ಅಥವಾ

ಒಟ್ಟು 25 ಕಡೆಗಳಲ್ಲಿ , 13 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ? ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ ? ಎಲ್ಲಿ ನೋಡಿದಡೆ ಬಯಲೊಂದೆ; ಭಿತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
--------------
ಬೊಂತಾದೇವಿ
ಊರೊಳಗೆ ಉದಕತುಂಬಿ ಬಾಗಿಲೆಲ್ಲ ಕೆಸರಾದವು ನೋಡಾ. ಮನೆಯೊಳಗೆ ಕಸ ಹೆಚ್ಚಿ, ಶಶಿಯ ನೆಳಲೀಯದು ನೋಡಿರೆ. ಊರೊಳಗಣ ಉದಕವ ಹೊರಡಿಸಿ, ಬಾಗಿಲೊಳಗಣ ಕೆಸರ ಸುಟ್ಟು, ಮನೆಯೊಳಗಣ ಕಸವ ತೆಗೆದು, ಶಶಿಯ ಸಲಹಿಕೊಂಬುದ ನೀನೊಲಿದು ಕರುಣಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಜಕಲ್ಪನೆಗೊಳಗಾದ ಊರೊಳಗೆ ಮುನ್ನೂರು ಅರುವತ್ತು ಮಂದಿ ಅಸಾಸುರರು ನಿಚ್ಚ ನಿಚ್ಚ ಊರಿಗುಪಟಳ ಮಾಡುತ್ತಿರ್ದರಲ್ಲಯ್ಯಾ. ಅಚ್ಯುತನ ಆಜ್ಞೆಯಲ್ಲಿ ಅಡಗಿದ ಕಪಿಯೊಳಗೆ ಬಾವನ್ನ ವೀರರು ಮುಳುಗಿ ಬಂಧಮೋಕ್ಷಂಗಳ ಬಗೆವುತಿರ್ದರಲ್ಲಯ್ಯಾ. ಮೇಲೆ ರುದ್ರನೂಳಿಗದ ದಾಳಿ ಹತ್ತಿ ಘೋಳಿಟ್ಟು ಹಾಳಾಯಿತಲ್ಲಾ, ಮೂರು ಲೋಕವೆಲ್ಲ. ಇಂತೀ ಮೂವರ ಮುಂದುಗೆಡಿಸಿ ಅಯಿವತ್ತಿಬ್ಬರನಣಕಿಸಿ ಮೂನ್ನೂರ ಅರುವತ್ತು ಮಂದಿ ಅಸಾಸುರರನಡಿಗದ್ದಿದ ಸ್ವತಂತ್ರರು ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಮೂರುಮಂಡಲ ತಿರುಗುವಲ್ಲಿ ಆರೂರವರು ಅಳುತ್ತಿರ್ಪರು ನೋಡಾ. ಬೇರೊಂದೂರವರು ಬಂದು, ಮೂರುಮಂಡಲವನೊಂದುಮಾಡಿ ಆರೂರವರ ಆಳುವ ಮಾಣಿಸಿ ಬೇರೊಂದೂರ ಹೊಕ್ಕು ನೋಡಲು ಈ ಊರೊಳಗೆ ಸತ್ತವನಿವನಾರೋಯೆಂದು ನೋಡಿಯೆತ್ತಹೋಗಲು ಎಲ್ಲರೂ ಸತ್ತುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಸಿವಾದಡೆ ಊರೊಳಗೆ ಬ್ಥಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು.
--------------
ಅಕ್ಕಮಹಾದೇವಿ
ಊರೊಳಗೆ ಆಡುವ ಹಕ್ಕಿಯ ಕಂಡೆನಯ್ಯ. ಮೇರುವೆಯ ಮೇಲೆ ಕುಳಿತಿರುವ ಕಪ್ಪೆಯ ಕಂಡೆನಯ್ಯ. ಆ ಕಪ್ಪೆಗೆ ಧ್ವನಿಯಿಲ್ಲಾ ನೋಡಾ, ಆ ಹಕ್ಕಿಗೆ ಗರಿಯಿಲ್ಲ ನೋಡಾ! ಹಕ್ಕಿಗೆ ಗರಿ ಬಂದಲ್ಲದೆ, ಕಪ್ಪೆಗೆ ಧ್ವನಿ ಬಂದಲ್ಲದೆ ತಾನಾರು ಎಂಬುದು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗೆ ಒಬ್ಬ ಮಾನವನ ಕಂಡೆನಯ್ಯ, ಆ ಮಾನವನ ಕೈಯೊಳಗೆ ಒಂದು ರತ್ನವಿಪ್ಪುದ ಕಂಡೆನಯ್ಯ. ಮೇಲಿಂದ ಸತಿಯಳು ಕಂಡು, ಆ ರತ್ನವ ತಕ್ಕೊಂಡು, ಊರ ಮುಂದಳ ಗುಡಿಯಲ್ಲಿ ಆ ಮಾನವನ ಬಯಲುನುಂಗಿ, ಆ ರತ್ನವ ನಿರ್ವಯಲು ನುಂಗಿ ಆ ಸತಿಯಳು ಅಡಗಿದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭವೆ.
--------------
ಜಕ್ಕಣಯ್ಯ
ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು. ಊರೊಳಗೆ ಪಂಥ ರಣದೊಳಗೆ ಓಟವೆ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ, ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕಡಲ ಮೇಲಣ ಕಲ್ಲು, ಸಿಡಿಲು ಹೊಯ್ದ ಬಾವಿ ! ತಡದ ರಕ್ಕಸಿಯ ಮಗಳು ಅಡವಿಯಲ್ಲಿ ಮಡಿದಳು. ತೊಡೆಯಬಾರದ ಲಿಪಿಯ ಬರೆಯಬಾರದು ನೋಡಾ ! ನಡುನೀರ ಜ್ಯೋತಿಯ ವಾಯುವ ಕೊನೆಯಲ್ಲಿ ನೋಡಾ ! ಮೊದಲಿಲ್ಲದ ನಿಜ, ಕಡೆಯಿಲ್ಲದ ನಡು_ ಏನೂ ಇಲ್ಲದ ಊರೊಳಗೆ ಹಿಡಿದಡೆ ನುಂಗಿತ್ತು ನೋಡಾ ಹೆಮ್ಮಾರಿ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊರಗೆ ನೋಡಿದರೆ ಬಯಲು, ಒಳಗೆ ನೋಡಿದರೆ ಬಯಲು, ಊರೊಳಗೆ ಆವು ಇಲ್ಲ, ಕೇರಿಯೊಳಗೆ ಕರುವು ಇಲ್ಲ. ಊರು ಕೇರಿಗಳ ನುಂಗಿತ್ತು ಒಂದು ಇರುಹೆ. ಇರುಹೆ ಹೋಯಿತ್ತು ತಾನು ತಾನಾದಲ್ಲಿಗೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಾರುವ ಹಾರುವ ಹಾರುವನೆಂದೆಂಬುವರು ಪ್ರಮಥರು. ಊರೊಳಗೆ ಹಾರುವನಲ್ಲ, ಹದಿನಾಲ್ಕು ಲೋಕದೊಳಗೆ ಹಾರುವನಲ್ಲ, ಹೊನ್ನು ಹೆಣ್ಣು ಮಣ್ಣಿಗೆ ಹಾರುವನಲ್ಲ. ಗುರುನಿರಂಜನ ಚನ್ನ ಬಸವಲಿಂಗಕ್ಕಿತ್ತು ನಿತ್ಯ ಹಾರುವನೆಂಬುದು ಸತ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊನ್ನು ತೆತ್ತಲ್ಲದೆ ಹೊಲ ಮಾಡಿದೆ, ಬಿಟ್ಟಿ ಬೇಗಾರಿಲ್ಲದೆ ಊರೊಳಗೆ ಇದ್ದೆ, ಸರಕಾರಕ್ಕೆ ರುಜು ಇಲ್ಲದೆ ರೈತನಾಗಿ. ಅದೆಂತೆಂದಡೆ: ಇಂತಲ್ಲದೆ ಪಾಚ್ಫಾರೈತನಲ್ಲ; ಅವ ನಕ್ರ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರೊಳಗೆ ಆನೆಯ ಕಂಡೆನಯ್ಯ. ಮೇರುವಿನೊಳಗೆ ಸಿಂಹರಾಜನ ಕಂಡೆನಯ್ಯ. ಆ ಮೇರುವಿನೊಳಗಣ ಸಿಂಹರಾಜನು ಊರೊಳಗಣ ಆನೆಯ ಕೊಂಡು ಮೇರುವೆಗೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಬಣ್ಣದ ಊರೊಳಗೆ ಉರಿವ ಜ್ಯೋತಿಯ ಹಿಡಿದು ಪರಿಪರಿಯ ಕೇರಿಯಲ್ಲಿ ಸುಳಿದಾಡುವಳಿವಳಾರೋ? ಈ ಊರಿಗೆ ನಾನೊಡತಿ; ಇಲ್ಲಿ ಸುಳಿಯುವುದಕ್ಕೆ ನಿನಗೇನು ಕಾರಣ ಹೇಳಾ? ಈ ಊರಿಗೂ ನಿನಗೂ ನಾನೊಡತಿಯೆನುತ ಊರ ಸುಟ್ಟು ನಾರಿಯ ಕೊಂದವಳು ನಾನು ಪರಾಪರಾಂಗನೆಯೆನುತ ಸ್ವಪತಿಯ ನೆರೆದು ನಿಷ್ಪತಿಯನೆಯಿದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->