ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಚಕ್ರದಲ್ಲಿ ಅರಿತೆನೆಂದು ನುಡಿವ ಅರಿವುಗೇಡಿಗಳು ನೀವು ಕೇಳಿರೋ. ಆಧಾರಚಕ್ರ ಪೃಥ್ವಿಗೆ ಸಂಬಂಧ ; ಅಲ್ಲಿಗೆ ಬ್ರಹ್ಮ ಅದ್ಥಿದೇವತೆ, ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ. ಸ್ವಾದ್ಥಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅದ್ಥಿದೇವತೆ, ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ. ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ ; ಅಲ್ಲಿಗೆ ರುದ್ರನದ್ಥಿದೇವತೆ, ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ. ವಿಶುದ್ಧಿಚಕ್ರ ವಾಯುವಿಗೆ ಸಂಬಂಧ ; ಅಲ್ಲಿಗೆ ಸದಾಶಿವನದ್ಥಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ. ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ ; ಅಲ್ಲಿಗೆ ಪರಶಿವನದ್ಥಿದೇವತೆ, ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ. ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ. ಆ ಲಿಂಗವು ನಿಮಗೆ ತಪ್ಪಿದವು, ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು ನಾಚಿತ್ತು ಎನ್ನ ಮನವು ಗೊಹೇಶ್ವರಪ್ರಿಯ ನಿರಾಳಲಿಂಗಾ
--------------
ಗುಹೇಶ್ವರಯ್ಯ
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು. ಕಂಠದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ. ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ. ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ. ಆಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಪರಮೇಶ್ವರ. ಬ್ರಹ್ಮಂಗೆ ಪೀತವರ್ಣದ ಲಿಂಗ, ವಿಷ್ಣುವಿಂಗೆ ನೀಲವರ್ಣದ ಲಿಂಗ, ರುದ್ರಂಗೆ ಕಪಿಲವರ್ಣದ ಲಿಂಗ, ಈಶ್ವರಂಗೆ ಮಾಂಜಿಷ್ಟವರ್ಣದ ಲಿಂಗ, ಸದಾಶಿವಂಗೆ ಮಾಣಿಕ್ಯವರ್ಣದ ಲಿಂಗ, ಪರಮೇಶ್ವರಂಗೆ ಸ್ಫಟಿಕವರ್ಣದ ಲಿಂಗ. ಬ್ರಹ್ಮ ಪಾಶುಪತಿಯಾಗಿ ಸುಳಿದ, ವಿಷ್ಣು ಜೋಗಿಯಾಗಿ ಸುಳಿದ, ರುದ್ರ ಶ್ರವಣನಾಗಿ ಸುಳಿದ, ಈಶ್ವರ ಸನ್ಯಾಸಿಯಾಗಿ ಸುಳಿದ, ಸದಾಶಿವ ಯೋಗಿಯಾಗಿ ಸುಳಿದ, ಪರಮೇಶ್ವರ ಕಾಳಾಮುಖಿಯಾಗಿ ಸುಳಿದ. ಬ್ರಹ್ಮಂಗೆ ಕಾವಿ ಬಿಳಿದು, ವಿಷ್ಣುವಿಂಗೆ ಪೀತಸಕಲಾತಿ, ರುದ್ರಂಗೆ ಕಾಗು ಕಂಬಳಿ, ಈಶ್ವರಂಗೆ ಮೃಗಾಜಿನ ಕಾವಿಕಪ್ಪಡ, ಸದಾಶಿವಂಗೆ ಪುಲಿಚರ್ಮ ರತ್ನಗಂಬಳಿ, ಪರಮೇಶ್ವರಂಗೆ ಮೇಕೆಚರ್ಮ ಸಿತಕಪ್ಪಡ. ಬ್ರಹ್ಮ ಸ್ಥೂಲನೆಂದು, ವಿಷ್ಣು ಸೂಕ್ಷ್ಮನೆಂದು, ರುದ್ರ ಕಾರಣನೆಂದು, ಈಶ್ವರ ಸಕಲನೆಂದು, ಸದಾಶಿವ ನಿಃಕಲನೆಂದು, ಪರಮೇಶ್ವರ ಶೂನ್ಯನೆಂದು. ಬ್ರಹ್ಮಂಗೆ `ನ'ಕಾರ, ವಿಷ್ಣುವಿಂಗೆ `ಮ'ಕಾರ, ರುದ್ರಂಗೆ `ಶಿ'ಕಾರ, ಈಶ್ವರಂಗೆ `ವ'ಕಾರ, ಸದಾಶಿವಂಗೆ `ಯ'ಕಾರ, ಪರಮೇಶ್ವರಂಗೆ `ಓಂ' ಕಾರ. ಬ್ರಹ್ಮಂಗೆ ಭಕ್ತಸ್ಥಲ, ವಿಷ್ಣುವಿಂಗೆ ಮಹೇಶ್ವರಸ್ಥಲ, ರುದ್ರಂಗೆ ಪ್ರಸಾದಿಸ್ಥಲ, ಈಶ್ವರಂಗೆ ಪ್ರಾಣಲಿಂಗಿಸ್ಥಲ, ಸದಾಶಿವಂಗೆ ಶರಣಸ್ಥಲ, ಪರಮೇಶ್ವರಂಗೆ ಐಕ್ಯಸ್ಥಲ. ಇಂತಪ್ಪ ಶೈವಲಿಂಗದ ಭಕ್ತಿಯು, ಷಡುಸ್ಥಲದ ಸುಳುಹಿನೊಳಗಲ್ಲ. ರೇವಣಸಿದ್ಧಯ್ಯದೇವರು ಸಾಕ್ಷಿಯಾಗಿ ಪ್ರಭುದೇವರ ವಿರಶೈವ ಲಿಂಗ ಜಂಗಮದ ಷಡುಸ್ಥಲ ಸುಳುಹು ಆ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಕಾಣಾ, ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ ! ಅದೆಂತೆಂದಡೆ : ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿಗೆ ಬ್ರಹ್ಮನಧಿದೇವತೆ, ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ ! ಸ್ವಾದಿಷಾ*ನ ಚಕ್ರ ಅಪ್ಪುವಿನ ಸಂಬಂಧ, ಅಲ್ಲಿಗೆ ವಿಷ್ಣು ಅಧಿದೇವತೆ, ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ ! ಮಣಿಪೂರಕಚಕ್ರ ಅಗ್ನಿಯ ಸಂಬಂಧ, ಅಲ್ಲಿಗೆ ರುದ್ರನಧಿದೇವತೆ, ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ ! ಅನಾಹತಚಕ್ರ ವಾಯು ಸಂಬಂಧ, ಅಲ್ಲಿಗೆ ಈಶ್ವರನಧಿದೇವತೆ, ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ ! ವಿಶುದ್ಧಿಚಕ್ರ ಆಕಾಶ ಸಂಬಂಧ, ಅಲ್ಲಿಗೆ ಸದಾಶಿವನಧಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ ! ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನಧಿದೇವತೆ, ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ ! ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ ! ಆ ಲಿಂಗ ನಿಮಗೆಂತಪ್ಪವು ? ಇದು ಕಾರಣ, ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
-->