ಅಥವಾ

ಒಟ್ಟು 52 ಕಡೆಗಳಲ್ಲಿ , 19 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆವಾವ ತ್ರಿಗುಣಭೇದದಲ್ಲಿವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು. ಯೋಗಿಯಾದಲ್ಲಿ ದೇಹಧರ್ಮವ ಮರೆದು, ಭೋಗಿಯಾದಲ್ಲಿ ಸಂಚಿತವ ಮರೆದು, ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು. ಇಂತೀ ಯೋಗಿ ಭೋಗಿ ತ್ಯಾಗಿ, ಇಂತೀ ತ್ರಿವಿಧವನೊಳಕೊಂಡು ವಿರಕ್ತನಾದಲ್ಲಿ ಆತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು. ಒಂದು ನಿಂದು ಸಮಯ ರೂಪಾಯಿತ್ತು. ಸಮಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ.
--------------
ಅರಿವಿನ ಮಾರಿತಂದೆ
ಆತುರದ ಧ್ಯಾನದಿಂದ ಧಾವತಿಗೊಂಡೆ ; ಜ್ಯೋತಿರ್ಲಿಂಗವ ಕಾಣಿಸಬಾರದು. ಮಾತಿನ ಮಾಲೆಗೆ ಸಿಲುಕುವನಲ್ಲ ; ಧಾತುಗೆಡಿಸಿ ಮನವ ನೋಡಿ ಕಾಡುವನು. ಆತುಮನಂತರ ಪರವನರಿದಡೆ ಆತನೆ ಯೋಗಿ ; ಆತನ ಪಾದಕ್ಕೆ ಶರಣೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ತಮತಮಗೆ ಸಮತೆಯನು ಹೇಳಬಹುದಲ್ಲದೆ, ತಮತಮಗೆ ಸಮತೆಯನು ಆಡಬಹುದಲ್ಲದೆ, ಕನಲಿಕೆಯ ಕಳೆದಿಪ್ಪವರಾರು ಹೇಳಾ? ಒಬ್ಬರೊಬ್ಬರ ಹಳಿಯದಿಯಪ್ಪವರಾರು ಹೇಳಾ ? ಮುನಿಸ ಮುಂದಿಟ್ಟಿಪ್ಪರು. ಇದು ಯೋಗಿ, ಮಹಾಯೋಗಿಗಳಿದಪ್ಪುದು ನೋಡಾ. ಸಕಳೇಶ್ವರದೇವಾ, ನೀನು ಕರುಣಿಸಿದವರಿಗಲ್ಲದೆಯಿಲ್ಲಾ.
--------------
ಸಕಳೇಶ ಮಾದರಸ
ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಮೂರು ಮಠ ಮೂವತ್ತು ಆರಾಗಿ ತೋರುತಿದೆ ಮೀರಿಪ್ಪ ಬೊಮ್ಮ ತಾ ಹಮ್ಮಡರಿತು. ಮಠವು ತಾನೊಂಬತ್ತು ಕುಟಿಲವು ಹಲವಾಗಿ ನಿಟಿಲನೇತ್ರನ ರೂಪು ಅಜಲೋಕದಾ ಸಾದಾಖ್ಯ ದೇಹವಾರಾರು ಹೊಗಲಿಲ್ಲೆಲ್ಲಿ ಮೂವರಿಗೆ ತಾನು ಶಕ್ಯವಲ್ಲ. ನಾದ ಬಿಂದು ಕಳಾತೀತ ಕಪಿಲಸಿದ್ಧಮಲ್ಲಿಕಾರ್ಜುನನ ಆದ್ಥಿಕ್ಯವನರಿವ ಯೋಗಿ ಯಾರು?
--------------
ಸಿದ್ಧರಾಮೇಶ್ವರ
ಲಿಂಗ ನಿಮ್ಮದಾದಡೆ ನಿಮ್ಮ ಅಂಗೈಯೊಳಗೇಕೆ ಅಡಗದು ? ನಿಮ್ಮ ಅಂಗಮಯ ಲಿಂಗವಾದಡೆ ಸಂಸಾರದ ಅಂಗವ ಉಲುಹೇತಕ್ಕೆ ? ಅದು ನಮ್ಮ ಗುಹೇಶ್ವರಲಿಂಗದಲ್ಲಿ ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ.
--------------
ಅಲ್ಲಮಪ್ರಭುದೇವರು
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಆವಾವ ಪರಿಯಲ್ಲಿ ಭಾವಿಸುತ್ತಿಹ ಕರಣದ ವ್ಯಾಕುಲವಡಗಿ ಮನವು ಏಕಾಂತವಾಗಿ ನಿಂದ ಯೋಗಿ, ಜ್ಞಾನಸತಿಯ ಸಂಗದಲ್ಲಿರಲು ಆತಂಗೆ ಸರ್ವಲೋಕವು ಆ ಲೋಕದ ಭೋಗಂಗಳೆಲ್ಲಾ ತಡೆದಿಹವಾಗಿ ಆ ಯೋಗಿ ತನಗೆ ಪ್ರಿಯಳಾದ ಚಿತ್ಕಾಂತೆಯನು, ತನ್ನನು ಕಾಣದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ತಾನು ತಾನಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಯೋಗಿ ಎನಲಿಲ್ಲ, ಭೋಗಿ ಎನಲಿಲ್ಲ, ಕಾಮಿ ಎನಲಿಲ್ಲ, ನಿಃಕಾಮಿಯೆನಲಿಲ್ಲಾಗಿ, ತನ್ನ ಪರಿ ಬೇರೆ ಕಾಣಿರಯ್ಯ. ದೇವ ಎನಲಿಲ್ಲ, ಭಕ್ತ ಎನಲಿಲ್ಲ, ಭಾವವೆನಲಿಲ್ಲ, ನಿರ್ಭಾವವೆನಲಿಲ್ಲಾಗಿ, ತನ್ನ ಪರಿ ಬೇರೆ ಕಾಣಿರಣ್ಣಾ. ಭವಭಯಂಗಳೆಲ್ಲವ ಪರಿಹರಿಸಿ ಕಳೆದನು. ನಿಭ್ರಾಂತಿ ನಿರುತನು, ನಿಮ್ಮ ಶರಣ, ಅಪ್ರತಿಗೆ ಪ್ರತಿವುಂಟೆ? ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅದನದನತಿಗಳೆದನೆ ಯೋಗಿ, ಇಹ ಪರವನೆ ಮೀರಿ ನಿಲಬಲ್ಲಾತನೆ ಯೋಗಿ. `ತತ್ತ್ವಮಸಿ' ವಾಕ್ಯವು ನಿಲುಕದ ಪದವ ಮೀರಿ ನಿಲಬಲ್ಲಾತನೆ ಯೋಗಿ ಇದು ತುದಿಪದವು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಂಚೇಂದ್ರಿಯಂಗಳು ಲಿಂಗಲಿಕ್ತದಲ್ಲಿಂದ ಹರು(ರಿ?)ವ ಸಂಚವನರಿಯದೆ ತೋಟದ ಕೊಜೆಯನಾಗಿ ಕರಣಂಗಳ ಮೇಲೆ ಮಣಿಹವಾಗಿ ಬಂದೆನಯ್ಯಾ ಯೋಗಿ ವಿಯೋಗಿಯಾಗಿ ಕುಂಡಲಿಯನೆ ಬಿಗಿದು ಇಂದ್ರಿಯ ಷಡಂಗವ ಮಡ(ಡಿರಿ)ದಲ್ಲಿ ಇಂದ್ರಿಯನಿಗ್ರಹವಂ ಮಾಡಿ ಮಂತ್ರ ಮಂತ್ರ ಮಥನದ ಹೋಮದ ಹೊಗೆಯ ತೆಗೆದು ಚಂದ್ರಸೂರ್ಯರನಾಣೆಯಿಟ್ಟಂತೆ ಒಂದೆ ಠಾವಿನಲ್ಲಿ ನಿಲಿಸಿದೆ ರುದ್ರಪದದಲ್ಲಿ_ ಇಂತು ಕ್ರೀಯಳಿದು ನಿಃಕ್ರಿಯದಲ್ಲಿ ನಿಂದ ಕೂಡಲಚೆನ್ನಸಂಗಯ್ಯನು ಎನ್ನ ಪ್ರಾಣನಾಥನೆಂದರಿದು ಎನ್ನ ಕಾಯವ ಬಾಧಿಪುದಂ ಬಿಟ್ಟು ನಿಜದಲ್ಲಿ ನಿಂದೆನು.
--------------
ಚನ್ನಬಸವಣ್ಣ
ಜಾತಿಭ್ರಮೆ, ನೀತಿಭ್ರಮೆ ಎಂಬ ಕರ್ಮಂಗಳನು ಘಾತಿಸಿ ಕಳೆಯಬಲ್ಲಡಾತ ಯೋಗಿ. ಕ್ಷೇತ್ರಮೆ, ತೀರ್ಥಭ್ರಮೆ, ಪಾಷಾಣಭ್ರಮೆ ಎಂಬ ಕರ್ಮಂಗಳನು ನೀಕರಿಸಿ ಕಳೆಯಬಲ್ಲಡಾತ ಯೋಗಿ. ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ ಎಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇಂಬಾದ ಬ್ರಹ್ಮದಲ್ಲಿ ತುಂಬಿದ ಜಗವೆಲ್ಲಾ ಸಂಭ್ರಮಿಸುತ್ತದೆ ಸಂಸಾರದಲ್ಲಿ. ಕುಂಭದೊಳಗಣ ಸುಧೆಯನುಂಬ ಭೇದವನರಿಯದೆ ಸುಂಬಳಗುರಿಯಂತಾದವು ಜಗವೆಲ್ಲವು. ಒಂಭತ್ತುನಾಳದೊಳಗಣ ಮಧ್ಯನಾಳದ ಬೆಂಬಳಿಯಲ್ಲಿ ಎಯ್ದಿದಾತಗೆ ಸುಧೆ ಸಾಧ್ಯವು. ತೊಂಬತ್ತಾರು ಅಂಗುಲ ದೇಹವೆಲ್ಲವನೂ ತುಂಬುವುದು. ಮತ್ತಂತು ಆ ಸುಧೆಯನು ಹಂಬಲಿಸಲೇಕೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಹಂಬಲವನು ಬಿಡದಿರ್ದಡಾತ ಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->