ಅಥವಾ

ಒಟ್ಟು 38 ಕಡೆಗಳಲ್ಲಿ , 22 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ? ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ, ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ? ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ ? ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ ? ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ? ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ. ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ. ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.
--------------
ಮೋಳಿಗೆ ಮಹಾದೇವಿ
ಹರಿಬ್ರಹ್ಮರಿಬ್ಬರೂ ಸ್ತ್ರೀಯರಯ್ಯಾ, ತಮ್ಮನೊಲಿದರೆ ಹಂಗಿಹರು, ಹೆಂಪೆ ಹೇಳಯ್ಯಾ. ಎನ್ನ ಹರಿಬತನಕ್ಕೆ ಹಾನಿ ಹೊದ್ದಿತೆಂದು ನಿಮ್ಮನಗಲಲಾರೆ, ಕಪಿಲಸಿದ್ಧಮಲ್ಲೇಶ್ವರಾ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ಮತ್ತಮಾ ಮಂತ್ರಂಗಳಿಂ ಕರನ್ಯಾಸ ದೇಹನ್ಯಾಸ ಅಂಗನ್ಯಾಸಮೆಂಬ ನ್ಯಾಸತ್ರಯಂಗಳ ಉತ್ರತ್ತಿ ಸ್ಥಿತಿ ಸಂಹಾರ ಭೇದಂಗಂಳಂ ಪೂರ್ವೋಕ್ತ ಕ್ರಮ ದಿಂದರಿದು ವಿಸ್ತರಿಸುವದರಲ್ಲಿ ಗೃಹಸ್ಥಂಗೆ ಮುತ್ತೈದೆ ವಿಧವೆಯರಿಗೆ ಸ್ಥಿತಿನ್ಯಾಸ ವಹುದು, ಬ್ರಹ್ಮಚಾರಿಗೆ ಉತ್ಪನ್ಯಾಸವಹುದು, ವಾನಪ್ರಸ್ಥ ಯತಿಗಳಿಗೆ ಸಂಹಾರ ನ್ಯಾಸ ವಹದೆಂದನುವದಿಸಿ, ಬಳಿಕ ಅಗುಷ್ಠದಿಂ ಮೋಕ್ಷ, ತರ್ಜನಿಯಿಂ ಶತ್ರು ಹಾನಿ, ಮಧ್ಯಾಂಗುಲಿಯಿಂದರ್ಥಸಿದ್ಥಿ, ಅನಾಮಿಕೆಯಿಂ ಶಾಂತಿ, ಕನಿಷ್ಠದಿಂ ರಕ್ಷಣೆಗಳಪ್ಪವಲ್ಲಿ, ಮಧ್ಯಾಂಗುಷ್ಠ ಯೋಗದಿಂ ಮಾಲಿಕೆಯಂ ಪಿಡಿದು ಜಪಂಗೆಯ್ವುದೆ ಕನಿಷ್ಠ ವೆನಿಸೂದು. ತರ್ಜನ್ಯಂಗುಷ್ಠ ಯೋಗದಿಂ ಜಪಿಸೂದೆ ಮಧ್ಯಮವೆನಿಸೂದು. ಅನಾಮ್ಯಂಗುಷ್ಠ ಯೋಗದಿಂ ಜಪಂಗೆಯ್ವುದೆ ಉತ್ತಮ ವೆನಿಸೂದು. ಬಳಿಕಲ್ಲಿ ಮಧ್ಯಾಂಗುಷ್ಠಂಗಳಿಂ ಭಾಷ್ಯಜಪಂಗೆಯು, ತರ್ಜನ್ಯಂ ಗುಷ್ಠಂಗಳಿಂದುಪಾಂಶು ಜಪಂಗೆಯ್ವುದು, ಅನಾಮಿಕೆ ಮಧ್ಯಾಂಗುಷ್ಠಂಗಳಿಂ ಮಾನಸೆಜಪಂಗೆಯ್ವುದವರ ಅಲ್ಲಿ ಪರಶ್ರುತಿ ಗೋಚರವಪ್ಪುದೆ ಉಚ್ಚರಿಪುದೆ ವಾಚಕವಹುದು, ಸ್ವಶ್ರುತಿಸಾರವಾಗಿ ಓಷ್ಟ ಸ್ಪಂದನಮಾಗುಚ್ಚರಿಪುದೆ ಉಪಾಂಶುವಹುದು, ಮಂತ್ರವಾಕ್ಯಾರ್ಥಚಿಂತನಂಗೆಯ್ವುದೆ ಮಾನಸವಹುದು. ಅವರೊಳಗೆ ವಾಚಕಜಪವೆ ಕ್ಷುದ್ರಕಾರ್ಯಂಗಳಿಗೆ, ಉಪಾಂಶುಜಪವೆ ಸಕಲಸಿದ್ಧಿ ಗಳಿಗೆ, ಮಾನಸಜಪವೆ ಮುಕ್ತಿಗಹುದೆಂದು ನಿಯಾಮಿಸಿ ಜಪಂಗೆಯ್ವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ. ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ ಒಂದಾದೊಂದು ದೆಸೆಗೆ ಹೋಗುತ್ತಿಪ್ಪಾಗ ಅರಣ್ಯಮಧ್ಯದಲ್ಲಿ ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ ತೃಷೆಯೆದ್ದು ಮನವ ಮತಿಗೆಡಿಸಿ ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು ಆ ಸಮಯದಲ್ಲಿ ಖರ್ಜೂರ ಮಾವು ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು ವೃಕ್ಷಂಗಳಡಿಯಲ್ಲಿ ಬಿದ್ದಿರಲು ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ. ಅದೇನು ಕಾರಣವೆಂದೊಡೆ `ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ'ವೆಂದು ಆದ್ಯರ ವಚನ ಸಾರುತೈದಾವೆ ನೋಡಾ. ಇದು ಕಾರಣ- ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ ಮುಂದನರಿಯದೆ ನುಡಿದೆನಯ್ಯ. ಸತಿಯ ಭಾಷೆ ಪತಿಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮೂರು ತಪ್ಪ ಹೊರಿಸಿ ಬಂದವಳಿಗೆ ಇನ್ನಾರ ಕೊಂಡು ಕೆಲಸವೇತಕ್ಕೆ ? ಹೊಗದಿಹೆನೆ ಹೋಗಿಹೆನೆ, ಜ್ಞಾನಕ್ಕೆ ಹಾನಿ. ಅರೆಗೋಣ ಕೊಯ್ದವನಂತೆ ಇನ್ನೇವೆ ? ಈ ಗುಣವ ಬಿಡಿಸಾ ಎನ್ನ ತಂದೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಭವಿಯಲಾದ ಪಾಕವ ತಂದು ಮನೆಯಲ್ಲಿರಿಸಿಕೊಂಡು ಭುಂಜಿಸುತ್ತ ಅವರ ಮನೆಯ ಒಲ್ಲೆನೆಂಬುದು ವ್ರತಕ್ಕೆ ಹಾನಿ, ಪಂಚಾಚಾರಕ್ಕೆ ದೂರ, ಪಂಚಾಚಾರಶುದ್ಭತೆಗೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಬಲ್ಲನಾಗಿ ಒಲ್ಲನು.
--------------
ಅಕ್ಕಮ್ಮ
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು? ವರ್ತನ ಶುದ್ದವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವುದು? ತ್ರಿಕರಣ ಶುದ್ಧವಿಲ್ಲದ ಮಾಟ ದ್ರವ್ಯದ ಕೇಡು, ಭಕ್ತಿಗೆ ಹಾನಿ. ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು, ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ನುಡಿದ ಮಾತಿಂಗೆ ತಡಬಡ ಬಂದಲ್ಲಿ ನುಡಿದ ಭಾಷೆಗೆ ಭಂಗ ನೋಡಾ. ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ ಒಡಲನಿರಿಸುವದೆ ಭಂಗ ನೋಡಯ್ಯಾ. ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ ಚಂದೇಶ್ವರಲಿಂಗವಾದಡೂ ತಪ್ಪನೊಳಕ್ಕೊಳ್ಳ ಕಾಣಾ ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು. ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ. 246
--------------
ಬಸವಣ್ಣ
ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
--------------
ಬಸವಣ್ಣ
ನಿಜ ಬೋಳಿಂಗೆ ಲೋಚು ಮಾಡಲೇತಕ್ಕೆ? ಚಿದ್ಘನ ಬೋಳಿಂಗೆ ವೈಭವದ ಮದನನ ಶೃಂಗಾರದ ಹಾರವೇತಕ್ಕೆ? ಸಕಲಸುಖ ಬೋಳಿಂಗೆ ಅಖಿಳ ಸುಖಗೋಷಿ* ಏತಕ್ಕೆ? ಸರ್ವಸಂಗಪರಿತ್ಯಾಗ ನಿರ್ಮಲ ಪರಮನಿರ್ವಾಣಿಗೆ ತ್ರಿಬಂಧದಲ್ಲಿ ಸಿಲುಕಿ ಕಂಡವರಿಗೆ ಕಾರ್ಪಣ್ಯಬಡಲೇತಕ್ಕೆ? ಇಂತೀ ಗುಣದಲ್ಲಿ ತಾವು ತಾವು ಬಂದುದನರಿಯದೆ ತಮಗೆ ವಂದಿಸಿ ನಿಂದಿಸುವರಂಗವನರಿಯದೆ ಮತ್ತೆ ಲಿಂಗಾಂಗಿಗಳೆಂದು ನುಡಿವ ಜಗ ಸರ್ವಾಂಗ ಭಂಡರ ಕಂಡು ನುಡಿದಡೆ ಸಮಯಕ್ಕೆ ಹಾನಿ. ಸುಮ್ಮನಿದ್ದಡೆ ಜ್ಞಾನಕ್ಕೆ ಭಂಗ. ಉಭಯವನೂ ಪ್ರತಿಪಾದಿಸದಿದ್ದಡೆ, ತನ್ನಯ ಭಕ್ತಿಗೆ ಇದಿರೆಡೆಗೇಡು. ಇದು ಚುನ್ನವಲ್ಲ, ಎನ್ನಯ ಕೇಡು. ಈ ಗುಣ ಚೆನ್ನಬಸವಣ್ಣಪ್ರಿಯ ಕಮಳೇಶ್ವಲಿಂಗ ಸಾಕ್ಷಿಯಾಗಿ.
--------------
ಶ್ರೀಗುರು ಪ್ರಭುನ್ಮುನೀಶ್ವರ
ನಮ್ಮ ಗಣಂಗಳ ಸಹವಾಸದಿಂದೆ ಏನೇನು ಫಲಪದವಿಯಾಯಿತ್ತೆಂದಡೆ, ಅಷ್ಟಾವರಣಂಗಳು ಸಾಧ್ಯವಾದವು. ಸಾಧ್ಯವಾದ ಕಾರಣ, ಶ್ರೀಗುರುವು ಎನ್ನ ಕರಸ್ಥಲಕ್ಕೆ ಲಿಂಗವ ಕೊಟ್ಟ, ಎಂದೆಂದಿಗೂ ಸತಿ-ಪತಿ ಭಾವ ತಪ್ಪಬೇಡವೆಂದು ಗಣಂಗಳ ಸಾಕ್ಷಿಯ ಮಾಡಿ, ನೀನು ಅಂಗವಾಗಿ ಲಿಂಗವೇ ಪ್ರಾಣವಾಗಿರಿಯೆಂದು ಇಬ್ಬರಿಗೂ ಆಜ್ಞೆಯ ಮಾಡಿದ ಕಾರಣ ಎನ್ನಂಗವೇ ನಿನ್ನಂಗ, ಎನ್ನ ಪ್ರಾಣವೇ ನಿನ್ನ ಪ್ರಾಣ. ನಿನ್ನ ಪ್ರಾಣವೇ ಎನ್ನ ಪ್ರಾಣವಾದ ಮೇಲೆ ಎನ್ನ ಮಾನಾಪಮಾನ ನಿಮ್ಮದಯ್ಯಾ, ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ. ನೀವು ಈರೇಳು ಲೋಕದ ಒಡೆಯರೆಂಬುದ ನಾನು ಬಲ್ಲೆನಯ್ಯಾ. ಬಲ್ಲೆನಾಗಿ, ಪುರುಷರ ದೊರೆತನ ಹೆಂಡರಿಗಲ್ಲದೆ ಬೇರುಂಟೆ? ಎನ್ನ ಸುಖದುಃಖವೆ ನಿನ್ನದಯ್ಯ, ನಿನ್ನ ಸುಖದುಃಖವೆ ಎನ್ನದಯ್ಯ, ಅದಕ್ಕೆ ಎನ್ನ ತನುಮನಧನವ ಸೂಸಲೀಯದೆ ನಿಮ್ಮೊಡವೆ ನೀವು ಜೋಕೆಯ ಮಾಡಿಕೊಳ್ಳಿರಿ. ಜೋಕೆಯ ಮಾಡದಿದ್ದಡೆ ಗಣಂಗಳಿಗೆ ಹೇಳುವೆ, ಏಕೆಂದರೆ ಗಣಂಗಳು ಸಾಕ್ಷಿಯಾಗಿದ್ದ ಕಾರಣ. ಆಗ ಆ[ಣೆ]ಯ ಮಾತು ಹೇಳಬಹುದೆಯೆಂದಡೆ ಆಗ ಎನಗೆ ಪ್ರತ್ಯುತ್ತರವಿಲ್ಲ ಸ್ವಾಮಿ. ನಿಮ್ಮ ಒಡವೆ ನಿಮಗೆ ಒಪ್ಪಿಸುವೆನೆಂದರುಹಿದನು ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಓಂಕಾರದಲ್ಲಿ ಉಗ್ಘಡಿಸುತ್ತಿರಲಾಗಿ, ಕೆಲಬಲದವರು ಓಡರಿನ್ನೆಂತೊ ? ಅದು ಎನ್ನಾಜ್ಞೆಯಲ್ಲ; ಎನ್ನೊಡೆಯನ ಹಂದೆತನ. ಸುಮ್ಮನಿರ್ದಡೆ ಎನ್ನ ಕೇಡು, ಹೇಳಿದಡೆ ಒಡೆಯಂಗೆ ಹಾನಿ. ಕೂಡಲಸಂಗಮದೇವರಲ್ಲಿ ಬಸವಣ್ಣಾ ಹಿಂಗದಿರು ನಿನ್ನ ಭೃತ್ಯನೆಂದು.
--------------
ಉಗ್ಘಡಿಸುವ ಗಬ್ಬಿದೇವಯ್ಯ
ಭಕ್ತನಾದಲ್ಲಿ ಅರ್ಥಪ್ರಾಣ ಅಭಿಮಾನವೆನ್ನದೆ, ಮಾಡಿ ನೀಡಿ ಸಂದೇಹವ ಮಾಡಿದಲ್ಲಿಯೆ ಸಿಕ್ಕಿತ್ತು ಭಕ್ತಿಗೆ ಹಾನಿ, ಸತ್ಯದ ಬಾಗಿಲು ಮುಚ್ಚಿತ್ತು. ಆರೇನಾದಡೂ ಆಗಲಿ ಭಕ್ತಂಗೆ ಸತ್ಯವೆ ನಿತ್ಯದ ಬೆಳಗು. ಆ ಭಕ್ತನಂಗ ಸದಾಶಿವಮೂರ್ತಿಲಿಂಗದ ಘಟಸಂಭವ ಪ್ರಾಣ.
--------------
ಅರಿವಿನ ಮಾರಿತಂದೆ
ಅಯ್ಯೋ ಮಹಾದೇವ ಸುಮ್ಮನೇಕಿದ್ದಪೆ ಕರುಣಿ ಮುಂಬಾಗಿಲಲು ಬಿದ್ದ ಪಶುವೈ. ಓರಂತೆ ಎನ್ನುವನು ಆರಯ್ಯದಿದ್ದಡೆ ಹಾನಿ ನಿನಗಪ್ಪುದೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->