ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಜ್ಞಾನಾತ್ಮನ ಚೇತನನಯ್ಯ ಪ್ರಭುದೇವರು. ಎನ್ನ ಪರಮಾತ್ಮನ ಚೇತನನಯ್ಯ ಸಿದ್ಧರಾಮೇಶ್ವರದೇವರು. ಎನ್ನ ಚಿನ್ಮಯಾತ್ಮನ ಚೇತನನಯ್ಯ ಬಸವಣ್ಣನು. ಎನ್ನ ನಿರ್ಮಲಾತ್ಮನ ಚೇತನನಯ್ಯ ಷಟ್ಸ್ಥಲಬ್ರಹ್ಮಿ ಚೆನ್ನಬಸವಣ್ಣನು. ಎನ್ನ ಮಹಾತ್ಮನ ಚೇತನನಯ್ಯ ಸಂಗನಬಸವಣ್ಣನ ನಿಜಸುಖಿ ಅಪ್ಪಣ್ಣನು. ಎನ್ನ ಜೀವಾತ್ಮನ ಚೇತನನಯ್ಯ ಮಡಿವಾಳ ಮಾಚಯ್ಯನು. ಎನ್ನ ಅಂತರಾತ್ಮನ ಚೇತನನಯ್ಯ ಸೊಡ್ಡಳ ಬಾಚರಸರು. ಎನ್ನ ಅರಿವಿನ ಚೇತನಾತ್ಮಕನಯ್ಯ ಕಿನ್ನರ ಬೊಮ್ಮಯ್ಯನು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣರ ಕರುಣವ ಪಡೆದೆನಾಗಿ, ಎನ್ನ ಕರ್ಮ ನಿರ್ಮೂಲವಾಯಿತ್ತಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಶಿವಾಂಶಿಕಭಕ್ತನ ಸೊಮ್ಮು ಶಿವಜಂಗಮರಿಗೆ ಸಲ್ಲುವುದಲ್ಲದೆ, ಶಿವ ಬಸವೆಯರೆಂಬ ವಾರಾಂಗನೆಯರಿಗೆ ಸಲ್ಲುವುದೆ, ಅಯ್ಯಾ? ಡಾಂಭಿಕ ಭಕ್ತನ ಸೊಮ್ಮು ಡಾಂಭಿಕಯ್ಯಗಳಿಗೆ ಸಲ್ಲುವುದಲ್ಲದೆ. ಡಂಭವಿರಹಿತಂಗೆ ಸಲ್ಲುವುದೆ, ಅಯ್ಯಾ? ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಷಟ್‍ಸ್ಥಲಬ್ರಹ್ಮಿ ಚೆನ್ನಬಸವನ ಜಿಹ್ವಾಶೇಷದ ಸೊಮ್ಮು ಎನಗೆ ಸಲ್ಲುವುದಲ್ಲದೆ, ಜಗದ ಭಂಡಯ್ಯಗಳಿಗೆ ಸಲ್ಲುವುದೇನಯ್ಯಾ?
--------------
ಸಿದ್ಧರಾಮೇಶ್ವರ
ಪೃಥ್ವಿಯ ಗುಣವುಳ್ಳಡೆ ಭಕ್ತ. ಅಪ್ಪುವಿನ ಗುಣವುಳ್ಳಡೆ ಮಾಹೇಶ್ವರ. ಅಗ್ನಿಯ ಗುಣವುಳ್ಳಡೆ ಪ್ರಸಾದಿ. ವಾಯುವಿನ ಗುಣವುಳ್ಳಡೆ ಶರಣ. ಆತ್ಮನ ಗುಣವುಳ್ಳಡೆ ಐಕ್ಯ. ಇಂತೀ ಕ್ಷಮೆದಮೆಶಾಂತಿಸೈರಣೆಯುಳ್ಳಾತನೆ ಷಟ್ಸ್ಥಲಬ್ರಹ್ಮಿ. ಇದು ಕಾರಣ, ಗುರುಲಿಂಗದಲ್ಲಿ ವಿಶ್ವಾಸ, ಚರಲಿಂಗದಲ್ಲಿ ಸದ್ಭಕ್ತಿಯುಳ್ಳಾತನೆ ಭಕ್ತ ಮಾಹೇಶ್ವರ. ಪರಬ್ರಹ್ಮದಲ್ಲಿ ಪರಿಣಾಮವುಳ್ಳಾತನೆ ಪ್ರಸಾದಿ. ತನ್ನ ತಾನರಿದು, ಇದಿರ ಮರೆದಾತನೆ ಪ್ರಾಣಲಿಂಗಿ. ಅನುಪಮಜ್ಞಾನದಿಂದ ತನ್ನ ನಿಜಸ್ವರೂಪವ ತಿಳಿಯಬಲ್ಲಾತನೆ ಶರಣ. ಪಿಂಡಬ್ರಹ್ಮಾಂಡವನೊಳಕೊಂಡು ಚಿದಾನಂದಬ್ರಹ್ಮದಲ್ಲಿ ಕೂಡಬಲ್ಲಾತನೆ ಐಕ್ಯ. ಇಂತಪ್ಪ ವರ್ಮಾದಿ ವರ್ಮವನರಿಯದ ಅದ್ವೈತಿಗಳೆಲ್ಲ, ಭವಕ್ಕೆ ಬೀಜರಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ ತನ್ನಯ ಉಭಯದ ಗುರುವ ತಿಂದು ತೇಗಬೇಕು. ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು. ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು, ಆ ಶಿಷ್ಯ, ಆ ಲಿಂಗ, ಆ ಭಕ್ತನ, ಈ ಜಂಗಮ, ಈ ವಿರಕ್ತನ ಕೊಂದು ತಿಂದು ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ. ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ. ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ ವಿನಾಶವಾದ ನಿರ್ಲೇಪ
--------------
ಅವಸರದ ರೇಕಣ್ಣ
ಗುರುವೆಂಬವನೇ ಹೊಲೆಯ. ಲಿಂಗಾಂಗಿ ಎಂಬವನೇ ಮಾದಿಗ. ಜಂಗಮವೆಂಬವನೇ ಸಮಗಾರ. ಈ ಮೂವರೊಳಗೆ ಹೊಕ್ಕು ಬಳಕೆಯ ಮಾಡಿದಾತನೇ ಭಕ್ತ. ಆ ಭಕ್ತನೆಂಬುವನೇ ಡೋರ. ಇಂತೀ ಚತುರ್ವಿಧ ಭೇದವ ತಿಳಿದು, ಪಾದೋದಕ ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮವೆಂಬೆ. ಈ ನಿರ್ಣಯವ ತಿಳಿದು ಪಾದೋದಕ ಪ್ರಸಾದ ಕೊಳ್ಳಬಲ್ಲರೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣೈಕ್ಯರೆಂಬ ಷಟ್‍ಸ್ಥಲಬ್ರಹ್ಮಿ ಎಂಬೆ. ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ. ಇಂತೀ ಕ್ರಮವರಿತು ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಮೋಕ್ಷವಾಗುವುದಕ್ಕೆ ತಡವಿಲ್ಲವಯ್ಯ. ಈ ಭೇದವ ತಿಳಿಯದೆ ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸಿರೆಂದು, ಕರುಣಿಸಿರೆಂದು ಕೃಪೆ ಮಾಡಿ ಭೂತದೇಹಿಗಳೆದುರಿಗೆ ಪಾತಕಮನುಜರು ಅಡ್ಡಡ್ಡ ಬಿದ್ದು ಎದಿ ವಡ್ಡುಗಟ್ಟಿ ಮೊಳಕಾಲು ಗೂಡುಗಟ್ಟಿ ಹಣೆ ಬುಗುಟಿ ಎದ್ದು ಈ ಪರಿಯಲ್ಲಿ ಅಯ್ಯಾ ಪ್ರಸಾದ ಪಾಲಿಸೆಂದು ಪಡಕೊಂಡು ಲಿಂಗಕ್ಕೆ ತೋರಿ ತೋರಿ ತಮ್ಮ ಉದರಾಗ್ನಿ ಅಡಗಿಸಿಕೊಂಡು, ಕಡೆಯಲ್ಲಿ ಎಣ್ಣೆಯ ನಾತಕ್ಕೆ ಅಲಗ ನೆಕ್ಕುವ ಶ್ವಾನನ ಹಾಗೆ ತಮ್ಮ ನಾಲಿಗಿಯಲಿ ತಳಗಿ ತಾಬಾಣವ ನೆಕ್ಕಿ ನೆಕ್ಕಿ, ಆ ತಳಗಿ ತಾಬಾಣ ಸವೆದು ಸಣ್ಣಾಗಿ ಹೋದವಲ್ಲದೆ, ಇಂತಪ್ಪ ಮತಿಭ್ರಷ್ಟ ಹೊಲೆಯ ಮಾದಿಗರಿಗೆ ಪರಶಿವನ ಮಹಾಪ್ರಸಾದ ಸಾಧ್ಯವೇ? ಸಾಧ್ಯವಲ್ಲ. ಮುಂದೆ ಎಂಬತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ತಿರುಗಿ ತಿರುಗಿ ಭವದತ್ತ ಮುಖವಾಗಿ ನರಕವನೆ ಭುಂಜಿಸುವದು ಉಂಟೆಂದ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->