ಅಥವಾ

ಒಟ್ಟು 26 ಕಡೆಗಳಲ್ಲಿ , 13 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರ ಹಳಿದು ತನ್ನ ಬಣ್ಣಿಸುವನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಹಮ್ಮು ಬಿಮ್ಮು ಹೆಮ್ಮೆ ಹಿರಿತನವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಉದಮದ ಗರ್ವ ಅಹಂಕಾರ ಮಮಕಾರವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಆಸೆ ಆಮಿಷ ಕ್ಲೇಶ ತಾಮಸವುಳ್ಳನ್ನಕ್ಕರ ಶಿವಜಾÕನಿ ಎಂತಪ್ಪನಯ್ಯಾ ? ಇಂತೀ ಗುಣಂಗಳುಳ್ಳನ್ನಕ್ಕರ ಶಿವಾನುಭಾವಿಯೆಂತಪ್ಪನಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ನಿಜವಕೊಟ್ಟು ಗಜಬಜೆಯನೆಸಗಲುಂಟೆ ? ಒಡಲಕಿಚ್ಚಿನ ತುಡುಗು ಬೆಡಗಿನೊಳಗಿಲ್ಲ ಉಪದೇಶ. ನಿನ್ನ ಸಂಸಾರ ನಿನ್ನುದ್ದ, ನಿಃಸಂಸಾರಿಗಳ ತಗುಲಿಕೊಳ್ಳದಿರು. ಕೊಟ್ಟವರಾರು ಕೊಂಡವರಾರು ? ಹಮ್ಮು ಬಿಮ್ಮು ಹವಣಿಸಿಕೊ ಗುರುನಿರಂಜನ ಚನ್ನಬಸವಲಿಂಗಸಹಿತ ಗುರುವೆನಿಸುವರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆತ್ಮ ತೇಜ, ದೇಹೋ[ಹಂ] ಹಮ್ಮು, ಮನದ ಬಿಮ್ಮು, ತಥ್ಯ-ಮಿಥ್ಯ, ರಾಗ-ದ್ವೇಷ, ಸುಖ-ದುಃಖ ಮೋಹಂಗಳಡಗವಯ್ಯಾ. ಇಂತಿವನಳಿದಾತನ ನೀನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕುರುಹಿಲ್ಲದಠಾವಿನಲ್ಲಿ ತೆರಹಿಲ್ಲದಾತ್ಮಂಗೆ ಬರಿಯ ನಾಮವ ಸೈತಿಟ್ಟು ಕುರುಹದೇನು ಹೇಳಾ? ನಾಮವುಳ್ಳೆಡೆಯಲ್ಲಿ ಸೀಮೆ, ಸೀಮೆಯುಳ್ಳೆಡೆಯಲ್ಲಿ ನಾಮ ಹೋಹೋ, ತಿಳಿದು ನೋಡಿರೇ. ಹಮ್ಮು ಜಡನರಿವು ಮರವೆಯನೆಯ್ದಿಪ್ಪುದು ಮನ. ತನು, ಮನ, ಕರಣ, ಭಾವಕ್ಕಾಧಾರವಾಗಿಪ್ಪುದಾತ್ಮ. ಇನಕಿರಣ ಇನನಪ್ಪುದೆ? ವಾಯು ತಾನೇ ಆಕಾಶವೇ? ಧೂಮ್ರ ತಾನೇ ಅಗ್ನಿಯೆ? ನೆನೆವ ಮನವು ತಾನೇ ಜೀವನೆ? ಇಂತಲ್ಲ ನೋಡಾ, ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಮನವೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನ.
--------------
ಆದಯ್ಯ
ಅಹಂಕಾರಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ಸತ್ವ ರಜ ತಮಗಳಿಲ್ಲದಂದು, ಅಂತಃಕರಣಚತುಷ್ಟಯಂಗಳಿಲ್ಲದಂದು, ಪಂಚೇಂದ್ರಿಯಂಗಳಿಲ್ಲದಂದು, ಅರಿಷಡ್ವರ್ಗಂಗಳಿಲ್ಲದಂದು, ಸಪ್ತವ್ಯಸನಂಗಳಿಲ್ಲದಂದು, ಅಷ್ಟಮದಂಗಳಿಲ್ಲದಂದು, ದಶವಾಯುಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿರುಪಮ ಮಹಾಘನ ಅಘಟಿತಘಟಿತ ಅಪರಂಪರ ವಿಶ್ವಂಭರಿತ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭೂತಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ ಆ ಶಿಷ್ಯನೆ ಜಂಗಮವಾಗಿ ಗುರುವಿನ ಮಠಕ್ಕೆ ನಡೆದು ಬಂದರೆ ಗುರುವೆಂಬ ಹಮ್ಮಿಲ್ಲದೆ ಪರಮಗುರುವೆಂದು ಪಾದಾರ್ಚನೆಯಂ ಮಾಡೂದು ಆಚಾರ, ನಾಚಿ ಮಾಡದಿದ್ದರೆ ನಾಯಕ ನರಕ. ಆ ಜಂಗಮ ಶಂಕೆಯಿಲ್ಲದೆ ಪಾದಾರ್ಚನೆಯ ಮಾಡಿಸಿಕೊಂಬುದೆ ಕರ್ತೃತ್ವ, ಶಂಕೆಗೊಂಡಡೆ ಪಂಚಮಹಾಪಾತಕ. ಹೀಂಗಲ್ಲದೆ ಗುರುವೆಂಬ ಹಮ್ಮು, ಶಿಷ್ಯನೆಂಬ ಶಂಕೆಯುಳ್ಳನ್ನಬರ ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಹಿಡಿಯದೆ, ಹಿಡಿದುದ ಬಿಡದೆ, ಬಿಟ್ಟುದನಾರೂ ಅರಿಯರಲ್ಲಾ ! ಒಡಲ ಹಮ್ಮು, ಜಾತ್ಯಾಭಿಮಾನವಡಗಿ ತೊಡದಿರ್ದ ಭಾವವನಾರೂ ಅರಿಯರಲ್ಲಾ ! ಭಾವ ಭಾವಿಸುತ ನಿರ್ಭಾವವಳವಟ್ಟ ಭೇದವನಾರೂ ಅರಿಯರಲ್ಲಾ ! ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜನಿರ್ಣಯವನಾರೂ ಅರಿಯರಲ್ಲಾ !
--------------
ಆದಯ್ಯ
ಲೋಕ ಲೌಕಿಕಂಗಳಿಲ್ಲದಂದು, ಕುಲ ಛಲಂಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ದೇಹ ನಿರ್ದೇಹಗಳಿಲ್ಲದಂದು, ಪ್ರಾಣ ನಿಃಪ್ರಾಣಂಗಳಿಲ್ಲದಂದು, ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗತಿಪದಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ, ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ. ಗತಿಪದ ಮುಕ್ತಿಸೂತಕವಿರಹಿತ ಭಕ್ತ, ಹಮ್ಮು ಬಿಮ್ಮು ಗಮನನಾಸ್ತಿ ಜಂಗಮ. ಮಾಡುವಡೆ ಭಕ್ತ ಮಾಟದೊಳಗಿಲ್ಲದಿರಬೇಕು, ಬೇಡುವಡೆ ಜಂಗಮ ಕೊಂಬುದರೊಳಗಿಲ್ಲದಿರಬೇಕು. ಪ್ರಾಣವಿಲ್ಲದ ಭಕ್ತ ರೂಹಿಲ್ಲದ ಜಂಗಮ, ಉಭಯಕುಳ ಸಂದಳಿದಂದು ಕೂಡಲಚೆನ್ನಸಂಗನಲ್ಲಿ ಭಕ್ತಜಂಗಮವೆಂಬೆ
--------------
ಚನ್ನಬಸವಣ್ಣ
ಪಥವನರಿಯದೆ ಮಂಡೆಯ ಬೋಳಿಸಿಕೊಂಡರೆ ಜಂಗಮವೆ ? ಅಲ್ಲ, ಹಮ್ಮು ಬಿಮ್ಮು ಗಮನನಾಸ್ತಿಯಾದರೆ ಜಂಗಮ. ಸತ್ತರೆ ತೆಗೆವರಿಲ್ಲೆಂದು ಕಟ್ಟಿಕೊಂಡರೆ ಭಕ್ತನೆ ? ಅಲ್ಲ, ಅರ್ಥ ಪ್ರಾಣ ಅಭಿಮಾನಕ್ಕೆ ವಿರೋಧಿಯಾದರೆ ಭಕ್ತ. ತನುಗುಣ ನಾಸ್ತಿಯಾಗಿ ಮನ ಲಿಂಗದಲ್ಲಿ ಸಿಲುಕಿತ್ತು, ಇದು ಕಾರಣ ಕೂಡಲಚೆನ್ನಸಂಗಯ್ಯಾ ಪ್ರಭು ಜಂಗಮ, ಬಸವ ಭಕ್ತ.
--------------
ಚನ್ನಬಸವಣ್ಣ
ಆತ್ಮ ಪರಮಾತ್ಮ ಯೋಗವನರಿದೆನೆಂಬ ಮಾತಿನ ಮೊದಲ ಜ್ಯೋತಿಯೊಳಗೆ ಆತ್ಮಜ್ಯೋತಿಯನರಿದು, ಮಾತಿನೊಳಗಣ ಪರಮಾತ್ಮನನರಿದಂಗಲ್ಲದೆ, ಆತ್ಮಪರಮಾತ್ಮ ಯೋಗವನರಿಯಬಾರದು. ಆತ್ಮಪರಮಾತ್ಮ ಯೋಗವನರಿದಂಗಲ್ಲದೆ, ಅರಿವು ಮರವೆಗಳು ನಷ್ಟವಾಗದು. ಹಮ್ಮು ನಷ್ಟವಾ[ದುದೇ], ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಜೀವ ಪರಮರೈಕ್ಯವು.
--------------
ಸ್ವತಂತ್ರ ಸಿದ್ಧಲಿಂಗ
ಪೂರ್ವಜಾತವ ಕಳೆದು ಪುನರ್ಜಾತನಾದ ಬಳಿಕ, ಏನೆಂದೆನಲುಂಟೆ ? ಭಕ್ತಕಾಯ ಮಮಕಾಯವಾದ ಬಳಿಕ, ಏನೆಂದೆನಲುಂಟೆ ? ಅದೆಂತೆಂದಡೆ : ನ ಮುಕ್ತಿಶ್ಚ ನ ಧರ್ಮಶ್ಚ ನ ಪುಣ್ಯಂ ನ ಚ ಪಾಪಕಂ | ನ ಕರ್ಮಾ ಚ ನ ಜನ್ಮಾ ಚ ಗುರೋರ್ಭಾವನೀರಿಕ್ಷಣಾತ್ || ಎಂದುದಾಗಿ, ಇದು ಕಾರಣ, ಹಮ್ಮು ಬಿಮ್ಮು ಸೊಮ್ಮನಳಿದ, ಮಹಾಲಿಂಗ ಕಲ್ಲೇಶ್ವರ ತಾನಾದ ಬಳಿಕ, ಏನೆಂದೆನಲುಂಟೆ ?
--------------
ಹಾವಿನಹಾಳ ಕಲ್ಲಯ್ಯ
ಪೃಥ್ವಿ ಆಕಾಶಮಧ್ಯದಲ್ಲಿ ಉತ್ಪತ್ತಿಯಾದ ಸಕಲ ಪ್ರಾಣಿಗಳ ಶಿವನೆಂದು ಭಾವಿಸಲಾಗದು. ಅದೇನು ಕಾರಣವೆಂದೊಡೆ : ಆ ಸಕಲ ಪ್ರಾಣಿಗಳು ಶಿವನಾದಡೆ ಮದಮತ್ಸರಂಗಳಿಂದೆ ಒಂದನೊಂದು ಕೊಂದು ಕೂಗಿ ತಿಂದು ತೇಗಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಜಾತಿ ವರ್ಣಾಶ್ರಮ ಕುಲಗೋತ್ರ ನಾಮಸೀಮೆ ಬಂದ ಬಟ್ಟೆಗೆ ಬಡಿದಾಡಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಹಮ್ಮು ಬಿಮ್ಮು ಗರ್ವ ಅಹಂಕಾರ ಹೆಮ್ಮೆ ಹಿರಿತನಕೆ ಹೊಡೆದಾಡಿ ಮಡಿದು ಹೋಗಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಮಲತ್ರಯಂಗಳ ಬಲೆಯಲ್ಲಿ ಸಿಲ್ಕಿ ಭವಭವಂಗಳಲ್ಲಿ ತೊಳಲಿ ಬಳಲಿ ಬೆಂಡಾಗಲೇತಕೊ ? ಇದು ಕಾರಣ, ಅನಾದಿಸಂಸಿದ್ಧವಾದ ಪರಮ ಜಂಗಮಲಿಂಗವೇ ಶಿವನಲ್ಲದೆ ಭವಭವಂಗಳಲ್ಲಿ ಸತ್ತು ಹುಟ್ಟುವ ಸಕಲ ಪ್ರಾಣಿಗಳ ಶಿವನೆಂದಡೆ ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
>ಹೊನ್ನುಳ್ಳಾತ ಭಕ್ತನಲ್ಲ, ಹೆಣ್ಣುಳ್ಳಾತ ಶರಣನಲ್ಲ, ಮಣ್ಣುಳ್ಳಾತ ಲಿಂಗೈಕ್ಯನಲ್ಲ. ಹೊನ್ನು ಜೀವ, ಹೆಣ್ಣು ಪ್ರಾಣ, ಮಣ್ಣು ದೇಹ. ಹೊನ್ನು ಭವ, ಹೆಣ್ಣು ಭವಿ, ಮಣ್ಣು ಹಮ್ಮು. ಇಂತೀ ತ್ರಿವಿಧಸ್ಥಲವಪೂರ್ವ ಕೂಡಲಚೆನ್ನಸಂಗಯ್ಯನಲ್ಲಿ.
--------------
ಚನ್ನಬಸವಣ್ಣ
ಇನ್ನಷ್ಟು ... -->