ಅಥವಾ

ಒಟ್ಟು 60 ಕಡೆಗಳಲ್ಲಿ , 12 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ, ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ, ಹೃದಯನಾಬ್ಥಿಯಲ್ಲಿ ಸಕಲನಿಃಕಲನಾಗಿ, ಸ್ವಾದ್ಥಿಷ್ಠಾನ ಆಧಾರದಲ್ಲಿ ಕೇವಲಸಖನಾಗಿ, ಆ ಸಕಲಕ್ಕೆ ಎರಡು ಪಾದವನಿತ್ತು, ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ, ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು, ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ, ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು, ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ ನಾಲ್ಕು ಪಾದ ವನಾದಿಮಾಡಿ ನಿಲ್ಲಿಸಿ, ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು. ಆ ನಂದೀಶ್ವರಂಗೆ ಚಿತ್‍ಶಕ್ತಿಯೆ ಅಂಗ, ಪರಶಕ್ತಿಯೆ ಮುಖ. ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ ಹೊತ್ತಿಪ್ಪನಲಾಯೆಂದರಿದು, ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು. ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು, ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು, ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು. ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು. ಆ ಸಕಲವೆಂದರೆ ಅನಂತತತ್ತ್ವ. ಬ್ರಹ್ಮಾಂಡ ಕೋಟ್ಯಾನುಕೋಟಿ ಲೋಕಾಲೋಕಂಗಳು ದೇವದಾನವ ಮಾನವರು ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು. ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲಪದಾರ್ಥಗಳುದ್ಭವಿಸಿದವು. ಸಕಲಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ ದೇವನಾವನುಂಟೆಂದು ಆಹ್ವಾನಿಸಿ ನೋಡಲು, ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು, ಜ್ಞಾನಶಕ್ತಿಮುಖದಲ್ಲಿ ಸಕಲಪದಾರ್ಥಂಗಳ ಕೈಕೊಂಬಲ್ಲಿ, ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು, ಆ ರುಚಿಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು, ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು, ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು, ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು, ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ, ಅಡಿಮುಡಿಗೆ ತಾನೆ ಆದಿಯಾಗಲು, ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು. ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು ಮುಕ್ಕುಳಿಸಿ ಉಗುಳುವ ಪಡುಗ, ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ, ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಸಂಗಮೇಶ್ವರದ ಅಪ್ಪಣ್ಣ
ಭಕ್ತನಲ್ಲಿಯ ಐಕ್ಯಂಗೆ ಪೃಥ್ವಿಯಲ್ಲಿಯ ಆತ್ಮನೆ ಅಂಗ, ಆ ಅಂಗಕ್ಕೆ ಸುಚಿತ್ತದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಮಹಾಲಿಂಗವೇ ಲಿಂಗ. ಆ ಮಹಾಲಿಂಗಮುಖದಲ್ಲಿ ಎಲ್ಲಾ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪ್ರಾಣಲಿಂಗಿಯಲ್ಲಿಯ ಶರಣಂಗೆ ವಾಯುವಿನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗದಮುಖದಲ್ಲಿ ಮಿಶ್ರವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಲ್ಲಿಯ ಪ್ರಸಾದಿಗೆ ಪೃಥ್ವಿಯಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ನಿರಹಂಕಾರವೇ ಹಸ್ತ, ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗಮುಖದಲ್ಲಿ ಚಿಗುರು ಮೊದಲಾದ ಪತ್ರೆಯ ಗಂಧದ್ರವ್ಯಮಂ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಮಾಹೇಶ್ವರಂಗೆ ಆತ್ಮನಲ್ಲಿಯ ಅಪ್ಪುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ರಸತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ. ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ. ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ. ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ. ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ. ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ. ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ. ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ. ಎನ್ನ ಕಳೆಗೆ ಮಕಾರವಾದಾತ ಬಸವಣ್ಣ. ಎನ್ನ ರುದ್ಥಿರಕ್ಕೆ ನಕಾರವಾದಾತ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ. ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ. ಇಂತು ಬಸವಣ್ಣನೆ ಪರಿಪೂರ್ಣನಾಗಿ, ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ, ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ ಎಂದು ಬಯಲಾದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆ ಐಕ್ಯನಲ್ಲಿಯ ಪ್ರಸಾದಿಗೆ ಆತ್ಮನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರಹಂಕಾರವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗದ ಮುಖದಲ್ಲಿ ರೂಪತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನೆನೆವ ಜಿಹ್ವೆ[ಗೆ] ಕಾಮನ ನೆನಸಿದೆ, ನೋಡುವ ಕಂಗಳಿಗೆ ಕಾಮನ ನೋಡಿಸಿದೆ, ಕೇಳುವ ಕರ್ಣಕ್ಕೆ ಕಾಮವನೆ ಕೇಳಿಸಿದೆ, ವಾಸಿಸುವ ನಾಸಿಕಕ್ಕೆ ಕಾಮವನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಕಾಮವನೆ ಮುಟ್ಟಿಸಿದೆ. ಅದು ಎಂತೆಂದೊಡೆ : ನೆನೆವ ಜಿಹ್ವೆ ಪರಧನ ಪರಸ್ತ್ರೀಯರ ನೆನೆವುದು, ನೋಡುವ ಕಂಗಳು ಪರಧನ ಪರಸ್ತ್ರೀಯರನೆ ನೋಡುವವು, ಕೇಳುವ ಕರ್ಣ ಪರಧನ ಪರಸ್ತ್ರೀಯರ ಪರನಿಂದ್ಯವನೆ ಕೇಳುವವು, ವಾಸಿಸುವ ನಾಸಿಕ ಪರಧನ ಪರಸ್ತ್ರೀಯರ ವಾಸಿಸುವುದು, ಮುಟ್ಟುವ ಹಸ್ತ ಪರಧನ ಪರಸ್ತ್ರೀಯರನೆ ಮುಟ್ಟುವುದು. ಇಂತೀ ಪಂಚೇಂದ್ರಿಯಮುಖದಲ್ಲಿ ಕಾಮವೆ ಮುಖ್ಯವಾಗಿಪ್ಪುದಯ್ಯ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗೆಳಸದ ನಿಸ್ಸೀಮ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆತ್ಮವೆ ಅಂಗವಾದ ಐಕ್ಯಂಗೆ ಸದ್‍ಭಾವನೆ ಹಸ್ತ. ಆ ಹಸ್ತಕ್ಕೆ ಚಿಚ್ಛಕ್ತಿ , ಆ ಶಕ್ತಿಗೆ ಮಹಾಲಿಂಗ, ಆ ಲಿಂಗಕ್ಕೆ ಹೃದಯೇಂದ್ರಿಯವೆ ಮುಖ, ಆ ಮುಖಕ್ಕೆ ಸುತೃಪ್ತಿ ಪದಾರ್ಥ; ಆ ಪದಾರ್ಥವನು ಹೃದಯದಲ್ಲಿಹ ಮಹಾಲಿಂಗಕ್ಕೆ ಸಮರಸಭಕ್ತಿಯಿಂದರ್ಪಿಸಿ, ಆ ಪದಾರ್ಥವನು ಹೃದಯಲ್ಲಿಹ ಮಹಾಲಿಂಗಕ್ಕೆ ಸಮರಸ ಭಕ್ತಿಯಿಂದರ್ಪಿಸಿ ಆ ಸುತೃಪ್ತಿಪ್ರಸಾದವನು ಪಡೆದು ಸುಖಿಸುವಾತನೆ ಐಕ್ಯನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆ ಶರಣನಲ್ಲಿಯ ಮಾಹೇಶ್ವರಂಗೆ ಆಕಾಶದಲ್ಲಿಯ ಅಪ್ಪುವೇ ಅಂಗ. ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ತಂತಿವಿಡಿದು ಹುಟ್ಟಿದ ನಾದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪವನವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆ ಹಸ್ತ. ಆ ಹಸ್ತಕ್ಕೆ ಆದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶನಪದಾರ್ಥ; ಆ ಪದಾರ್ಥವನು ತ್ವಕ್ಕಿನಲ್ಲಿಹ ಜಂಗಮಲಿಂಗಕ್ಕೆ ಅನುಭಾವಭಕ್ತಿಯಿಂದರ್ಪಿಸಿ, ಆ ಸುಸ್ಪರ್ಶನ ಪ್ರಸಾದವನು ಪಡೆದು ಸುಖಿಸುವಾತನೆ ಪ್ರಾಣಲಿಂಗಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆ ಐಕ್ಯನಲ್ಲಿಯ ಶರಣಂಗೆ ಆತ್ಮನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗಮುಖದಲ್ಲಿ ಶಬ್ದತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಪ್ರಾಣಲಿಂಗಿಗೆ ಆತ್ಮನಲ್ಲಿಯ ವಾಯುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ. ಆ ಜಂಗಮಲಿಂಗದಮುಖದಲ್ಲಿ ಸ್ಪರ್ಶನತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಪ್ಪುವೆ ಅಂಗವಾದ ಮಹೇಶ್ವರಂಗೆ ಬುದ್ಧಿಯೆ ಹಸ್ತ. ಆ ಹಸ್ತಕ್ಕೆ ಜ್ಞಾನಶಕ್ತಿ , ಆ ಶಕ್ತಿಗೆ ಗುರುಲಿಂಗ, ಆ ಗುರುಲಿಂಗಕ್ಕೆ ಜಿಹ್ವೇಂದ್ರಿಯವೆಂಬ ಮುಖ, ಆ ಮುಖಕ್ಕೆ ಸುರಸವೆ ಪದಾರ್ಥ ; ಆ ಪದಾರ್ಥವನು ಜಿಹ್ವೆಯಲ್ಲಿಹ ಗುರುಲಿಂಗಕ್ಕೆ ನೈಷಿ*ಕಭಕ್ತಿಯಿಂದರ್ಪಿಸಿ, ಆ ಸುರಸ ಪ್ರಸಾದವನು ಪಡೆದು ಸುಖಿಸುವಾತನೇ ಮಹೇಶ್ವರನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->