ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ತನತನಗೆ ಚೈತನ್ಯವಿರ್ದು, ಉಪಚಾರಗಳನುಗುಣದಿಂದೊದಗಿದಲ್ಲಿ, ದಿನದಾರ್ಚನೆ ಇಷ್ಟಲಿಂಗಾರೋಪಿತವೆಂದು, ಬ್ಥಿನ್ನಭಾವಗಳಿಲ್ಲದೆ ಕ್ರಿಯಾರ್ಚನೆ ನಿಂತಲ್ಲಿ ತನ್ನ ನಿಜನೈಷ್ಠೆಯೆ ಲಿಂಗಮಂತ್ರದಲ್ಲಚ್ಚೊತ್ತಿ , ರೂಪಾದ ಭೋಗವೆಲ್ಲ ತೃಣವೆಂದು ತಿರಸ್ಕರಿಸಿರುವುಳ್ಳಂಥವರಾಗಿ, ತನ್ನ ಸುಚಿತ್ತವೆ ಸ್ನಾನಾಬ್ಥಿಷೇಕವಾಗಿ, ಸುಬುದ್ಧಿಯೆ ಸುಗಂಧಪರಿಮಳವೆನಿಸಿ, ನಿರಹಂಕಾರವೆ ಅಕ್ಷತವಾಗಿ, ಸುಮನಾದಿ ಪದ್ಮಗಳೆ ಪುಷ್ಪಪತ್ರವೆನಿಸಿ, ಸುಜ್ಞಾನವೆ ಧೂಪವಾಗಿ, ಸದ್ಭಾವವೆ ದೀಪಾರತಿಯೆನಿಸಿ, ಸನ್ಮಾನವೆ ನೈವೇದ್ಯವಾಗಿ, ಸಂಪೂರ್ಣವೆ ತಾಂಬೂಲಗೈದು, ನಿಶ್ಚಿಂತನಿರವಯನಿರಾಲಂಬನಿರ್ಗುಣಾನಂದವೆ ಷೋಡಶೋಪಚಾರವಾಗಿ ಪರಾತ್ಪರ ಜ್ಯೋತಿರ್ಮಯಪ್ರಮಾಣಲಿಂಗದಲ್ಲಿ ಎರಡಳಿದುಳಿದು ಲಿಂಗವೆ ಪೂಜ್ಯಪೂಜಕನೆಂದರಿದು, ಬಚ್ಚಬರಿಯಾನಂದದ ಪರಿಪೂರ್ಣಬ್ರಹ್ಮವಾಗಿ ನಿಂದ ನಿರ್ಧಕರೆ ನಿರವಯಪ್ರಭು ಮಹಾಂತರು ಮತ್ತಾರುಂಟು ಹೇಳಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ ?
--------------
ಮೂರುಸಾವಿರ ಮುಕ್ತಿಮುನಿ
ಅನಂತ ತಪಸ್ಸಿನ ಫಲ ಒದಗಿ, ಗುರುಕರುಣದಿಂದ ಚಿದ್ಘನಲಿಂಗಾಂಗಸಂಬಂಧ ವೀರಶೈವೋದ್ಧಾರಕರಾದ ಮಹಾಗಣ ಪ್ರಸನ್ನಪ್ರಸಾದವೆನಿಸುವ ವಚನಸಾರಾಮೃತನುಭಾವಸುಖಮಂ ಸವಿಸವಿದುಂಡುಪವಾಸಿ ಬಳಸಿಬ್ರಹ್ಮವಾಗಲರಿಯದೆ ಒಬ್ಬರಿಗೆ ಹುಟ್ಟಿ,ಒಬ್ಬರಿಗೆ ಹೆಸರಹೇಳಿ,ಶಿವಾಚಾರಮಾರ್ಗಸಂಪನ್ನರೆನಿಸಿ, ತಮ್ಮ ತಾವರಿಯದೆ, ಹಲವು ಮತದವರ ಎಂಜಲಶಾಸ್ತ್ರವಿಡಿದು, ಶೈವಕರ್ಮೋಪವಾಸ ಕ್ರಿಯಾಚಾರವಿಡಿದು, ಜ್ಞಾನವ ಬಳಕೆಯಾಗಿರ್ಪುದೆ ಅಂತರಂಗದ ಚತುರ್ಥಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅನಾದಿಶರಣ ಜಂಗಮಲಿಂಗದ ಪಾದಪೂಜೆಯನಿಳುಹಿದ ಶರಣನು, ಪಾದೋದಕ ಸ್ಪರಿಶನೋದಕ ಭಸ್ಮೋದಕ ಸಂಬಂಧವಾದ ಪಾತ್ರೆಯ ಉದಕದೊಳಗೆ ಮೂಲಪ್ರಣಮವ ಲಿಖಿಸಿ, ಚಿದ್ಬಿಂದುವನಿಟ್ಟು ಪಡಕೊಂಬುವ ತಟ್ಟೆ ಬಟ್ಟಲೊಳಗೆ ಷಡಕ್ಷರಪ್ರಣಮವ ಸಪ್ತಕೋಟಿಮಹಾಮಂತ್ರಗಳಿಗೆ ಜನನಸ್ಥಾನವಾದ ಷಡುಪ್ರಣಮಗಳ ಪ್ರಥಮ ತಟ್ಟೆಯಲ್ಲಿ , ಪೂರ್ವಪಶ್ಚಿಮ ಉತ್ತರದಕ್ಷಿಣಕ್ಕೆ ಷಡ್ವಿಧ ರೇಖೆಗಳ ರಚಿಸಿ, ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನಮುಖಸ್ಥಾನವರಿದು, ಪಂಚದಿಕ್ಕುಗಳಲ್ಲಿ ಪಂಚಪ್ರಣಮವ ಲಿಖಿಸಿ, ದ್ವಿತೀಯ ಬಟ್ಟಲೊಳಗೆ ಮೂಲಪ್ರಣಮವ ಲಿಖಿಸಿ, ಪಾದಾಂಗುಷ*ದಡಿಯಲ್ಲಿಟ್ಟು, ತನ್ನ ವಾಮಕರದಂಗುಲಿಗಳೊಳಗೆ ಲಿಂಗಜಂಗಮ ಜಂಗಮಲಿಂಗ ಲಿಂಗಶರಣ ಬಸವಲಿಂಗ ಲಿಂಗಪ್ರಸಾದವೆಂಬ ಇಪ್ಪತ್ತೈದು ಪ್ರಣಮಗಳೆ ಪ್ರಭುಲಿಂಗಲೀಲೆಯೆಂದು ಆ ಕರಸ್ಥಲದಿರವ ಗುರುಮುಖದಿಂದರಿದು ತನ್ನ ತಾ ಮರೆದಿಪ್ಪವರೆ ನಿರವಯಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಯ್ಯಾ, ನಿಜವೀರಶೈವೋದ್ಧಾರಕ ವಿಶೇಷ ಭಕ್ತ ಮಹೇಶ್ವರರು ಮಹಾಲಿಂಗೋದಯವಾದಿಯಾಗಿನಿರವಯಲಿಂಗವಂತ್ಯವಾದಪರಿಯಂತರವು ಸತ್ತುಚಿತ್ತಾನಂದರೂಪ ಧರಿಸಿ, ನಿತ್ಯ ಗುರುಲಿಂಗಜಂಗಮ ಕಲ್ಯಾಣೋತ್ಸಹರಾಗಿ, ಮಾರ್ಗಾಚಾರಂಗಳಲ್ಲಿ ಸತ್ಕ್ರಿಯಾವಧಾನ, ಮೀರಿದಾಚಾರಂಗಳಲ್ಲಿ ಸಮ್ಯಜ್ಞಾನಾವಧಾನ, ಸಂಪೂರ್ಣಾನಂದಭರಿತಾಚಾರಂಗಳಲ್ಲಿ ಸ್ವಾನುಭಾವದ ಸದ್ಧರ್ಮ, ನಡೆ-ನುಡಿಯೊಳಕೊಂಡು ಬೆಳಗುವ ಪರತತ್ವ ಶಿವಯೋಗಾನುಸಂಧಾನದ ನಿಜಾವಧಾನದಲ್ಲಿ ಸಂತೃಪ್ತರಾಗಿ, ಬೆಳಗಿಂಗೆ ಮಹಾಬೆಳಗಾಗಿ, ತನ್ನ ತಾನೇ ಮುಕ್ತಿಸ್ವರೂಪ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಲ್ಲಿಂದ ಲಿಂಗಾಂಗಸಂಬಂಧದ ಆಚರಣೆಗಳರಿವಿಂ ಕಟಿಸ್ಥಾನ, ಮಂಡೆಯ ಸ್ಥಾನಗಳಲ್ಲಿ ತೀವಿದ ಲಿಂಗಧ್ಯಾನದಿಂದೆ ಸರ್ವಾಂಗಸ್ನಾನಂಗೆಯ್ದು, ಪ್ರಕ್ಷಾಲನಂ ಮಾಡಿ, ಪರಿಣಾಮೋದಕದಲ್ಲಿ ತೊಳೆದಂಥ ಕೌಪ ಮೊದಲಾದ ಮಡಿಗಳನ್ನು ಪಾದೋದಕ ಲಿಂಗಸ್ಪರಿಶನಗಳಿಂದ ಧಾರಣಂಗೈದು, ಪರಿಣಾಮವಾದ ದಿಕ್ಕುಗಳಲ್ಲಿ ನಾರು ರೋಮ ಹುಲ್ಲು ಅರಳೆ ಮೊದಲಾದ್ದರಲ್ಲಿ ಹುಟ್ಟಿದಂಥಾದ್ದಾವುದಾದರೂ ಪರಿಣಾಮವಾದ ಶಾಟಿಯ ಆಸನವ ರಚಿಸಿ, ಜಂಗಮವು ತಾವು ಸಮರಸಭಾವದಿಂದೆ ಉಪಚಾರಗಳೊದಗಿದಂತೆ ನೆರವಿಕೊಂಡು, ಕರಸ್ಥಲದಲ್ಲಿ ಮೂಲಪ್ರಣಮವನರ್ಚಿಸಿ, ಕ್ರಿಯಾಭಸಿತವನ್ನು ಕರಸ್ಥಲದಲ್ಲಿ ಇಟ್ಟುಕೊಂಡು, ಅನಾದಿ ಚಿದ್ಭಸಿತವ ಧ್ಯಾನಿಸಿ, ಮೂಲಷಡಕ್ಷರವ ಲಿಖಿತಂಗೈದು, ಅರ್ಚಿಸಿ, ಪೂಜೆಯನಿಳುಹಿ, ಸಮಸ್ತಕಾರಣಕ್ಕೆ ಇದೆ ಚೈತನ್ಯವೆಂದು ಭಾವಭರಿತವಾಗಿ, ಗುರುಪಾದೋದಕದಿಂದ ತೊಳೆದು, ಲಿಂಗಪಾದೋದಕಪ್ರಣಮಸಂಬಂಧ ಭಸ್ಮದಿಂದ ಪವಿತ್ರವಾದ ದ್ರವ್ಯಗಳೆ ಶುದ್ಧಪ್ರಸಾದವೆಂದು ಭಾವಿಸಿ, ಲಿಂಗಜಂಗಮಾರಾಧನೆಯ ಮಾಡುವುದೊಳಗೆ ಕ್ರಿಯಾಶಕ್ತಿಯರು ಶುದ್ಧೋದಕದಿಂದ ಪವಿತ್ರಕಾಯರಾಗಿ, ಲಿಂಗಬಾಹ್ಯರ ಸ್ಪರಿಶನವನುಳಿದು, ಸುಯಿಧಾನದಿಂದ, ಉದಕವೆ ಮೊದಲು ಧಾನ್ಯ ಕಾಯಿಪಲ್ಯ ಕ್ಷೀರವೆ ಕಡೆಯಾದ ಸಮಸ್ತ ದ್ರವ್ಯಂಗಳು ಶುಚಿಯಾಗಿ ಲಿಂಗಜಂಗಮಾರಾಧಕರೆ ನಿರವಯಪ್ರಭು ಮಹಾಂತಗಣಂಗಳೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅನಾದಿ ಶರಣಲಿಂಗ ಗುರುಭಕ್ತ ಜಂಗಮದ ಏಕಸಮರಸೈಕ್ಯ ಅಭಿನ್ನರ್ಚನೆಗಳಲ್ಲಿ ತೀರ್ಥಪ್ರಸಾದ ಪೂಜೆಯ ಸಂಬಂಧವೆನಿಸಿ, ಪೂರ್ವಪುರಾತನೋಕ್ತಿಯಿಂದ ಚಿದ್ಘನಪಾದತೀರ್ಥವ ಪಡಕೊಂಡ ಶಿವಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನು ಕಾಯ-ಕರಣ-ಭಾವಗಳ ಸಂಚಲಗಳನಳಿದುಳಿದು ನಿಃಸಂಚಲನಾಗಿ, ಕೇವಲ ಕಿಂಕುರ್ವಾಣ ಪರಿಪೂರ್ಣಸಾವಧಾನ ಭಯಭಕ್ತಿಯಿಂದ ಆ ತೀರ್ಥದ ಬಟ್ಟಲೆತ್ತಿ , ಆ ಜಂಗಮಲಿಂಗಮೂರ್ತಿಗೆ ಶರಣಾರ್ಥಿಸ್ವಾಮಿ, ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿದಲ್ಲಿ, ಆ ಜಂಗಮಲಿಂಗಶರಣನು ಘನಮಹಾಮಂತ್ರಸೂತ್ರವಿಡಿದು, ಪರಿಪೂರ್ಣಾನಂದ ಸಾವಧಾನಭಕ್ತಿ ಮುಖದಲ್ಲಿ ಸಲಿಸಿದಮೇಲೆ, ಪೂರ್ವದಂತೆ ಆ ಪ್ರಸನ್ನಪ್ರಸಾದತೀರ್ಥದ ಬಟ್ಟಲ ಗರ್ದುಗೆಯಲ್ಲಿ ಮೂರ್ತಗೊಳಿಸಿ ಆ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಜ್ಯೋತಿರ್ಮಯಸ್ವರೂಪ ಜಂಗಮಲಿಂಗ ಲಿಂಗಜಂಗಮದ ಶೇಷೋದಕ ಪರಿಪೂರ್ಣಾನಂದ ತೀರ್ಥ ಸ್ತೋತ್ರವಂ ಮಾಡಿ, ಸರ್ವಾಂಗಪ್ರಣುತನಾಗಿ ಪೊಡಮಟ್ಟು, ಹರಹರಾ ಶಿವಶಿವಾ ಜಯಜಯಾ ಕರುಣಾಕರ ಭಕ್ತವತ್ಸಲ ಭವರೋಗವೈದ್ಯ ಮತ್ಪ್ರಾಣನಾಥ ಮಹಾಲಿಂಗಜಂಗಮವೆಯೆಂದು, ಅಂತರಂಗದ ಪರಿಪೂರ್ಣರೆ ನಿರವಯಪ್ರಭು ಮಹಾಂತರ ಘನಶರಣ ಲಿಂಗ ತಾನೆಯೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಂತೊಪ್ಪುವ ಸಚ್ಚಿದಾನಂದ ಧ್ಯಾನದಿಂದ, ನಿಮ್ಮ ಪರಿಪೂರ್ಣ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ಎಂದು ಬೇಡಿಕೊಂಡು ಅಭಯವಾದ ಮೇಲೆ ಬಂದು ಮೊದಲಹಾಗೆ ಅಲ್ಲಿ ಮೂರ್ತವ ಮಾಡಿ, ಆ ಜಂಗಮಮೂರ್ತಿಗಳು ಸಲಿಸಿದೋಪಾದಿಯಲ್ಲಿ ಅನಾದಿಮೂಲಮಂತ್ರಸೂತ್ರವಿಡಿದು ತಾನು ಸಲಿಸುವುದು. ಆ ಮೇಲೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಮೊದಲಾದ ಷಟ್ಸ್ಥಲ ಭಕ್ತ ಮಹೇಶ್ವರರು, ಅದೇ ರೀತಿಯಲ್ಲಿ ಸಲಿಸುವುದು ಪೂರ್ವಪುರಾತನೋಕ್ತವು. ಉಳಿದ ತ್ರಿವಿಧ ದೀಕ್ಷೆಗಳರಿಯದೆ, ಕ್ರಿಯಾಪ್ರಸಾದದ ಕುರುಹ ಕಾಣದೆ, ಷಟ್ಸ ್ಥಲಮಾರ್ಗವರಿಯದೆ, ಇಷ್ಟಲಿಂಗಧಾರಕ ಉಪಾಧಿಗಳು ಆ ಗದ್ದುಗೆಯ ತೆಗೆದು, ಲಿಂಗಕ್ಕರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ : ಅವರಿಗೆ ತ್ರಿವಿಧದೀಕ್ಷಾನುಗ್ರಹ ಪ್ರಸನ್ನಪ್ರಸಾದ ಷಟ್ಸ್ಥಲಮಾರ್ಗ ಸರ್ವಾಚಾರಸಂಪತ್ತಿನ ಆಚರಣೆ ಮುಂದಿಹುದರಿಂದ ಅವರು ಬಟ್ಟಲ ಎತ್ತಲಾಗದು. ಹೀಂಗೆ ಸರ್ವರು ಸಲಿಸಿದ ಮೇಲೆ ಕೊಟ್ಟ ಕೊಂಡ ಭಕ್ತ ಜಂಗಮವು ಇರ್ವರೂ ಕೂಡಿ, ಅನಾದಿ ಮೂಲಮಂತ್ರಸೂತ್ರವಿಡಿದು, ಮುಕ್ತಾಯವ ಮಾಡಿದಲ್ಲಿಗೆ ದಶವಿಧಲಿಂಗಸಂಬಂಧದಿಂದ ದಶವಿಧಪಾದೋದಕ ಲಿಂಗೋದಕ ಪ್ರಸಾದೋದಕಂಗಳಲ್ಲಿ ಪರಿಪೂರ್ಣತೃಪ್ತರೆ ನಿಮ್ಮ ಪ್ರತಿಬಿಂಬರಯ್ಯ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ