ಅಥವಾ
(2) (1) (3) (0) (0) (0) (0) (0) (3) (1) (0) (0) (0) (0) ಅಂ (1) ಅಃ (1) (0) (0) (1) (0) (0) (0) (0) (2) (0) (0) (0) (0) (0) (0) (0) (3) (0) (0) (1) (0) (0) (0) (3) (2) (2) (0) (0) (0) (2) (0) (3) (1) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು. ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ. ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತುವನಾರುಬಲ್ಲರು ? ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು] ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ. ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ. ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು. ಈ ಕಷ್ಟದ ನುಡಿಯ ಕೇಳಲಾಗದು. ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ? ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ, ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ, ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ, ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ. ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು. ಪ್ರಾಣಲಿಂಗಕ್ಕೆ ಮನವನರ್ಪಿತವ ಮಾಡಬೇಕು. ಭಾವಲಿಂಗಕ್ಕೆ ತೃಪ್ತಿಯನರ್ಪಿತವ ಮಾಡಬೇಕು. ಈ ವರ್ಮವನರಿತು ಅರ್ಪಿತವ ಮಾಡಬಲ್ಲಡೆ ಪ್ರಸಾದಿಯೆಂಬೆ. ಅದೆಂತೆಂದಡೆ: ಇಷ್ಟಲಿಂಗಾರ್ಪಿತಂ ತ್ವಂಗಂ ಪ್ರಾಣಲಿಂಗಾರ್ಪಿತಂ ಮನಃ ಭಾವಲಿಂಗಾರ್ಪಿತಾ ತೃಪ್ತಿ ರಿತಿಭೇದಂ ವರಾನನೇ || ಎಂದುದಾಗಿ, ಲಿಂಗಕ್ಕೆಯೂ ತನಗೆಯೂ ಎಡೆದೆರಹಿಲ್ಲ. ಇದು ಕಾರಣ, ಲಿಂಗ ಸಹಿತವಾಗಿಯೆ ಕೇಳುವ, ಲಿಂಗಸಹಿತವಾಗಿಯೆ ಘ್ರಾಣಿಸುವ, ಲಿಂಗಸಹಿತವಾಗಿಯೆ ರುಚಿಸುವ, ಲಿಂಗಸಹಿತವಾಗಿಯೇ ನೋಡುವ, ಲಿಂಗಸಹಿತವಾಗಿಯೆ ಸಂಗ ಮಾಡುವ, ಲಿಂಗಸಹಿತವಾಗಿಯೆ ತೊಳಗುವ, ಇಂತಪ್ಪ ಮಹಾಮಹಿಮ ಸದ್ಭಕ್ತನ ಅಂಗವೆಲ್ಲವೂ ಲಿಂಗ, ಸಂಗಮವೆಲ್ಲವೂ ಲಿಂಗ, ಅಂಗ ಸಂಗಮವೆಲ್ಲವೂ ಲಿಂಗಸಂಗಗಳಾದ ಕಾರಣ, ಅಂಗಕ್ರಿಯೆಗಳೆಲ್ಲವೂ ಲಿಂಗಕ್ರಿಯೆಗಳಾದ ಕಾರಣ, ಅಂಗಭೋಗವೆಲ್ಲವೂ ಲಿಂಗಭೋಗವಾದ ಕಾರಣ, ಇಂತಪ್ಪ ಮಹಾಮಹಿಮ ಸದ್ಭಕ್ತನ ಶ್ರೀಚರಣಕ್ಕೆ ಎನ್ನ ಶಿರವನಿರಿಸಿ ಪೂಜಿಸುವೆ ಕಾಣಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಸದ್ಭಕ್ತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇಷ್ಟಲಿಂಗಾರ್ಪಿತಂ ಪ್ರಾಣಂ ತೃಪ್ತಿಲಿಂಗಾರ್ಪಿತಾ ಭವೇತ್ ಅಂಗಾಂಕಿತ ಲಿಂಗಾಂಗಿನಾಂ ತ್ರಿವಿಧಂ ಲಿಂಗಮುಚ್ಯತೇ || ಇಂತೆಂದುದಾಗಿ, ಲಿಂಗಕ್ಕೂ ತನಗೂ ಎಡೆದೆರಹಿಲ್ಲದಿಪ್ಪ, ಲಿಂಗಸಹಿತವಾಗಿಯೆ ಕೇಳುವ, ಲಿಂಗಸಹಿತವಾಗಿಯೆ ನೋಡುವ, ಲಿಂಗಸಹಿತವಾಗಿಯೆ ರುಚಿಸುವ, ಲಿಂಗಸಹಿತವಾಗಿಯೆ ಸಂಗವ ಮಾಡುವ, ಲಿಂಗಸಹಿತವಾಗಿಯೆ ಅಳಲುವ, ಲಿಂಗಸಹಿತವಾಗಿಯೆ ಬಳಲುವ, ಲಿಂಗಸಹಿತವಾಗಿಯೆ ತೊಳಲುವ. ಇಂತಪ್ಪ ಮಹಾಮಹಿಮ ಲಿಂಗವಂತನ ಅಂಗಕ್ರಿಯೆಗಳಲ್ಲಿ ಲಿಂಗಕ್ರಿಯೆಗಳಾದವು. ಅಂಗಸಂಗವೆಲ್ಲ ಲಿಂಗಸಂಗವಾದವು. ಅಂಗಭೋಗವೆಲ್ಲ ಲಿಂಗಭೋಗವಾದವು. ಇಂತಪ್ಪ ಮಹಾಮಹಿಮ ಲಿಂಗವಂತನ ಚರಣಕ್ಕೆ ಎನ್ನ ಶಿರವನರಿದು ಪೂಜಿಸುವೆ ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ