ಅಥವಾ

ಒಟ್ಟು 446 ಕಡೆಗಳಲ್ಲಿ , 76 ವಚನಕಾರರು , 394 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುರುಹಿಟ್ಟಲ್ಲಿ ಅರಿವು ನಷ್ಟವಾಯಿತ್ತು. ಅರಿವ ನುಂಗಿದ ಕುರುಹು, ಇದಿರಭಾವಕ್ಕೊಡಲಾಯಿತ್ತು. ತನ್ಮಯ ನಷ್ಟವಾಗಿ, ಉಭಯದೋರದೆ ನಿಂದಲ್ಲಿ, ಆ ನಿಲವು ತಾನೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
>ಸಾವ ಜೀವ ಬಿಂದುವಿನ ಸಂಚ, ಸಾಯದ ನಾದ ಪ್ರಾಣದ ಸಂಚ. ಸಾವ ಜೀವದ, ಸಾಯದ ಪ್ರಾಣದ _ಎರಡರ ಭೇದವನರಿಯದಿರ್ದಡೆ ಲಾಂಛನಧಾರಿ, ಸಾವ ಜೀವದ, ಸಾಯದ ಪ್ರಾಣದ ಎರಡರ ಭೇದವ ಭೇದಿಸಿ ಅರಿವು ಕಣ್ದೆರೆದ ಪ್ರಾಣಲಿಂಗಸಂಬಂಧವಂತಿರಲಿ, ಮತ್ತೆಯೂ ಪ್ರಾಣಲಿಂಗಸಂಬಂಧವೇ ಬೇಕು. ಇಂತೀ ಉಭಯ ಸಂಬಂಧವಳಿದ ಸಂಬಂಧ ನಿಜವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ
--------------
ಚನ್ನಬಸವಣ್ಣ
ಪಂಚತತ್ವಂಗಳುವಿಡಿದಾಡುವ ಚತುರ್ದಶೇಂದ್ರಿಯ ವಿಕಾರಂಗಳು ತಾನಲ್ಲ, ತನ್ನವಲ್ಲ. ತನುವುಂಟೆಂದಡೆ ಅಹಮ್ಮಾದಿಗೆ ಸಂದು, ಬಂಧಮೋಕ್ಷಂಗಳಿಗೊಳಗಾಯಿತ್ತು ನೋಡಾ. ಕುರುಹಿಲ್ಲದ ಲಿಂಗ ಅರಿವಿನೊಳು ಬಳಿಸಂದಡೆ ಅರಿವು ಕುರುಹು ತೆರಹಿಲ್ಲದೆ ನಿಂದ ನಿಲವು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜ ತಾನಾದ ಶರಣ.
--------------
ಆದಯ್ಯ
ಅರಿವಿನೊಳಗೊಂದು ಮರವೆಯದೆ, ಮರವೆಯೊಳಗೊಂದು ಅರಿವದೆ. ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲಿದೆ?). ತಾನೆಂಬಲ್ಲಿ ನಿಷ್ಪತಿಯಿದೆ_ಇದೇನು ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ?
--------------
ಮಾರೇಶ್ವರೊಡೆಯರು
ಬರಡು ಕರೆವಾಗ ಈಯಿತ್ತೆ? ಆ ಕೊರಡು ಚಿಗುರುವಲ್ಲಿ ಹುಟ್ಟಿತ್ತೆ? ಆಗ ತೃಣ ನುಡಿವಲ್ಲಿ ಆತ್ಮ ಜೀವಿಸಿತ್ತೆ? ಆಗ ಕಾಷ್ಠವೇಷವೆದ್ದು ನಡೆವಲ್ಲಿ ಅರಿವು ಕರಿಗೊಂಡಿತ್ತೆ? ಇಂತಿವು ವಿಶ್ವಾಸದ ಹಾಹೆ. ಗುರುಚರದಲ್ಲಿ ಗುಣ, ಶಿವಲಿಂಗ ರೂಪಿನಲ್ಲಿ ಸಲಕ್ಷಣವನರಸಿದಲ್ಲಿಯೆ ಹೋಯಿತ್ತು ಭಕ್ತಿ. ಈ ಗುಣ ತಪ್ಪದೆಂದು ಸಾರಿತ್ತು ಡಂಗುರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 61 ||
--------------
ದಾಸೋಹದ ಸಂಗಣ್ಣ
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಬಾಹ್ಯದ ನೀತಿ ಅಂತರಂಗದ ಅರಿವು ಸರ್ವರಲ್ಲಿ ಕ್ಷಮೆ ಒಳಹೊರಗಾಗುವ ವರ್ತಕ ತ್ರಿವಿಧ ಶುದ್ಧವಾಗಿಯಿಪ್ಪ ಭಕ್ತನ ಜಂಗಮದ ಹೃತ್ಕಮಲವೆ ವಿರಕ್ತವಾಸ. ಇಷ್ಟನರಿದು ಮರೆದವಂಗಲ್ಲದೆ ತೆರಪಿಲ್ಲ; ನಿನ್ನ ನೀನರಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ. ನಾದ ಬಿಂದು ಮಹೇಶ್ವರಸ್ಥಲ. ಕಳೆ ಬೆಳಗು ಪ್ರಸಾದಿಸ್ಥಲ. ಅರಿವು ನಿರವಯವು ಪ್ರಾಣಲಿಂಗಿಸ್ಥಲ. ಜ್ಞಾನ ಸುಜ್ಞಾನ ಶರಣಸ್ಥಲ. ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಆಗಮ್ಯದ ಐಕ್ಯಸ್ಥಲ_ ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಿವಿನ ಗುಣ ಬಸವಣ್ಣನೊಳಗಡಕವಯ್ಯಾ, ಮರಹಿನ ಜ್ಞಾನ ಚೆನ್ನಬಸವಣ್ಣನೊಳಗಡಕವಯ್ಯಾ. ಅರಿವು ಮರವೆ ತಾನೆ ಶಿವರೂಪುಪ್ರಭೆ ಪ್ರಭುಲಿಂಗಮೂರ್ತಿಯಾಯಿತ್ತು ಕಪಿಲಸಿದ್ಧಮ್ಲನಾಥಯ್ಯಾ.
--------------
ಸಿದ್ಧರಾಮೇಶ್ವರ
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ! ಅರಿದು ಮರೆದು ನೆನೆದಡೆ ನೆಲೆಗೊಳ್ಳದು. ಅರಿವರಾರಯ್ಯ ಆಗಮ್ಯಲಿಂಗವನು ? ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ? ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ? ಗುಹೇಶ್ವರಲಿಂಗದ ನಿಲವ ತೋರಬಾರದು_ಕೇಳಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ತನ್ನ ತಾನರಿವುದೇನೋ, ತನ್ನ ತಾ ಮರೆವುದು ಮತ್ತದೇನೋ? ಅರಿವುದು ಒಂದೆ, ತನ್ನನರಿಯಲುಂಟೆ? ಅರಿವು ತಾನೆ ತನ್ನ ಮರೆಯಲುಂಟೆ? ಆ ಅರಿವು ತಾನೆಂದರಿತಂಗೆ ಮೂರಿಲ್ಲ ಆರಿಲ್ಲ, ಎಂಟಿಲ್ಲ ಹದಿನೆಂಟಿಲ್ಲ. ಪುಸಿ ತನ್ನ ಭ್ರಾಮಕದಿಂದ ತೋರಿತ್ತು ನೋಡಾ. ಸೌರಾಷ್ಟ್ರ ಸೋಮೇಶ್ವರಲಿಂಗವಿಪ್ಪುದಕ್ಕೆ ಇದು ಚಿಹ್ನ.
--------------
ಆದಯ್ಯ
ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ !
--------------
ಅಲ್ಲಮಪ್ರಭುದೇವರು
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು. ಎಂಟುರತ್ನದ ಕಾಂತಿ, ಜೀವರತ್ನದ ಕಳೆ ಭಾವಿಸಿ ಏಕವ ಮಾಡಿ ನಡೆವುದು. ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು. ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
--------------
ಆನಂದಯ್ಯ
ಅರಿವಿಲ್ಲದ ಕಾರಣ ಭವಕ್ಕೆ ಬಂದರು, ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ. ಜಂಗಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ. ಅರಿವು ಸಾಹಿತ್ಯ ಗುರು, ಗುರುಸಾಹಿತ್ಯ ಆಚಾರ, ಆಚಾರಸಾಹಿತ್ಯ ಲಿಂಗ, ಲಿಂಗಸಾಹಿತ್ಯ ಜಂಗಮ, ಜಂಗಮಸಾಹಿತ್ಯ ಪ್ರಸಾದ, ಪ್ರಸಾದಸಾಹಿತ್ಯ ಗಣತ್ವ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಈ ಸ್ಥಲವಾದವರಿಗೆಲ್ಲಾ ಭಕ್ತಿ ಉನ್ಮದ ಉಂಟು, [ಸಕಳ] ನಿರ್ವಾಣ ಲಿಂಗೈಕ್ಯಪದವಪೂರ್ವ.
--------------
ಚನ್ನಬಸವಣ್ಣ
ಇನ್ನಷ್ಟು ... -->