ಅಥವಾ

ಒಟ್ಟು 714 ಕಡೆಗಳಲ್ಲಿ , 76 ವಚನಕಾರರು , 486 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಗನ ಮಂಡಳದ ಸೂಕ್ಷ್ಮನಾಳದಲ್ಲಿ `ಸೋಹಂ ಸೋಹಂ' ಎನುತ್ತಿರ್ದತ್ತದೊಂದು ಬಿಂದು, ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ. ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು.
--------------
ಅಲ್ಲಮಪ್ರಭುದೇವರು
ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ. ಕೃತ್ರಿಮ ನುಡಿವುದಕ್ಕೆ ಅಕೃತ್ಯನಲ್ಲ. ಮತ್ತೆ ಇವರ ನಿಂದಿಸುವುದಕ್ಕೆ ಬಂಧ ಮೋಕ್ಷದವನಲ್ಲ. ಇವರುವ ಅಂದಚಂದವ ಅಂತಿಂತೆಂಬುದಕ್ಕೆ ಉಭಯದ ಗೊಂದಳದವನಲ್ಲ. ಎನ್ನ ಅಂದದ ಇರವ ಕೇಳಲಿಕ್ಕೆ ನಿಮ್ಮಂಗವ ಹೇಳಿದೆನೈಸೆ. ಎನಗೆ ಎನ್ನಂಗೆ ನಿರುಪಮನ ಸಂಗ ಇನ್ನೆಂದಿಗೆ, ಎನ್ನ ಗೂಡಿನ ಒಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಗುರು ತೋರಿದನು ಲಿಂಗ- ಜಂಗಮವ. ಪಾದೋದಕ-ಪ್ರಸಾದವ ಕೊಳಹೇಳಿದನಲ್ಲದೆ ಇವ ತೊರೆಯ ಹೇಳಿದನೆ? ಅಹಮ್ಮೆಂದು ಪ್ರಸಾದದ್ರೋಹಿಗಳಾಗಿ, ನಾನೆ ಎಂದು ಲಿಂಗದ್ರೋಹಿಗಳಾಗಿ, ವಿಭೂತಿ-ರುದ್ರಾಕ್ಷಿ ಸಾಕ್ಷಾತ್ ಶಿವನೆಂದರಿಯದೆ, ಅವರಾಚರಣೆಯ ನೋಡಿ ನಿಂದಿಸಿ ಜಂಗಮದ್ರೋಹಿಗಳಾಗ ಹೇಳಿದನೆ? ಜಂಗಮದಲ್ಲಿ ಜಾತಿಯ, ಪ್ರಸಾದದಲ್ಲಿ ರುಚಿಯ, ಂಗದ್ಲ ಮೃದುವನರಸುವ, ಸಮಯದ್ಲ ವಿಶ್ವಾಸವಿಲ್ಲದ ಮಿಟ್ಟಿಯ ಭಂಡರ ತೋರರಯ್ಯಾ ಎನಗೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಯ್ಯಾ ನಿನ್ನ ಸಂಗದಲ್ಲಿ ಸಂಗಿಯಾದೆ ಅಯ್ಯಾ, ನಿನ್ನ ಸಂಗದಿಂದ ಕಾಕುತನವ ಬಿಟ್ಟು ಬೇಕಾದ ಹಾಂಗೆಯಾದೆ. ಅಯ್ಯಾ, ನಿನ್ನ ಒಲವು ಅನೇಕ ಪ್ರಕಾರದಲ್ಲಿ ಪಸರಿ ಪರ್ಬಿತ್ತು ಎನ್ನ ಸರ್ವಾಂಗದಲ್ಲಿ. ನಿನ್ನವರೊಲುಮೆಯ ಆನಂದವನು ಎನಗೆ ಕರುಣಿಸು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?
--------------
ನೀಲಮ್ಮ
ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ. ಎನಗೆ ಐವರು ಸ್ತ್ರೀಯರ ಮದುವೆಯ ಮಾಡಿದರು. ಅವರ ಸಂಗದಲ್ಲಿರಲೊಲ್ಲದೆ ಒಬ್ಬಳ ಬ್ರಹ್ಮಂಗೆ ಕೊಟ್ಟೆ, ಒಬ್ಬಳ ವಿಷ್ಣುವಿಂಗೆ ಕೊಟ್ಟೆ, ಒಬ್ಬಳ ರುದ್ರಂಗೆ ಕೊಟ್ಟೆ, ಒಬ್ಬಳ ಈಶ್ವರಂಗೆ ಕೊಟ್ಟೆ, ಮತ್ತೊಬ್ಬಳ ಸದಾಶಿವಂಗೆ ಕೊಟ್ಟು ತಾಯಿಯ ಒಡನಾಡಿ ಸಂಸಾರ ಮಾಡುತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಪದ್ಮಾಸನದಲ್ಲಿ ಕುಳ್ಳಿರ್ದು ಲಿಂಗಾರ್ಚನೆಯ ಮಾಡುವರ ತೋರಾ ಎನಗೆ. ಸ್ವರೂಪಿನಲ್ಲಿ ನಿಂದು, ಜಂಗಮಕ್ಕೆ ಜಂಗಮದಾಸೋಹವ ಮಾಡುವರ ತೋರಾ ಎನಗೆ. ಮನ ನಿಜರೂಪಿನಲ್ಲಿ ಗುರುಸಿಂಹಾಸನವನೇರಿ ಪರಿಣಾಮವಳವಟ್ಟು, ಪ್ರಸಾದವ ಗ್ರಹಿಸುವರ ತೋರಾ ಎನಗೆ. ಇಂತಪ್ಪವರ ಸಂಗದಲ್ಲಿರಿಸು ಕಲಿದೇವಯ್ಯಾ, ನಾ ನಿನ್ನ ಬಲ್ಲೆ. ನನಗೆಯೂ ನಿನಗೆಯೂ ಇಂತಪ್ಪವರಪೂರ್ವ.
--------------
ಮಡಿವಾಳ ಮಾಚಿದೇವ
ಎನ್ನ ಹೊತ್ತಿಪ್ಪವಳ ನೆತ್ತಿಯ ಕಣ್ಣಿನಲ್ಲಿಪ್ಪ ಂಗವ ನಾನೆಚ್ಚತ್ತು ನೋಡುವ ತೆರನೆಂತಯ್ಯಾ. ನೋಡ ಹೋದಡೆ ನೆತ್ತಿ ಒಡೆದು ಕಣ್ಣಾಯಿತ್ತು. ನೋಡರ್ದಡೆ ಎನಗವಳು ತೋರಳು. ಎನಗೆ ಕಾಬ ತೆರನ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ.
--------------
ಸಿದ್ಧರಾಮೇಶ್ವರ
ಎನಗೆ ನೀನಿಂಬುಕೊಡುವಲ್ಲಿ, ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನಿಶ್ಶಕ್ತಿನಿರ್ಲೇಪವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡಿಹೆನೆಂದು ತೊಟ್ಟ ಠಕ್ಕು ಠವಳವ ಬಿಡು. ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧುಸಂಪೂರ್ಣನಾಗಿ ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ, ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ, ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ, ಇಂತೀ ತ್ರಿವಿಧವು ನಿಮ್ಮದೆಂದರಿದ ಬಳಿಕ ಎನಗೆ ಬೇರೆ ವಿಚಾರವುಂಟೆ, ಕೂಡಲಸಂಗಮದೇವಾ
--------------
ಬಸವಣ್ಣ
ಶೈವಸಿದ್ಧಾಂತಿಗಳಪ್ಪ ಕರ್ಮಕಾಂಡಿಗಳು ಸ್ಥಾವರಲಿಂಗದೆಡೆಯಲ್ಲಿ, ಹವನ ಹೋಮಾದಿ ಪವಿತ್ರಕಾರ್ಯವ ಕೈಕೊಂಡೆಡೆಯಲ್ಲಿ, ಉಚ್ಛಿಷ್ಟಾದಿ ಪಂಚಸೂತಕಗಳಂಟಿದಡೆ ಅವರು ಆ ಸೂತಕವ ಮಾನಿಸದೆ ಪರಿಶುದ್ಧಭಾವದಿಂದಿರ್ಪರು. ದೇವದೇವನಪ್ಪ ಮಹಾದೇವನನು ಲಿಂಗರೂಪದಿಂದ ಅಂಗದಲ್ಲಿ ಧರಿಸಿ ಪರಿಶುದ್ಧರಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->