ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವಲ್ಲಿ, ಲಿಂಗಕ್ಕೆ ಅರ್ಚನೆ ಪೂಜೆಗಳನು ಮಾಡಿ, ಲಿಂಗಾರ್ಪಿತದಲ್ಲಿ ಅವಧಾನಪ್ರಸಾದ, ಭೋಗದಲ್ಲಿ ಸುಯಿಧಾನ, ಗುರುವಿನಲ್ಲಿ ಜ್ಞಾನಸಿದ್ಧಿ, ಜಂಗಮದಲ್ಲಿ ನಿರ್ವಂಚನೆ, ಪ್ರೀತಿ ಪ್ರೇಮ ಪರಧನ ಪರಸ್ತ್ರೀ ಪರದೈವಕ್ಕೆರಗದೆ, ನಿತ್ಯಲಿಂಗಾರ್ಚನೆಯು ಮಾಡೆಂದು ಉಪದೇಶಮಂ ಕೊಟ್ಟನಲ್ಲದೆ, ಪಾದತೀರ್ಥದಲ್ಲಿ ಲಿಂಗಮಜ್ಜನಕ್ಕೆರೆದು ಪ್ರಸಾದವನರ್ಪಿಸ ಹೇಳಿಕೊಟ್ಟನೆ, ಇಲ್ಲ. ಆ ಭಕ್ತನು ತನು ಮನ ಧನವನು ಗುರುಲಿಂಗಜಂಗಮಕ್ಕೆ ಸವೆಸಿ, ತನು ಸವೆಸಿ ಮನಲೀಯವಾಗಿ ಧನಲೋಭವಿಲ್ಲದೆ ಸಂದು ನಿಂದ, ಪರಮವೈರಾಗ್ಯ ಉರವಣಿಸಿ ಈಷಣತ್ರಯದ ಆಸೆಯಳಿದು, ಸೋಹಂ ಎಂದು ನಿಂದು ಹರಗಣಂಗಳಂ ನೆರಪಿ, ಆಚಾರ ಕರ್ಪರ, ವಿಚಾರ ಕರ್ಪರ, ಅವಿಚಾರ ಕರ್ಪರ ವೇಷಮಂ ತಾಳಿ, ಭಕ್ತ ಭಿಕ್ಷಾಂದೇಹಿ ಎಂದು ಭಕ್ತರ ಮಠದಲ್ಲಿ ಹೊಕ್ಕು, ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದಮಂ ಭೋಗಿಸಿ, ಶಿವಕ್ಷೇತ್ರ ತೀರ್ಥಂಗಳಂ ಚರಿಸಿ, ಲಿಂಗಧ್ಯಾನ ನಿರತನಾಗಿ ಇರಹೇಳಿದರಲ್ಲದೆ, ಲಿಂಗಕ್ಕೆ ಪಾದತೀರ್ಥವ ಕೊಟ್ಟು, ಪ್ರಸಾದವನಿಕ್ಕ ಹೇಳೆ ಮಾಡಿದ ನಿರ್ವಾಣದೀಕ್ಷೆಯುಂಟೆ ? ಸಲಿಂಗೀ ಪ್ರಾಣಮುಕ್ತಶ್ಚ ಮನೋಮುಕ್ತಶ್ಚ ಜಂಗಮಃ | ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿರ್ಣಯಃ || ಇಂತೆಂದುದಾಗಿ, ಈ ನಿರ್ಣಯ ವಚನವನರಿಯಬಲ್ಲಡೆ ಜಂಗಮ, ಅಲ್ಲದಿದ್ದಡೆ ಭವಭಾರಿಯೆಂಬೆ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಜ್ಞಾನ ಉಪಾಸ್ಥೆಪಶುಜ್ಞಾನವ ಬಲ್ಲ ಮಾತ ನುಡಿಯಲಾಗದು, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲತ್ರಯದಲ್ಲಿ ಬೀಳದೆ, ಜಾಗ್ರತ ಸ್ವಪ್ನ ಸುಷುಪ್ತಿಯೆಂಬ ವ್ಯಾಪಾರತ್ರಯದ ಅನುಮಾನವರಿತು, ಆಧ್ಯಾತ್ಮಿಕ ಆಧಿಭೌತಿಕ ಆಧಿದೈವಿಕವೆಂಬ ತಾಪತ್ರಯವಂ ಕೊಳಲಾಗದೆ, ಅರ್ಥೇಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯದ ಭ್ರಾಂತಿಯಡಗಿ, ಅಭಾವ ಸ್ವಭಾವ ನಿರ್ಭಾವದಲ್ಲಿ ಶುದ್ಧವಾಗಿ, ದೀಕ್ಷೆ ಶಿಕ್ಷೆ ಸ್ವಾನುಭಾವವೆಂಬ ದೀಕ್ಷಾತ್ರಯದಲ್ಲಿ ಅನುಮಾನವನ್ನರಿತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗವೆಂಬ ಲಿಂಗತ್ರಯದ ಭೇದವಂ ಭೇದಿಸಿ, ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವಂ ಭೇದಿಸಿ, ಸ್ವರ್ಗಮತ್ರ್ಯ ಪಾತಾಳವೆಂಬ ಲೋಕತ್ರಯವನತಿಗಳದು, ಇಹ ಪರ ಸ್ವಯವೆಂಬ ಮುಕ್ತಿತ್ರಯದ ಹಂಗು ಹಿಂಗಿ, ಮಥನ ನಿರ್ಮಥನ ಸಮ್ಮಥನವೆಂಬ ಮಥನತ್ರಯದಲ್ಲಿ ನಿರತನಾಗಿ, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯದ ಹಮ್ಮ ಬಿಟ್ಟು, ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವನೊರಸಲೀಯದೆ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಂ ನಿರ್ಮಲವಂ ಮಾಡಿ, ಗುರುನಿಂದೆ ಶಿವನಿಂದೆ ಭಕ್ತನಿಂದೆಯೆಂಬ ನಿಂದಾತ್ರಯಂಗಳಂ ಕೇಳದೆ, ಚಂದ್ರ ಸೂರ್ಯ ಅಗ್ನಿ ಎಂಬ ನೇತ್ರತ್ರಯದ ಹೊಲಬನರಿದು, ಪ್ರಾಹ್ನ ಮಧ್ಯಾಹ್ನ ಅಪರಾಹ್ನವೆಂಬ ವೇಳಾತ್ರಯವಂ ಮೀರಿ, ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಅಗ್ನಿತ್ರಯಕ್ಕೆ ಇಂಬುಗೊಡದೆ, ಅಧೋನಿರಾಳ ಮಧ್ಯನಿರಾಳ ಊಧ್ರ್ವನಿರಾಳವೆಂಬ ನಿರಾಳತ್ರಯದಲ್ಲಿ ನಿರತನಾಗಿ, ಅನುಭಾವ ಮಹಾನುಭಾವ ಸ್ವಾನುಭಾವವೆಂಬ ಅನುಭಾವತ್ರಯಂಗ?ಲ್ಲಿ ಬೀಸರಹೊಂದದೆ, ಬಾಲ್ಯ ಯೌವನ ವೃದ್ಧಾಪ್ಯವೆಂಬ ತನುತ್ರಯಂ ಮರೆದು, ತನು ಮನ ಧನದಲ್ಲಿ ಶುದ್ಧನಾಗಿ, ಆಗಮತ್ರಯದಲ್ಲಿ ಅನುವರಿತು, ಇಂತೀ ತ್ರಯ ಸಂಪಾದನೆಯಂ ಮೀರಿದ ನಿಜಶರಣನೆ ಕೂಡಲಚೆನ್ನಸಂಗಯ್ಯನೆಂದರಿದು ಸುಖಿಯಾದೆ£ಯ
--------------
ಚನ್ನಬಸವಣ್ಣ
ಭಕ್ತರು ಭವಪಾಶದಲ್ಲಿದ್ದಹರೆಂದು ತೆಗೆವುದಕ್ಕೆ ಸುಳಿವ ಜಂಗಮದ ಇರವೆಂತೆಂದಡೆ : ಆಸೆಯೆಂಬ ಪಾಶವ ಹರಿದು, ಈಷಣತ್ರಯದ ದೋಷವ ತರಿದು, ತಾನೇತರಾಸೆಯಿಲ್ಲದೆ, ತನುವಿಂಗೆ ಶೀತೋಷ್ಣಾದಿ ಭೋಗಂಗಳೆಂಬ ಸುಖಂಗಳಂ ಮರೆದು, ಜಿಹ್ವೆಗೆ ಮಧುರರಸ ನಾನಾ ಪರಿಕರಂಗಳಂ ಮರೆದು, ಭಕ್ತರಿಗೆ ಇಚ್ಫೆಯಂ ನುಡಿವ, ಕುಚಿತ್ತರಂ ಬಿಟ್ಟು ಚಿತ್ತಶುದ್ಧನಾಗಿ, ಇದ ನಿಶ್ಚಯವೆಂದರಿದ ಮತ್ತೆ ಮೆಚ್ಚಲೇಕೊ, ನಾನಾ ಮೋಹಂಗಳ ? ವಿರಕ್ತಿಯಿಂದ ಸುಳಿವ ಜಂಗಮಕ್ಕೆ ಮತ್ತೆ ನರರೊಂದಾಗಿ ಸುತ್ತಿ ಬಳಲಲೇಕೊ? ಇದು ಕಾರಣ, ವರ್ಮವನರಿಯದೆ ಮಾಡುವ ಭಕ್ತ ಕರ್ಮಕ್ಕೊಳಗಾದ. ಧರ್ಮವನರಿಯದೆ ತಿರುಗುವ ಜಂಗಮ ಬ್ರಹ್ಮನಿಗೊಳಗಾದ. ಇವರಿಬ್ಬರೂ ಕೆಟ್ಟ ಕೇಡ ನೋಡಿ ಬೆಚ್ಚಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕ್ಷೀರಕ್ಕೆ ವಾರಿ ಅರತಲ್ಲದೆ ಮಧುರಗುಣವಿಲ್ಲ. ಶರೀರವಿಡಿದಿದ್ದಲ್ಲಿ ಅಂಗಕ್ಕೆ ಆಸೆ ಅರತು, ರೋಷ ಹಿಂಗಿ, ಈಷಣತ್ರಯದ ಲೇಸು ಕಷ್ಟವನರಿತು, ಈಶನ ವೇಷದ ಭಾಷೆಗೆ ತಪ್ಪದೆ ಇಪ್ಪುದು ಗುರುಚರಮತ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಶ್ರೀಗುರುಕರಜಾತರೆನಿಸಿ, ನಿಜಮೋಕ್ಷಾಪೇಕ್ಷನೆನಿಸಿ, ಸ್ವಯಚರಪರ ಭಕ್ತಗಣಾರಾಧ್ಯರ ಅರ್ಚನೆ ಪೂಜನೆ ಮಾಡಿ, ದಾಸೋಹಂಭಾವದಿಂದ ಪರತರಬ್ರಹ್ಮಪರಿಪೂರ್ಣಾನಂದವಸ್ತುವೆಂದು ಸಮರಸಾಚರಣೆಯಿಂದ ಹತ್ತುಹನ್ನೊಂದು ಕೊಟ್ಟು ಕೊಂಡ ಮೇಲೆ, ಸಂಕಲ್ಪಭಾವ ತಥ್ಯಮಿಥ್ಯಗಳಿಂದ ಆಸೆ ಆಮಿಷದ ಪಾಶಬದ್ಧ ಜಡಜೀವಿಗಳ ಹುಸಿಮಾತನಾಲಿಸಿ, ವಿವೇಕತಪ್ಪಿ, ನಸುಗುನ್ನಿಕಾಯಂತೆ ಮೋರೆಯಾಗಿ, ತುಮುರೆಕಾಷ*ದಂತೆ ನುಡಿಯಾಗಿ, ವಾರೆನೋಟಗಳಿಂದ ಸಮರಸವನುಳಿದು, ಭಿನ್ನಭಾವದಿಂದ ಕುಂದುನಿಂದ್ಯವ ನುಡಿವುದೊಂದು ದುರಾಚಾರ. ನುಡಿಸೂಸಿದ ಮೇಲೆ ಒಬ್ಬರೊಬ್ಬರು ಅವಿಚಾರಿಗಳಾಗಿ, ಬಾಜಾರಕ್ಕೆ ನಿಂತು, ತನಗಿಂದ ಸ್ವಲ್ಪ ಮನುಷ್ಯರನಾಶ್ರಯಿಸಿ, ಪಂಥಪರಾಕ್ರಮಿಗಳಿಂದ ತಥ್ಯಮಿಥ್ಯವ ನುಡಿದು, ಅರ್ಚನಾರ್ಪಣಗಳ ತೊರೆದು, ದೋಷಾರ್ಥಿಯಾಗಿ ವರ್ತಿಸುವುದೊಂದು ದುರಾಚಾರ. ಭಕ್ತಗಣಂಗಳು ವಾರಬಡ್ಡಿಗಳ ಕೊಟ್ಟು ಕೊಂಡು ವ್ಯವಹರಿಸಿ, ಈಷಣತ್ರಯದ ಅಂಗವಿಷಯದಿಂದ ದ್ರವ್ಯವ್ಯಾಪಾರಿಯಾಗಿ, ದುರಾತ್ಮರಂತೆ ಬಾಜಾರಕ್ಕೆ ಬಿದ್ದು ಕಠಿಣನುಡಿಗಳ ಬಳಸುವುದೊಂದು ದುರಾಚಾರ. ಹೊನ್ನು ಹೆಣ್ಣು ಮಣ್ಣು ಧಾನ್ಯ ವಸ್ತ್ರಗಳಿಗೆ ಹೊಣೆ ಜಾವಿೂನುಗಳಾಗಿ ಅಸನ ವಸನದಿಚ್ಛೆಗೆ ಮಿತಿದಪ್ಪಿದಲ್ಲಿ , ಸಾಕ್ಷಿ ವಾದಕ್ಕೆ ನಿಂತು, ಆಡಬಾರದ ಮಾತನಾಡುವುದೊಂದು ದುರಾಚಾರ. ಗುರುಹಿರಿಯ ಪಿತ-ಮಾತೆಗಳಿಗೆ ತಾ ಗಳಿಸಿದ ದ್ರವ್ಯವ ವಂಚಿಸಿ, ಇದ್ದೂ ಇಲ್ಲಯೆಂದು ಹುಸಿನುಡಿಯ ನುಡಿವುದೊಂದು ದುರಾಚಾರ. ಗುರುಚರಲಿಂಗಮೂರ್ತಿಗಳು ಹಸಿವಿಗನ್ನ, ಶೀತಕ್ಕೆ ವಸ್ತ್ರ, ಪಾದಕ್ಕೆ ವಾಹನವಾದುದ ಬೇಡಿದಲ್ಲಿ ತನಗೆ ತ್ರಾಣಿದ್ದು ಅವರಿಗೆ ಈಗ ದೊರೆಯದೆಂದು ಪ್ರಪಂಚನುಡಿಯ ನುಡಿವುದೊಂದು ದುರಾಚಾರ. ಈ ದುರಾಚಾರ ಹುಸಿನುಡಿಗಳನಳಿದುಳಿದು, ಭ್ರಾಂತುಭ್ರಮೆಗಳ ನೀಗಿ, ತನ್ನ ನಡೆನುಡಿಗಳು ತನಗೆ ಪ್ರಮಾಣವಾಗಿ, ನಿರ್ವಂಚಕತನದಿಂದ ಶ್ರುತಿಗುರುಸ್ವಾನುಭಾವವಿಡಿದು, ತಥ್ಯಮಿಥ್ಯವನಡಿಮೆಟ್ಟಿ, ಕಿಂಕರಭಾವದೊಳು ಗುರುಹಿರಿಯರ ಪ್ರಮಾದವಶದಿಂದ ಪ್ರಮಥಗಣಮಾರ್ಗವ ಬಿಟ್ಟಾಚರಿಸುವದ ಪರಶಿವಲಿಂಗಮೂರ್ತಿ ಹರಗಣಸಾಕ್ಷಿಯಾಗಿ ತಾನು ಕಂಡಲ್ಲಿ , ಅವರನಾಚರಿಸದಾಚಾರದ ಸ್ಥೂಲಸೂಕ್ಷ್ಮವಾದೊಡೆ ಹರಗಣಂಗಳೊಡನೆ ಅವರಿಗೆ ಶರಣುಹೊಕ್ಕು, ಹರಗುರುವಾಕ್ಯಪ್ರಮಾಣವಾಗಿ ಮೃದುತರ ನುಡಿಗಳಿಂದ ತಾವು ಅವರೊಡನೆ ಏಕಭಾವದಿಂದ ಕ್ರಿಯಾಲೀಲೆಯ ಸಮಾಪ್ತವ ಮಾಡುವುದು. ಇದಕ್ಕೆ ಮೀರಿ ಸ್ಥೂಲವಾದೊಡೆ ಮೌನಧ್ಯಾನದಿಂದ ಪರಶಿವಲಿಂಗಸಾಕ್ಷಿಯಾಗಿ, ಹರಗಣಕ್ಕೊಪ್ಪಿಸಿ, ಹತ್ತು ಹನ್ನೊಂದರ ಸಮರಸಾನುಭಾವವ ತ್ಯಜಿಸಿ, ಆಪ್ಯಾಯನಕ್ಕನ್ನ, ಸೀತಕ್ಕೆ ವಸ್ತ್ರ, ಲಾಂಛನಕ್ಕೆ ಶರಣೆಂದು ಬಯಲಿಗೆ ಬೀಳದೆ ಸುಮ್ಮನಿರ್ಪುದೆ ಪ್ರಮಥಗಣಮಾರ್ಗವು. ಈ ಸನ್ಮಾರ್ಗವನುಳಿದು ಕಿರಾತರಂತೆ ಹುಸಿಶಬ್ದ, ಹೊಲೆಶಬ್ದ , ಹೇಸಿಕೆಶಬ್ದ, ವಾಕರಿಕೆಶಬ್ದ, ಬಾಂಡಿಕಶಬ್ದ, ನೀಚರನುಡಿ, ಷಂಡರಮಾತು, ಕಳ್ಳರನುಡಿ, ಜಾರರನುಡಿ, ಜೂಜುಗಾರರನುಡಿ, ಆಟಕಾರರನುಡಿ, ಬೇಟೆಗಾರರನುಡಿ, ಕುಲಛಲಗಾರರನುಡಿ, ಲಾಹರಿಗಾರರನುಡಿ, ಅಶನಘಾತಕರನುಡಿ, ಲಂಚಗಾರರನುಡಿ, ರಿಣಪಾತಕರನುಡಿ, ಮೋಸಗಾರರನುಡಿ, ಭ್ರಾಂತರನುಡಿ, ಕೋಪಿಗರನುಡಿ, ಆಚಾರಹೀನ ನಡೆಗೆಟ್ಟರನುಡಿ, ಬಳ್ಳದತುದಿಹೀನ ಶಬ್ದದಂತೆ ತುಂಟ ತುಡುಗುಣಿ ಹಲವು ಮಾತುಗಳ ಬಳಕೆಯುಳ್ಳುದೆ ಚತುರ್ಥಪಾತಕವು. ಇದಕ್ಕೆ ಹರವಾಕ್ಯ ಸಾಕ್ಷಿ : ``ಕುಶಬ್ದಂ ಹೀನಶಬ್ದಂ ಚ ಚಾಂಡಾಲಃ ಶ್ವಪಚೋýಪಿ ವಾ | ಹೀನಶಬ್ದಸ್ಯ ಪಾಪಾಚ್ಚ ನರಕೇ ಕಾಲಮಕ್ಷಯಂ || ಅನೃತಂ ಚಾಪಶಬ್ದಂ ಚ ನಿಂದಕೋ ಗುರುತಲ್ಪಗಃ | ಗಣಾದಿವಾದದೂಷ್ಯಶ್ಚ ವೇಶ್ಯಾಪುತ್ರಸ್ತಥೈವ ಚ || ಪರನಿಂದಾವಂದನಾಶ್ಚ ಲಿಂಗಸಂಗಿವಿವರ್ಜಿತಂ | ಪ್ರಮಾದಂ ಕುರುತೇ ವಾಣ್ಯಾ ಮೋಕ್ಷೋ ನಾಸ್ತಿ ಮಹೇಶ್ವರಿ || ಅನ್ಯದೋಷೇಣ ನಿಂದ್ಯಮಾಸ್ತು ಸ್ವದೋಷಗುಪ್ತಪಾತಕಃ | ಗುರುಭ್ರಷ್ಟಸ್ಯ ಚಾಂಡಾಲೋ ರೌರವಂ ನರಕಂ ವ್ರಜೇತ್ ||'' ಇಂತೆಂದುದಾಗಿ, ಪರಮಾರಾಧ್ಯ ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು, ಈ ಲಿಂಗಾಂಗಸಂಗಸಂಬಂಧದಾಚರಣೆಯ ಸುಖವು ಏನು ತಪಸ್ಸಿನ ಫಲವೋಯೆಂದರಿದು ಮರೆದರೆ ಇನ್ನೀ ನಿಜಮೋಕ್ಷವು ದೊರೆಯದೆಂದು ಗುರುಹಿಯರ ನಡೆನುಡಿಗಳಾಲಿಸಿ, ನಡೆನುಡಿಭಿನ್ನವಾಗದಂತೆ ಚತುರ್ಥಪರಮದ್ರೋಹದ ಪಾತಕಮಂ ನಿರಸನಂಗೈದು ನಿಜಪರಶಿವಘನಕ್ಕೆ ಘನವೆನಿಸಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶ್ರೀಗುರುಕರುಣಕಟಾಕ್ಷದೊಳ್ ಚಿದ್ಘನಲಿಂಗ ಅಂಗಸಂಬಂಧದಾಚರಣೆಯ ಸರ್ವಾಚಾರಸಂಪದವೆಂಬ ಪರಮಾಮೃತಮಂ ಸವಿದುಂಡುಪವಾಸಿ ಬಳಸಿಬ್ರಹ್ಮವಾಗಿ, ಪರಮಪಾತಕವೆಂಬ ಕಾಲ ಕಾಯ ಮಾಯಾಪಾಶ ಭವಸಾಗರವ ದಾಂಟಿ, ದೃಢಚಿತ್ತಿನೊಳ್ ನಿಂದ ನಿತ್ಯಸುಖಿಗಳು, ತಮ್ಮ ನಡೆ ನುಡಿ ತಮಗೆ ಸ್ವಯವಾಗಿ, ಸತ್ಯಶುದ್ಧದಿಂದ ಹಸ್ತಪಾದವ ದುಡಿಸಿ, ಮಾಡುಂಬ ಭಕ್ತನಾಗಲೀ, ಬೇಡುಂಬ ಮಹೇಶನಾಗಲೀ, ಅಂಗವಿಕಾರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅವಲಕ್ಷಣಮಂ ಜರಿದು ಮರೆದು ನಿರಾಸತ್ವದಿಂದ, ದೇಹಮೋಹಮನ್ನಳಿದುಳಿದು, ಅಪರಾಧ ಪ್ರಾಣಿಗಳಾಗಲಿ, ನಿರಪರಾಧ ಪ್ರಾಣಿಗಳಾಗಲಿ, ಕೊಲ್ಲದಿರ್ಪುದೆ ಧರ್ಮ, ಗಂಧ ರಸ ಮೊದಲಾದ ಪರದ್ರವ್ಯ ಒಲ್ಲದಿಪ್ಪುದೆ ಶೀಲ, ಗುರುಹಿರಿಯರುಗಳಿಗೆ ಪ್ರತಿ ಉತ್ತರವ ಕೊಡದಿಪ್ಪುದೆ ವ್ರತ, ಕ್ಷುತ್ತು ಪಿಪಾಸಾದಿಗಳಿಗೆ ಅಳುಕದಿಪ್ಪುದೆ ನೇಮ, ಕುಲಾದಿ ಅಷ್ಟಮದಗಳಿಗೆಳಸದಿಪ್ಪುದೆ ನಿತ್ಯ. ಇಂತೆಸೆವ ಪಂಚಪರುಷವ ಬಾಹ್ಯಾಂತರಂಗದಲ್ಲಿ ಪರಿಪೂರ್ಣಭಾವದಿಂದ ತುಂಬಿತುಳುಕಾಡುತ, ಶ್ರಿಗುರುಲಿಂಗಜಂಗಮದ ಷಟ್ಸಾ ್ಥನದಲ್ಲಿ ಷಡ್ವಿಧಲಿಂಗ ಮಂತ್ರಪ್ರಣಮಂಗಳು ಸಂಬಂಧವಾಗಿಪ್ಪುದ ಶ್ರುತಿಗುರುಸ್ವಾನುಭಾವದಿಂದರಿದು, ತನ್ನ ಬಳಿವಿಡಿದು ಬಂದ ಸುಪದಾರ್ಥವ ಆ ಗುರುಚರಪರಕ್ಕೆ ಪುಷ್ಪ ಮೊದಲಾದ ಸುಗಂಧವ ಪವಿತ್ರಮುಖದಿಂದ ನಿವೇದಿಸಿದಲ್ಲಿ ಆಚಾರಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಹಣ್ಣು ಮೊದಲಾದ ಸುರಸದ್ರವ್ಯವ ಸುಪವಿತ್ರಗಳಿಂದ ಸುಪವಿತ್ರಮುಖದೊಳ್ ಸಮರ್ಪಿಸಿದಲ್ಲಿ ಗುರುಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಪೀತ ಶ್ವೇತ ಮೊದಲಾದ ಸಮಸ್ತ ಚಿತ್ರವಿಚಿತ್ರಂಗಳ ಸ್ವರೂಪವನು ಮಹಾಜ್ಞಾನಸೂತ್ರವಿಡಿದು ಯೋಗ್ಯವೆನಿಸಿ ನಿವೇದಿಸಿದಲ್ಲಿ ಶಿವಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಕೌಪ ಕಟಿಸೂತ್ರ ಮೊದಲಾದ ವಸ್ತ್ರಾಭರಣಗಳ ಯೋಗ್ಯವೆನಿಸಿ ತಟ್ಟುವ ಮುಟ್ಟುವ ಶೀತುಷ್ಣಾದಿ ಸತ್ಕ್ರಿಯವಿಡಿದು ಸಮರ್ಪಿಸಿದಲ್ಲಿ ಚರಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಶಿವಾನುಭಾವಪ್ರಸಂಗ ಘಂಟೆ ತಂತಿ ಚರ್ಮ ಮೊದಲಾದ ಸುಶಬ್ದಂಗಳ ಸತ್ಯಶುದ್ಧ ತ್ರಿಕರಣವಿಡಿದು ಪವಿತ್ರತೆಯಿಂದ ನಿವೇದಿಸಿದಲ್ಲಿ ಪ್ರಸಾದಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಸಕಲ ಸಂತೋಷವಾದ ಮತ್ತೆ ಹೊನ್ನು ಹೆಣ್ಣುಗಳ ಗಣಸಾಕ್ಷಿಯಾಗಿ, ಸತ್ಯಸಾವಧಾನದಿಂದೆ ಧಾರೆಯನೆರೆದು, ಶಿವದೀಕ್ಷೋಪದೇಶಗಳಿಂದ ಸುಪವಿತ್ರವೆಂದೆನಿಸಿ ನಿವೇದಿಸಿದಲ್ಲಿ ಮಹಾಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಪ್ರಕಾರದಿಂದ ಸತ್ಯಶುದ್ಧಕಾಯಕದೊಳು ತನಗುಳ್ಳ ಸುಪದಾರ್ಥದ್ರವ್ಯವ ನಿಜೇಷ್ಟಾರ್ಪಣ ಪರದಿಂದೆ ಲಿಂಗಾರ್ಪಣವ ಸಮರ್ಪಿಸಬಲ್ಲಾತನೆ ಷಟ್‍ಸ್ಥಲಭಕ್ತ ಮಹೇಶ್ವರರೆಂಬೆನು. ಈ ಷಡ್ವಿಧ ದ್ರವ್ಯಪದಾರ್ಥಂಗಳು ದೊರೆಯದಿದ್ದರೆ ಮೂಲಚಿತ್ತ ಮೊದಲಾದ ಅಂಗ ಮನ ಪ್ರಾಣ ಇಂದ್ರಿಯ ಕರಣ ವಿಷಯಂಗಳ ಆ ಶ್ರೀಗುರುವಿಂಗೆ ಜಂಗಮದ ಸೊಮ್ಮುಸಂಬಂಧದಲ್ಲಿ ನಿಲಿಸುವುದೆ ಸರ್ವಾಂಗಲಿಂಗಾರ್ಪಣವಾಗಿರ್ಪುದು. ಇದರೊಳಗೆ ತನು ನೋಯದೆ, ಮನ ಕರಗದೆ, ಭಾವ ಬಳಲಿಸದೆ, ಅತಿ ಸುಯಿಧಾನದಿಂದ ನಿಃಕಳಂಕ ಪರಶಿವ ಪಾದೋದಕ ಪ್ರಸಾದ ಮಂತ್ರದ ಪರಶಿವತತ್ವದಲ್ಲಿ ಪರಿಪೂರ್ಣರಾಗಿರ್ಪುದೆ ಅನಾದಿಪ್ರಮಥಗಣಮಾರ್ಗವು. ಇಂತೆಸೆವ ಸಚ್ಚಿದಾನಂದದ ಪರಮಾನುಭಾವ ಸನ್ಮಾರ್ಗವನುಳಿದು ಸರ್ವಾಚಾರಸಂಪನ್ನ ಬಾಹ್ಯರಾದ ಕಿರಾತರಂತೆ, ಭಂಗಿ ಗಾಂಜಿ ಗುಡಾಕು ತಂಬಾಕದ ಚಿಲುಮೆ ಕಡ್ಡಿ ಹುಡಿ ನಾಸಿಬುಕುಣಿಯೆಂದು ಭುಂಜಿಸಿ, ಹುಚ್ಚನಾಯಿ ಎಲುವ ಕಚ್ಚಿದಂತೆ, ದಿವರಾತ್ರಿಗಳಲ್ಲಿ ಪಾದೋದಕಪ್ರಸಾದದ್ವಾರವಾಗಿ ಪರಿಶೋಭಿಸುವಂತೆ ಪರಶಿವ ಪ್ರಾಣಲಿಂಗದ ಭೋಗಾಂಗದಲ್ಲಿಟ್ಟುಕೊಂಡು, ಭ್ರಾಂತು ಭೋಗಿಗಳಾಗಿ, ನಿಜಗೆಟ್ಟು, ತಮ್ಮ ತಾವರಿಯದೆ, ಪಿಶಾಚಿಮಾನವರಂತೆ ಇಂದ್ರಾದಿ ಹರಿಸುರಬ್ರಹ್ಮಾದಿಗಳು ಹೊಡೆದಾಡಿದ ಕರ್ಮದೋಕುಳಿಯಲ್ಲಿ ಬಿದ್ದೊದ್ದಾಡಿ ತೊಳಲುವ, ವನಿತಾದಿ ಆಸೆ, ಭೋಗದ ಆಸೆ ಪಾಶದೋಕುಳಿಯೆಂದರಿದು ಮರೆದು ನರಗುರಿಗಳಾಗಿ, ಬಾಯಿಗೆ ಬಾಯಿ ಹಚ್ಚಿ ಬೊಗಳಾಡುವುದೊಂದು ದುರಾಚಾರ. ರಾಜರಿಗೆ ರೊಕ್ಕವ ಕೊಟ್ಟು, ಯಂತ್ರ ಮಂತ್ರ ತಂತ್ರಗಳಿಂದೋಲೈಸಿ, ಮಲತ್ರಯವಿದೂರರೆಂದು ಪತ್ರ ಉತ್ರಗಳಲ್ಲಿ ಹೆಮ್ಮೆ ಹಿರಿತನಕ್ಕೆ ಬಿದ್ದು, ಅಂದಿನವರೆ ಇಂದಿನವರೆಂದು ಒಪ್ಪವಿಟ್ಟು, ನುಡಿನಡೆಹೀನರಾಗಿ, ಬಿಟ್ಟಿಮಲವನುಸರಿಸಿ, ತಥ್ಯ ಮಿಥ್ಯ ತಾಗುದ್ವೇಷಗಳಿಂದೆ ದಿವರಾತ್ರಿಗಳಲ್ಲಿ ತ್ರಿವಿಧವಸ್ಥೆಗಳ ಕಳೆದು, ಒಬ್ಬರೊಬ್ಬರು ಹೊಡೆದಾಡುವುದೊಂದು ದುರಾಚಾರ. ಇಂತಲ್ಲದೆ, ಮಿಲಂಚರಾಕ್ಷಸರ ಅರವತ್ತುನಾಲ್ಕು ವಿದ್ಯೆ ಬತ್ತೀಸಾಯುಧಗಳ ಕಟ್ಟಿ, ತಳ್ಳಿತಗಾದಿಗಳಿಂದ ಹೊಲ ಗದ್ದೆ ಬಣಮೆಗಳ ಸುಟ್ಟು, ಅನಂತ ಹಿಂಸೆಗಳ ಮಾಡಿ, ಊರು ಕೇರಿ ಪೇಟೆ ಪಟ್ಟಣಗಳ ಸುಲಿದು, ಹಾದಿ ಬೀದಿಯ ಬಡಿದು, ಮತ್ತೆ ನಾಚಿಕೆಯಿಲ್ಲದೆ ನಾವು ವೀರಶೈವಘನದ ಭಕ್ತಮಹೇಶ್ವರರೆಂದು, ನಡೆಗೆಟ್ಟು ನುಡಿಯ ನುಡಿವುದೊಂದು ಅತಿಕಠಿಣವಾದ ದುರಾಚಾರವು. ವಿಭೂತಿ ರುದ್ರಾಕ್ಷಿ ಗುಣತ್ರಯಗಳಳಿದುಳಿದ ಶಿವಲಾಂಛನ ಮುದ್ರಾಧರ್ಮಗಳ ಹೊದೆದು, ಜಡೆ ಮಕುಟಗಳ ಬಿಟ್ಟು, ಕೌಪ ಕಟಿಸೂತ್ರವ ಧರಿಸಿ, ನಿಜಮೋಕ್ಷಪದವನರಿಯದೆ, ಅರ್ಥೇಷಣ ಪುತ್ರೇಷಣ ಧಾರೇಷಣ ಈಷಣತ್ರಯದ ಮೋಹಾಭಿರತಿಯಿಂದ, ಅಂತಜ್ರ್ಞಾನ ಬಹಿಕ್ರ್ರಿಯಾಚಾರವ ಮೆರೆದು, ಕಾಲತ್ರಯ ಕಾಮತ್ರಯ ಕರ್ಮತ್ರಯ ದೋಷತ್ರಯ ಪಾಪತ್ರಯ ರೋಗತ್ರಯ ಅಜ್ಞಾನತ್ರಯ ಅನಾಚಾರತ್ರಯ ಮೊದಲಾದ ಭವಪಾಶದಲ್ಲಿ ಮುಳುಗುಪ್ಪಿಯಾಗಿ ಭರಿಸುವಂಥಾದ್ದೆ ಐದನೆಯ ಪಾತಕವು. ಇದಕ್ಕೆ ಹರನಿರೂಪ ಸಾಕ್ಷಿ : ``ತಸ್ಕರಂ ಪರದಾರಂಚ ಅನ್ಯದೈವಮುಪಾಸನಂ | ಅನೃತಂ ಇಂದಕಶ್ಚೆ ೈವ ತಸ್ಯ ಚಾಂಡಾಲವಂಶಜಃ || ಪರಾರ್ಥಹಿಂಸಕಶ್ಚೈವ ಭಕ್ತದ್ರೋಹೀ ಚ ನಿಂದಕಃ | ಪ್ರಾಣಘಾತಕದೇಹಾನಾಂ ತಸ್ಮಾತ್‍ಚಾಂಡಾಲವಂಶಜಃ || ಅಲ್ಪಜೀವೀ ಭವಪ್ರಾಣೀ ಅಲ್ಪಭೋಗನಿರರ್ಥಕಃ | ಅಲ್ಪಾಶ್ರಯಂ ನ ಕರ್ತವ್ಯಂ ಮಹದಾಶ್ರಯಃ || ಅಜ್ಞಾನಾಚ್ಚ ಕೃತಂ ಪಾಪಂ ಸುಜ್ಞಾನಾಚ್ಚ ವಿನಶ್ಯತಿ | ಸುಜ್ಞಾನಾಚ್ಚ ಕೃತಾತ್ ಪಾಪಾತ್ ರೌರವಂ ನರಕಂ ವ್ರಜೇತ್ ||'' ಎಂದುದಾಗಿ, ಪರಿಪೂರ್ಣ ಶ್ರೀಗುರುಮಾರ್ಗಾಚಾರ ನಡೆನುಡಿಯಿಂದಾಚರಿಸಿ, ನಿಜಮುಕ್ತಿಮಂದಿರವ ಸೇರಬೇಕೆಂಬ ಸದ್ಭಕ್ತಮಹೇಶ್ವರರು ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವನೈದಿ, ಪರಮಪಾತಕಂಗಳಿಗೆ ಮಹಾಜ್ಞಾನಾಯುಧವ ಹಿಡಿದು, ನಿತ್ಯ ನಿತ್ಯ ಇತರೇತರ ದುಶ್ಚಾಷ್ಟಿ ಬಿಟ್ಟು ಘನಲಿಂಗಾಂಗಸಮರಸಮನೋಲ್ಲಾಸ ಸದ್ಭಕ್ತಿ ಜ್ಞಾನವೈರಾಗ್ಯ ನಿಜನಿಷಾ*ಪರತ್ವಮಂ ಸಾಧಿಸಿ, ತಮ್ಮ ತಾವರಿತವರೆ ಪರಶಿವಯೋಗಾನಂದಭರಿತರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಮಲತ್ರಯದ ಮೋಹವನು ಹರಿವುದು, ತನುತ್ರಯದ ಮದವ ತೊರೆವುದು, ಈಷಣತ್ರಯದ ಪ್ರೇಮವ ಜರಿವುದು, ಜೀವನತ್ರಯದ ಜಡತ್ವ ಕಳೆವುದು, ಅವಸ್ಥಾತ್ರಯದನುವ ಮರೆವುದು ಭವಭಾರಿಗಳಿಗೆ ಸಾಮಾನ್ಯವೆ ಚನ್ನ ಗುರುಲಿಂಗಜಂಗಮಪ್ರಭುವೆ ನಿಮ್ಮ ಸದ್ಭಕ್ತರಿಗಲ್ಲದೆ ?
--------------
ದೇಶಿಕೇಂದ್ರ ಸಂಗನಬಸವಯ್ಯ
-->