ಅಥವಾ
(2) (1) (3) (0) (0) (0) (0) (0) (3) (1) (0) (0) (0) (0) ಅಂ (1) ಅಃ (1) (0) (0) (1) (0) (0) (0) (0) (2) (0) (0) (0) (0) (0) (0) (0) (3) (0) (0) (1) (0) (0) (0) (3) (2) (2) (0) (0) (0) (2) (0) (3) (1) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು. ಆ ಪಟ್ಟಣ ಸುತ್ತಿ ಮುತ್ತಿಕೊಂಡರು. ಏಳು ಭೂದುರ್ಗಂಗಳು ಕೊಳಹೋದವು. ಅರಮನೆಯ ಹೊಕ್ಕರು, ಹನ್ನೆರಡುಸಾವಿರ ರಾಣಿವಾಸವ ಸೆರೆ ಹಿಡಿದರು. ಆನೆಯ ಸಾಲೆಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯ ಹೊಯ್ದರು. ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು. ಇಪ್ಪತ್ತೈದು ತಳವಾರರ ನಿರ್ಮೂಲಿಸಿ ಬಿಟ್ಟರು. ಮೂವರ ಮೂಗ ಕೊಯ್ದರು, ಒಬ್ಬನ ಶೂಲಕ್ಕೆ ಹಾಕಿದರು. ಆ ಪಟ್ಟಣದ ಲಕ್ಷ್ಮಿ ಹಾರಿತ್ತು. ಆ ಪಟ್ಟಣದ ಪ್ರಜೆಗಳಿಗೆ ರಣಮಧ್ಯ ಮರಣವಾಯಿತ್ತು. ಆ ರಣಭೂಮಿಯಲ್ಲಿಕಾಡುಗಿಚ್ಚೆದ್ದುರಿಯಿತ್ತು. ಆ ಊರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ. ಆ ಬೇತಾಳನ ಮೇಲೆ ಅಕಾಲವರುಷ ಸುರಿಯಿತ್ತು. ಆ ವರುಷದಿಂ ಹದಿನಾಲ್ಕು ಭುವನ, ಸಚರಾಚರಂಗಳಿಗೆ ಶಾಂತಿಯಾಯಿತ್ತು. ಆ ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ, ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡ ಘನ[ವ], ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ, ನಾನೆತ್ತ ಬಲ್ಲೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ, ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ, ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು, ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು, ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ ಮಹಾಜ್ಞಾನ ಜಂಗಮವ ನೋಡಿರಯ್ಯ. ಅದೆಂತೆಂದಡೆ: ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ || ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ತನುವಿನೊಳಗೆ ತನು ಸವೆಯದೆ, ಮನದೊಳಗೆ ಮನ ಸವೆಯದೆ, ಧನದೊಳಗೆ ಧನ ಸವೆಯದೆ, ಅನುಮಾನವರಿತು ಘನವ ಬೆರೆಸದೆ, ತಮತಮಗೆ ಅರಿದೆಹೆನೆಂಬವರಿಗೆಲ್ಲರಿಗೆಯೂ ಕನಸಿನ ಲಿಂಗತನುವ ಗುರುವಿನಲ್ಲಿ ಸವೆದು, ಮನವ ಲಿಂಗದಲ್ಲಿ ಸವೆದು, ಧನವ ಜಂಗಮದಲ್ಲಿ ಸವೆದು, ಅನುಮಾನವರಿತು ಘನವ ಬೆರಸಬಲ್ಲ ಶರಣನ ಪರಿ ಬೇರೆ. ತನುವ ವಿವರಿಸಿ ನೋಡಿದಡೆ ತನು ಶುದ್ಧವಲ್ಲ. ಮನವ ವಿವರಿಸಿ ನೋಡಿದಡೆ ಮನ ಶುದ್ಧವಲ್ಲ. ಧನವ ವಿವರಿಸಿ ನೋಡಿದಡೆ ಧನ ಶುದ್ಧವಲ್ಲ. ಇಂತೀ ತ್ರಿವಿಧವನು ವಿಚಾರಿಸಿ ನೋಡಿದಡೆ, ಆವುದೂ ಶುದ್ಧವಲ್ಲ ಕೇಳಿರಣ್ಣಾ. ಈ ತ್ರಿವಿಧವನು ತ್ರಿವಿಧಕ್ಕೆ ಇತ್ತಡೆ, ತ್ರಿವಿಧ ಶುದ್ಧವಾಯಿತ್ತು. ಇಂತೀ ತ್ರಿವಿಧವನು ತ್ರಿವಿಧದಲ್ಲಿ ಸವೆಸುವ ಭಕ್ತನ ತ್ರಿವಿಧ ಪ್ರಸಾದವನು ತ್ರಿಕಾಲದಲ್ಲಿ ನಾನು ಕೊಂಡು ಬದುಕಿದೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ತ್ರಿವಿಧ ಭಕ್ತನ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ