ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿದೆಹೆನೆಂದು ಭಾವಿಸುವನ್ನಕ್ಕ, ಶರೀರವಳಿದ ಮತ್ತೆ, ಅರಿವುದೇನು ? ಸಕಲಭೋಗಂಗಳಲ್ಲಿ ಇದ್ದು ಬೆರಸಿ, ಮಗ್ನವಾಗದೆ ಗೇರಿನ ಫಲದಂತೆ ಇರು. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ.
--------------
ಮನುಮುನಿ ಗುಮ್ಮಟದೇವ
ಅಮೃತದ ಗುಟಿಕೆಯ ಮರೆದು, ಅಂಬಲಿಯನರಸುವನಂತೆ, ಶಂಬರವೈರಿ ತನ್ನಲ್ಲಿ ಇದ್ದು, ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ, ಅವರಿಗೆ ಇಲ್ಲಾ ಎಂದೆ.
--------------
ಮನುಮುನಿ ಗುಮ್ಮಟದೇವ
ಅಮ್ಮಿಕಲ್ಲಿನಲ್ಲಿ ಅಮಲವ ಅರೆದಡೆ ಹತ್ತುವುದೆ ಬಂಧ ? ನಿರ್ಮಲಚಿತ್ತದಲ್ಲಿ ಪರಿಬಂಧ ಪ್ರವೇಶಿಸುವುದೆ ? ಇದು ಸಾಕು ನಿಲ್ಲು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ, ಕುಂಭಿನಿಯಲ್ಲಿ ಇರಲೊಲ್ಲದೆ, ಹರುಗೋಲ ಬೆಂಬಳಿಯಲ್ಲಿ ಬದುಕಿಹೆನೆಂದು [ಹೋದಡೆ] ಹರುಗೋಲು ತುಂಬಿ, ಮಂದಿ ಸಂದಣಿಸಿತ್ತು. [ಗ]ಣಿಯ ಹಿಡಿದು ಒತ್ತುವುದಕ್ಕೆ ಠಾವಿಲ್ಲದೆ, ಅಂಬಿಗ ಹಿಂಗಿದ. ಹೆರೆಸಾರಿ ಹರುಗೋಲು ಅಂಬುಧಿಯಲ್ಲಿ ಮುಳುಗಿತ್ತು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
--------------
ಮನುಮುನಿ ಗುಮ್ಮಟದೇವ
ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ. ಇದಿರ ಕಂಡು ತಾ ಕಾಣದಂತೆ ಇರಲಿಲ್ಲ, ಗತಿಜಿಹ್ವೆಯ ಚತುಃಪಾದಿಯಂತೆ. ಕಾಲವನರಿತು, ಆ ಕಾಲದಲ್ಲಿ ಹೋಹ ಕಾಲಜ್ಞಾನಿಯಂತೆ, ಕೂಗಿ ಕರೆದು, ಕೂಲಿಸಿಕೊಂಬ ಶತಬುದ್ಧಿಪತಿ ಶಿವನಂತೆ, ಮಾಡಿದ ಅಸಿ ಕಾರುಕನೆಂದಡೆ, ಹೊಯಿದಡೆ, ಅಸುವಿನ ನಿಸಿತವ ಕೊಳದೆ ? ತನ್ಮಯವಾದಡೆ, ಮರೆದಡೆ, ಎಳೆಯದೆ ಬಿಡದು, ನಿನ್ನ ಮಾಯೆ. ಆರಿ ನಂದದ ದೀಪದಂತೆ, ರವೆಗುಂದದ ಬೆಳಗಿನಂತೆ, ಹೊರಹೊಮ್ಮದ ದಿನಕರನಂತೆ, ಮಧುಋತು ಅರತ ಮಧುಕರನಂತೆ, ವಾಯು ಅಡಗಿದ ವಾರಿಧಿಯಂತೆ, ಅಸು ಅಡಗಿದ ಘಟಚಿಹ್ನದಂತೆ, ದಿಟಕರಿಸು, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಪರಿಪೂರಿತವಾಗಿರು.
--------------
ಮನುಮುನಿ ಗುಮ್ಮಟದೇವ
ಅರಿದವನ ವಿಶ್ವಾಸ, ತೊರೆಯ ಗುಂಡಿಗೆಯಿಂದ ಕಡೆಯೆ ? ಪಿಸಿತದ ಕುಕ್ಕೆಯ ಮೆಚ್ಚಿ, ವಿಷವ ಪೊಯ್ದುದರಿಂದ ಕಡೆಯೆ, ಒಸೆದು ಕೊಟ್ಟ ಲಿಂಗ ? ವಿಷರುಹನ ಜನಕನ ಪಿತ ಮೊದಲಾದ ಮನುಮುನಿದೇವಜಾತಿ ವರ್ಗಂಗಳೆಲ್ಲ ಶ್ರದ್ಧೆಯಿಂದ ಸದಾತ್ಮನನರಿದು, ಸದಮಲ ಸುಧೆಯಲ್ಲಿ ಸುಖಿಯಾದರೆಂಬುದ ಕಂಡು ಕೇಳಿ, ನಂಬುಗೆಯಿಲ್ಲದೆ ಕೊಡುವನ ಮರವೆಯೋ, ಕೊಂಬುವನ ಪ್ರಕೃತಿಯೋ ? ಇದರ ಸಂದೇಹವ ಹೇಳು, ಗುಡಿಯ ಗುಹೆಯೊಳಗೆ ಅಡಗಬೇಡ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅರಿದು ಬಲ್ಲವನಾದಡೆ ಮುರಿ ಕಾಲ, ಉಡುಗು ಕೈಯ, ಶಿರವ ಕಡಿ, ಬಿಡು ಮೂರ. ಸಡಗರಿಸು ಗುಡಿಯ ಕಂಬವ, ಅರಿದು ನೋಡು. ಅಡಗಿ ಗುಡಿಯೊಳಗೆ ಒಡಗೂಡು ಅಗಮ್ಯೇಶ್ವರಲಿಂಗವ.
--------------
ಮನುಮುನಿ ಗುಮ್ಮಟದೇವ
ಅಷ್ಟಭೂಮಿಯ ಮಧ್ಯದಲ್ಲಿ ಹುಟ್ಟಿತೊಂದು ಬೆಟ್ಟ. ತಳಸೂಜಿಯ ಮೊನೆಯಗಲ ಹಣೆ ಲೆಕ್ಕಕ್ಕೆ ಬಾರದ ವಿಸ್ತೀರ್ಣ. ಆ ವಿಸ್ತೀರ್ಣದಲ್ಲಿ ಹುಟ್ಟಿದರು ಮೂವರು ಮಕ್ಕಳು: ಒಬ್ಬ ಹೇಮವರ್ಣ, ಒಬ್ಬ ಕಪೋತವರ್ಣ, ಒಬ್ಬ ಶ್ವೇತ ವರ್ಣ. ಈ ಮೂವರು ಮಕ್ಕಳ ತಾಯಿ: ಒಬ್ಬಳಿಗೆ ಬಾಯಿಲ್ಲ, ಒಬ್ಬಳಿಗೆ ನಾಲಗೆಯಿಲ್ಲ, ಒಬ್ಬಳಿಗೆ ಹಲ್ಲಿಲ್ಲ. ಇಂತೀ ಮೂವರು ಕೂಡಿ ಮಾತಾಡುತ್ತಿದ್ದರು. ಮಾತಾಡುವುದ ಕಂಡು, ಇದೇತರ ಮಾತೆಂದು ಅಡಗಿದ ಗುಡಿಯೊಳಗೆ. ಅಡಗಿದ, ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅರುಹಿರಿಯರೆಂಬವರೆಲ್ಲರು ಕೂಡಿ, ಅರಿಯದ ಕೂಸಿನ ಕೈಯಲ್ಲಿ ಮರೆಯ ಮಾಡಿ, ಈಸಿಕೊಂಡ ಲಿಂಗಕ್ಕೆ ಕುರುಹಾವುದು ? ಅರಿವುದಕ್ಕೆ ತೆರಹಾವುದು ? ಅರಿವೇ ಮರವೆಗೆ ಬೀಜ. ಮರವೆಯ ಮನದ ಕೊನೆಯಲ್ಲಿ ಅರಿವುದೇನು ? ಅರಿವು ತಾನೋ, ಮರವೆಯ ಮುಮ್ಮೊನೆಯೋ ? ಇಂತೀ ಉಭಯದ ಹಿಂಚುಮುಂಚನರಿತು, ಅಂತುಕದಲ್ಲಿ ಸಿಕ್ಕದೆ, ವಿಶ್ರಾಂತಿಯೇ ತಾನಾಗಿಪ್ಪ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ