ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ, ಭಾವಲಿಂಗದ ಸಮರಸವ ಬಲ್ಲವರಾರೊ ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ. ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ. 66 ಸಿದ್ಧಿಗಳೊಡನೆ ಕೂಡಿದ ಸಿದ್ಧ ಪುರುಷರೂ ಸರಿಯಲ್ಲ. ಲಾವಣ್ಯದೊಡನೆ ಕೂಡಿದ ಜಯಂತ ಮನ್ಮಥ ವಸಂತರೂ ಸರಿಯಲ್ಲ. ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಭದ್ರಪೀಠ ಮೊದಲಾದ ಮಹದೈಶ್ವರ್ಯವುಳ್ಳ ದೇವೇಂದ್ರನೂ ಸರಿಯಲ್ಲ. ದೇವೇಂದ್ರನ ಮೇಲೆ ಕೋಟ್ಯನುಕೋಟಿ ಮೊದಲಾದ ಹರಿ ವಿರಿಂಚ್ಯಾದಿಗಳ ಸಂಪದವೂ ಸರಿಯಲ್ಲ. ಶ್ರುತಿ ವಿದ್ಯದೊಡನೆ ಕೂಡಿದ ವ್ಯಾಸ ದಕ್ಷಾದಿಗಳೂ ಸರಿಯಲ್ಲ. ಸಪ್ತಕೋಟಿ ಮಹಾಮಂತ್ರಂಗಳ ಬಲ್ಲಂತಹ ಮಹಾಮುನಿಗಳೂ ಸರಿಯಲ್ಲ. ಮಹಾರಾಜಯೋಗದೊಡನೆ ಕೂಡಿದ ಮನುಮಾಂಧಾತರೂ ಸರಿಯಲ್ಲ. ಮಹಾಲಿಂಗದೊಡನೆ ಕೂಡಿದ ಶಾಂಭವಯೋಗಕ್ಕೆ ಆವಾವ ಪದವೂ ಸರಿಯಲ್ಲ. ಈ ಶಾಂಭವಯೋಗವಾರಲ್ಲಿ ಸ್ಥಾವರವಾಗಿದ್ದಿತ್ತು, ಅವರಲ್ಲಿ ಸರ್ವಲಕ್ಷಣಂಗಳು, ಸರ್ವ ವಿಚಿತ್ರಂಗಳು, ಸರ್ವ ಸುಖಂಗಳು ಸರ್ವ ಭಕ್ಷ್ಯಂಗಳು, ಸರ್ವೈಶ್ವರ್ಯಂಗಳು ಸರ್ವ ಪದಂಗಳು ಸರ್ವ ಸಿದ್ಧಿಗಳು ಸರ್ವ ಕ್ರಮಂಗಳು ಸರ್ವ ಕರ್ತೃತ್ವಮುಂಟು. ಪ್ರಕೃತಿಯೋಗವಂ ಮಾಡುವ ನರಸುರಾಸುರರು ಮೂಲಪ್ರಕೃತಿಯೋಗವ ಮಾಡುವ ಮನು ಮಾಂಧಾತರು ತೃಣ ಮಾತ್ರವು. ನಿತ್ಯನಿಜಶಿವಸ್ವರೂಪವಾದ ಶಾಂಭವ ಯೋಗಿಗಳಿಗೆ ಸರ್ವಯೋಗಂಗಳು ತೃಣಮಾತ್ರವು_ಗುಹೇಶ್ವರಲಿಂಗವನರಿದರಾಗಿ.
--------------
ಅಲ್ಲಮಪ್ರಭುದೇವರು
ಅನಾದಿಬಿಂದುವೆಂಬ ಆಧಾರ ಕುಂಡಲಿಯ ಸ್ಥಾನದಲ್ಲಿ ಅಂಡವೆಂಟು ಉಂಟು. ಆ ಎಂಟಂಡವನು ಎಂಟು ಪದ್ಮ ಹೊತ್ತುಕೊಂಡಿಪ್ಪವು. ಆ ಪದ್ಮದ ಎಸಳು ಏಳುಸಾವಿರದ ಎಪ್ಪತ್ತು ಕೋಟಿಯು. ಏಳುನೂರ ಮೂವತ್ತಾರು ಎಸಳಿನಲ್ಲಿ ಅಖಂಡ ಪೂಜೆಯ ಮಾಡಲರಿಯದೆ ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ ಬ್ರಹ್ಮರಂಧ್ರ ರೇಚಕ ಪೂರಕ ಕುಂಭಕದಲ್ಲಿ ಚೌಕ ಪದ್ಮಾಸನವ ಮಾಡಿ ಕಂಡೇನೆಂಬ ಯೋಗಿಗಳಿಗೆ ಇದು ಅಪ್ರಮಾಣ, ಅಗೋಚರ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವು ಇದೆಂದರಿದುದೆ ನಿಜಾನಂದಯೋಗ.
--------------
ಬಾಚಿಕಾಯಕದ ಬಸವಣ್ಣ
ಪರದಲ್ಲಿ ಮನವ ಶಿಲ್ಕಿಸಿ ನಾಶಿಕಾಗ್ರದ ಮೇಲೆ ನಯನಾಂಬುಧಿಗಳಂ ತುಂಬಿ, ಮೂಲಜ್ವಾಲೆಯ ಸುಷುಮ್ನನಾಳದ ಬಟ್ಟೆಯತುದಿಯನಡರಿ, ಬ್ರಹ್ಮರಂಧ್ರವ ಮುಟ್ಟಿ, ಮೂಲಾಧಾರಮಂಡಲ ನಿಶ್ವಾಸಮಂ ಪಿಡಿದು, ಹೊರಡದೆ ಸಾಧಿಸುವ ಯೋಗಿಗಳಿಗೆ ಮೇಲೆ ಕೊಡನುಕ್ಕಿತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸುರರಿಗೆ ನಿರಂತರ ಜಾಗ್ರ, ಮರುಳುಗಳಿಗೆ ನಿರಂತರ ಸ್ವಪ್ನ, ಅಚರಜೀವಿಗಳಿಗೆ ನಿರಂತರ ಸುಷುಪ್ತಿ, ವರ ಯೋಗಿಗಳಿಗೆ ನಿರಂತರ ತುರ್ಯ. ಸ್ಥೂಲ ಸೂಕ್ಷ ್ಮ ಕಾರಣವ ಪ್ರಾಪ್ತಿಸುವ ತನು ತನ್ನ ಮಾಯಾತನುವಾಗಿ ಮಾಯೆ ತೋರುತ್ತಿಪ್ಪುದು. ಸಕಲ ತನುರಹಿತ ನೀನೆಂದು ಸಕಲ ಮಾಯೆ ಹುಸಿಯೆಂದು ತನ್ನ ತನ್ನಿಂದರಿದ ಪರಮಾರೂಢ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ ಯೋಗದ ಕ್ರಮವ ಹೇಳಿಹೆವು ಕೇಳಿರಯ್ಯಾ. ಸುಷುಮ್ನೆಯ ನಾಲ್ದೆಸೆಯಲ್ಲಿ, ಆತ್ಮಕಲೆ ವಿದ್ಯಾಕಲೆ ನಾದಕಲೆ ಬಿಂದುಕಲೆಗಳನರಿಯಬೇಕು. ಆ ಕಲೆ ನಾಲ್ಕು ಸುತ್ತಿ, ಅಗ್ನಿಕಲೆಗಳ ಹತ್ತಿನರಿವುದು. ಪಿಂಗಳೆಯಲ್ಲಿ ಭಾನುಕಲೆಗಳ ಹನ್ನೆರಡನರಿವುದು. ಇಡೆಯಲ್ಲಿ ಚಂದ್ರಕಲೆಗಳು ಹದಿನಾರು ಕ್ಷಯ ವೃದ್ಧಿಯಾಗಿ ನಡೆವುದನರಿವುದು. ಈ ಮೂವತ್ತೆಂಟು ಕಲೆಗಳ ಕೂಡಿಹ ಚಂದ್ರಸೂರ್ಯಾಗ್ನಿಗಳ ಮಧ್ಯದಲ್ಲಿ ತತ್ವಮೂರು ಕೂಡೆ ಬೆಳಗುವ ಪರಜ್ಯೋತಿರ್ಲಿಂಗವನರಿದು ಯೋಗಿಸಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಳಿಕ ಕೂಡುವುದು ಕಾಣಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
-->