ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ, ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ, ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ, `ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಷಡಾಧಾರದಲ್ಲಿ ಅಡಿಗದಿ ಹೋಹವರ ಕಂಡೆ. ತತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋಹವರ ಕಂಡೆ. ಮಾತಿನ ಬ್ರಹ್ಮವನಾಡಿ ವಸ್ತುವನರಿಯದೆ, ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವನರಿತೆಹೆವೆಂದು ಘಟ ಕೆಟ್ಟು ನಷ್ಟವಾದವರ ಕಂಡೆ. ಇಂತಿವನರಿದು ಕರ್ಮಯೋಗವ ಮಾಡದೆ, ವರ್ಮಂಗಳನರಿದು ಸರ್ವಗುಣಸಂಪನ್ನನಾಗಿ, ತನ್ನ ತಾನರಿದ ಮತ್ತೆ ಮಹಾತ್ಮಂಗೆ, ತನಗೆ ಏನೂ ಅನ್ಯಭಿನ್ನವಿಲ್ಲ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವು ತಾನಾದವಂಗೆ.
--------------
ಸೂಜಿಕಾಯಕದ ಕಾಮಿತಂದೆ
ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ ಲಿಂಗಕಳೆ ಉದಯಿಸಿ ಮಹಾಜ್ಞಾನ ಪ್ರಕಾಶವಾಗಿ ಮೆರೆವುತ್ತಿಹ ಚಿಲ್ಲಿಂಗವು ಶರಣನ ದೇಹವೆಂಬ ಭೂಮಿಯ ಮರೆಯಲ್ಲಿ ಅಡಗಿಪ್ಪುದು ನೋಡಾ. ನೆಲನ ಮರೆಯ ನಿಧಾನದಂತೆ, ಷಡಾಧಾರದಲ್ಲಿ ಷಡಾದಿಯಾಗಿ ಷಡಾತ್ಮಕನಾಗಿಪ್ಪುದು ನೋಡಾ. ಪಂಚೇಂದ್ರಿಯ ದ್ವಾರಂಗಳಲ್ಲಿ ಪಂಚವದನನಾಗಿ ಪ್ರಭಾವಿಸುತ್ತಿಪ್ಪುದು ನೋಡಾ. ದಶವಾಯುಗಳ ಕೂಡಿ ದೆಸೆದೆಸೆಗೆ ನಡೆವುತ್ತ ವಿಶ್ವಚೈತನ್ಯನಾಗಿಪ್ಪುದು ನೋಡಾ. ಸರ್ವಾಂಗದಲ್ಲಿಯೂ ತನ್ಮಯವಾಗಿಪ್ಪುದು ನೋಡಾ. ಮನದಲ್ಲಿ ಮತಿಯ ಕಣಜ, ಮಾತಿನಲ್ಲಿ ಜ್ಯೋತಿರ್ಲಿಂಗವಾಗಿ ಎನ್ನ ಬ್ರಹ್ಮರಂಧ್ರದಲ್ಲಿ ತೊಳಗಿ ಬೆಳಗುವ ಪರಂಜ್ಯೋತಿ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಧಾರದಲ್ಲಿ ಆಚಾರಲಿಂಗವ ಧರಿಸಿದನಾಗಿ ಆಚಾರಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಸ್ವಾಧಿಷಾ*ನದಲ್ಲಿ ಗುರುಲಿಂಗವ ಧರಿಸಿದನಾಗಿ ಗುರುಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಮಣಿಪೂರಕದಲ್ಲಿ ಶಿವಲಿಂಗವ ಧರಿಸಿದನಾಗಿ ಶಿವಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಅನಾಹತದಲ್ಲಿ ಜಂಗಮಲಿಂಗವ ಧರಿಸಿದನಾಗಿ ಜಂಗಮಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ವಿಶುದ್ಧಿಯಲ್ಲಿ ಪ್ರಸಾದಲಿಂಗವ ಧರಿಸಿದನಾಗಿ ಪ್ರಸಾದಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಆಜ್ಞೇಯದಲ್ಲಿ ಮಹಾಲಿಂಗವ ಧರಿಸಿದನಾಗಿ ಮಹಾಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಇಂತು ಷಡಾಧಾರದಲ್ಲಿ ಷಡ್ವಿಧಲಿಂಗವ ಧರಿಸಿ ಷಡುಸ್ಥಲ ಭಕ್ತನಾದನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣ.
--------------
ಸ್ವತಂತ್ರ ಸಿದ್ಧಲಿಂಗ
ಷಡಾಧಾರದಲ್ಲಿ ಅಡಿಗದ್ದಿ ಹೋದವರ ಕಂಡೆ. ತತ್ತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋದವರ ಕಂಡೆ. ಮಾತಿನ ಮಾಲೆಯನಾಡಿ ವಸ್ತುವನರಿಯದೆ ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವ ಮಾಡಿಹೆನೆಂದು ಘಟಕೆಟ್ಟು ನಷ್ಟವಾದವರ ಕಂಡೆ. ಇಂತಿದನರಿದು ಕರ್ಮಯೋಗವ ಮಾಡದೆ ಮರ್ಮಜ್ಞನಾಗಿ ಸರ್ವಗುಣಸಂಪನ್ನನಾಗಿ ನಿಜವನರಿದಾತಂಗೆ ತನಗೇನು ಅನ್ಯ್ಕಭಿನ್ನವಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->