ಅಥವಾ
(2) (1) (3) (0) (0) (0) (0) (0) (3) (1) (0) (0) (0) (0) ಅಂ (1) ಅಃ (1) (0) (0) (1) (0) (0) (0) (0) (2) (0) (0) (0) (0) (0) (0) (0) (3) (0) (0) (1) (0) (0) (0) (3) (2) (2) (0) (0) (0) (2) (0) (3) (1) (3) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿಷ್ಯನೆಂಬ ಧರೆಯ ಮೇಲೆ, ಶ್ರೀಗುರುವೆಂಬ ಬೀಜವ ಬಿತ್ತಿ, ಅರಿವೆಂಬ ಗೊಬ್ಬರನಿಕ್ಕಿ, ಜ್ಞಾನವೆಂಬ ಉದಕವನೆರೆಯಲಿಕೆ, ಲಿಂಗವೆಂಬ ಆಕಾರ ಮೊಳೆದೋರಿತ್ತು ಕಾಣಿರೆ. ಜಂಗಮವೆಂಬ ಸಸಿ ಬಲಿದು ವೃಕ್ಷ ಪಲ್ಲವಿಸಿತ್ತು. ಸುಜ್ಞಾನವೆಂಬ ನನೆದೋರಿ ಬಿರಿಮುಗುಳಾಯಿತ್ತು. ಮಹಾಜ್ಞಾನವೆಂಬ ಪುಷ್ಪ ವಿಕಸಿತವಾಯಿತ್ತು. ಖಂಡಿತವೆಂಬ ಮುಗುಳಾಯಿತ್ತು, ಅಖಂಡಿತವೆಂಬ ಕಾಯಿ ಬಲಿಯಿತ್ತು. ಪರಮಜ್ಞಾನವೆಂಬ ಹಣ್ಣಾಯಿತ್ತು. ಆ ಹಣ್ಣು ಬಲಿದು ತೊಟ್ಟುಬಿಟ್ಟು, ಬಟ್ಟಬಯಲಲ್ಲಿ ಬಿದ್ದಿತ್ತು. ಆ ಹಣ್ಣು ಕಂಡು ನಾನು ಇದೆಲ್ಲಿಯದೆಂದು ವಿಚಾರವ ಮಾಡಲ್ಕೆ, ಬಿತ್ತಿದವರಾರೆಂದು ಹೇಳುವರಿಲ್ಲ. ಬಿತ್ತಿದವನ ಸೊಮ್ಮ ನಾವು ಕೇಳಬಾರದೆಂದು ಆ ಹಣ್ಣು ಕೊಂಡು, ನಾನು ಬಿತ್ತಿದಾತನನರಸಿಕೊಂಡು ಹೋಗಲ್ಕೆ, ನಾನೆತ್ತ ಹೋದೆನೆಂದರಿಯೆನಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಬಿತ್ತಿದಾತನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಶ್ರೀಗುರು ಶಿಷ್ಯಂಗೆ ಕರುಣದಿಂದ ಉಪದೇಶವ ಮಾಡಬೇಕೆಂದು ಬಂದು, ಮೂರ್ತಿಗೊಂಡು, ಆ ಶಿಷ್ಯನ ಪೂರ್ವಜನ್ಮವಂ ಕಳೆದು, ಪುನಜಾರ್ತನೆಂದೆನಿಸಿ, ಹಸ್ತಮಸ್ತಕಸಂಯೋಗವಂ ಮಾಡಿ, ವಿಭೂತಿಯ ಪಟ್ಟಮಂ ಕಟ್ಟಿ, ಕಿವಿಯಲ್ಲ ಕರ್ಣಮಂತ್ರಮಂ ಹೇಳಿ, ಮಾಂಸಪಿಂಡವಂ ಕಳೆದು, ಮಂತ್ರಪಿಂಡವಂ ಮಾಡಿ, ಸರ್ವಾಂಗದವಗುಣವಂ ಕಳೆದು, ಆ ಶಿಷ್ಯಂಗೆ ಉಪದೇಶವ ಮಾಡಿದ ಪರಿಯೆಂತೆಂದಡೆ: ಆದಿಲಿಂಗ ಅನಾದಿಲಿಂಗ ಪರುಷಲಿಂಗ ಅಮೃತಲಿಂಗ ಅಗೋಚರಲಿಂಗ ಅಪ್ರತಿಮಲಿಂಗ ಅನಾಮಯಲಿಂಗ ಅಭೇದ್ಯಭೇದಕಲಿಂಗ, ಅಸಾಧ್ಯಸಾಧಕಲಿಂಗ, ಇಂತಪ್ಪ ಲಿಂಗಾಕಿಂತವ ಕೊಂಡು, ಒಂದು ಇಷ್ಟಲಿಂಗವಂ ಮಾಡಿ, ಆ ಶಿಷ್ಯನ ಹಸ್ತದಲ್ಲಿ ನಿಕ್ಷೇಪವಂ ಮಾಡಿದನು ಮಹಾಶ್ರೀಗುರು. ಆ ಲಿಂಗ ಬಂದು, ಆ ಶಿಷ್ಯನ ಅಂಗವ ಸೋಂಕವ ಮುನ್ನವೆ, ಆ ಲಿಂಗ ಆ ಶಿಷ್ಯನನವಗ್ರಹಿಸಿತ್ತಯ್ಯ. ಆ ಶಿಷ್ಯನು ಆ ಗುರುವಿನ ಹಸ್ತದಲ್ಲಿ ಉಪದೇಶವಾಗದ ಮುನ್ನವೆ, ಆ ಶ್ರೀಗುರುವನು ಆ ಶಿಷ್ಯನವಗಹ್ರಿಸಿಕೊಂಡ ನೋಡಿರಯ್ಯಾ. ಅಂಗಸಂಗಿಗಳು ಹೋಗಿ ಲಿಂಗಂಸಂಗಿಗಳ ಸಂಗವ ಮಾಡಿಹೆನೆಂದು ಹೋದಡೆ, ಅಂಗಸಂಗಿಗಳ ಲಿಂಗಸಂಗಿಗಳು ಅವಗ್ರಹಿಸಿಕೊಂಡರು ನೋಡಿರಯ್ಯಾ. ಪರಿಮಳವುಳ್ಳ ಪುಷ್ಪಕ್ಕೆ ತುಂಬಿ ಬಂದು, ಪರಿಮಳವ ಕೊಂಡೆಹೆನೆಂದು ಹೋದಡೆ, ಆ ಪರಿಮಳವುಳ್ಳ ಪುಷ್ಪ ಆ ತುಂಬಿಯನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ಅನಲ ಸಂಗವ ವಾಯು ಮಾಡಿಹೆನೆಂದು ಹೋದಡೆ, ಆ ಅನಲನು ವಾಯುವನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ರೂಪು ದರ್ಪಣವ ರೂಹಿಸಿಹೆನೆಂದು ಹೋದಡೆ, ಆ ದರ್ಪಣ ಆ ರೂಪನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ಕಂಗಳು ಕರಸ್ಥಲದ ಲಿಂಗವ ನೋಡಿಹೆನೆಂದು ಹೋದಡೆ ಆ ಕರಸ್ಥಲದ ಲಿಂಗ ಆ ಕಂಗಳ ನುಂಗಿದ ಪರಿಯ ನೋಡಿರಯ್ಯಾ. ಸರ್ವಾಂಗಸಾಹಿತ್ಯ ಮಹಾಲಿಂಗೈಕ್ಯರ ಸಂಗವ, ನಾನು ಮಾಡಿಹೆನೆಂದು ಹೋದಡೆ, ಉರಿಯುಂಡ ಕರ್ಪುರದಂತೆ ಎನ್ನನವಗ್ರಹಿಸಿಕೊಂಡರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣರ ನಾನು ನಂಬಿ ಕೆಟ್ಟು, ಬಟ್ಟಬಯಲಾಗಿ ಹೋದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ, ಆಚಾರದ ನೆಲೆಯನರಿಯದೆ, ಬರಿದೆ ವ್ರತ ಶೀಲಾಚಾರವೆಂದೆಂಬಿರಿ. ವ್ರತಶೀಲಾಚಾರದ ಸ್ವರೂಪವನರಿಯದ, ಅದರಾಚರಣೆಯನರಿಯದ ಶೀಲವಂತರು ನೀವು ಕೇಳಿ ಭೋ. ತನುವಿನ [ಗುಣವ] ಮನದಲ್ಲಿಗೆ ತಂದು, ಆ ಮನದ ಅನುವನರಿದು, ಶುಚಿ ಶೀಲ ಉಚ್ಯತೆಯೆಂದುದಾಗಿ, ಸಚ್ಚರಿತ್ರವನುಳ್ಳ ಆಚಾರವೆ ಸ್ವರೂಪವಾದ ಘನಲಿಂಗವ ಬೆರಸಬಲ್ಲಡೆ ಅದು ಶೀಲ. ಮನದ ತನುವ ಮಹಾಘನದರುವಿನಲ್ಲಿಗೆ ತಂದು ಅರಿವಿನ ಆಚಾರವೆ ಗುರುಲಿಂಗಜಂಗಮ ಪ್ರಸಾದ ಪಾದತೀರ್ಥ ಭಕ್ತಿ ಎಂದರಿದು, ಅವರ ಸ್ವರೂಪವನರಿದು, ಆಚರಿಸಿದ ಘನ ಶರಣರ ಬೆರಸಬಲ್ಲಡೆ ಅದು ವ್ರತ. ಸದಾಚಾರ ನಿಯತಾಚಾರ, ಭಕ್ತ್ಯಾಚಾರ ಶಿವಾಚಾರ ಸಮಯಾಚಾರ ಗಣಾಚಾರವೆಂಬವುಗಳ ಸ್ವರೂಪವನರಿದು ಆಚರಿಸಬಲ್ಲಡೆ ಅದು ಆಚಾರ. ವ್ರತ ಶೀಲಾಚಾರದ ಅನುವನರಿಯದೆ, ಘನ ಶರಣರ ಬೆರಸದೆ, ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸದೆ ಬರಿದೆ ಅನುವಿನ ತನುವಿನ ಕೊನೆಯ ಮೊನೆಯ ಮೇಲಣ ಜ್ಯೋತಿಯ ತಮ ತಮಗೆ ಅರಿದೆಹೆನೆಂಬವರೆಲ್ಲರೂ ಅನುಮಾವನನರಿಯದೆ ಕೆಟ್ಟರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ. ನಿಮ್ಮ ಶರಣರ ಅನುವನರಿದು, ಘನವ ಬೆರಸಬಲ್ಲ ಶರಣ ಸಂಗನಬಸವಣ್ಣನು, ಇಂತಪ್ಪ ಮಹಾಲಿಂಗವಂತರ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ ? ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ