ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ?
ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ?
ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ
ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ
ನಿಶ್ಚಯವನರಿಯಬಾರದು,
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ,
ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ
ದೃಷ್ಟಿ;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ?
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು,
ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.