ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಷಾಣದುದಕ ಏತರಿಂದ ದ್ರವ ? ಪಾಷಾಣದ ಪಾವಕ ಅದೇತರಿಂದ ಕ್ರೋಧ ? ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ? ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
--------------
ಮಧುವಯ್ಯ
ಗಂಧವ ಬಂದ್ಥಿಸಿ ಹಿಡಿದೆಹೆನೆಂದಡೆ ಆ ಗಂಧದ ಅಂಗವಿಲ್ಲದೆ ನಿಂದುದುಂಟೆ ಸುಗಂಧ? ಈ ಶಿವಲಿಂಗವನರಿಯದ ಆತ್ಮನು ಮುಂದೆ ಏತರಿಂದ ಸಂದ್ಥಿಸುವುದು? ಇದು ಲಿಂಗಾಂಗಿಯ ಸಾವಧಾನ ಸಂಬಂಧ. ನಿಳಯದ ಬಾಗಿಲು ತಿಳುವಳ. ಲಿಂಗಮೂರ್ತಿಯ ತದ್ದಾ ್ಯನ ಶುದ್ಧ ಲೇಪವಾದುದು ತತ್ಕಾಲ ಸಂಬಂದ್ಥಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಭಕ್ತ ತನ್ನಯ ಪಾಶವ ಗುರುವಿನ ಮುಖದಿಂದ ಕಳೆವ, ಆ ಗುರು ತನ್ನಯ ಪಾಶವ ಏತರಿಂದ ಕಳೆಯಬೇಕೆಂಬುದನರಿಯಬೇಕು. ಹಾಗರಿಯದೆ ಶಾಸ್ತ್ರಪಾಠಕನಾಗಿ ಮಾತಿನ ಮಾಲೆಯ ನುಡಿ[ವ] ಜ್ಞಾತೃ ಜ್ಞಾನ ಜ್ಞೇಯವನರಿಯ[ದ] ಭಾವಶುದ್ಧವಿಲ್ಲದ ಆಚಾರ್ಯನ ಕೈಯಿಂದ ಬಂದ ಪಾಷಾಣದ ಕುರುಹು ಅದೇತಕ್ಕೂ ಯೋಗ್ಯವಲ್ಲಾ ಎಂದೆ. ಅದು ಪುನಃ ಪ್ರತಿಷ್ಠೆಯಿಂದಲ್ಲದೆ ಲಿಂಗಚೇತನವಿಲ್ಲಾ ಎಂದೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಶಾಸ್ತ್ರವೆ ಅಡ್ಡಣಿಗೆಯಾಗಿ, ಆಗಮವೆ ಹರಿವಾಣವಾಗಿ, ಪುರಾಣವೆ ಓಗರವಾಗಿ, ಉಂಬಾತ ವೇದವಾಗಿ, ಸಕಲ ರುಚಿಯನರಿದು ಭೋಗಿಸುವ ಪ್ರಣವ ತಾನಾಗಿ, ಅದರ ಭೇದ ಏತರಿಂದ ಅಳಿವು ಉಳಿವು? ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಲೋಕದ ಹೊಲೆ ಉದಕದಿಂದ ಹೋಹುದೆಂಬಿರಿ, ಉದಕದ ಹೊಲೆ ಏತರಿಂದ ಹೋಹುದು? ವಾಕು ಪ್ರಮಾಣಿನಿಂದ ಅಗ್ಛಣಿಯೆನಿಸಿತ್ತು. ಸಾಹಿತ್ಯವರಿದು ಕೊ(ಡ)ಳಬಲ್ಲ ಚೆನ್ನನ ಪ್ರಸಾದ ಲಿಂಗಕ್ಕೆ ಓಗರವಾಯಿತ್ತು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆತ್ಮದೃಕ್ಕಿಂದ ಈಶ್ವರನ ತಿಳಿದಲ್ಲದೆ, ಜಾತಿಸ್ಮರತ್ವವ ಕಾಣಬಾರದು; ಜ್ಯೋತಿರ್ಮಯಲಿಂಗದಿಂದೊಗೆದ ಶರಣನ, ಏತರಿಂದ ಕಂಡು ಹೇಳುವಿರಣ್ಣ? ಮಾತಿನಿಂದ ಹೇಳಿಹೆನೆಂದಡೆ, ವಾಚಾತೀತ ಶಿವಶರಣನು. ವಾಙ್ಮನಕ್ಕಗೋಚರವಾದ ಮಹಾಘನ ಪರತತ್ವದಲುದಯವಾದ ಶರಣನ ಮಾತಿಗೆ ತಂದು ನುಡಿವ ಮರುಳುಮಾನವರನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನಸ್ಸು ಏತರಿಂದ ಅರಿವುದು ಲಿಂಗವನು? ಬುದ್ಧಿ ಏತರಿಂದ ಅರಿವುದು ಮನಸ್ಸನು? ಚಿತ್ತ ಏತರಿಂದ ಅರಿವುದು ಬುದ್ಧಿಯ? ಅಹಂಕಾರ ಏತರಿಂದ ಅರಿವುದು ಚಿತ್ತವನು? ಈ ಚತುಷ್ಟಯವ ಏತರಿಂದ ಅರಿವೆ? ಒಂದಕ್ಕೊಂದು ಹಂದಿಲ್ಲದೆ ಕಾಣೆ. ಒಂದನೆಣಿಸಿ ಎಣಿಕೆಗೆ ತುಂಬಿದ ಮತ್ತೆ, ಮತ್ತೊಂದೆಂದಲ್ಲದೆ ಸಂಗವಿಲ್ಲ ಲೆಕ್ಕ. ಇದರಂದದ ತೆರ ಲಿಂಗ. ಇದ ಸಂಗಂಗೊಳಿಸು, ಭಂಗಿತನಾಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸ್ಥಳ ಕುಳವನರಿಯಬೇಕೆಂಬರು, ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು. ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು. ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು. ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು. ಶರಣನಾಗಿ ಐಕ್ಯನಾಗಬೇಕೆಂಬರು. ಐಕ್ಯ ಏತರಿಂದ ಕೂಟ ? ನಾನರಿಯೆ. ಒಳಗಣ ಮಾತು, ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು. ಎನಗೆ ಐಕ್ಯನಾಗಿ ಶರಣಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು. ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು, ಪ್ರಸಾದಿಯಾಗಿ ಮಾಹೇಶ್ವರನಾಗಬೇಕು. ಮಾಹೇಶ್ವರನಾಗಿ ಭಕ್ತನಾಗಬೇಕು, ಭಕ್ತನಾಗಿ ಸಕಲಯುಕ್ತಿಯಾಗಬೇಕು. ಯುಕ್ತಿ ನಿಶ್ಚಯವಾದಲ್ಲಿಯೆ, ಐಕ್ಯಸ್ಥಲ ಒಳಹೊರಗಾಯಿತ್ತು. ಅಲೇಖ ಲೇಖವಾಯಿತ್ತು, ಎನಗೆ ಕಾಣಬಂದಿತ್ತು. ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ ಕಂಡೆ ನಿನ್ನನ್ನು.
--------------
ವಚನಭಂಡಾರಿ ಶಾಂತರಸ
-->