ಅಥವಾ

ಒಟ್ಟು 28 ಕಡೆಗಳಲ್ಲಿ , 12 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಅಘೋರವಕ್ತ್ರ, ಅಜಾತವಕ್ತ್ರ, ಸಾಧ್ಯವಿಲ್ಲದ ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು, ಸದ್ಯೋನ್ಮುಕ್ತಿಯ ಪಡೆಯಲು, ಪ್ರಸಾದ ಇಹಪರಕ್ಕೆ ಸಾಲದೆ ಹೋಯಿತ್ತು. ಎನಗೆ ಕಾಯದ ಹಂಗಿಲ್ಲ, ಕರ್ಮದ ಹಂಗಿಲ್ಲ ಸಂಗಯ್ಯ.
--------------
ನೀಲಮ್ಮ
ಪುಣ್ಯಪಾಪವಿಲ್ಲಾಗಿ ಜನನದ ಹಂಗಿಲ್ಲ. ಬಂದುದನುಂಬನಾಗಿ ಮಾನವರ ಹಂಗಿಲ್ಲ. ಭವಗೆಟ್ಟನಾಗಿ ದೈವದ ಹಂಗಿಲ್ಲ. ಸತ್ಯಜ್ಞಾನಾನಂದವೆ ತಾನಾಗಿ ಇನ್ನಾರ ಹಂಗಿಲ್ಲ. ಇನ್ನಾರ ಹಂಗಿಲ್ಲದಾತ ಗುಹೇಶ್ವರಲ್ಲಯ್ಯನೊಬ್ಬನೆ !
--------------
ಅಲ್ಲಮಪ್ರಭುದೇವರು
ಅನಾದಿಲಿಂಗವು ಕರಕ್ಕೆ ಬಂದಿತು ನೋಡಾ. ಕರಕ್ಕೆ ಬಂದ ಕಾರಣ, ಮನಸ್ಥಲಕ್ಕೆ ಅರುಹುದೋರಿತ್ತು ನೋಡಾ. ಆ ಮನಸ್ಥಲಕ್ಕೆ ಅರುಹುದೋರಿದ ಕಾರಣ ಪರಸ್ಥಲಕ್ಕೆ ಬೆರಗಾಯಿತ್ತು ನೋಡಾ. ಆ ಪರಸ್ಥಲಕ್ಕೆ ಅರುಹುದೋರಿದ ಕಾರಣ ಮನಸ್ಥಲಕ್ಕೆ ಹಂಗಿಲ್ಲ ನೋಡಾ. ಆ ಮನಸ್ಥಲಕ್ಕೆ ಹಂಗಿಲ್ಲವಾದ ಕಾರಣ ಕರಸ್ಥಲದ ಲಿಂಗವು ಕೈಸಾರಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೇಡ ಬಿಲ್ಲ ಹಿಡಿದು, ರೂಡ್ಥಿಯಲ್ಲಿ ತಿರುಗಾಡುತ್ತಿರಲಾಗಿ, ಬೇಡನ ಬಿಲ್ಲ ಬೇಡಿ ಕಾಡಿಹರೆಲ್ಲರು. ಆ ಬಿಲ್ಲು ರೂಡ್ಥಿಯದಲ್ಲ, ಇನ್ನಾರು ಕೊಟ್ಟರೊ. ಕೊಟ್ಟವರ ಕೊಂಡು, ಕೊಡದವರ ಹಿಂಗಿ, ಬಟ್ಟೆಯ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆರು ಬಣ್ಣದ ಆರು ಲಿಂಗದಲ್ಲಿ ಮೂರು ಬಣ್ಣದ ಮೂರು ಲಿಂಗವ ಕೂಡಲು ನವಲಿಂಗದ ಒಂಬತ್ತು ಬಣ್ಣದಲ್ಲಿ ಗುರುಲಿಂಗಜಂಗಮಪ್ರಸಾದವೆಂಬ ನಾಲ್ಕು ಬಣ್ಣವ ಕೂಡಿದ ಹದಿಮೂರು ಬಣ್ಣವ ಕ್ರೀಯೆಂಬ ಕಮ್ಮರನ ಕೈಯಲ್ಲಿ ಕೊಟ್ಟಡೆ, ವಾಸನೆಯೆಂಬ ಸೀಸವ ಬೆರಸಿದ ನೋಡಾ. ಕಮ್ಮಾರನ ಬಾಯಕುಟ್ಟಿ ಸೆಳೆಯಲಾಗಿ ಆ ವಾಸನೆ ಅಲ್ಲಿಯೇ ಅಡಗಿ, ಅಂಗಭವಿ ಲಿಂಗಭವಿಯೆಂಬ ಅಡಗಿದ ಕಾಳಿಕೆಯಳಿದ ಸ್ವಯಬಣ್ಣದ ಮಿಸುನಿಗೆ ತನುವೆಂಬ ಒರೆಗಲ್ಲ ಹಂಗಿಲ್ಲ, ಮನವೆಂಬ ಮಚ್ಚದ ಹಂಗಿಲ್ಲ. ಭಾವವೆಂಬ ಹಸ್ತದ ಹಂಗಿಲ್ಲ, ತಮೋಗುಣವೆಂಬ ಮಯಣದ ಹಂಗಿಲ್ಲ. ಬೋಧವೆಂಬ ನೇತ್ರದ ಹಂಗಿಲ್ಲ. ಇಂತಿವರ ಹಂಗು ಹರಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಪರವಳಿದು ಸಯವಾಯಿತ್ತು
--------------
ಆದಯ್ಯ
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
--------------
ಅಲ್ಲಮಪ್ರಭುದೇವರು
ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ, ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ, ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ, ಬಹಿರಂಗದ ಅಷ್ಟಮಂದಗಳ ಬಾಯಟೊಣೆದು, ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ, ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ, ಅವಸ್ಥಾತ್ರಯಂಗಳ ಅವಗುಣವಳಿದು, ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ , ದುರ್ಭಾವತ್ರಯಂಗಳ ದೂರಮಾಡಿ, ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ, ಪಂಚಾಗ್ನಿಗಳ ಸಂಚಲವನತಿಗಳೆದು, ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು, ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು, ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ, ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ, ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು, ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು, ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು, `ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು, ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ, ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ, ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ, ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ, ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ, ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ, ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ, ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನು ಮನ ಧನದ ಲೋಭ ಎನಗೇಕೋ? ಅರ್ಥಪ್ರಾಣ ಅಭಿಮಾನಂಗಳ ತಾತ್ಪರ್ಯ ಎನಗೇಕೋ? ಪುತ್ರ ಮಿತ್ರ ಕಳತ್ರ ಭೃತ್ಯ ಭ್ರಾತಾದಿಗಳ ಹಂಗು ಎನಗೇಕೋ? ಸೌರಾಷ್ಟ್ರ ಸೋಮೇಶ್ವರಾ, ನಿನಗೆ ಎನ್ನ ಹಂಗಿಲ್ಲವಾಗಿ, ಎನಗಿವರ ಹಂಗಿಲ್ಲ.
--------------
ಆದಯ್ಯ
ಜ್ಯೋತಿಯ ಬೆಳಗಿನಲ್ಲಿ [ನೋಡಿ] ಜ್ಯೋತಿಯ ಪಟವ ಕಾಬಂತೆ, ಕಣ್ಣಿನಿಂದ ಕನ್ನಡಿಯ ನೋಡಿ ಕಣ್ಣ ಕಲೆಯ ಕಾಬಂತೆ, ತನ್ನಿಂದ ತಾ ನೋಡಿ ತನ್ನನರಿಯಬೇಕು. ತನ್ನನರಿಯದವ ನಿಮ್ಮನೆತ್ತಬಲ್ಲನೋ ? ತನ್ನನರಿವುದಕ್ಕೆ ದೃಷ್ಟವ ಕೈಯಲ್ಲಿ ಕೊಟ್ಟು ಕಾಣದುದಕ್ಕೆ ಚಿತ್ತವ ನೆನಹಿಂಗಿತ್ತ. ಚಿತ್ತ ಇಷ್ಟದಲ್ಲಿ ಅಚ್ಚೊತ್ತಿದ ಮತ್ತೆ ದೃಷ್ಟವ ಕಾಬುದಿನ್ನೇನೋ ? ಉರಿಯೊಳಗಣ ಕರ್ಪುರ, ಅನಿಲನೊಳಗಣ ಪಾವಕ, ಶಿಲೆಯುಂಡ ಎಣ್ಣೆ ಅಳತೆ[ಗೆ ಉ]ಂಟೇ ಅಯ್ಯಾ. ಲಿಂಗವ ಮೆಚ್ಚಿದ ಅಂಗಕ್ಕೆ ಜಗದ ಹಂಗಿಲ್ಲ. ಅನಂಗ, ಅತೀತ ನಿಃಕಳಂಕ ಮಲ್ಲಿಕಾರ್ಜುನಲಿಂಗವೇ ತಾನಾದ ಶರಣಂಗೆ.
--------------
ಮೋಳಿಗೆ ಮಾರಯ್ಯ
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಳಿದು ನಿರ್ಮಲನಾದ ಶಿಷ್ಯ;_ ಕಾಯಜೀವದ ಭ್ರಾಂತುಸೂತಕ ಹಿಂಗಿ ನಿಶ್ಯಂಕನಾದ ಗುರು_ ಈ ಉಭಯ ಭಾವದೊಳಗೆ ಆವುದು ಮುಂದು ಆವುದು ಹಿಂದೆಂದರಿಯಬಪ್ಪುದು ? ಕರಸ್ಥಲಕ್ಕೆ ಕಾರುಣ್ಯವ ಮಾಡಿದಡೆ ಮನಸ್ಥಲಕ್ಕೆ ಹಂಗಿಲ್ಲ. ಮನಸ್ಥಲದಲ್ಲಿ ಸೆರಗೊಡ್ಡಿ ಬೇಡಿರ್ದಡೆ ಕರಸ್ಥಲದ ಲಿಂಗ ಕೈಸಾರಿತ್ತು ! ಗುರುಸ್ಥಲದ ನಿಲವು ಪರಸ್ಥಲದಲಡಗಿದರೆ ಭಾವ ಬಳಲಿತ್ತಿದೇನೊ (ಬೆರಗಾಯಿತ್ತು?) ಗುಹೇಶ್ವರಾ. ?
--------------
ಅಲ್ಲಮಪ್ರಭುದೇವರು
ನಮಗಾರ ಸಂಗವಿಲ್ಲ, ನಮಗಾರ ಸಂಗವಿಲ್ಲ; ನಮಗಾರ ಪರವಶವಿಲ್ಲ, ನಮಗಾರ ಇಹಪರವಿಲ್ಲ; ನಮಗಾರ ಪರವಿಲ್ಲ, ನಮಗೆ ಹೃದಯದ ಹಂಗಿಲ್ಲವಯ್ಯಾ. ನಮಗೆ ನಿಮ್ಮ ಹಂಗಿಲ್ಲ, ಸಂಗಯ್ಯನಲ್ಲಿ ಬಸವಸ್ವಯಲಿಂಗಿಯಾದಬಳಿಕ.
--------------
ನೀಲಮ್ಮ
ಪರಶಿವಮೂರ್ತಿಯ ರೂಪತಾಳಿ, ಎನ್ನ ಶಿವಭಕ್ತರ ಕುಲ ಬಳಗಂಗಳ ಪವಿತ್ರವ ಮಾಡಿಹೆನೆಂದು ನೀ ಬಂದು, ಅಪವಿತ್ರವ ಮುಟ್ಟಲೇತಕ್ಕೆ ? ನಿನ್ನ ಕೃಪೆ ಎನಗೆ, ಎನ್ನ ಹೃತ್ಕಮಲಮಧ್ಯ ನಿನಗೆ. ಎನಗೂ ನಿನಗೂ ತ್ರಿವಿಧದ ಹಂಗಿಲ್ಲ. ನಾ ನೀನಲ್ಲದೆ ಬೇರೊಂದ ಎಣಿಸಿದಡೆ, ನೀ ನಾನಲ್ಲದೆ ಬೇರೊಂದ ಮುಟ್ಟಿದಡೆ, ನಿನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಉಭಯಕ್ಕೂ ನೀನೆ ಮುಂಡಿಗೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ಏಕಜಲ ಬಹುಜಲವಾದ ಕ್ರಮವನರಿವುದು. ಅದಕ್ಕೆ ದೃಷ್ಟ; ಅನಾದಿಯ ಪ್ರಣವನರಿಯದೆ, ಹಾದಿಯ ಕಲ್ಲ ಪೂಜಿಸಿದರಯ್ಯಾ, ಸಂಸಾರಕ್ಕೆ ಬೋಧೆಗೆ ಸಿಕ್ಕಿರೆ ಅನಾಗತಸಿದ್ಧಿಯ ಹೋದ ಹೊಲಬನರಿಯದೆ ಕೆಟ್ಟರಯ್ಯಾ. ಅಂಧಕಂಗೆ ಚಂದಾದ ಮುಖವುಂಟೆ? ಶೃಂಗಾರ ಪಂಗುಳಂಗೆ ಯೋಜನದ ಸುದ್ದಿಯಿಲ್ಲ. ಲಿಂಗವನರಿಯದಂಗೆ ಜಗದ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏಕಾಂಗವೆನಗೆ ಅನೇಕ ಬಸವಾ, ಪ್ರಾಣಪ್ರಸನ್ನವದನೆಯಾದೆನು ಬಸವಾ, ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ, ಇಷ್ಟದ ಸಂಗದ ಕುಳವಳಿದ ಬಳಿಕ ಪ್ರಾಣಯೋಗವಾಯಿತ್ತು ಬಸವಾ, ಸಂಗಯ್ಯಾ, ನಿಮ್ಮ ಬಸವನ ರೂಪು ಹೆಸರಿಲ್ಲದೆ ಹೋದ ಬಳಿಕ.
--------------
ನೀಲಮ್ಮ
ಇನ್ನಷ್ಟು ... -->