರಿದು ಕತ್ತಲೆಗೆ ಓಡುವಿರಯ್ಯಾ. ವೇದವಿಪ್ರರ ವಿಚಾರಿಸಿ ನೋಡಲು, ಉಪದೇಶಪರೀಕ್ಷೆ ನರಕವೆಂದುದು ಕೂಡಲಸಂಗನ ವಚನಸೂಚನೆ. 91
--------------
ಬಸವಣ್ಣ
ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು ಸಕಲ ತೀರ್ಥಕ್ಷೇತ್ರಂಗಳಿಗೆಡೆಯಾಡಿ ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೊ ? ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಬತ್ತೆಂಟುಕೋಟಿ ಕ್ಷೇತ್ರಂಗಳಿರ್ಪವು. ಆತನ ಬಚ್ಚಲಲ್ಲಿ ಅರವತ್ತಾರು ಕೋಟಿ ತೀರ್ಥಂಗಳಿರ್ಪವು. ಆತನ ಕಾಯವೇ ಕೈಲಾಸ. ಆತನಂಗದಮೇಲಿರ್ಪ ಲಿಂಗವೇ ಅನಾದಿಪರಶಿವನು. ಇದು ಕಾರಣ, ಅಂತಪ್ಪ ಸದ್‍ಭಕ್ತನ ಗೃಹಮಂ ಪೊಕ್ಕು, ಆತನ ದರ್ಶನ ಸ್ಪರ್ಶನವಾದಾತಂಗೆ ಅನಂತಕೋಟಿ ಭವಪಾತಕಂಗಳು ಪರಿಹಾರವಪ್ಪವು ನೋಡಾ ! ಆತನ ಒಕ್ಕುಮಿಕ್ಕುದ ಕೊಂಡಾತಂಗೆ ಮುಂದೆ ಮುಕ್ತಿಯಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->