ಅಥವಾ

ಒಟ್ಟು 65 ಕಡೆಗಳಲ್ಲಿ , 33 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾದ್ಥೀಯಲ್ಲಿ ಕುಳಿತಡಿಲ್ಲ, ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ | ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ || ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧನವುಳ್ಳ ಪುರುಷಂಗೆ ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ಹೊರಗನೆ ಹಾರೈಸಿ ಹೊರಗಣ ಸದಾಚಾರ ಕ್ರಿಯೆಗಳ, ಮನಮುಟ್ಟಿ ಮಾಡುತ್ತಿರಲು; ಇದೆಲ್ಲಿಯ ಹೊರಗಣಸುಖವೆಂದು, ಸುವಿಚಾರ ಕಣ್ದೆರೆದು ನೋಡಲು ಕನ್ನಡಿಯೊಳಗಣ ರೂಪ ತಾನೆಂದರಿವಂತೆ ಮೆಲ್ಲಮೆಲ್ಲನೆ ಒಳಗೆ ಅಡಗಿತ್ತಯ್ಯಾ. ಲಿಂಗಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು ಮೇರೆದಪ್ಪಿದ ಸುಖಸಮುದ್ರದೊಳಗೋಲಾಡಿದಂತಾದೆನಯ್ಯಾ ! ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ. ಇಂತಾದ ಬಳಿಕ ಕೂಡಲಚೆನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ.
--------------
ಚನ್ನಬಸವಣ್ಣ
ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ ಸರ್ವ ಮೋಹಂಗಳಲ್ಲಿ ನಿರ್ಮೋಹಿತನಾಗಿ, ಅಂಗದಿಚ್ಫೆಯ ಮರೆದು ವ್ರತವೆಂಬ ಆಚಾರಲಿಂಗವ ಧರಿಸಬೇಕಲ್ಲದೆ ತನುವಿಗೆ ಬಂದಂತೆ ಮುಟ್ಟಿ, ಮನಕ್ಕೆ ಬಂದಂತೆ ಹರಿದು, ನಾನಿಲ್ಲಿ ಒಬ್ಬ ಶೀಲವಂತನಿದ್ದೇನೆ ಎಂದು ಕಲಹಟ್ಟಿಯಂತೆ ಕೂಗುತ್ತ ಕೊರಚುತ್ತ ಅಲ್ಲಿ ಬೊಬ್ಬಿಡುತ್ತ ಶೂಲವನೇರುವ ಕಳ್ಳನಂತೆ ಬಾಹ್ಯದಲ್ಲಿ ಬಾಯಾಲುವ, ಮನದಲ್ಲಿ ಸತ್ತೆಹೆನೆಂಬ ಸಂದೇಹದವನಂತೆ ಸಾಯದೆ, ಹೊರಗಣ ಕ್ರೀ ಶುದ್ಭವಾಗಿ, ಒಳಗಳ ಆತ್ಮ ಶುದ್ಧವಾಗಿ, ಉಭಯ ಶುದ್ಧವಾಗಿಪ್ಪುದು ಪಂಚಾಚಾರ ನಿರುತ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸರ್ವಾಂಗಭರಿತನು
--------------
ಅಕ್ಕಮ್ಮ
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ? ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ ? ಎಲ್ಲಿ ನೋಡಿದಡೆ ಬಯಲೊಂದೆ; ಭಿತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
--------------
ಬೊಂತಾದೇವಿ
ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ. ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ ಉಂಡು ದಣಿದು, ಕಂಡು ದಣಿದು, ಸಂದೇಹವ ಬಿಟ್ಟು ದಣಿದು, ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ, ಆನಂದವೆಂಬುದ ಅಲಿಂಗನವ ಮಾಡಿ, ಆ ಕಂಗಳಂ ಮುಚ್ಚಿ, ಮತ್ತಮಾ ಕಂಗಳಂ ತೆರೆದು ನೋಡಲಾಗಿ, ಧಮೇಶ್ವರಲಿಂಗವು ಕಾಣಬಂದಿತ್ತು.
--------------
ಹೆಂಡದ ಮಾರಯ್ಯ
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ, ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ ? ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ, ಆ ಧಾವತಿಯಿಂದ ಮುನ್ನಿನ ವಿದ್ಥಿ[ಯೆ] ಸಾಲದೆ ? ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ, ನಿಮ್ಮಿಂದ ಹೊರಗಣ ಜನವೆ ಸಾಲದೆ ?
--------------
ಅಲ್ಲಮಪ್ರಭುದೇವರು
ಊರ ಹೊರಗಣ ಹೊಲೆಯರ ಮನೆಯಲ್ಲಿ ಈರೈದು ಮಗ್ಗ. ಆ ಮಗ್ಗಕ್ಕೆ ಒಬ್ಬನೆ ಹಾರುವ ನೈವಾತ. ಆ ಮಗ್ಗದೊಳಗಿದ್ದು ಸುಂಕಕಂಜಿ ಹೊಲೆಯನಾದ, ಬಂಕೇಶ್ವರಲಿಂಗವನರಿಯದೆ.
--------------
ಸುಂಕದ ಬಂಕಣ್ಣ
ತನ್ನ ಸಮ ಕ್ರೀವಂತರಲ್ಲಿಯಲ್ಲದೆ ಕೊಳುಕೊಡೆ ಮಿಕ್ಕಾದ ಹೊರಗಣ ಕ್ರೀ ಸೋಂಕು ಬಾಹ್ಯರಚನೆ ತಪ್ಪದಿರಬೇಕು. ಆತ್ಮನರಿದು ಮುಟ್ಟುವಲ್ಲಿ ತನ್ನ ವ್ರತದೆಸಕವನರಿದು ಸ್ವಪ್ನಾವಸ್ಥೆಗಳಲ್ಲಿದ್ದು ಸೂಕ್ಷ ್ಮತನುವಂ ಮುಟ್ಟದೆ, ಅಲ್ಲದುದ ಕಂಡು ಮತ್ತೆ ಆರೂ ಅರಿಯರೆಂದು ತನ್ನಲ್ಲಿಯೇ ಅಡಗದೆ, ತಲೆದೋರಿದಲ್ಲಿಯೇ ಲಯವಾಗಬೇಕು. ಇಂತೀ ಗುಣ ಆತ್ಮನ ಶೀಲ ಮನಕ್ಕೆ ಮನೋಹರ ಶಂಕೇಶ್ವರ ಲಿಂಗದಲ್ಲಿ.
--------------
ಕರುಳ ಕೇತಯ್ಯ
ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ, ಯೌವನಪ್ರಾಯದಲ್ಲಿ ಮದಮತ್ಸರದಿಂದ ಹೋರಾಡಿ, ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಿಂದ ಮಗ್ನರಾಗಿ, ಯೌವನಬಲಗುಂದಿ ಮುಪ್ಪುವರಿದು ಹಲ್ಲು ಬಿದ್ದು, ಕಣ್ಣು ಒಳನಟ್ಟು, ಬೆನ್ನು ಬಾಗಿ, ದಮ್ಮು ಹತ್ತಿ, ಗುರುಗೂರಿ ಗರಹತ್ತಿ, ಸಾಯುವ ಮನುಜರಿಗೆ, ವಿಭೂತಿ ವೀಳ್ಯೆ ಎಂದು ಮಾಡಿ, ಅವನ ಪಣೆಯಲ್ಲಿ ವಿಭೂತಿಯ ಧರಿಸಿ, ಸರ್ವಾಂಗದಲ್ಲಿ ವಿಭೂತಿ ಲೇಪನ ಮಾಡಿ, ಸ್ಥಾನಸ್ಥಾನಂಗಳಲ್ಲಿ ರುದ್ರಾಕ್ಷಿಯ ಧರಿಸಿ, ಅವನ ಮನೆಯಲ್ಲಿ ಶಿವಗಣಂಗಳು ಸಲಿಸಿ, ಅವನ ಮಸ್ತಕದ ಮೇಲೆ ಸಕಲ ಗಣಂಗಳು ತಮ್ಮ ಪಾದವನಿಟ್ಟು ಅವನ ಕೈಯಲ್ಲಿ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ಸುವರ್ಣ ಮೊದಲಾದ ಕಾಂಚನವ ಬ್ಥಿಕ್ಷವ ಕೊಂಡು ಅವನು ಸತ್ತುಹೋದ ಮೇಲೆ ಊರ ಹೊರಗಾಗಲಿ, ಊರೊಳಗಾಗಲಿ, ಲಿಂಗಸ್ಥಾಪನೆಯಿದ್ದ ಮಠಮಾನ್ಯದಲ್ಲಿ ಏಳುಪಾದ ನಿಡಿದು, ಏಳುಪಾದ ಉದ್ದ ಭೂಮಿಯ ಒಳಗೆ, ಐದುಪಾದ ಚೌಕು, ಮೂರುಪಾದ ಅಡ್ಡಗಲ, ಮೂರುಪಾದ ಒಳಯಕ್ಕೆ ತ್ರಿಕೋಣೆ. ಇಂತೀ ಕ್ರಮದಲ್ಲಿ ಕ್ರಿಯಾಸಮಾದ್ಥಿಯ ಮಾಡಿ, ಸುಣ್ಣ ಕೆಂಪುಮಣ್ಣಿನ ಸಾರಣೆಯ ಮಾಡಿ ರಂಗವಾಲಿಯ ತುಂಬಿ, ತಳಿರುತೋರಣವ ಕಟ್ಟಿ, ಕೋಣಿ ಕೋಣಿ ಸ್ಥಾನಕ್ಕೆ ಓಲೆಯ ಮೇಲೆ ಪ್ರಣಮವಂ ಬರೆದು ಆ ಸಮಾದ್ಥಿಯಲ್ಲಿ ಸಂಬಂದ್ಥಿಸಿ, ಮತ್ತಂ, ಅವನ ಶವಕ್ಕೆ ಹಾಗೆ ಪ್ರಣಮವಂ ಬರೆದು ಸಂಬಂದ್ಥಿಸಿ, ಸಂಚರಿಸಿ ಮೇಲೆ ಮೋಕ್ಷವಾಯಿತು ಎಂಬರಯ್ಯಾ; ಮೋಕ್ಷವಾಗಲರಿಯದು. ಅದೆಂತೆಂದಡೆ, ಇಂತಿವೆಲ್ಲವು ಹೊರಗಣ ಉಪಚಾರವು. ಈ ಉಪಚಾರದಿಂದ ಕರ್ಮದೋಷಗಳು ಹರಿದು ಪಿಶಾಚಿಯಾಗನು, ಭವ ಹಿಂಗದು. ಇಂತೀ ಕ್ರಮದಲ್ಲಿ, ಅಂತರಂಗದಲ್ಲಿ ಲಿಂಗಾಂಗಕ್ಕೆ ಸ್ವಾನುಭಾವಜ್ಞಾನಸೂತ್ರದಿಂ ಪ್ರಣವಸಂಬಂಧ ಮಾಡಿಕೊಂಡಡೆ ಅದೇ ಕ್ರಿಯಾಸಮಾದ್ಥಿ, ಗೋಮುಖಸಮಾದ್ಥಿ, ಮಹಾನಿಜ ಅಖಂಡ ಚಿದ್ಬಯಲಸಮಾದ್ಥಿ. ಇಂತಪ್ಪ ಸಮಾದ್ಥಿ ಉಳ್ಳವರಿಗೆ ಭವಬಂಧನ ಹಿಂಗಿ ಮುಂದೆ ಮೋಕ್ಷವಾಗುವದು ನೋಡೆಂದನಯ್ಯ ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆ ಬೊಕ್ಕಸದ ಮನೆಯಿಪ್ಪ ಭೇದ : ಹೊರಗಣ ಹೊದಕೆ ನಾನಾ ಚಿತ್ರವಿಚಿತ್ರ. ಮಳೆಗೆ ನೆನವುದು, ಬೆಂಕಿಗೆ ಬೇವುದು, ಗಾಳಿಗೆ ಮುರಿಯುವುದು. ಆ ಮನೆಗೆ ವಿರೋಧವಾಹಲ್ಲಿ ಪಟ್ಟಿ ಕೆಡದು ದೇವಾಂಗ ಬೇಯದು, ರತ್ನ ಗಾಳಿಯ ತಪ್ಪಲಿಗೆ ಒಳಗಾಗದು. ಈ ಬೊಕ್ಕಸದ ಮನೆಯ ಹೊರಗಣ ಕೇಡು, ಒಳಗಣ ಲಾಭವ ನಿರೀಕ್ಷಿಸಿ ನೋಡಬೇಕು. ಬಸವಣ್ಣಪ್ರಿಯ ನಾಗರೇಶ್ವರಲಿಂಗವ ಕೇಳಬೇಕು.
--------------
ಆನಂದಯ್ಯ
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು- ತೆರನನರಿಯದೆ ತನಿರಸದ- ಹೊರಗಣ ಎಲೆಯನೆ ಮೆಲಿದುವು ! ನಿಮ್ಮನರಿವ ಮದಕರಿಯಲ್ಲದೆ ಕುರಿ ಬಲ್ಲುದೆ ಕೂಡಲಸಂಗಮದೇವಾ
--------------
ಬಸವಣ್ಣ
ಹೊರಗಣ ಮಲತ್ರಯಕ್ಕೆ ಒಳಗಣ ಅರಿವ ನೀಗಾಡಲೇತಕ್ಕೆ? ಅಲ್ಪ ಸುಖಕ್ಕೆ ಮಚ್ಚಿ ಕುಕ್ಕುರನಂತೆ ಸಿಕ್ಕಿಸಾಯಲೇತಕ್ಕೆ? ನಿಶ್ಚಯವಾಗಿ ತಾ ಬಂದ ಆದಿ ಅನಾದಿಯೆಂಬ ವಸ್ತುವ ತಿಳಿದು ನೋಡಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕಂಗಳ ಮುಂದೆ ಕತ್ತಲೆ ಇದೇನೊ? ಮನದ ಮುಂದಣ ಮರಣ (ಮರವೆ ?) ಇದೇನೊ? ಒಳಗಣ ರಣರಂಗ ಹೊರಗಣ ಶೃಂಗಾರ ! ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹೊರಗಣ ಭವಿಯ ಕಳೆದೆವೆಂಬರು, ಒಳಗಣ ಭವಿಯ ಕಳೆಯಲರಿಯರು. ಕಾಮವೆಂಬುದೊಂದು ಭವಿ, ಕ್ರೋಧವೆಂಬುದೊಂದು ಭವಿ, ಲೋಭವೆಂಬುದೊಂದು ಭವಿ, ಮೋಹವೆಂಬುದೊಂದು ಭವಿ, ಮದವೆಂಬುದೊಂದು ಭವಿ, ಮಚ್ಚರವೆಂಬುದೊಂದು ಭವಿ, ಆಸೆಯೆಂಬುದೊಂದು ಭವಿ, ಆಮಿಷವೆಂಬುದೊಂದು ಭವಿ, ಹೊನ್ನೆಂಬುದೊಂದು ಭವಿ, ಹೆಣ್ಣೆಂಬುದೊಂದು ಭವಿ, ಮಣ್ಣೆಂಬುದೊಂದು ಭವಿ. ಇಂತೀ ಭವಿಯ ಕಳೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಇನ್ನಷ್ಟು ... -->