ಅಥವಾ

ಒಟ್ಟು 21 ಕಡೆಗಳಲ್ಲಿ , 15 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ, ಸಕಲಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ, ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂದ್ಥಿಯಲ್ಲಿ ನೆನಹುಗೊಳ್ಳಿ, ಇವರಿಂದ ರುಜೆದರ್ಪಂಗಡಗು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ. ಉಕ್ಕುದನಿಕ್ಕಿದಲ್ಲಿ ಅವನ ಅರ್ಥಪ್ರಾಣ ಅಬ್ಥಿಮಾನಕ್ಕೆ ತಪ್ಪುವನಾದಡೆ ಕರ್ತೃತ್ವ ಮೊದಲೆ ಕೆಟ್ಟಿತ್ತು, ಜಂಬುಕಫಲದ ನೇಮವ ಹಿಡಿದಂತಾಯಿತ್ತು, ಅದರಂಗವ ಕಂಡು ನಿಂದಿಸಿದ ಭಕ್ತಂಗೆ. ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ. ನೆರೆ ನಂಬು ಏನ ಹಿಡಿದಲ್ಲಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಮೃತ್ತಿಕೆಯ ಲವಣ ಸ್ವಯಂಪಾಕ, ಮಿಕ್ಕಾದ ಲವಣ ಅಪ್ಪುಭೇದ. ಸಪ್ಪೆಯ ವ್ರತ ನಿಶ್ಚಿಂತ, ಅದು ದೋಷನಾಶನ, ಇಂತೀ ಉಭಯ ವ್ರತವೆ ಕಟ್ಟು. ಮಿಕ್ಕಾದ ಅರುವತ್ತೆರಡು ಶೀಲ ಸ್ವತಂತ್ರಸಂಬಂಧ, ಅವು ಎಂಭತ್ತನಾಲ್ಕು ಲಕ್ಷ ಜೀವವ್ರತದ ಸಂಬಂಧ. ವ್ರತವ ಹಿಡಿದಲ್ಲಿ, ಆ ವ್ರತಕ್ಕೆ ಅನುಸರಣೆ ಬಂದಲ್ಲಿ, ಬಂದಿತು ಬಾರದೆಂಬ ಸಂದೇಹಕ್ಕೆ ಮುನ್ನವೆ ಆತ್ಮ ನಿರಂಗವಾಗಬಲ್ಲುದೊಂದೆ ವ್ರತ. ಮತ್ತೆ ಮಿಕ್ಕಾದವೆಲ್ಲವೂ ಸಂದಣಿಯ ತಗಹು, ಪರಿಸ್ಪಂದದ ಕೊಳಕು, ಲಂದಣಿಗರ ಬಂಧದ ಮಾತಿನ ಮಾಲೆ. ಇಂತೀ ಸಂಗ ದುಸ್ಸಂಗವನರಿತು ಹಿಂಗುವದ ಹಿಂಗಿ, ತನ್ನ ಸಂಗಸುಖಕ್ಕೆ ಬಂದುದ ಕೂಡಿಕೊಂಡು, ವ್ರತಭಂಗಿತನಲ್ಲದೆ ನಿರುತ ಸ್ವಸಂಗಿಯಾದ ಸರ್ವಾಂಗಸಂಬಂಧ ಶೀಲವಂತಂಗೆ, ಬೇರೊಂದುವಿಲ್ಲ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ವಮನವ ಮಾಡಿದ ಅಪೇಯವ ಕ್ಷುಧೆಯಾಯಿತೆಂದು ಮುಟ್ಟುದು ಕುನ್ನಿ. ಅಮಲವಸ್ತು ತ್ರಿವಿಧವ ಮಲವೆಂದು ಕಳೆದು, ಮತ್ತಾಗೆ ತಲೆದೋರಿ, ಲಿಂಗ ಮುಂತಾಗಿ ಕೊಟ್ಟುಕೊಳಬಹುದೆಂದು ಸಂದೇಹವನಿಕ್ಕಬಹುದೆ? ಬಿಟ್ಟೆನೆಂಬ ಭ್ರಾಮಕವಿಲ್ಲದೆ, ಹಿಡಿದಲ್ಲಿ ಕಲೆದೋರದೆ, ಸುಖದುಃಖವೆಂಬುದನರಿಯದೆ, ನೆರೆ ಅರಿದು ಹರಿದು, ಆ ಹರಿದರಿವೆ ಕರಿಗೊಂಡು ನಿಂದಲ್ಲಿ ಆತ ಉಂಡು ಉಪವಾಸಿಯಪ್ಪ, ಬಳಸಿ ಬ್ರಹ್ಮಚಾರಿಯಪ್ಪ, ಸದ್ಯೋಜಾತಲಿಂಗದಲ್ಲಿ ಉಭಯವಳಿದ ಶರಣ.
--------------
ಅವಸರದ ರೇಕಣ್ಣ
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ, ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು. ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ. ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ? ಕಾಷ*ವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ*ಕ್ಕೆ, ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ. ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ. ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಹಿಡಿಯೆನೆಂಬುದ ಹಿಡಿದಲ್ಲಿ ಅದು ಸುರಾಪಾನ. ಒಡಗೂಡೆನೆಂದು ಮತ್ತೊಡಗೂಡಿದಡೆ ಅದು ಪರಪಾಕ. ಮತ್ತಾವುದೊಂದು ಲಿಂಗಕ್ಕೆ ಸಲ್ಲದೆಂಬುದನರಿತು ಮತ್ತೆಲ್ಲರ ಮಾತು ಕೇಳಿ ಮೆಲ್ಲನೆ ಆದಲ್ಲಿ ಆ ಗುಣ ಸಲ್ಲದು. ಇವನೆಲ್ಲವನರಿತು ಮತ್ತೆ ಸಲ್ಲದುದ ಸಲ್ಲಿಸಿದೆನಾದಡೆ ಎಲ್ಲಾ ಯೋನಿಗೆ ಕಡೆಯಪ್ಪ ಶ್ವಾನನಯೋನಿಯಲ್ಲಿ ಬಪ್ಪೆ. ಈ ಗುಣ ತಪ್ಪದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಅಕ್ಕಮ್ಮ
ಸರ್ವಾಂಗಲಿಂಗ ವ್ಯವಧಾನಿ ಎಂದು ಆತ್ಮಂಗೆ ಕಟ್ಟಮಾಡಿ, ಒಟ್ಟಾದ ತಿರುಗಿ ಮುಟ್ಟಿಹೆನೆನಬಹುದೆ? ಮತ್ತೆ ಮನಸೋತು ಮುಟ್ಟುವುದು ವಿಷಯವೊ? ನಿರ್ವಿಷಯವೊ? ಹೆಣ್ಣ ಹಿಡಿದಲ್ಲಿ ವಿಷಯ ವ್ಯಾಪಾರನಾಗಿ ಹೊನ್ನ ಹಿಡಿದಲ್ಲಿ ಸತಿ-ಸುತ ಸಕಲ ಸುಖಂಗಳಿಗೆ ಈಡೆಂದು ಅಂಡಿನ ಅಂಡಕ್ಕೆ ಹಾಕುತ್ತ, ಮಣ್ಣ ಹಿಡಿದಲ್ಲಿ ಅರೆ ಅಡಿಗಾಗಿ ಕಡಿದಾಡುತ್ತ ಆ ತೆರ ಅರಿಕೆಗೊಡಲುಂಟೆ? ಉನ್ಮತ್ತಂಗೆ ತನ್ನ ನುಡಿ ಸಸಿನವಲ್ಲದೆ ಸನ್ಮತಗುಂಟೆ ಮರವೆಯ ತೆರ? ಬಿಟ್ಟುದು ಹಿಡಿದೆನೆಂಬ ನಾಚಿಕೆ ತೋರದೆ, ದುಷ್ಟ ಜೀವವ ನೋಡಾ? ಅದು ನುಡಿಗೆಡೆಗಂಜದು, ಪುಡಿಪುಚ್ಚವಿಲ್ಲ, ಅವರ ಒಡಗೂಡಲಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 94 ||
--------------
ದಾಸೋಹದ ಸಂಗಣ್ಣ
ಭಕ್ತಂಗೊಂದೆ ವಾಕ್ಯಸ ಬಾಳೆಗೊಂದೆ ಫಲ. ವಿರಕ್ತ ಬಿಟ್ಟುದ ಹಿಡಿದಲ್ಲಿ ಮತ್ತೆ ಮುಟ್ಟಿದಡೆ ಸತ್ತನಾಯ ಹಡುಹು. ಮತ್ತೆ ಸತ್ಕ್ರಿಯೆಯಲ್ಲಿ ನಡೆವವ ತನ್ನ ನಿತ್ಯನೇಮವ ತಪ್ಪಿ, ಕೆಟ್ಟು ನಡೆದು, ಮತ್ತೆ ದ್ರವ್ಯವ ಕೊಟ್ಟು, ಭಕ್ತರೊಡೆಯರಲ್ಲಿ ತಪ್ಪ ಪರಿಹರಿಸಿಕೊಂಡಿಹೆನೆಂದು ಬಹಮಿಟ್ಟೆಯ ಭಂಡರ ಕಂಡಡೆ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗವಾಯಿತ್ತಾದಡೂ ಒಡಗೂಡಲೊಲ್ಲೆ.
--------------
ವೈದ್ಯ ಸಂಗಣ್ಣ
ನಾ ಶಸ್ತ್ರವ ಹಿಡಿದಲ್ಲಿ ಮುಮ್ಮುಖದಲ್ಲಿ ಒಂದನಿರಿಸಿ ಎರಡ ತೊಡೆವೆನು. ಪೂರ್ವಪಕ್ಷದಲ್ಲಿ ಆರನಿರಿಸಿ ಮೂರ ತೊಡೆವೆನು. ಉತ್ತರ ಪಕ್ಷದಲ್ಲಿ ಆರನಿರಿಸಿ ಮೂವತ್ತಾರ ತೊಡೆವೆನು. ಮೇಲಣ ದಂಡೆಯನೊತ್ತುವಲ್ಲಿ ಎರಡ ನಿಲಿಸಿ ಇಪ್ಪತ್ತೈದ ತೊಡೆವೆನು. ಇಂತೀ ಕೆಲಸವ ಸಾಧಿಸಿದಲ್ಲಿ, ಕಂಕುಳ ತಟ್ಟೆನು, ಮೂಗುವ ಮುಟ್ಟೆನು, ಮಂಡೆಯ ಬೋಳಿಸುವೆ, ಚಂಡಿಕೆಯನಿರಿಸುವೆನು ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ.
--------------
ಶ್ರೀಗುರು ಪ್ರಭುನ್ಮುನೀಶ್ವರ
ಅಂಗವಾರು ಗುಣದಲ್ಲಿ ಹರಿದಡೆ, ಲಿಂಗ ಮೂರೆಂದು ಕಂಡಡೆ, ಆತ್ಮ ಹಲವೆಂದು ನೋವ ಕಂಡಡೆ, ಎನ್ನ ವ್ರತಕ್ಕೆ ಅದೇ ಭಂಗ. ಒಂದ ದೃಢವೆಂದು ಹಿಡಿದಲ್ಲಿ ನಾನಾ ವ್ರತ ನೇಮ ಅಲ್ಲಿ ಸಂದಿಪ್ಪವು. ಇದಕ್ಕೆ ಸಂದೇಹವಿಲ್ಲ, ಏಲೇಶ್ವರಲಿಂಗದಾಣತಿ
--------------
ಏಲೇಶ್ವರ ಕೇತಯ್ಯ
ಒಂದು ಬಿಟ್ಟೊಂದ ಹಿಡಿದಿಹೆನೆಂಬಲ್ಲಿ ಸಿಕ್ಕಿತ್ತು ಅರಿವು, ತಮಂಧವೆಂಬ ಮಂದಿರದಲ್ಲಿ. ಹಿಡಿದುದ ಬಿಟ್ಟು, ವಾರಿಯಲ್ಲಿ ಹೊಳಹುದೋರಿದ ಮತ್ಸ್ಯಕ್ಕೆ ಹೋದ ಶಿವಬುದ್ಧಿಯಂತಾಗಬೇಡ. ಹಿಡಿದಲ್ಲಿ ಕಂಡು, ಕಂಡಲ್ಲಿ ನಿಂದು, ನಿಂದಲ್ಲಿ ಕೂಡಿ, ಕೂಡಿದಲ್ಲಿಯೇ ಉಭಯ ಬಯಲಾಯಿತ್ತು. ಐಘಟದೂರ ರಾಮೇಶ್ವರಲಿಂಗ, ತಾನು ತಾನೆ.
--------------
ಮೆರೆಮಿಂಡಯ್ಯ
ಅಜ್ಞಾನವ ಸುಜ್ಞಾನದಿಂದ ತಿಳಿಯಬೇಕೆಂಬರು ಅಜ್ಞಾನಕೂ ಸುಜ್ಞಾನಕೂ ಪದರದ ಚೀಲವೆ ? ಕ್ರೀಯಿಂದ ನಿಃಕ್ರೀಯನರಿಯಬೇಕೆಂಬರು ಕ್ರೀಗೂ ನಿಃಕ್ರೀಗೂ ಅಡಿಕಿನ ಮಡಕೆಯೆ ? ಸರ್ವಸಂಗವ ಪರಿತ್ಯಾಗವ ಮಾಡಿ, ಲಿಂಗವ ಒಡಗೂಡಬೇಕೆಂಬರು ಆ ಲಿಂಗವೇನು ವಿಧಾಂತರ ಲಾಗಿನ ಮೆಚ್ಚೆ ? ಮೂರ ಬಿಟ್ಟು, ಒಂದ ಮುಟ್ಟಿದಲ್ಲಿ ಅಜ್ಞಾನವಡಗಿತ್ತು. ಆರ ಬಿಟ್ಟು, ಮೂರ ಹಿಡಿದಲ್ಲಿ ಕ್ರೀ ನಷ್ಟವಾಗಿ ನಿಃಕ್ರೀ ನೆಲೆಗೊಂಡಿತ್ತು. ಸರ್ವಾತ್ಮನ ಗುಣದ ವಿವರವ ತಿಳಿದು ಆತ್ಮನ ಗುಣವ ತನ್ನದೆಂದರಿದಲ್ಲಿ ಸರ್ವೇಂದ್ರಿಯ ನಷ್ಟ, ನಿಶ್ಚೈಸಿದಲ್ಲಿ ಸರ್ವವಿರಕ್ತನು. ಇಂತೀ ಗುಣ ವಿವರವ ಮರೆದು ಊರ ಗುದ್ದಲಿಯಲ್ಲಿ ನಾಡ ಕಾಲುವೆಯ ತೆಗೆಯುವವನಂತೆ ಬಹುಬಳಕೆಯ ಬಳಸದೆ ಅರಿವು ತಲೆದೋರಿದಲ್ಲಿ, ಉಳಿಯಿತ್ತು ಪಾಶ ಕೆಲದಲ್ಲಿ ವೀರಶೂರ ರಾಮೇಶ್ವರಲಿಂಗವನರಿಯಲಾಗಿ.
--------------
ಬಾಲಬೊಮ್ಮಣ್ಣ
ಕ್ರೀಯ ಹಿಡಿದಲ್ಲಿ ಸಂದೇಹಕ್ಕೊಳಗಾಗಿ, ನಿಃಕ್ರೀಯೆ ಎಂದಲ್ಲಿ ಆತ್ಮಂಗೆ ಗೊತ್ತ ಕಾಣದೆ, ಫಲವಿಲ್ಲದ ವೃಕ್ಷದ ಹೂವ ಕಂಡು, ವಿಹಂಗಕುಲ ಚರಿಸದೆ ಮಚ್ಚಿದಂತೆ, ಕಡೆಯಲ್ಲಿ ಹೊಲಬುಗೆಡದೆ, ಅರಿ ನಿಜವಸ್ತು ಒಂದೆಂದು, ಕುರುಹಿನಲ್ಲಿ ಕುಲಕೆಡದೆ ಕೂಡು, ವೀರಬೀರೇಶ್ವರಲಿಂಗವ.
--------------
ವೀರ ಗೊಲ್ಲಾಳ/ಕಾಟಕೋಟ
ಆವುದೊಂದು ಕರ್ಮಂಗಳ ವ್ಯಾಪಾರಿಸಿ ಮಾಡುವಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯವನರಿತು ಆ ವ್ರತ ಕ್ರೀ ವರ್ತನಂಗಳ ಹಿಡಿದಲ್ಲಿ ಹಿಂದಣ ನಗೆಗೆಡೆ, ಮುಂದಣ ಹಾಸ್ಯರಸಕ್ಕೆ ಒಳಗಲ್ಲದೆ ನುಡಿದ ಮಾತಿಂಗೆ ನಡೆ ಶುದ್ಧವಾಗಿ, ಆ ನಡೆವ ನಡೆಗೆ ಕ್ರೀ ಶುದ್ಧವಾಗಿ, ಆ ಕ್ರೀಯಲ್ಲಿ ವ್ರತಭಂಗವಿಲ್ಲದೆ ಇಪ್ಪುದು, ಸದ್ಭಕ್ತನ ಸಂಬಂಧ. ಈ ಗುಣ ಸಂಗನಬಸವಣ್ಣನ ಶ್ರದ್ಧೆ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ಕ್ರಿಯಾಮಾರ್ಗ.
--------------
ಬಾಹೂರ ಬೊಮ್ಮಣ್ಣ
ಇನ್ನಷ್ಟು ... -->