ಅಥವಾ

ಒಟ್ಟು 50 ಕಡೆಗಳಲ್ಲಿ , 24 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಕರತರ್ಕದ ಪ್ರಸ್ತಾವನ ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳು ಬೊಗಳುತ್ತಿರೆ, ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿ ಕೂಗುತ್ತಿರೆ, ಹಸಿವು ತೃಷೆ ನಿದ್ರೆ ಜಾಡ್ಯವೆಂಬ ನಾಲ್ಕು ಸೂಕರ ಮುತ್ತಿಕೊಂಡಿರೆ, ಸಪ್ತವ್ಯಸನಗಳೆಂಬ ಏಳು ಬೆಕ್ಕು ಸುಳಿವುತ್ತಿರೆ, ಪಂಚೇಂದ್ರಿಯವೆಂಬ ಐದು ವರ್ಣದ ಹುಲಿ ನುಂಗುತ್ತಿರೆ, ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರು ಮುಟ್ಟಿ ತನ್ನಂಗದೊಳು ನಾನು ನೀನೆಂಬ ಅಹಂಕಾರದ ಜಾಗಟೆಯ ಪಿಡಿದು ಅಜಾÕನವೆಂಬ ಕುಡಿಯಲ್ಲಿ ಬಾರಿಸಿ, ಇಂತಪ್ಪ ಪರಿಯಲ್ಲಿದ್ದ ಸೂತಕಂಗಳ ಪರಿಯದೆ ಹೊರಮಾತ ಕೇಳಬಾರದೆಂದು ಜಾಗಟೆಯ ಹೊಯ್ಸಿ ನಾದದ ಮರೆಯಲ್ಲಿ ಆಹಾರವ ಕೊಂಬ ಸೇವಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ತಲೆಯಿಲ್ಲದ ಕಾಗೆ ನೆಲದಲ್ಲಿ ನಡೆಯಿತ್ತು. ಹುಲಿ ನಲಿದು ಗಿಲಿಗಿಸಿ ಗೆಜ್ಜೆಗಟ್ಟಿ ಒಲೆದಾಡಿತ್ತು. ಬಲುಹೆನಿಸಿದ ಕರಡಿ ಹಾಡಿ ಹರಸಿ ಬೆಳೆಯಿತ್ತು. ಕಾಳರಕ್ಕಸಿಯ ಮಗುವು ಚಂದ್ರಸೂರ್ಯರ ರಾಟಾಳದ ಹುರಿಯೊಳಗೆ ತಿರಿಗಿತ್ತು. ಕಳವಳಿಸುವ ಕಪಿಯ ಭೂತ ಹೊಡೆದು, ಚೋಳೂರೆ ಘಾಳಿಯೊಳು ಸಿಕ್ಕಿ, ಸೌರಾಷ್ಟ್ರ ಸೋಮೇಶ್ವರನ ಕಾಣದೆ ಕನ್ನಡಕದ ಕಣ್ಣಿನಂತೆ ಕಣ್ಣೆನಿಸಿ ಕಣ್ಣುಗೆಟ್ಟಿತ್ತು.
--------------
ಆದಯ್ಯ
ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ, ತಗರ ತಡದು, ಹಿಂಡನೊಬ್ಬುಳಿತೆಮಾಡಿ, ಹುಲಿ ತೋಳ ಚೋರ ಭಯಮಂ ಕಳೆದು, ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.
--------------
ವೀರ ಗೊಲ್ಲಾಳ/ಕಾಟಕೋಟ
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ, ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು. ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ. ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ, ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ. ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ. ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ. ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ ಮರುಳಾಗಿ ಶಿವಲಿಂಗ ಶಿವಪೂಜೆಗೆ ಅನುಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ. ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ. ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ, ಕಾಳಗವಾರ್ತೆಯನಾಡಿ, ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ. ಕಂದ :ಶ್ರೀಕಂಠ ಶಿವನ ನೆನೆಯದೆ ಲೌಕಿಕ ವಾರ್ತೆಯನೆ ಪೊರಹುತ್ತಿರ್ದಪುದೆನ್ನೀ ಬಾಕುಳಿಕ ಜಿಹ್ವೆಯಿದರಿಂ ನಾ ಕರನೊಂದೆ ಪ್ರಸನ್ನಶಂಕರಲಿಂಗ | 1 | ಎನ್ನಯ ನಾಲಿಗೆಯ ನಿಮ್ಮಯ ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ ಹೊನ್ನಹಾವುಗೆಯ ಮಾಡೆಲೆ ಪನ್ನಗಕಟಕಾ ಪ್ರಸನ್ನಶಂಕರಲಿಂಗ | 2 | ಕಾಳಗದ ವಾರ್ತೆಯಂ ಸ್ಮರ ಲೀಲೆಯ ಪದಗಳ ಗಳಹುತಿರ್ದಪುದೆನ್ನೀ. ನಾಲಗೆಯಂ ಬೇರುಸಹಿತಂ ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ | 3 | ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ ಸ್ವಾನುಭಾವಸದ್ವಾಸನೆಯ ಮರೆದು ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ. ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ. ಇವ ನಿರಸನವ ಮಾಡೇನೆಂದರೆನ್ನಳವಲ್ಲ , ನಿಮ್ಮ ಧರ್ಮ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನ ಮಡದಿ ಹಾಲ ಕಾಸುವಾಗ, ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು. ಮಡದಿಯ ಬಿಡಬಾರದು, ಹಾಲ ಚೆಲ್ಲಬಾರದು. ಹಾವಿನ ವಿಷ ಹಾಲಿನಲ್ಲಿ ಸೋರಿತ್ತು, ಇದಕಿನ್ನಾವುದು ತೆರ? ಕ್ರೀಯ ಬಿಡಬಾರದು, ಅರಿವಿಂಗೆ ಆಶ್ರಯ ಬೇಕು. ಅರಿವನರಿದೆಹೆನೆಂದಡೆ ಪ್ರಪಂಚಕ್ಕೆ ಒಡಲಾಯಿತ್ತು. ಹುಲಿ ಬಾವಿ ಹಾವಿನ ಎಡೆಯಲ್ಲಿ ಸಿಕ್ಕಿದ ತೆರ ಎನಗಾಯಿತ್ತು. ಈ ಸಂದೇಹವ ಬಿಡಿಸು, ಸದಾಶಿವಮೂರ್ತಿಲಿಂಗವೆ, ನಿನ್ನ ಧರ್ಮ.
--------------
ಅರಿವಿನ ಮಾರಿತಂದೆ
ಆನೆಯ ನುಂಗಿದ ಹುಲಿ, ಹುಲಿಯ ನುಂಗಿದ ಸರ್ಪ, ಸರ್ಪನ ನುಂಗಿದ ಸಿಂಹ, ಸಿಂಹನ ನುಂಗಿದ ಮರೆ, ಮರೆಯ ನುಂಗಿದ ಭಲ್ಲೂಕ ಇಂತಿವರು ಹಕ್ಕಿಯ ಹೊಲನಲ್ಲಿ ತಮ್ಮ ತಮ್ಮ ವೈರತ್ವದಿಂದಲಿರುವುದಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು. ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ. ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು. ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು, ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು, ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು. ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ, ಉರಿಯ ಮಡುವನೀಂಟಿ, ಸರಬಾವಿಯ ಕುಡಿದು, ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ, ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು. ಅದರ ತೊಡಿಗೆಯ ಕೇಳಿಹರೆಂದಂಜಿ, ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?
--------------
ವಚನಭಂಡಾರಿ ಶಾಂತರಸ
ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು ನಾಲ್ಕೂ ದೆಸೆಯಲಟ್ಟುತ ಬರೆ ಕಂಡು ಭಯದಿಂದ ಹೋಗ ದೆಸೆಯಿಲ್ಲದೆ ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ ಜೇನುಹುಳು ಮೈಯನೂರುವಾಗ ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು ನಿರ್ವಿಷಯನಾಗಿ ನಿಂದ ನಿಲವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಸಂಸಾರವೆಂಬ ಅರಣ್ಯದೊಳು ಬಿದ್ದೆನು. ಆಸೆಯೆಂಬ ಹುಲಿ ಬಂದು ಹಿಡಿಯಿತ್ತಯ್ಯ ಎನ್ನ. ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿ ಆಸೆಯೆಂಬ ಹುಲಿಯ ಕೊಂದು ನಿಮ್ಮತ್ತ ತೆಗೆದುಕೊಳ್ಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶುದ್ಧಸಾಳಾಂಗಗತಿ ಗಮಕವಡೆದ ರಾಗದಲ್ಲಿ ಪರಿಠಾಯಕದಳ ಕಮ್ಮಟನು ಪೂಜಿತನು ರಸವನಾಲಿಸುತ ಗಜಗಮನೆಯರು ಆಡಿ ಹಾಡಿ ರುದ್ರವೀಣೆಯ ಬಾರಿಸುವಲ್ಲಿ ಬಧಿರ ಮೂಕ ಅಂಧಕರ ಮುಂದೆ ನೃತ್ಯ ತೋರಬಹುದೆ ? ಹಜ್ಜೆಯ ಹರಿಣ ಭುಜಂಗ ಜಂಬುಕ ಹುಲ್ಲೆಯ ತೋಳ ಹುಲಿ ಕರಡಿ ಒಬ್ಬುಳಿಯಾಗಿ ನೆರೆದಡೆ ದೇವಸಭೆಯಾಗಬಲ್ಲುದೆ ? ಶುದ್ಧಧವಳಿತ ಭಾನುಕೋಟಿತೇಜಪ್ರಭೆಮಂಡಲವ ರವಿ ಉದಯ ಒಬ್ಬನೆನಬಹುದೆ ದೇವ ಬಳ್ಳೇಶ್ವರ ವೀರಭದ್ರವತಾರವಾ ?
--------------
ಬಳ್ಳೇಶ ಮಲ್ಲಯ್ಯ
ಒಂದು ಹಾಳಭೂಮಿಯ ಹುಲಿಬಂದು ಎನ್ನ ಎಳಗರುವ ಭಕ್ಷಿಸಿತ್ತಲ್ಲಾ! ಆ ಹುಲಿ ಹಾಳಿಗೆ ಹೋಗದು. ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು. ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ ?
--------------
ಗಂಗಾಂಬಿಕೆ
ಇದು ಅರಿಬಿರಿದು ಇದಾರಿಗೂ ಅಸಂಗ. ಹಾವು ಹದ್ದಿನಂತೆ ಹುಲಿ ಹುಲ್ಲೆಯಂತೆ ಹಾವು ಹರಿಯ ಕೂಟದಂತೆ ಅರಿ ಬಿರಿದಿನ ಸಂಗ. ತೆರಹಿಲ್ಲದ ಆಲಯ, ಭಟರಿಲ್ಲದ ಕಟಕ, ದಿಟಪುಟವಿಲ್ಲದ ಜಾವಟಿ, ಎಸಕವಿಲ್ಲದ ಒಲುಮೆ, ರಸಿಕರಿಲ್ಲದ ರಾಜನಗರ ಇಂತಿವರ ಉಪಸಾಕ್ಷಿ ಸಂತೈಸುವದಕ್ಕೆ, ಭ್ರಾಂತನಳಿವುದಕ್ಕೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಆಮ್ನೆಯ ಅನುಮಾನದಲ್ಲಿ ಅರಿದು ಅಭಿನ್ನವಿಲ್ಲದೆ ಅವಿರಳನಾಗಾ, ಮನಸಿಜಪಿತಪ್ರಿಯ ಶ್ರುತಿ ನಾಮ ದೂರ ಗತಿ ಮತಿ ಈವ ರಾಮೇಶ್ವರ ಲಿಂಗದಲ್ಲಿ ಪ್ರತಿಭಿನ್ನವಿಲ್ಲದ ಶರಣಂಗೆ.
--------------
ಗುಪ್ತ ಮಂಚಣ್ಣ
ಹಾವು ಸತ್ತು ಹೇಳಿಗೆಯ ಹೊತ್ತಾಡುವವರೆಲ್ಲರೂ ಎನ್ನವರು. ಹುಲಿ ಸತ್ತು ಗೂಡ ಹೊತ್ತಾಡುವವರೆಲ್ಲರೂ ಎನ್ನವರು. ಮಕ್ಕಳಿಲ್ಲದ ಬಂಜೆ ಗೊತ್ತಿಲ್ಲದ ರೂಪು ಮಾರಿ ಮಿಕ್ಕುದು ಎನ್ನೊಡವೆ. ರೂಪು ರುಚಿ ತೃಪ್ತಿ ಭಾವ ಅದು ನಿನ್ನೊಡವೆ. ನನಗೂ ನಿನಗೂ ತತ್ತುಗೊತ್ತು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->