ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ? ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ? ಯೋಗವ ನುಡಿವರೆ ಅಯ್ಯಾ ? ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ, ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಕೂರ್ಮನ ಗತಿಯ ಕುವಾಡ ಯೋಗವು ಕುಹಕವಾದಿಗಳಿಗಳವಡದು. ಉತ್ತಮಾಂಗವನು ಉರಸ್ಥಲದಲ್ಲಿ ಬೈಚಿಡುವ ಬಯಕೆಯನಾರೈದು ನೋಡಾ! ಅದನು ಆರಯ್ಯಲಚಲ ನೀನೇ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಎಂದೂ ಎನಲಿಲ್ಲ!
--------------
ಚಂದಿಮರಸ
ಶಿವಲಿಂಗಾರ್ಚನಾಕ್ರಿಯಾಶಕ್ತಿಗೆ ಅಭ್ಯಾಸದ ಯೋಗದ ರತಿ ಸರಿಯಲ್ಲ ನೋಡ, ಯೋಗದ ಬಲದಿಂದ ಸೇವಿಸುವ ಶ್ಲೇಷಾಮೃತವು ಶಿವಪ್ರಸಾದಾಮೃತಕೆ ಸರಿಯಲ್ಲ ನೋಡ, ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗೈಕ್ಯ ಸಂಬಂಧಸಂಯೋಗಕ್ಕೆ ಸರಿಯಲ್ಲ ನೋಡ. ಶಿವಾನುಭಾವಕ್ಕೆ ಯೋಗಕ್ಕೆ ಇನಖದ್ಯೋತದಂತರವು ನೋಡಯ್ಯ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮತ್ತಮಾನುಗ್ರಹಿಸಲು ಯೋಗ್ಯನಾದ ಶಿಷ್ಯನ ಸವಿನಯದಲ್ಲಿಯೂ, ಅನುಗ್ರಾಹಕನಾದ ಗುರುವಿನ ಕಾರುಣ್ಯದಲ್ಲಿಯೂ, ಸರ್ವಾನುಗ್ರಾಹಕನಾದ ಶಿವನೆ ಕರ್ತನಾದ ಕಾರಣ, ಸರ್ವಲಕ್ಷಣಸಂಪನ್ನನಾದ ಗುರುವಿನ ಸರ್ವಲಕ್ಷಣಸಂಪನ್ನ ನಾದ ಶಿಷ್ಯನ ಯೋಗವು ಅತ್ಯಂತ ದುರ್ಲಭವಾದಂಥಾದು. ಇಂತೆಂದು ಪೌಷ್ಕ ರಂ ಪೇಳುತ್ತಿರ್ದಪುದು ಶಾಂತವಿರೇಶ್ವರಾ.
--------------
ಶಾಂತವೀರೇಶ್ವರ
ಅಯ್ಯ, ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. ಒಂದು ಕೋಟಿ ವರುಷ ಊಧ್ರ್ವಮುಖವಾಗಿ ಸೂರ್ಯನ ನೋಡಿದ ಫಲವು ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, ಒಂದು ದಿನ ಸದ್ಭಕ್ತ_ಜಂಗಮ_ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು ಒಂದು ದಿನ ಗುರು_ಲಿಂಗ_ಜಂಗಮ_ಪ್ರಸಾದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು ಒಂದು ದಿನ ಶ್ರೀಗುರು_ಲಿಂಗ_ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು ಒಂದು ವೇಳೆ ಗುರು_ಲಿಂಗ_ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರ]
--------------
ಅಲ್ಲಮಪ್ರಭುದೇವರು
ಅಷ್ಟಾಂಗಯೋಗದಲ್ಲಿ; ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ[ವೆಂಬ] ಧಾನ್ಯ ಧಾರಣ ಸಮಾಧಿ[ಯೆಂಬ], ಎರಡು ಯೋಗ [ವುಂಟು], ಅಲ್ಲಿ ಅಳಿದು ಕೂಡುವುದೊಂದು ಯೋಗ, ಅಳಿಯದೆ ಕೂಡುವುದೊಂದು ಯೋಗ. ಈ ಎರಡು ಯೋಗದೊಳಗೆ, ಅಳಿಯದೆ ಕೂಡುವ ಯೋಗವು ಅರಿದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->