ಅಥವಾ

ಒಟ್ಟು 30 ಕಡೆಗಳಲ್ಲಿ , 13 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಥಲಂಗಳ ಭೇದ ವಿವರ: ವೇಣು ವೀಣೆ ಮೌರಿ ವಾದ್ಯಂಗಳಲ್ಲಿ ವಾಯು ಅಂಗುಲಿಯ ಭೇದದಿಂದ ರಚನೆಗಳ ತೋರುವಂತೆ ಘಟದ ಸ್ಥೂಲ ಸೂಕ್ಷ್ಮಂಗಳಲ್ಲಿ ತ್ರಾಣ ತತ್ರಾಣವಾದಂತೆ ಅದು ಭಾವಜ್ಞಾನ ಷಟ್‍ಸ್ಥಲ ಕ್ರಿಯಾಭೇದದ ವಾಸ. ಇಂತೀ ಉಭಯದೃಷ್ಟ ನಾಶವಹನ್ನಕ್ಕ ಐಕ್ಯಲೇಪನಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ. ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ. ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ. ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ. ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ. ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು ಕೂಡಬೇಕೆಂಬನ್ನಕ್ಕ ಐಕ್ಯ. ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲ. ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು ಐಕ್ಯಸ್ಥಲಲೇಪಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ ಸ್ವತಂತ್ರ ಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ. ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ. ಅಂಗಲಿಂಗಗಳ ಸಂಯೋಗವ ತೋರಿ, ಅಖಂಡ ಪರಶಿಲಿಂಗೈಕ್ಯವನುಂಟುಮಾಡಿ ಕೊಡುವ ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ. ಇದಕ್ಕೆ ಶಿವರಹಸ್ಯೇ ; 'ಯದ್ಭಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ ೀ ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ || ಯತ್ಪ್ರಸಾದಾಭಿದಂ ಸ್ಥಾನಂ ತದ್ಬೋಧೋ ನಿರಂಕುಶಃ ೀ ಯತ್ಪ್ರಣಲಿಂಗಕಂ ನಾಮ ತತ್ಸ್ವಾತಂತ್ರೈಮುದಾಹೃತಂ || ಯದಸ್ತಿ ಶರಣಂ ನಾಮ ಹ್ಯಲುಪ್ತಾ ಶಕ್ತಿರುಚ್ಯತೇ ೀ ಯದೈಕ್ಯಸ್ಥಾನಮೂರ್ಧಸ್ಥಾ ಹ್ಯನಂತಾಶಕ್ತಿರುಚ್ಯತೇ ||ú ಎಂದುದಾಗಿ, ಇಂತಪ್ಪ ಷಟ್‍ಸ್ಥಲಗಳಲ್ಲಿ ಷಡ್ವಿಧ ಶಕ್ತಿಗಳ ಸ್ಥಳಕುಳಂಗಳ ತಿಳಿದು, ಷಡ್ವಿಧ ಲಿಂಗಗಳಲ್ಲಿ ಧ್ಯಾನ ಪೂಜಾದಿಗಳಿಂದ ಅಂಗಗೊಂಡು ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‍ಸ್ಥಲಬ್ರಹ್ಮಿಗಳಾಗರು. ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆ ಕಣ್ಗಾಣದೆ ಹೊರಿಸುತ್ತ ಪರದಾರ ದಾಶಿ ವೇಶಿ ಸೂಳೆಯರ ಕೂಡಿ ಭುಂಜಿಸಿ ತೊಂಬಲತಿಂಬ ಹೇಸಿ ಮೂಳರು ಪೋತರಾಜ, ಜೋಗಿ, ಕ್ಷಪಣರಂತೆ ಜಟಾ, ತುರುಬು, ಬೋಳುಮುಂಡೆಗೊಂಡು ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ ವಿರಕ್ತ ಷಟ್‍ಸ್ಥಲಬ್ರಹ್ಮಿಗಳೆನಬಹುದೇನಯ್ಯ ? ಅಂತಪ್ಪ ಅನಾದಿ ಷಟ್‍ಸ್ಥಲಬ್ರಹ್ಮದ ಷಡ್ವಿಧಶಕ್ತಿಯನರಿದು ವಿರಕ್ತ ಜಂಗಮ ಷಟ್‍ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ ಭೃಂಗ ಕೀಡಿಯೋಪಾದಿಯಲ್ಲಿ ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಬ್ಥಿನ್ನಭೇದವನಳಿದು ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ, ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು, ಶರಣೆಂದು ಮನ್ನಣೆಯ ಕೊಡದೆ, ಭೂತಸೋಂಕಿದ ಮನುಜನೋಪಾದಿಯಲ್ಲಿ ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ, ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠದೀಕ್ಷೆ. ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಷಟ್‍ಸ್ಥಲ ಮುಂತಾದ ಪಂಚವಿಂಶತಿತತ್ವ, ಏಕೋತ್ತರಶತಸ್ಥಲ ಮುಂತಾದ ಕ್ರಿಯಾಧರ್ಮಂಗಳಲ್ಲಿ ಆಚರಿಸುವುದು ಪೂರ್ವಕಕ್ಷೆಯ ಭೇದ. ಉತ್ತರಕಕ್ಷೆಯಲ್ಲಿ ಲಕ್ಷಿಸಿ ನೋಡಿಹೆನೆಂದಡೆ, ದ್ವೈತಾದ್ವೈತಂಗಳ ತಿಳಿದು, ಸಕಲ ನಿಃಕಲವ ವಿಚಾರಿಸಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳ ಕಂಡು, ಇಷ್ಟಕಾಮ್ಯಮೋಕ್ಷಂಗಳ ಗೊತ್ತಗೆಟ್ಟು ತೂರ್ಯಾತುರೀಯವೆಂಬವ ಪರಿಹರಿಸಿ, ತೀತ ಅತೀತವಪ್ಪುದನು ಕುರುಹಿಟ್ಟು, ಸುರಾಳ ನಿರಾಳ ನಿರವಯಸ್ಥಾನವ ಭೇದಿಸಿ ವೇದಿಸಿ, ಘೃತಪಾನವ ಸ್ವೀಕರಿಸಿದ ನಾಲಗೆಯಂತೆ ಬಂಧವಿಲ್ಲದೆ ತತ್ವಮಸಿಯೆಂಬ ಬ್ಥಿತ್ತಿಯ ಮೆಟ್ಟದೆ ಜಲವ ಹೊಯಿದಡೆ ಆ ಜಲಕ್ಕೆ ಆಯುಧದ ಕಲೆದೋರದಂತೆ ನಿಂದ ನಿಜದೊಳಗು ಉತ್ತರಕಕ್ಷೆಯ ಭೇದ. ಇಂತೀ ಉಭಯಕಕ್ಷೆಯಲ್ಲಿ ರಾಗವಿರಾಗವನರಿದು, ನಿಶ್ಶಬ್ದ ನಿರ್ಲೇಪವಾಗಿ ಸದ್ಯೋಜಾತಲಿಂಗವ ಕೊಡಬೇಕು.
--------------
ಅವಸರದ ರೇಕಣ್ಣ
ಅಯ್ಯ, ವರಕುಮಾರದೇಶಿಕೇಂದ್ರನೆ ಕೇಳಾ, ಚಿದ್ಘನಶರಣ ಪ್ರಸಾದಲಿಂಗವಾಗಿ ನಿಂದ ನಿಜಾಚರಣೆಯ ನಿಲುಕಡೆಯ, ಕಲ್ಯಾಣಪಟ್ಟಣದ ಅನುಭಾವ ಮಂಟಪದ ಶೂನ್ಯಸಿಂಹಾಸನದಲ್ಲಿ, ಬಸವ, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ ಮೊದಲಾದ ಸಕಲಮಹಾಪ್ರಮಥಗಣಂಗಳೆಲ್ಲ ಮಹಾಪ್ರಭುಸ್ವಾಮಿಗಳಿಗೆ ಅಬ್ಥಿವಂದಿಸಿ ಹಸ್ತಾಂಜಲಿತರಾಗಿ ಎಲೆ ಮಹಾಪ್ರಭುವೆ ನಿನ್ನ ಅನಾದಿ ಷಟ್ಸ್ಥಲ ನಿರಭಾರಿವೀರಶೈವಶರಣನ ನಿಜಾಚರಣೆಯ ನಿಲುಕಡೆಯ ದಯವಿಟ್ಟು ಕರುಣಿಸಬೇಕಯ್ಯ ಮಹಾಗುರುವೆ ಎಂದು ಬೆಸಗೊಂಡಲ್ಲಿ ಆಗ ಮಹಾಪ್ರಭುವು ಲಿಂಗಾಂಗಕ್ಕೆ ಬ್ಥಿನ್ನವಿಲ್ಲದೆ ಹಸ್ತಮಸ್ತಕಸಂಯೋಗವ ಮಾಡಿ, ವೇಧಾ-ಮಂತ್ರ-ಕ್ರಿಯಾದೀಕ್ಷೆಯನಿತ್ತು. ಇಪ್ಪತ್ತೊಂದು ತೆರದ ವಿಚಾರವನರುಪಿ, ನೂರೊಂದುಸ್ಥಲದಾಚರಣೆಯ, ಇನ್ನೂರಹದಿನಾರು ಸ್ಥಲದ ಸಂಬಂಧವ ತೋರಿ, ಸರ್ವಾಚಾರ ಸಂಪತ್ತಿನಾವರಣದ ಸ್ವಸ್ವರೂಪು ನಿಲುಕಡೆಯ ತೋರಿಸಿ, ಸಾಕಾರನಿರಾಕಾರದ ನಿಜದ ನಿಲುಕಡೆಯನರುಪಿ, ನಿಜಶಿವಯೋಗದ ನಿರ್ಣಯದ ಕರಿಣಿಸಿ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ ತಾವೆಂದರುಪಿದ ನೋಡ. ಇಂತು ಚೆನ್ನಬಸವೇಶ್ವರಸ್ವಾಮಿಗಳು ಬೆಸಗೊಂಡು ತಮ್ಮ ಚಿದಂಗಸ್ವರೂಪರಾದ ಚಿದ್ಘನರಶರಣ ನಿರ್ಲಜ್ಜಶಾಂತಯ್ಯನೆಂಬ ಶಿವಶರಣನ ಮುಖದಲ್ಲಿ ಮೋಳಿಗಯ್ಯ ಮೊದಲಾದ ಸಕಲಪ್ರಮಥರ್ಗೆ ಬೋದ್ಥಿಸಿದರು ನೋಡ. ಅದೇ ಪ್ರಸಾದವನ್ನೆ ನಿರ್ಲಜ್ಜಶಾಂತಯ್ಯನೆಂಬ ದೇಶಿಕೇದ್ರನು ಚಂಗಣಗಿಲಮಂಟಪದ ರೇವಣಸಿದ್ದೇಶ್ವರಂಗೆ ಬೋದ್ಥಿಸಿದರು ನೋಡ. ಅದೇ ಪ್ರಸಾದವನ್ನೆ ರೇವಣಸಿದ್ದೇಶ್ವರನೆಂಬ ದೇಶಿಕೇಂದ್ರನು ಜ್ಞಾನೋದಯರಾಗಿ ತಮ್ಮಡಿಗೆರಗಿ ಬಂದ ಶಿಷ್ಯೋತ್ತಮ ಶಿವಶರಣರ್ಗೆ ಸ್ವಾನುಭಾವಸೂತ್ರವ ಬೋದ್ಥಿಸುತ್ತಿರ್ದರು ನೋಡ. ಅದೇ ಮಹಾಪ್ರಸಾದವ ನಿನ್ನ ಶ್ರೋತ್ರಮುಖದಲ್ಲಿ ಮಹಾಮಂತ್ರಮೂರ್ತಿಯಾಗಿ ನೆಲೆಗೊಂಡಿರ್ಪ ಪ್ರಸಾದಲಿಂಗಮುಖದಲ್ಲಿ ಅರುಹಿಸಿ ಕೊಟ್ಟೇವು ಕೇಳಿ, ಮಹಾಲಿಂಗಮುಖದಲ್ಲಿ ಸಂತೃಪ್ತನಾಗಿ, ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿ, ಎನ್ನ ಜ್ಞಾನಮಂಟಪದಲ್ಲಿ ಮೂರ್ತಿಗೊಂಡಿರುವ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಭಕ್ತಸ್ಥಲ ಘಟರೂಪು, ಮಾಹೇಶ್ವರಸ್ಥಲ ಆತ್ಮರೂಪು, ಪ್ರಸಾದಿಸ್ಥಲ ಜ್ಞಾನರೂಪು, ಇಂತೀ ತ್ರಿವಿಧಸ್ಥಲ ಭಕ್ತಿರೂಪು. ಪ್ರಾಣಲಿಂಗಿಸ್ಥಲ ಜ್ಞಾತೃರೂಪು, ಶರಣಸ್ಥಲ ಜ್ಞೇಯರೂಪು, ಐಕ್ಯಸ್ಥಲ ಸರ್ವಮಯಜ್ಞಾನರೂಪು. ಇಂತೀ ತ್ರಿವಿಧಸ್ಥಲ ಏಕವಾಗಿ ನಿಂದುದು ಕರ್ತೃಸ್ವರೂಪು. ಇಂತೀ ಷಟ್ಸ್ಥಲ ಉಭಯವಾಗಿ ಕಾಯದಲ್ಲಿ ಆತ್ಮ ಘಟಿಸಿಪ್ಪಂತೆ, ಆತ್ಮನ ಚೇತನದಿಂದ ಘಟ ಅನುಭವಿಸುವಂತೆ, ಇಂತೀ ದ್ವಂದ್ವವೊಂದಾಗಿ ನಿಂದರಿದಲ್ಲಿ ಷಟ್ಸ್ಥಲ ಆರೋಪ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು. ಆ ಪಂಚಮಹಾಪಾತಕರ ಮುಖವ ನೋಡಲಾಗದು. ಅದೆಂತೆಂದೊಡೆ : ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ. ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ, ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ ! ಅಷ್ಟಾವರಣ ಪಂಚಾಚಾರವು ಅಂದೊಂದು ಪರಿ ಇಂದೊಂದು ಪರಿಯೇ ? ಷಟ್‍ಸ್ಥಲ ಸ್ವಾನುಭಾವವು ಅಂದೊಂದು ಪರಿ ಇಂದೊಂದು ಪರಿಯೇ ? ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ ಅಂದೊಂದು ಪರಿ ಇಂದೊಂದು ಪರಿಯೇ ? ನಡೆನುಡಿ ಸಿದ್ಧಾಂತವಾದ ಶರಣರ ಘನವು ಅಂದೊಂದು ಪರಿ ಇಂದೊಂದು ಪರಿಯೇ ? ಇಂತೀ ವಿಚಾರವನರಿಯದೆ ಪರಸಮಯವನಾದಡೂ ಆಗಲಿ, ಶಿವಸಮಯವನಾದಡೂ ಆಗಲಿ, ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಇನ್ನೊಂದು ಪ್ರಕಾರದ ಲಿಂಗೋತ್ಪತ್ಯವದೆಂತೆಂದಡೆ : ಮಹಾಲಿಂಗದಲ್ಲಿ ಪ್ರಸಾದಲಿಂಗ ಹುಟ್ಟಿತ್ತು. ಆ ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು. ಆ ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು. ಆ ಶಿವಲಿಂಗದಲ್ಲಿ ಗುರುಲಿಂಗ ಹುಟ್ಟಿತ್ತು. ಆ ಗುರುಲಿಂಗದಲ್ಲಿ ಆಚಾರಲಿಂಗ ಹುಟ್ಟಿತ್ತು. ಈ ಆರು ಲಿಂಗವು ಒಂದೇ ಲಿಂಗ ನೋಡಾ. ಇದಕ್ಕೆ ಈಶ್ವರ್ದೋವಾಚ : ``ಮಹಾಲಿಂಗ ಸಮಾಖ್ಯಾತಂ ಪ್ರಸಾದಂ ಲಿಂಗಮುದ್ಭವಂ | ತತಃ ಪ್ರಸಾದಲಿಂಗೇ ಚ ಜಂಗಮಂ ಲಿಂಗಮುದ್ಭವಂ || ತಥಾ ಜಂಗಮಲಿಂಗಂ ಚ ಶಿವಲಿಂಗ ಸಮುದ್ಭವಂ | ಶಿವಲಿಂಗ ಯಥಾಚೈವ ಗುರುಲಿಂಗಸಮುದ್ಭವಂ | ಷಟ್ಸ್ಥಲಂ ಚ ಪರಿಜ್ಞೇಯಂ ಏಕೀಭಾವಂ ವಿಶೇಷತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು, ಪ್ರಾಣಲಿಂಗಿಸ್ಥಲವಾರು, ಶರಣಸ್ಥಲವಾರು, ಐಕ್ಯನ ಐಕ್ಯ ಆರೆಂಬಲ್ಲಿ, ನೇತಿಗಳೆದು ಸ್ಥಲನಿಂದ ಮತ್ತೆ ಐಕ್ಯನ ಆರುಕೂಟವಾವುದಯ್ಯಾ ? ಅದು ದರ್ಪಣದ ಭಾವದೊಪ್ಪ. ಅದು ಭಾಗೀರಥಿಯ ಅಪ್ಪುವಿನ ಭೇದ. ಇದು ಆರ ಭಾವಕ್ಕೂ ತಪ್ಪದ ಸ್ಥಲ. ಸಂದೇಹವುಳ್ಳನ್ನಕ್ಕ ಷಟ್ಸ್ಥಲ, ಸಂದೇಹ ನಿಂದು ಒಂದೆಂದಲ್ಲಿ ಏಕಸ್ಥಲ. ಏಕಸ್ಥಲ ಪ್ರತಿರೂಪಾಗಿ ಕರ್ತೃಭೃತ್ಯನೆಂಬ ಉಭಯರೂಪಾಯಿತ್ತು. ಉಭಯದ ರೂಪಿಂದ ಹಲವುಸ್ಥಲ ಒಲವರವಾಯಿತ್ತು. ಆ ಹೊಲಬ ತಿಳಿದು, ಸಲೆ ವಸ್ತು ಒಂದೆಂದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆಂಬ ಕುರುಹಡಗಿದಲ್ಲಿ.
--------------
ಮೋಳಿಗೆ ಮಾರಯ್ಯ
ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ, ನಿಂದ ನಿಲವನರಿದು ಭಕ್ತ, ಗುರುಪ್ರಸನ್ನವಿಡಿದು ಮಾಹೇಶ್ವರ, ಲಿಂಗಪೂಜೆಯವಿಡಿದು ಪ್ರಸಾದಿ, ಸ್ವಾನುಭಾವ ವಿವೇಕವಿಡಿದು ಪ್ರಾಣಲಿಂಗಿ, ಸ್ವಯಾನಂದವಿಡಿದು ಶರಣ,_ ಸೋಹಂ ಬ್ರಹ್ಮಾಸ್ಮಿನ್ನೆಂದು ಲಿಂಗೈಕ್ಯ. ಇಂತೀ ಷಟ್ಸ್ಥಲ ಸಂಪನ್ನನಾಗಿ, ನಿಂದ ನಿಲವ ನೀ ಬಲ್ಲೆಯಲ್ಲದೆ ಲೋಕದ ಸಂದೇಹಿಮಾನವರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಂದ್ರಿಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ಬ್ರಹ್ಮನುತ್ಪತ್ಯಕ್ಕೆ ಹೊರಗಾಗಿ ಶ್ರೀಗುರುವಿನಿಂದ ಸರ್ವಾಂಗವೆಲ್ಲ ಶುದ್ಧಪ್ರಸಾದವಾಗುವುದಯ್ಯ. ಸಮಸ್ತವಿಷಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ವಿಷ್ಣುವಿನ ಸ್ಥಿತಿಗೆ ಹೊರಗಾಗಿ ಚಿದ್ಘನಮಹಾಲಿಂಗದಿಂದ ಸರ್ವಾಂಗವೆಲ್ಲ ಸಿದ್ಧಪ್ರಸಾದವಾಗುವುದಯ್ಯ. ಸಮಸ್ತಕರಣಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ರುದ್ರನ ಲಯಕ್ಕೆ ಹೊರಗಾಗಿ ನಿರಾಲಂಬ ನಿಷ್ಕಳಂಕ ಜಂಗಮದಿಂದ ಸರ್ವಾಂಗೆಲ್ಲ ಪ್ರಸಿದ್ಧ ಪ್ರಸಾದವಾಗುವುದಯ್ಯ. ಇಂತು ಇಂದ್ರಿಯ ವಿಷಯ ಕರಣಗುಣಧರ್ಮಗಳಳಿದು, ಲಿಂಗೇಂದ್ರಿಯ ವಿಷಯ ಕರಣಂಗಳಾಗಿ ಬ್ರಹ್ಮನುತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೆ ಹೊರಗಾದಲ್ಲದೆ ಮಹಾಪ್ರಸಾದಿಸ್ಥಲದೊಳಗಣ ಷಟ್ಸ್ಥಲ ದೊತೆಯದು ನೋಡ ಸಂಗನಬಸವೇಶ್ವರ. !
--------------
ಗುರುಸಿದ್ಧದೇವರು
ಎನ್ನ ತನುವೆ ಶ್ರೀಗುರುಸ್ಥಾನವಯ್ಯ, ಎನ್ನ ಮನವೆ ಲಿಂಗಸ್ಥಾನವಯ್ಯ, ಎನ್ನ ಆತ್ಮವೆ ಜಂಗಮಸ್ಥಾನವಯ್ಯ, ಎನ್ನ ಪ್ರಾಣವೆ ಪ್ರಸಾದಸ್ಥಾನವಯ್ಯ, ಎನ್ನ ಭಾವವೇ ಪಾದೋದಕಸ್ಥಾನವಯ್ಯ, ಎನ್ನ ಲಲಾಟವೇ ವಿಭೂತಿಸ್ಥಾನವಯ್ಯ, ಎನ್ನ ಗಳವೇ ರುದ್ರಾಕ್ಷಿಸ್ಥಾನವಯ್ಯ, ಎನ್ನ ಜಿಹ್ವೆಯೇ ಶಿವಮಂತ್ರಸ್ಥಾನವಯ್ಯ, ಎನ್ನ ಕಂಗಳೇ ಲಿಂಗಾಚಾರಸ್ಥಾನವಯ್ಯ, ಎನ್ನ ಶ್ರೋತ್ರವೇ ಶಿವಾಚಾರಸ್ಥಾನವಯ್ಯ, ಎನ್ನ ವಾಕ್ಯವೇ ಭೃತ್ಯಾಚಾರಸ್ಥಾನವಯ್ಯ, ಎನ್ನ ಹಸ್ತವೇ ಗಣಾಚಾರಸ್ಥಾನವಯ್ಯ, ಎನ್ನ ಚರಣವೇ ಸದಾಚಾರಸ್ಥಾನವಯ್ಯ, ಎನ್ನ ಷಡ್‍ಭೂತಂಗಳೇ ಷಟ್‍ಸ್ಥಲಸ್ಥಾನಂಗಳಯ್ಯ, ಎನ್ನ ಸುಜ್ಞಾನವೇ ಶಿವಾನುಭಾವಸ್ಥಾನವಯ್ಯ. ಇಂತೀ ಅಷ್ಟಾವರಣ ಪಂಚಾಚಾರ ಷಟ್‍ಸ್ಥಲ ಶಿವಾನುಭಾವವನೊಳಕೊಂಡ ಎನ್ನ ಚಿದಂಗವೇ ಮಹಾ ಕೈಲಾಸವಯ್ಯ ನಿಮಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರು ಮುನ್ನವೋ ಶಿಷ್ಯ ಮುನ್ನವೋ ಲಿಂಗ ಮುನ್ನವೋ ಶರಣ ಮುನ್ನವೋ ಜಂಗಮ ಮುನ್ನವೋ ಭಕ್ತ ಮುನ್ನವೋ ಪಾದೋದಕ-ಪ್ರಸಾದ ಮುನ್ನವೋ ವಿಭೂತಿ-ರುದ್ರಾಕ್ಷಿ ಮುನ್ನವೋ ಮಂತ್ರ ಮುನ್ನವೋ ಶಿವಾಚಾರ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಗುರುವೆಂಬೆ. ಭೂಮಿ ಮುನ್ನವೋ ಆಕಾಶ ಮುನ್ನವೋ ಅಗ್ನಿ ಮುನ್ನವೋ ವಾಯು ಮುನ್ನವೋ ಚಂದ್ರ ಮುನ್ನವೋ ಸೂರ್ಯ ಮುನ್ನವೋ ಜ್ಯೋತಿ ಮುನ್ನವೋ ಕಾಳಗತ್ತಲೆ ಮುನ್ನವೋ ಸಮುದ್ರ ಮುನ್ನವೋ ಆತ್ಮ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಲಿಂಗವೆಂಬೆ. ಹೆಣ್ಣು ಮುನ್ನವೋ ಗಂಡು ಮುನ್ನವೋ, ಗರ್ಭ ಮುನ್ನವೋ ಶಿಶು ಮುನ್ನವೋ ತಾಯಿ ಮುನ್ನವೋ ತಂದೆ ಮುನ್ನವೋ ಜ್ಞಾನ ಮುನ್ನವೋ ಅಜ್ಞಾನ ಮುನ್ನವೋ ಗಂಧ ಮುನ್ನವೋ ಘ್ರಾಣ ಮುನ್ನವೋ ರುಚಿ ಮುನ್ನವೋ ಜಿಹ್ವೆ ಮುನ್ನವೋ ನೋಟ ಮನ್ನವೋ ರೂಪ ಮುನ್ನವೋ ಶ್ರೋತ್ರ ಮುನ್ನವೋ ಶಬ್ದ ಮುನ್ನವೋ ತ್ವಕ್ ಮುನ್ನವೋ, ಮೃದು ಕಠಿಣ ಮೊದಲಾದ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಜಂಗಮವೆಂಬೆ. ಅರಿವು ಮುನ್ನವೋ ಮರೆವು ಮುನ್ನವೋ ಆಚಾರ ಮುನ್ನವೋ ಅನಾಚಾರ ಮುನ್ನವೋ ಬ್ರಹ್ಮಾಂಡ ಮುನ್ನವೋ ಪಿಂಡಾಂಡ ಮುನ್ನವೋ ಮನ ಮುನ್ನವೋ ಪ್ರಾಣ ಮುನ್ನವೋ ಧರ್ಮ ಮುನ್ನವೋ ಕರ್ಮ ಮುನ್ನವೋ ಇಂತೀ ಸರ್ವರೊಳಗೆ ತಾ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಪಾದೋದಕ ಪ್ರಸಾದಿಗಳೆಂಬೆ; ವಿಭೂತಿ ರುದ್ರಾಕ್ಷಿಧಾರಣ ಮಂತ್ರಮೌನಿಗಳೆಂಬೆ. ಇಂತಪ್ಪ ವಚನದ ತಾತ್ಪರ್ಯ ತಿಳಿಯಬಲ್ಲರೆ ಲಿಂಗಾಂಗಸಮರಸಾನಂದಸುಖವ ತಿಳಿಯಬಲ್ಲ ಶಿವಜ್ಞಾನಸಂಪನ್ನರೆಂಬೆ. ಪರಶಿವಯೋಗಿಗಳೆಂಬೆ, ಷಟ್‍ಸ್ಥಲ ಭಕ್ತರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->