ಅಥವಾ

ಒಟ್ಟು 33 ಕಡೆಗಳಲ್ಲಿ , 13 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಮಣ್ಣಿನ ಗುಣವನರಿದು ಕಳೆದಡೆ, ಗುರು[ಸಿ]ದ್ಧಾತ್ಮಿಯೆಂಬೆ. ಹೆಣ್ಣಿನ ಗುಣವನರಿದು ಕಳೆದಡೆ, ಲಿಂಗಸಿದ್ಧಾತ್ಮಿಯೆಂಬೆ. ಹೊನ್ನಿನ ಗುಣವನರಿದು ಕಳೆದಡೆ, ಜಂಗಮ ಸಿದ್ಧಾತ್ಮಿಯೆಂಬೆ. ಈ ತ್ರಿವಿಧ ಗುಣವನರಿಯದೆ, ವೇಷದ ಬಲುಮೆಯ ತೂತಮಾತುಗರನೊಪ್ಪ, ಅಜಾತರನಲ್ಲದೆ ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ. ಇವರಿಬ್ಬರ ಸಂಗಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯಾ. ಸರ್ವಾಂಗಸಾಹಿತ್ಯ ನಾನು ಹುಟ್ಟಿದ ಬಳಿಕ. ತಂದೆ ತಾಯಿಗಳಿಬ್ಬರು ಲಿಂಗವೆಂಬ ಹೆಣ್ಣ ತಂದು, ಎನ್ನ ಕೊರಳಲ್ಲಿ ಕಟ್ಟಿ ಮದುವೆಯ ಮಾಡಿದರಯ್ಯಾ. ಆ ಹೆಣ್ಣಿನ ಕೈಹಿಡಿದು ನಾನು ಬದುಕಿದೆನು. ಆ ಹೆಣ್ಣಿನ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದನಯ್ಯಾ. ಆ ಮಗ ಹುಟ್ಟಿದ ಮುನ್ನವೆ ಎನಗೆ ಮರಣವಾಯಿತ್ತು. ಲಿಂಗವೆಂಬ ಹೆಂಡತಿ ಮುಂಡೆಯಾದಳು. ತಂದೆ ತಾಯಿಗಳಿವರಿಬ್ಬರೂ ನನ್ನ ಒಂದಾಗಿ ಅಡಗಿ ಹೋದರು. ಇನ್ನು ಮುನ್ನಿನ ಪರಿ ಎಂತುಟಲ್ಲವಾಗಿ ನಾನು ಬದುಕಿದೆ ಕಾಣಾ, ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನ ಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ, ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ, ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ, ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು ಅವರಿಗೆ ಅಂಜಿ ಮನದ ಕೊನೆಯಲ್ಲಿ ಮಂತ್ರರೂಪಾಗಿ ನಿಂದ ಕಾರಣ ಹೊನ್ನಿನ ನೆನಹು ಕೆಟ್ಟಿತ್ತು ನೋಡಾ ! ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ ಹೆಣ್ಣಿನ ನೋಟ ಕೆಟ್ಟಿತ್ತು. ಕರಕಮಲ ಗದ್ದುಗೆಯ ಮಾಡಿದ ಕಾರಣ ಮಣ್ಣಿನ ಧಾವತಿ ಬಿಟ್ಟುಹೋಯಿತ್ತು. ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ. ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು. ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿದ್ಥಿ ನಿಧಾನಗಳುಂಟು, ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ. ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ. ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು. ಅವರ ನಾಮವ ಪೇಳ್ವೆನು - ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು, ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು. ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು. ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ ಹೇಳಿಹೆನು ಕೇಳಿರೆ ಲಿಂಗವೆ. ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು, ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ, ತನುತ್ರಯವನೆ ವಸ್ತ್ರವ ಮಾಡಿ, ಇವುಗಳನೆ ಅವರು ನಮಗೆ ಕೊಟ್ಟರು. ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು. ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು. ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು. ನೂರೆಂಟು ನಾಮ ಹರಗÀಣ ಕೊರಳಲಿ ಹಾಕಿದರು. ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ ಜೋಡಂಗಿಯ ಮಾಡಿ ತೊಡಿಸಿದರು. ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು. ಆವ ಕಂಟಕವು ಬಾರದ ಹಾಗೆ ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು. ಭಕ್ತಿಯೆಂಬ ನಿಧಾನವ ಕೊಟ್ಟು, ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು. ಅಷ್ಟಾವರಣವೆ ನಿದ್ಥಿನಿಧಾನವೆಂದು ಹೇಳಿದರು. ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ. ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಹೊನ್ನಿನಾಸೆ ತನುವಿನೊಳಿಂಬುಗೊಂಡು ಪನ್ನಗಧರ ನಿಮ್ಮ ಮರೆಸಿತಯ್ಯ. ಹೆಣ್ಣಿನ ವಿಷಯ ಮನದೊಳಿಂಬುಗೊಂಡು ಪನ್ನಗಧರ ನಿಮ್ಮಿಂದರಿವ ಜ್ಞಾನವ ಮರೆಸಿತಯ್ಯ. ಮಣ್ಣಿನಾಸೆ ತನು ಮನ ಬುದ್ಧಿಯೊಳಿಂಬುಗೊಂಡು ಜ್ಞಾನದಿಂದರಿವ ಪುಣ್ಯಫಲವ ಮರೆಸಿತಯ್ಯ. ಹೊನ್ನು ಹೆಣ್ಣು ಮಣ್ಣು ಮೂರೆಂಬ ಭಿನ್ನ ವಿಷಯವ ನೆಚ್ಚಿ. ಸಂಸಾರಸಾಗರದೊಳು ಮುಳುಗಿದವರು ನಿಮ್ಮನೆತ್ತ ಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೊನ್ನಿನ ಆಪ್ಯಾಯನಕ್ಕೆ ಬೋಳಾದವನಲ್ಲ, ಮಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ, ಹೆಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ. ಕೂಡಲಸಂಗಮದೇವರಲ್ಲಿ ಎನಗಾರು ಇಲ್ಲವೆಂದು ಬೋಳಾದನೆನ್ನ ಪ್ರಭುದೇವರು.
--------------
ಬಸವಣ್ಣ
ಹೆಣ್ಣಿನ ರೂಪು ಕಣ್ಣಿಗೆ ರಮ್ಯವಾಗಿ ತೋರುವದಿದು ಕರಣಂಗಳ ಗುಣ ಕಾಣಿರಣ್ಣ. ಕರಣದ ಕತ್ತಲೆಯ ಲಿಂಗಬೆಳಗನುಟ್ಟು ಕಳೆದು ಮುಕ್ಕಣ್ಣನೆ ಕಣ್ಣಾಗಿಪ್ಪ ಶರಣ ಬಸವಣ್ಣನ ಪಾದವ ತೋರಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುಂಜುರಂಜಿನ ಮೋಹದ ಸಂಜೆ ಬೆಳಗ ಸಂಯುಕ್ತರು ನಿಮ್ಮಾರ್ಚನೆಯಾರ್ಪಣವೆಂದು ರಂಜಿಕ್ಕಿ ಮಾಡುವರಯ್ಯಾ, ಎಲೆ ನಿರಂಜನ ನಿಸ್ಸೀಮ ನಿಗಮಗೋಚರ ಲಿಂಗವೇ, ಅರ್ಥ ವಿಷಯಕ್ಕೆ ಅರ್ಚನೆಯನೆಸಗುವರಯ್ಯಾ ಬಲ್ಲಂತೆ. ಹೆಣ್ಣಿನ ವಿಷಯಕ್ಕೆ ನಲಿನಲಿದರ್ಚನೆಯ ಮಾಡುವರಯ್ಯಾ ಮೈದುಂಬಿ. ಹಲವುಪರಿ ಅಶನಕ್ಕೆ ಕುನ್ನಿಗಳಂತೆ ಬಾಲವ ಬಡಿದು, ನಿಮ್ಮ ನೆನೆವನೆಬ್ಬಿಸಿ ಗರ್ಭವ ತುಂಬಿ ಮಬ್ಬುಗೊಂಡು ಬೀಳುವ ಮಲಭುಂಜಕ ಮನುಜರು ನಿಮಗಾರ್ಚನೆಯಾರ್ಪಣೆ ಮಾಡಿಕೊಂಬ ಪರಿಯೆಂತಯ್ಯಾ ? ಈ ವೇಷಧಾರಿಗಳಿಗೆ ನಿಮ್ಮ ನಿಜಾನಂದ ಶೇಷಪ್ರಸಾದ ನಿಲುವೆಂತು ಸಿಕ್ಕುವುದಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ತಾನು ತನ್ನ ವಿನೋದವನುಳಿದು ಬಂದವನಲ್ಲ; ಬಯಲುವಿಡಿದು ನಿಂದವನಲ್ಲ; ಹುಸಿ ಹುಂಡನ ಕೈಯ ಕೊಂಡವನಲ್ಲ; ಗಂಡು ಹೆಣ್ಣಿನ ದಾರಿಯ ನಡೆದವನಲ್ಲ; ತನ್ನ ತಾಯಿ ತಂದೆಯ ಮರೆದವನಲ್ಲ; ತಾನೊಂದು ಬೇರೆ ನೀಡಿಕೊಂಡುಂಡು ಹೋಗುವನಲ್ಲ. ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನು ತಾನಾಗಿರ್ದ ಪ್ರಸಾದ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೆಣ್ಣ ನಂಬಿ ತನು ಮನ ಧನವನಿತ್ತೆಯಲ್ಲಾ ಎಲೆ ಮನವೆ ? ಇದ್ದುದನೆಲ್ಲವ ಕೊಂಡು ಬತ್ತಲೆ ಮಾಡಿ ತಲೆಯ ಬೋಳಿಸಿ ಕೈಯಲ್ಲಿ ಹಂಚ ಕೊಟ್ಟು ಮತ್ತೊಬ್ಬಗಾಸೆ ಮಾಡುತ್ತಿದ್ದಾಳೆ ಕಂಡಾ ! (ನಿನ್ನ?) ಮುಂದೆ ಮನಕೆ ಬಂದ ಪುರುಷನ ನೋಡುವಳು ಕಾಣಾ. ಮತ್ತವಳ ನಂಬಿ ನಚ್ಚು ನಾಚಿಕೆಯಿಲ್ಲದ ಭಂಡ ಮನವೆ ! ಹೆಣ್ಣಿನ ಪಾಟಿಯ ತೊರೆದು ಕುಡು ಭಕ್ತ್ಯಂಗನೆಗೆ ತನು ಮನವ ಮುಕ್ತ್ಯಂಗನೆ ನಿನಗೊಲಿವಳು. ಬೇಗ ವಿರಕ್ತನಾಗಿ, ಹೆಣ್ಣ ಜಾಡಿಸಿ, ತಲೆಯ ಬೋಳಿಸಿಕೊಂಡು, ಜಾಡಿಗಂಬಳಿಯ ಮುಸುಕಿಟ್ಟು ಕರ್ಪರ ಒಂದರೊಳು ದೇಶಾಂತರಿಯಾಗು, ಜಡನ ತೆಗಳಿಸಿ (ಜಡವತಿಗಳಿಸಿ?) ಮುಂದೆ ಲಿಂಗವಹೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ ಕಣ್ಣಿಂದ ಕಂಡು ಕಾಮಾತುರದಿಂದ ತಿಲದಷ್ಟು ಸುಖಕ್ಕಾಗಿ ಬಣ್ಣಗುಂದಿ ಭ್ರಮಿತರಾದರು ನೋಡಾ ಮನುಜರು. ತೆರನರಿಯದೆ ಹೆಣ್ಣಿನ ಮುಖಕಳೆ ತನ್ನ ಕೆಡಿಸುವ ಬಣ್ಣದ ಛಾಯೆಯೆಂದರಿಯರು ನೋಡಾ. ಹೆಣ್ಣಿನ ಸೋಲ್ಮುಡಿ ತಮ್ಮ ಕಟ್ಟುವ ಪಾಶವೆಂದರಿಯದೆ ಹೆಣ್ಣಿನ ಮುಗುಳನಗೆ ತಮ್ಮ ಮುದ್ದಿಸಿ ಭವಕೆ ತರುವ ಮೋಹವೆಂದರಿಯರು ನೋಡಾ. ಹೆಣ್ಣಿನ ಚುಂಬನ ತಮ್ಮ ಹೀರುವ ಭೂತವೆಂದರಿಯರು ನೋಡಾ. ಹೆಣ್ಣಿನ | ನೋಟ ತಮ್ಮ ಇರಿವ ಕಠಾರಿಯೆಂದರಿಯರು ನೋಡಾ. ಹೆಣ್ಣಿನ ಮೊಲೆ ತಮ್ಮ ಭವಕ್ಕಿಕ್ಕಿ ಈಡಿಸುವ ಗುಂಡೆಂದರಿಯರು ನೋಡಾ. ಹೆಣ್ಣಿನ ಯೋನಿ ತಮ್ಮ ತಿರುಹುವ ಗಾಣವೆಂದರಿಯರು ನೋಡಾ. ಇಂತಪ್ಪ ಹೆಣ್ಣಿನ ಮುದ್ದುಮುಖ ಮೊಲೆ ನೋಟ ಮುಗುಳನಗೆ ಚುಂಬನ ಭವದ ಭ್ರಾಂತಿಗೆ ತರಿಸಿ ಹಿಂಡಿ ಹೀರಿ ಹಿಪ್ಪೆಯ ಮಾಡಿ ನುಂಗುವ ಮೃತ್ಯುದೇವತೆಯೆಂದರಿಯರು ನೋಡಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ ಆಗು_ಚೇಗೆಯ ರಾಗ_ದ್ವೇಷ, ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ. ಅಲ್ಪಭೂಮಿ ಅಲ್ಪಂಗಲ್ಲದೆ ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ ಅಂತಹ ಬ್ರಹ್ಮಾಂಡವನೇಕವನೂ ಆಭರಣವ ಮಾಡಿಯಿಟ್ಟುಕೊಂಡಿಪ್ಪ, ಅಂತಹ ಆಭರಣದಿಂದ ಪೂಜೆಗೊಂಡಿಪ್ಪ, ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ. ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ, ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ? ಉತ್ತಮ ಮಧ್ಯಮ ಕನಿಷ* ನಿಕೃಷ್ಟ ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ; ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ? ವೇದಶಾಸ್ತ್ರ ಪುರಾಣಾಗಮಾದಿಯಾಗಿ ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ? ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಭೂಮಿಯ ಹಿಡಿದು ಭೂಮಿಯ ಸುಖವನರಿಯರಯ್ಯಾ ಸತ್ಕ್ರಿಯಾ ಸಂಬಂಧವಾಗಿ. ಹೆಣ್ಣ ಹಿಡಿದು ಹೆಣ್ಣಿನ ಸುಖವನರಿಯರಯ್ಯಾ ಸಮ್ಯಕ್‍ಜ್ಞಾನಸನ್ನಿಹಿತನಾಗಿ. ಹೊನ್ನ ಹಿಡಿದು ಹೊನ್ನಿನ ಸುಖವನರಿಯರಯ್ಯಾ ಮಹಾನುಭಾವಸಮೇತವಾಗಿ. ಈ ತ್ರಿವಿಧದ ಸುಖವ ಗುರುನಿರಂಜನ ಚನ್ನಬಸವಲಿಂಗಕ್ಕಿತ್ತು ನಿಃಸಂಸಾರಿಗಳಯ್ಯಾ ನಿಮ್ಮ ಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ ನಿರಂಜನಲಿಂಗವ ಪಡೆದ ಅಗಣಿತಪ್ರಸಾದಿಯು ತಾನು ತನ್ನಾನಂದಕ್ಕೆ ಅಡಿಯಿಟ್ಟು ನಡೆವಲ್ಲಿ, ತನ್ನ ಪದದನುವನರಿದು ಸಾಕಾರ, ನಿರಾಕಾರ, ನಿರ್ಮಾಯಕ್ಕಿತ್ತು, ಅರಿದರಿದುಕೊಂಡಾನಂದಿಸುವನಲ್ಲದೆ, ಅಘಭರಿತ ಜಗಭಂಡ ಜಂಗುಳಿಗಳಂತೆ, ಮಣ್ಣಿನ ಕರ್ಮದಲ್ಲಿ ನಿಂದು, ಹೆಣ್ಣಿನ ಮೋಹದಲ್ಲಿ ಸಿಲ್ಕಿ, ಹೊನ್ನಿನಾಸೆಯಲ್ಲಿ ಮುಳುಗಿ ಚನ್ನಗುರುಲಿಂಗ ಜಂಗಮಕ್ಕಿತ್ತು ಕೊಂಬ ಉನ್ನತಪ್ರಸಾದಿಗಳೆಂದು, ಕುನ್ನಿಗಳ ಧ್ವನಿ ಸಹಜದಂತಿರುವರಲ್ಲಾ, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಹಜಭಕ್ತರಿಂದೆ ಮಾಜದೆ ಪೂಜೆಗೊಂಬ ಒಡೆಯರು ತಾವಾದಬಳಿಕ, ಮೂಜಗವಪ್ಪಿ, ಶಿವಶರಣರಪ್ಪಿ, ಮಾಯಾಮಲವಿರಹಿತರಾಗಿ, ಭಕ್ತಿ ಜ್ಞಾನ ವೈರಾಗ್ಯವೇ ಮುಂದುಗೊಂಡು ಲೀಲೆಯುಳ್ಳನ್ನಬರ ಆಚರಿಸಬೇಕಲ್ಲದೆ, ಕಾಯವನು ಮಣ್ಣಿನೊಳು ಸಿಕ್ಕಿಸಿ ಕೋಟಲೆಗೊಳ್ಳುತ್ತ, ಕರಣವನು ಹೆಣ್ಣಿನ ವಿಷಯವಿಕಾರಭ್ರಾಂತಿಗೊಳಿಸುತ್ತ, ಆತ್ಮನನುಳಿದು ದುಸ್ಸಂಸಾರ ಪ್ರಪಂಚದೊಳು ಮುಳುಗಿಸಿ ಕಳವಳಿಸುತ್ತ, ದುಷ್ಕರ್ಮ ಗಳಿಸಿ ಭವರಾಟಣಂಗೈವ ನರಕಿಗಳಿಗೆತ್ತಣ ದೇವತ್ವವಯ್ಯಾ, ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಮತಿಗಳಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->