ಅಥವಾ

ಒಟ್ಟು 28 ಕಡೆಗಳಲ್ಲಿ , 5 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ. ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ, ಬರುಮುಖರಾಗಿ ಇದ್ದಿರಲ್ಲಾ. ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ, ವೇದವೇ ದೈವವೆಂದು ಕೆಟ್ಟಿರಲ್ಲಾ. ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ, ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ. ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ. `ಯತ್ರ ಶಿವಸ್ತತ್ರ ಮಾಹೇಶ್ವರ'ನೆಂದು ಹೇಳಿತ್ತು ಮುನ್ನ, ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಉತ್ತಮಾಂಗವೆನಿಸುವ ಶಿರಸ್ಸಿಗೆ ನಿತ್ಯವಿದೆಂದು ಹೇಳಿತ್ತು ವೇದ. ನೆಟ್ಟನೆ ಶಿವನಡಿಗೆರಗುವುದು, ಮತ್ತನ್ಯದೈವಕ್ಕೆರಗಲಾಗದೆಂದುದು ವೇದ. ಒಂ ಯಸ್ಮೈನಮಃ ಸಚ್ಛಿರೋಧರ್ಮ ಮೂಧ್ರ್ನಿ ನಾನಾಬ್ರಹ್ಮೋತ್ತರಾ | ಹನು ಯಜ್ಞೋದರಾ ವಿಷ್ಣು ಹೃದಯಂ ಸಂವತ್ಸರ ಪ್ರಜನನಮ್ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲದೆ ಮತ್ತನ್ಯದೈವಕ್ಕೆರಗಿದಡೆ, ನಾಯಕನರಕ ತಪ್ಪದು.
--------------
ಸಂಗಮೇಶ್ವರದ ಅಪ್ಪಣ್ಣ
ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ ಋಕ್‍ಯಜುಸ್ಸಾಮಾಥರ್ವಣದಲ್ಲಿ ಅಂತರ್ಗತವಾಗಿಹ ಶ್ರೀರುದ್ರ, ಪಂಚಬ್ರಹ್ಮ, ಶ್ವೇತಾಶ್ವತರ, ಬ್ರಹದಾರಣ್ಯಕ, ಕೇನ, ಈಶ, ಜಾಬಾಲ, ಗರ್ಭ, ಕಾಲಾಗ್ನಿರುದ್ರ, ವಾಜಸನೇಯ, ಶಿವಸಂಕಲ್ಪ, ಬ್ರಹ್ಮಬಿಂದು, ಕಾತ್ಯಾಯನ, ಕಣ್ವ ಇತ್ಯಾದಿ ನಿಖಿಲೋಪನಿಷತ್ತುಗಳನ್ನು ಪ್ರತಿಪಾದಿಸಿ ನೋಡಲು, ನಿತ್ಯಶುದ್ಧ ನಿರ್ಮಲಪರಶಿವನನ್ನು ಸತ್ಯಶುದ್ಧ ಶಿವಾಚಾರಸಂಪನ್ನಭಕ್ತರನಲ್ಲದೆ ವಿಸ್ತರಿಸಿ ಸ್ತುತಿಗೈದುದಿಲ್ಲ. ಅದಕ್ಕೆ ಶಪಥ, ಆ ವೇದಪುರಷರ ಚಿತ್ತವೇ ಸಾಕ್ಷಿ. ಶಿವನ ಶರಣರು ವಾಙõïಮಾನಸಾಗೋಚರರು ಎಂದು ಹೇಳುತ್ತಲಿದೆ ಶ್ರುತಿ. ಅಖಿಲಬ್ರಹ್ಮಾಂಡಂಗಳಿಗೆ ಪಿತಮಾತೆಯಹ ಶಿವನಲ್ಲಿ ಶಿವನ ಶರಣನು ಅವಿರಳನೆಂಬುದಕ್ಕೆ `ಯಥಾ ಶಿವಸ್ತಥಾ ಭಕ್ತಃ' ಎಂಬ ವೇದವಾಕ್ಯವೇ ಪ್ರಮಾಣ. `ನಾಭ್ಯಾ ಅಸೀದಂತರಿಕ್ಷಂ ಶೀಷ್ರ್ಣೋzõ್ಞ್ಯಃ ಸಮವರ್ತತ' ಎಂಬ ಶ್ರುತಿ, ಸಕಲ ಬ್ರಹ್ಮಾಂಡಕೋಟಿಗಳು ಶಿವನ ನಾಭಿಕೂಪದಲ್ಲಿ ಅಡಗಿಹವೆಂದು ಹೇಳಿತ್ತು. `ಭಕ್ತಸ್ಯ ಹೃತ್ಕಮಲಕರ್ಣಿಕಾಮಧ್ಯಸ್ಥಿತೋ[s]ಹಂ ನ ಸಂಶಯಃ ಎಂಬ ಶ್ರುತಿ, ಅಂತಹ ಶಿವನು ಸದ್ಭಕ್ತನೊಳಗಡಗಿಹನೆಂದು ಹೇಳಿತ್ತು. `ಅಘೋರೇಭ್ಯೋ[s]ಥ ಘೋರೇಭ್ಯೋ ಘೋರಘೋರತರೇಭ್ಯಃ ಸರ್ವೇಭ್ಯಃ ಸರ್ವಶರ್ವೆರಭ್ಯೋ ನಮಸ್ತೆ ಅಸ್ತು ರುದ್ರರೂಪೇಭ್ಯಃ ಎಂಬ ಶ್ರುತಿ, ಶಿವನ ಅಘೋರಮೂರ್ತಿಯ ನಿತ್ಯತೇಜೋಮೂರ್ತಿಯೆಂದು ಹೇಳಿತ್ತು. ಜ್ಯೋತಿರ್ಲಿಂಗತ್ವಮೇವಾರ್ಯೇ ಲಿಂಗೀ ಚಾಹಂ ಮಹೇಶ್ವರಿ ತದೇತದವಿಮುಕ್ತಾಖ್ಯಂ ಜ್ಯೋತಿರಾಲೋಕ್ಯತಾಂ ಪ್ರಿಯೇ ಎಂಬ ವಾಕ್ಯ, ಶರಣಸತಿ ಲಿಂಗಪತಿಯಹ ಶಿವನ ಶರಣನೇ ಜ್ಯೋತಿರ್ಲಿಂಗವೆಂದು ಹೇಳಿತ್ತು. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಎಂಬ ಶ್ರುತಿ, ಶಿವಧ್ಯಾನ ಸ್ತುತಿ ನಿರೀಕ್ಷಣೆ ಪೂಜೆಯಿಂದಲ್ಲದೆ ಜನ್ಮ ಮೃತ್ಯು ಜರಾ ವ್ಯಾಧಿ ಹಿಂಗಿ ಪರಮಸುಖ ಪರಮನಿರ್ವಾಣವಾಗದೆಂದು ಹೇಳಿತ್ತು. `ಅಪವರ್ಗಪದಂ ಯಾತಿ ಶಿವಭಕ್ತೋ ನ ಚಾಪರಃ' ಎಂಬ ವಾಕ್ಯ, ಮುಕ್ತಿ ಶಿವಭಕ್ತಂಗಲ್ಲದೆ ಮತ್ತೊಬ್ಬರಿಗಿಲ್ಲವೆಂದು ಹೇಳಿತ್ತು. `ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ತೇ ನಮಃ' ಎಂಬ ಶ್ರುತಿ, ಪರಬ್ರಹ್ಮವೆಂಬುದು ಶಿವನಲ್ಲದೆ ಬೇರೆ ಬೇರೆ ಮತ್ತೊಂದು ವಸ್ತುವಿಲ್ಲವೆಂದು ಹೇಳಿತ್ತು. `ಬ್ರಹ್ಮಣಿ ಚರತಿ ಬ್ರಾಹ್ಮಣಃ' ಎಂಬ ವಾಕ್ಯ, ಅಂತಹ ಬ್ರಹ್ಮವ ಚಿಂತಿಸಿ ನಿರೀಕ್ಷಿಸಿ ಸ್ತುತಿಸಿ ಪೂಜಿಸಿ ಪ್ರಸನ್ನಪ್ರಸಾದವ ಪಡೆವ ಸದ್ಭಕ್ತನೇ ಮಹಾಬ್ರಾಹ್ಮಣನೆಂದು ಹೇಳಿತ್ತು. `ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತಃ ಪಾತ್ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂಬ ಶ್ರುತಿ, ಸಕಲ ಜೀವರ ಶಿವನೆಂದು ಹೇಳಿತ್ತು. `ಭಕ್ತಸ್ಯ ಚೇತನೋ ಹ್ಯಹಂ' ಎಂಬ ವಾಕ್ಯ, ಶಿವಭಕ್ತಂಗೆ ನಾನೇ ಚೈತನ್ಯನೆಂದು ಹೇಳಿತ್ತು. ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಶಿವಭಕ್ತನ ಶ್ರೀಮೂರ್ತಿಗಿನ್ನು ಸರಿಯುಂಟೆರಿ `ವಾಚೋತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯತ್ವಂ ಪರಮಂ ಪದಂ' ಇಂತಪ್ಪ ಶಿವನಲ್ಲಿ ಅವಿನಾಭಾವರಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿದಡೆ ಕಣ್ಗೆ ಮಂಗಳತರ ನಿರುಪಮಸುಖ, ನುಡಿಸಿದಡೆ ಶಿವರಾತ್ರಿ, ಸಂಭಾಷಣೆ ಮಾಡಿದಡೆ ಜನ್ಮಕರ್ಮಬಂಧನನಿವೃತ್ತಿ, ಜೀವನ್ಮುಕ್ತನಹ, ಇದು ನಿತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದಬೋಧೆಯಲ್ಲಿ ಈಶ್ವರ ಹೇಳಿದನು. ಇಂತಪ್ಪ ಈಶ್ವರನ ಕಾಣವು ವೇದಂಗಳು. `ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್' ಎಂದುದಾಗಿ, ಇಂತು ವೇದಕ್ಕತೀತನಹಂತಹ ಶಿವನ ಶರಣರ ಮಾಹಾತ್ಮೆಯ ಹೊಗಳಲ್ಕೆ ವೇದಕ್ಕೆ ವಶವಲ್ಲ, ಮಂದಮತಿಮಾನವರ ಮಾತಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎಂಬೆ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ ಮಹಾಘನಲಿಂಗ ನಿಕ್ಷೇಪವಾಗಿದೆ! ಈ ದಿವ್ಯ ನಿಕ್ಷೇಪವ ಸಾಧಿಸುವಡೆ ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು. ಲಿಪಿಯಿಲ್ಲದೆ ತೆಗೆವಡಸದಳ. ಆ ಲಿಪಿಯ ವ್ರಯವ ಷಟ್‍ತತ್ವದ ಮೇಲೆ ನಿಶ್ಚಯಿಸಿ. ಆ ನಿಶ್ಚಯದೊಳಗೆ ಈ ನಿಕ್ಷೇಪದ ಕರ್ತೃವಿನ ಹೆಸರೋದಿತ್ತು. ತಿಳಿಯಲೋದುವನ್ನಬರ ಆತ ನಮ್ಮ ಹೆತ್ತಯ್ಯನೆಂಬ ಹೆಸರೋದಿತ್ತು. ಆ ಓದಿಕೆಯ ಕಡೆಯಕ್ಕರದೊಳಗೆಅಂಜನಸಿದ್ಧಿ ಹೇಳಿತ್ತು. ಅದಾವ ಪರಿಕ್ರಮದ ಅಂಜನವೆಂದಡೆ ಅದೆಮ್ಮ ಹೆತ್ತಯ್ಯ ಜಗದ್ವಿಲಾಸ ತದರ್ಥವಾಗಿ ಆ ತನ್ನ ಮೂಲಶಕ್ತಿ ಸಂಭೂತವಾದುದು. ಅಲ್ಲಿ ಹುಟ್ಟಿದ ದಿವ್ಯ ಚಿತ್ಕಳೆಯಿಂದೊಗೆದ ದಿವ್ಯಭಸಿತವೆಂದಿತ್ತು. ಆ ದಿವ್ಯ ಭಸಿತವೆಂಬ ದಿವ್ಯಾಂಜನವ ತಳೆದುಕೊಂಡು ಅತಿ ವಿಶ್ವಾಸದಿಂದ ನಾನೆನ್ನ ಹಣೆಯೆಂಬ ಕಣ್ಣಿಂಗೆಚ್ಚಿ ಸರ್ವಾಂಗವ ತೀವಲೊಡನೆ ಕರಸ್ಥಲದೊಳಗಣ ನಿಕ್ಷೇಪ ಕಣ್ದೆರವಾಯಿತ್ತು. ಆ ಕಣ್ದೆರವಾದ ನಿಕ್ಷೇಪವ ಮುಟ್ಟಹೋದಡೆ ಅಲ್ಲಿ ನಮ್ಮ ಹೆತ್ತಯ್ಯನ ಹೊಳಹ ಕಂಡು ತಳವೆಳಗಾದೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಸಕಲೇಂದ್ರಿಯಕ್ಕೆಲ್ಲಾ ನಾಯಕವಪ್ಪ ಮನಕ್ಕೆ ಇದೆ ವಿಧಿಯೆಂದು ಹೇಳಿತ್ತು ವೇದ. ಶಿವನ ನೆನೆವುದು, ಶಿವನ ಭಜಿಸುವುದು, ಮತ್ತನ್ಯದೈವವ ನೆನೆಯಲಾಗದೆಂದುದು ಋಗ್ವೇದ. ತಮುಷ್ಟುಹಿಯಸ್ವಿಷುಸ್ಸುದಂ ಸ್ವಾಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ | ಯಕ್ಷಾಮಹೀಸಾಯ ರುದ್ರಂ ನಮೋಬೇರ್ಧಿ ವಮಸುರುಮವಸ್ಯ | ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯಾ.
--------------
ಸಂಗಮೇಶ್ವರದ ಅಪ್ಪಣ್ಣ
ನಾಲಿಗೆಗೆ ಶಿವನ ಹೊಗಳುವುದೇ ವಿಧಿಯೆಂದು ಹೇಳಿತ್ತು ವೇದ. ಮತ್ತೆಯೂ ಶಿವನನೆ ಸ್ತುತಿಸುವುದೆ ವಿಧಿಯೆಂದು ಹೇಳಿತ್ತು ವೇದ. ಅನ್ಯದೈವವ ಹೊಗಳಲಾಗದೆಂದುದು, ಋಗ್ವೇದ. ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಬೀಮಮುಪಹತ್ನು ಮುಗ್ರಂ | ಮೃಡಾ ಜರಿತ್ರೇ ರುದ್ರಸ್ತವಾನೋ ಅನ್ಯಂತೇ ಅಸ್ಮಿನ್ನಿವ ಪಂತು ಸೇನಾಃ || ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಭುವನಸ್ಯ ಪಿತರಂಗರ್ಭೇ ರಾಭೇ ರುದ್ರಂ ಧೀವಾರ್ದಯಾ ರುದ್ರವುವುಕಾರ ಬ್ರಹ್ಮಂ ತದೃಷ್ಟಮಜರಂ ಸುಷುಮ್ನ ದ್ರುಗ್ಯವೇಮಕಮಪಿವಾಸಃ|| ಎಂಬ ಶ್ರುತಿಯ ವಿಚಾರಿಸಲರಿಯದೆ, ಒಲಿದಂತೆ ನುಡಿವುತಿಪ್ಪರು ನೋಡಯ್ಯಾ. `ಮಾತೃದೇವೋ ಭವ, ಪಿತೃದೇವೋ ಭವ' ಎಂಬ ಶ್ರುತಿ, ದೇವಿ ದೇವನು ತಾಯಿತಂದೆಯೆಂದು ಹೇಳಿತ್ತು. `ಆಚಾರ್ಯದೇವೋ ಭವ' ಎಂಬ ಶ್ರುತಿ, ತನಗೆ ಶುದ್ಧಶೈವವನನುಗ್ರಹವ ಮಾಡಿದ ಗುರುವೇ ದೈವವೆಂದು ಹೇಳಿತ್ತು. `ಅತಿಥಿದೇವೋ ಭವ' ಎಂಬ ಶ್ರುತಿ, ತನ್ನ ಮನೆಗೆ ಬಂದ ಭಕ್ತನೇ ದೈವವೆಂದು ಹೇಳಿತ್ತು. ಇದಲ್ಲದೆ ಸಾವುತ್ತ, ಹುಟ್ಟುತ್ತಿಪ್ಪ ತಂದೆ ತಾಯಿ ದೈವವೆಂದ ಲಜ್ಜೆ ನಾಚಿಕೆ ಬೇಡ. ಚಂಡೇಶ್ವರಪಿಳ್ಳೆ ಶಿವನು ತಂದೆಯೆಂದರಿದು, ವಾಯದ ತಂದೆಯ ಕೊಂದುದನರಿಯಾ ? ಎಂದೆಂದಿಗೆ ಕೇಡಿಲ್ಲದ ತಾಯಿತಂದೆ ಬಸವಪ್ರಿಯ ಕೂಡಲಚೆನ್ನಸಂಗಮದೇವನೆಂದು ವೇದಂಗಳು ಸಾರುತ್ತವೆ.
--------------
ಸಂಗಮೇಶ್ವರದ ಅಪ್ಪಣ್ಣ
ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು ಎನಗೆ ಸಂಸಾರವಿಲ್ಲವೆಂದೆ ಹೋಯಿತ್ತು ಇಲ್ಲವೆಂದೇ ಹೇಳಿತ್ತು. ಆವ ರೂಪನೂ ನಂಬುವಳಲ್ಲ ನಾನು; ಆವ ಮಾತನೂ ನಂಬುವಳಲ್ಲ ನಾನು; ಆವಲ್ಲಿ ಹೊಂದುವಳಲ್ಲ ನಾನು. ಆವ ಕಾಲದಲ್ಲಿ ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ.
--------------
ನೀಲಮ್ಮ
ಅಚ್ಚಭವಿತನದಿಂದ ನಿಚ್ಚನರಕಕ್ಕಿಳಿವ ಕರ್ಮಚಾಂಡಾಲವಿಪ್ರರು ನೀವು ಕೇಳಿರೇ ! ಈಶಭಕ್ತರ ಕಂಡು ದೂಷಿಸಿ ನರಕಕ್ಕಿಳಿವ ಶಾಪಹತರು ನೀವು ಕೇಳಿರೇ ! ವಿಭೂತಿಯನೊಲ್ಲದೆ ಬಿಳೆಯ ಮಣ್ಣನಿಡುವ ಶ್ವಪಚರೆಲ್ಲಾ ನೀವು ಕೇಳಿರೇ ! ಹರಿಯೂ ಹರನೂ ಹರಿಯೆಂದು ಗಳುಹುವ ಮರುಳವಿಪ್ರರರು ನೀವು ಕೇಳಿರೇ ! ಆದಿಯಲ್ಲಿ ಶ್ರೀವಿಷ್ಣು ಮೇದಿನಿಯರಿಯೆ ಒಂದು ನಯನವನು ಪುಷ್ಪಮಾಗಿತ್ತು ಪಡೆಯನೇ ವೈಕುಂಠವನು ? ವೇದಕ್ಕೆ ನೆಲಗಟ್ಟಾವುದೆಂದು ಬಲ್ಲಡೆ ನೀವು ಹೇಳಿರೆ ! ಬ್ರಾಹ್ಮಣಿಕೆಗೆ ನೆಲೆಗಟ್ಟಾವುದೆಂಬುದು ಬಲ್ಲಡೆ ನೀವು ಹೇಳಿರೆ ! ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲಗಟ್ಟು ಗಾಯತ್ರೀ. ಓಂಕಾರವೇನ ಹೇಳಿತ್ತು, ಗಾಯತ್ರಿಯೇನ ಹೇಳಿತ್ತೆಂಬುದ ತಿಳಿದು ವಿಚಾರಿಸಿಕೊಳ್ಳಿರೇ ಶ್ರುತಿಗಳೊಳಗೆ. ಅದೆಂತೆಂದಡೆ: ಓಂಕಾರಪ್ರಭವಾ ವೇದಾ ಓಂಕಾರಪ್ರಭವಾಸ್ಸ್ವರಾಃ ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ ಇನ್ನು ಗಾಯತ್ರಿ: ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್' ಎಂದು ಶ್ರಾದ್ಧ ತದ್ದಿನ ಪಿತ್ಯಕಾರ್ಯವ ಮಾಡುವಲ್ಲಿ ವಿಶ್ವದೇವರ ಸ್ಥಾಪನೆಯಂ ಮಾಡುವಿರಿ. `ವಿಶ್ವದೇವಾಯ ಸ್ವಾಹಾ' ಎಂದು ಅರ್ಚನೆ ವಂದನೆಯಂ ಮಾಡುವಿರಿ ಯಥೋಕ್ತವಾಗಲಿ ಯಥಾಕಾಲವಾಗಲೆಂದು ಬೇಡಿಕೊಂಬಿರಿ. `ಗಯಾಯಾಂ ಶ್ರೀರುದ್ರಪಾದೇ ದತ್ತಮಸ್ತು' ಎಂದೆಂಬಿರಲ್ಲಾ `ಗಯಾಯಾಂ ಶ್ರೀವಿಷ್ಣುಪಾದೇ ದತ್ತಮಸ್ತು' ಎಂದೆಂದುಂಟಾದಡೆ ಹೇಳಿರೇ. ಸತಿಗೆ ಪಿಂಡವ ಕೊಡುವಲ್ಲಿ ವಸುರುದ್ರಾದಿತ್ಯರೂಪೇಭ್ಯೋ ಮಧ್ಯಪಿಂಡಸ್ತು ಪುತ್ರದಃ ವೇದೋಕ್ತರುದ್ರನಿರ್ಮಾಲ್ಯಂ ಉರಸ್ಥಾನ್ಯಪವಿತ್ರಕಂ ಆದಿಪಿಂಡಾಂತ್ಯಪಿಂಡಂ ಚ ವರ್ಜಯೇತ್ ಸತತಂ ಬುಧಃ ಎಂದು ರುದ್ರಪಿಂಡದಿಂದ ಉತ್ಪತ್ಯವಾಗಿ ಮರಳಿ ಭಕ್ತರ ಜರಿದು ಗಳಹುವಾ ಪಾತಕರೆಲ್ಲರೂ ನೀವು ಕೇಳಿರೇ ಭಕ್ತರು ಕೊಂಬುದೇ ಪಾದೋದಕ ಪ್ರಸಾದ, ನೀವು ಉಂಬುದೇ ಭೂತಶೇಷ. ಅದೆಂತೆಂದೊಡೆ ಮಂತ್ರ: `ಪ್ರಾಣಾಯ ಸಾಹಾ ಅಪಾನಾಯ ಸ್ವಾಹಾ ವ್ಯಾನಾಯ ಸ್ವಾಹಾ ಉದಾನಾಯ ಸ್ವಾಹಾ ಸಮನಾಯ ಸ್ವಾಹಾ' ಎಂದು ಪಂಚಭೂತಕ್ಕೆ ಬಲಿಯನಿಕ್ಕಿ ಆ ಭೂತಶೇಷವ ತಿಂಬ ಭೂತಪ್ರಾಣಿಯ ಲಿಂಗಪ್ರಾಣಿಗೆ ಸರಿಯೆಂಬವನ ಬಾಯಲ್ಲಿ ಕೆರ್ಪನಿಕ್ಕಿ ಈಶಭಕ್ತಿಯ ಮೆರೆವ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹೋಹ ಬಟ್ಟೆಯಲೊಂದು, ಮಾಯ ಇದ್ದುದ ಕಂಡೆ. ಠ್ಞಣಾಂತರ ಹೇಳಿತ್ತು ಠಾಣಾಂತರ ಹೇಳಿತ್ತು, ಅಲ್ಲಲ್ಲಿಗೆ ಅಲ್ಲಲ್ಲಿಗೆ ಅಲ್ಲಲ್ಲಿಗೆ. ಗುಹೇಶ್ವರನ ಕರಣಂಗಳು ಕುತಾಪಿಗಳು.
--------------
ಅಲ್ಲಮಪ್ರಭುದೇವರು
ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ, ಉರಸ್ಥಲದಲ್ಲಿ ರುದ್ರಾಕ್ಷಿಮಾಲೆ, ಉಪನಯನ ನೊಸಲಕಣ್ಣು, ಕಾಯ ಧೋತ್ರ, ಗಾಯತ್ರಿಮಂತ್ರ ಪುರುಷಪ್ರಮಾಣ ದಂಡ, `ಭವತಿಭಿಕ್ಷಾಂದೇಹಿ'ಯೆಂದು ಪರಬ್ರಹ್ಮವನಾಚರಿಸಿಕೊಂಡಿಪ್ಪಾತನೆ ಬ್ರಾಹ್ಮಣ. ಇಂತಲ್ಲದೆ ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ. ಕೃತಯುಗ ಮೂವತ್ನಾಲ್ಕು ಲಕ್ಷದ ಐವತ್ಮೂರು ಸಾವಿರ ವರುಷಂಗಳಲ್ಲಿ ಗಜಾಸುರನೆಂಬ ಆನೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದರಿ ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಕುಲ ಚಲ ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ ಅಷ್ಟಮದಂಗಳ ಕೊಲ್ಲ ಹೇಳಿತ್ತಲ್ಲದೆ ಆನೆಯ ತಿಂಬ ಹೀನ ಹೊಲೆಯರ ಮುಖವ ನೋಡಲಾಗದು. ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ ಅಶ್ವನೆಂಬ ಕುದುರೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದ? ಅಹುದು ತಿನ್ನಹೇಳಿತ್ತು ವೇದ. ಅದೆಂತೆಂದಡೆ: ಪ್ರಾಣ ವ್ಯಾನ ಅಪಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಕುದುರೆಯ ತಿಂಬ ತಿನ್ನ ಹೇಳಿತ್ತಲ್ಲದೆ, ಕುದುರೆಯ ತಿಂಬ ಜಿನುಗು ಹೊಲೆಯರ ಮುಖವಂ ನೋಡಲಾಗದು. ದ್ವಾಪರ ಎಂಟು ಲಕ್ಷದ ಐವತ್ಕಾಲ್ಕು ಸಾವಿರ ವರುಷಂಗಳಲ್ಲಿ ಮಹಿಷಾಸುರನೆಂಬ ಕೋಣನ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಜಾತಿ ವರ್ಣ ಆಶ್ರಮ ಕುಲಗೋತ್ರ ನಾಮವೆಂಬ ಕೋಣನ ಕೊಲ್ಲ ಹೇಳಿತ್ತಲ್ಲದೆ, ಕೋಣನ ತಿಂಬ ಕುನ್ನಿ ಹೊಲೆಯರ ಮುಖವ ನೋಡಲಾಗದು. ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು, ಅದೆಂತೆಂದಡೆ, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಹೋತನ ಕೊಲ್ಲ ಹೇಳಿತ್ತಲ್ಲದೆ, ಹೋತನ ಕೊಂದು ತಿಂಬ ಹೊಲೆಯರ ಮುಖವ ನೋಡಲಾಗದು. ಇಂತೀ ನಾಲ್ಕು ಯುಗದಲ್ಲಿ ಮಾಂಸವ ತಿಂಬ ಅನಾಚಾರಿ ಹೊಲೆಯರ ಮುಖವಂ ನೋಡಲಾಗದು ಅಜಂಗೆ ದ್ವಿಜನೆ ಗುರು, ದ್ವಿಜಂಗೆ ಹರಿಯೆ ಗುರು. ಹರಿ ಹರಿಣಾವತಾರವಾದಲ್ಲಿ ಎರಳೆಯ ತಿಂಬುದಾವಾಚಾರ? ಹರಿ ಮತ್ಸ್ಯಾವತಾರವಾದಲ್ಲಿ ಮೀನ ತಿಂಬುದಾವಾಚಾರ? ಇಂತೀ ಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಿವನು ಸರ್ವಗತನು, ಸಕಲಬ್ರಹ್ಮಾಂಡಗಳಿಗೆಲ್ಲ ಸಕಲನೆಂದು ಹೇಳಿತ್ತು ಶ್ರುತಿ. `ವಿಶ್ವತಶ್ಚಕ್ಷುರುತ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂದು ಶ್ರುತಿ ಸಕಲಜೀವಚೈತನ್ಯ ಶಿವನೆಂದು ಹೇಳಿತ್ತು, ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಸದ್ಭಕ್ತರ ಶ್ರೀಮೂರ್ತಿಗಿನ್ನು ಸರಿ ಉಂಟೆ ? ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯಂ ತತ್ಪರಮಂ ಪದಂ ಇಂತಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿ ನುಡಿಸಿ ಏಕರಾತ್ರಿ ಸಂಭಾಷಣೆಯ ಮಾಡಿದಡೆ ಜನ್ಮಕರ್ಮನಿವೃತ್ತಿ, ಜೀವನ್ಮುಕ್ತನಹನು ಇದು ಸತ್ಯ ಕೇಳಿರಣ್ಣಾ. ದರ್ಶನಾತ್ ಶಿವಭಕ್ತಾನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ ಎಂದು ನಾರದೀಯ ಬೋಧೆಯಲ್ಲಿ ಈಶ್ವರನು ಹೇಳಿಹನು. ಇಂತಪ್ಪ ಈಶ್ವರನ ಕಾಣವು ವೇದಂಗಳು. ಇಂತು ವೇದಕ್ಕತೀತವಹಂತಹ ಶಿವಶರಣರ ಮಹಾತ್ಮೆಯ ಹೊಗಳಲಿಕ್ಕೆ ವೇದಕ್ಕಳವಲ್ಲ, ಮಂದಮತಿ ಮಾನವರ ಮಾತದಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎನುತಿಪ್ಪೆ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
-->